ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್ ಮನೆಯಲ್ಲಿ ರಜೆ ಎಣಿಸಿದ ಪ್ರಸಂಗವು...

ಮಂದಹಾಸ
Last Updated 24 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಮಳೆಗಾಲದಲ್ಲೂ ಸುಡುಬಿಸಿಲಿನ ಒಂದು ಸಂಜೆ. ಶಾಲೆ ಮುಗಿಸಿ ಬಸವಳಿದು ಬಸ್ಸಿಳಿದ ಮುದ್ದಣನು ಬಿ.ಎಂ. ರೋಡ್ ಹೊಕ್ಕು ಸ್ನೇಹಿತರೊಡಗೂಡಿ ಬಾರ್‌ ಸೇರಿ, ರಾಜ್ಯ–ರಾಷ್ಟ್ರದ ಪ್ರಸ್ತುತ ರಾಜಕೀಯ ಸನ್ನಿವೇಶಗಳಷ್ಟೇ ಅಲ್ಲದೆ ಸ್ಥಳೀಯ ಸಮಸ್ಯೆಗಳನ್ನು ಚರ್ಚಿಸುತ್ತಿರಲು – ‘ಬನ್ನಿರೈ ಬನ್ನಿರೈ ಗುರುಸೇವೆಯೆ ನಮ್ಮ ಸರ್ವೋದಯ.

ಗುರುಮನೆಯೆ ನಮ್ಮೂರ ದೇವಾಲಯ’ ರಿಂಗ್‌ಟೋನ್ ಗುನುಗುನಿಸಿತು. ‘ಇದು ಯಾವ್ದೋ ಹೊಸ ರಿಂಗ್‌ಟೋನ್! ನನ್ಗೂ ಫಾರ್ವಡ್ ಮಾಡು’ ಎಂದು ಪಕ್ಕದಲ್ಲಿದ್ದ ಪರಮೇಶನು ಕೇಳಲು, ‘ಇದು ಹಳೇ ಸ್ಕೂಲ್‌ಮಾಸ್ಟರ್ ಸಿನಿಮಾದ್ದು’ ಎನ್ನುತ್ತಾ ಫೋನ್ ರಿಸೀವ್ ಮಾಡಿದ.
ಅತ್ತಲಿಂದ ‘ಎಲ್ಲಿದ್ದಿಯೋ?’ ಎನ್ನುವ ರಂಗಣ್ಣಿ ಪ್ರಶ್ನೆಗೆ ಇವನ ಉತ್ತರ – ‘ಇಲ್ಲಿಯೇ ಸುರಮಂದಿರದಲ್ಲಿ ಇದ್ದೀನಪ್ಪ’.

‘ಸರಿ. ಟಿ.ವಿ ನ್ಯೂಸ್ ನೋಡ್ದ?’ – ಪ್ರಶ್ನೆ ತೂರಿಬಂತು.
‘ಇಲ್ಲ... ಏನು ವಿಷ್ಯ?’
‘ಏನಿಲ್ಲ. ನಾಳೆ ಬಂದ್‌ಗೆ ರಜಾ ಡಿಕ್ಲೇರ್ ಮಾಡಿದ್ದಾರೇನು?’ ಅಂದ.
‘ಕಳೆದವಾರ ಆಗಿತ್ತಲ್ಲ’.

‘ಅದು ಕಾರ್ಮಿಕರು ಮಾಡಿದ್ದು. ಈಗ ಕಾವೇರಿಗಾಗಿ ಬಂದ್ ಕಾಲ್ ಮಾಡಿದ್ದಾರೆ ಅಂಥ ನ್ಯೂಸ್. ಕಳೆದ ತಿಂಗಳು ಆಗಿತ್ತಲ್ಲ ಅದು?’
‘ಅದು ಮಹಾದಾಯಿ ಯೋಜನೆಗೆ ಮಾಡಿದ್ದು. ಸುಮ್ನೆ ಕನ್‌ಫ್ಯೂಸ್ ಆಗ್ಬೇಡ. ಈಗ ಮನೆಗೆ ಹೋಗಿ ಟಿ.ವಿ. ನ್ಯೂಸ್ ನೋಡಿ ಫೋನ್ ಮಾಡು, ನಮ್ಮೂರಲ್ಲಿ ಕರೆಂಟ್ ಹೋಗಿದೆ’ ಎಂದ ಹೊಲದ ಹತ್ತಿರ ಮನೆ ಕಟ್ಟಿಕೊಂಡು, ಶಿಕ್ಷಕ ವೃತ್ತಿಯಷ್ಟೇ ಆಸ್ಥೆಯಿಂದ ರೈತನೂ ಆಗಿದ್ದ ರಂಗಣ್ಣಿಯ ಆದೇಶಕ್ಕೆ ಪೊರಮೊಟ್ಟನು.

ಮನೆಗೆ ಬಂದರೆ ಆತನ ಮಡದಿ ಮನೋರಮೆ ಟಿ.ವಿ.ಯಲ್ಲಿ ‘ಅಗ್ನಿಸಾಕ್ಷಿ’ಗೆ ತಾನೆ ಪ್ರತ್ಯಕ್ಷಸಾಕ್ಷಿಯಾಗಿ ಬಿಟ್ಟ ಕಣ್ಣು ಬಿಟ್ಟ ಹಾಗೆ ಟೀವಿ ನೋಡುತ್ತಿರಲು – ‘ಸ್ವಲ್ಪ ನ್ಯೂಸ್ ಹಾಕು, ನೋಡ್ಬೇಕು’ ಎಂದು ನಿವೇದಿಸಿದನು. ಅದಕ್ಕೆ ಆಕೆಯಿಂದ ‘ಅಗ್ನಿಸಾಕ್ಷಿಯಾಣೆಗೂ ಸಾಧ್ಯವಿಲ್ಲ’ ಎಂಬ ಉತ್ತರ ತಕ್ಷಣ ಬಂತು. 

‘ಹಾಗಲ್ಲ, ನಾಳೆ ಬಂದ್‌ಗೆ ರಜೆ ಏನಾದ್ರೂ ಡಿಕ್ಲೇರ್ ಮಾಡಿದ್ದಾರಾ ನೋಡ್ಬೇಕು’ ಎಂದೊಡನೆ – ‘ಹೌದಾ, ಹಾಗಾದ್ರೆ ಮತ್ತೊಂದು ಟ್ರಿಪ್! ಸರಿ ಅಂದ್ರೆ ಹಾಕ್ತೀನಿ’ ಎಂಬ ಕರಾರಿಗೆ ಸಹಿಮಾಡುವಂತೆ ಅವನತ್ತ ನೋಡಿದಳು. ‘ನೋಡೋಣ. ಮೊದ್ಲು ಚೇಂಜ್ ಮಾಡು’ ಎನ್ನಲು, ಉದಾರತೆಯನ್ನು ಮೆರೆದ ಆಕೆ ನ್ಯೂಸ್ ಚಾನೆಲ್‌ಗೆ ಬದಲಾಯಿಸಿದಳು.

‘ಏನೋ ಇದ್ರಲ್ಯಾವುದು ಬರ್ತಾ ಇಲ್ವಲ್ಲೋ?’ – ಯಾವುದೇ ರಜೆ ಸುದ್ದಿ ಕಾಣದಿರಲು ಗೆಳೆಯನಿಗೆ ಫೋನಾಯಿಸಿದ.
‘ಲೋ ಚಾನೆಲ್ ಚೇಂಜ್ ಮಾಡ್ತಾ ಹೋಗು. ಸಿಗುತ್ತೆ’.

ಈತನಾದ್ರೂ ಇರುವ ಹದಿನಾರು ನ್ಯೂಸ್ ಚಾನೆಲ್‌ಗಳನ್ನು ಬದಲಾಯಿಸುತ್ತಾ ಒಂದೆಡೆ ನಿಂತು, ‘ಹಾ, ಇದೇನೋ ಒಂದೊಂದೇ ನಿಧಾನಕ್ಕೆ ತೋರಿಸುತ್ತಾ ಇದ್ದಾರೆ. ಬೆಂಗಳೂರಲ್ಲಿ ರಜಾ, ಮೈಸೂರಲ್ಲಿ ರಜ, ಮಂಡ್ಯ ರಜ, ಮಂಗಳೂರು ಇಲ್ಲ, ಉಡುಪಿ ಇಲ್ಲ, ಲೋ ಹಾಸನದ್ದು ಯಾಕೋ ಬರ್ತಾ ಇಲ್ಲ ಕಣೋ’ – ಪೋನ್ ಸಂಭಾಷಣೆ ಮುಂದುವರಿಯಿತು.

‘ಸರಿ ಬಿಡು ವಾಟ್ಸಾಪ್ ಗ್ರೂಪ್‌ಗೆ ಹೋಗು. ಗುರುವಂದನೆ ಗ್ರೂಪ್‌ಲಿ ನೋಡು. ಯಾರಾದ್ರೂ ಲೇಟೆಸ್ಟ್ ಸ್ಟೇಟಸ್ ಹಾಕಿರ್ತಾರೆ’. ಸರಿ ಎನ್ನುತ್ತಾ ಫೋನ್ ಚೆಕ್ ಮಾಡಿದ. ‘ಇದೀಗ ಡಿ.ಸಿ. ಆಫೀಸ್‌ನಲ್ಲಿ ಆರ್ಡರ್ ಟೈಪ್ ಆಗ್ತಾ ಇದೆ. ಅರ್ಧಗಂಟೇಲಿ ಅನೌನ್ಸ್ ಆಗುತ್ತೆ’ ಎಂದು ವಾಟ್ಸಾಪ್ ಸಂದೇಶ ಬಂದಿತ್ತು. ವಿಷಯ ಗೊತ್ತಾದೊಡನೆ ಅತ್ತ ಕಡೆಗೆ ಫೋನ್ ಹೋಯ್ತು.

‘ರೀ, ನಿಜಕ್ಕೂ ಚಳವಳಿಗಾರರನ್ನು ಅಭಿನಂದಿಸಬೇಕು ಕಣ್ರೀ. ಕಳೆದ ಬಾರಿಯಂತೆ ಈ ಸರೀನೂ ಶುಕ್ರವಾರನೇ ಬಂದ್ ಕಾಲ್ ಕೊಟ್ಟಿದ್ದಾರೆ. ಶನಿವಾರ ಒಂದು ದಿನ ರಜೆ ಹಾಕಿದ್ರೆ, ಸೋಮವಾರ ಹಬ್ಬದ ರಜೆ ಸೇರಿಸಿಕೊಂಡು ಮಂಗಳವಾರ  ಬರ್ಬೋದು’ ಎಂದಳು ಮಡದಿ.

‘ಅದ್ಸರಿ, ಕಳೆದ ವಾರ ಕಾರ್ ಮಾಡಿಕೊಂಡು ಧರ್ಮಸ್ಥಳಕ್ಕೆ ಹೋಗಿದ್ವಿ. ಈ ಸರಿ ಏನ್ ಮಾಡೋದು? ಬಸ್ ಇಲ್ವಲ್ಲ’.
‘ಹೇಗೋ ಟ್ರೈನ್ ಇದ್ಯಲ್ಲಾ. ತಿರುಪತಿಗೆ ಹೋಗೋದು’ – ಮಾರುತ್ತರ ಬಂತು.
‘ಇಡೀ ನಾಡೆಲ್ಲ ನೀರಿಗಾಗಿ ಬೀದಿಗಿಳಿದಿರಬೇಕಾದ್ರೆ ನಾವು ಟೂರ್ ಅಂದ್ರೆ ಸರಿಹೋಗುತ್ತಾ...’

‘ರೀ... ದೇವಸ್ಥಾನಕ್ಕೆ ಹೋಗೋದು ಬರೀ ಹರಕೆ ತೀರ್ಸೋಕೆ ಅಷ್ಟೆ ಅಲ್ಲ. ಈ ಕಾವೇರಿ ವಿವಾದವನ್ನ ಬೇಗ ಬಗೆಹರಿಸಿ, ಮಳೆ ಚೆನ್ನಾಗಿ ಕೊಟ್ಟು, ಜನ ಸುಖ ಶಾಂತಿಯಿಂದ ಬಾಳೋ ಹಾಗೆ ಮಾಡಪ್ಪ ಅಂತ ತಿಮ್ಮಪ್ಪನಿಗೆ ಬೇಡ್ಕೋಳೋದು ಕೂಡ ನನ್ನ ಕಾರ್ಯಕ್ರಮ ಪಟ್ಟಿಯಲ್ಲಿದೆ’ ಎಂದಳು ಮನೋರಮೆ.
‘ನೀನು ಹೇಳುವುದು ಸರಿ. ಯಾವ ಟ್ರೈನ್ ಎಷ್ಟು ಹೊತ್ತಿಗೆ ವಿಚಾರಿಸ್ಕೊಂಡು ಬರ್ತಿನಿ’ ಎಂದು ಆಚೆಗೆ ಹೊರಡಲು ಸಿದ್ಧವಾಗುತ್ತಿರಲು, ಈಕೆಯಾದರೂ ಮತ್ತೆ ಧಾರಾವಾಹಿಯಲ್ಲಿ ಮಗ್ನಳಾದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT