ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ದೇವರುಗಳು ಬೇಕಾಗಿದ್ದಾರೆ!

Last Updated 24 ಸೆಪ್ಟೆಂಬರ್ 2016, 19:53 IST
ಅಕ್ಷರ ಗಾತ್ರ

ಮುನ್ನೂರ ಮೂವತ್ತಮೂರು ಕೋಟಿ ದೇವರುಗಳಿದ್ದಾರೆ ಎನ್ನುವುದು ಒಂದು ನಂಬಿಕೆ. ಅಂದರೆ, ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಸಂಖ್ಯೆಯ ದೇವರುಗಳು ಭಾರತದಲ್ಲಿಯೇ ಇದ್ದಾರೆ. ಇದರ ಜೊತೆಗೆ ದೆವ್ವಗಳು, ದೈವಗಳು, ಭೂತಗಳು ಬೇರೆ. ಇಷ್ಟೆಲ್ಲ ಇದ್ದರೂ ಒಬ್ಬ ಮನುಷ್ಯನ ದುರಾಸೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಕಲ್ಲು, ಮಣ್ಣು, ನೀರು, ಗಾಳಿ ಎಲ್ಲವನ್ನು ತಿನ್ನುವ ಬಕಾಸುರನಾಗಿ ಬೆಳೆದ ಮನುಷ್ಯನನ್ನು ತಡೆಯುವ ದೇವರೇ ನಾಪತ್ತೆಯಾಗಿಬಿಟ್ಟಿದ್ದಾನೆ. ‘ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ’ ಎಂದು ಭಗವದ್ಗೀತೆಯಲ್ಲಿ ಭರವಸೆ ನೀಡಿದ್ದ ಕೃಷ್ಣನೂ ಕಣ್ಮರೆಯಾಗಿಬಿಟ್ಟಿದ್ದಾನೆ.

‘ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ, ಮರ ದೇವರು ದೇವರಲ್ಲ’ ಎಂದು ಬಸವಣ್ಣ ಬೇರೆ ಅರ್ಥದಲ್ಲಿ ಹೇಳಿದ್ದನ್ನು ನಾವು ತಪ್ಪಾಗಿ ತಿಳಿದುಕೊಂಡು – ಕಲ್ಲು, ಮಣ್ಣು, ಮರ ಎಲ್ಲವನ್ನೂ ನುಂಗತೊಡಗಿದ್ದೇವೆ. ಮನುಷ್ಯನಿಗೆ ಮೊದಲೆಲ್ಲಾ ಮಣ್ಣು ಎಂಬುದು ಬರೀ ಮಣ್ಣಾಗಿರಲಿಲ್ಲ. ಭೂಮಿ ತಾಯಿ ಆಗಿತ್ತು. ನಿರ್ಜೀವ–ಸಜೀವ ಎನ್ನುವ ವ್ಯತ್ಯಾಸ ಇರಲಿಲ್ಲ. ನೀರೆಲ್ಲ ಜಲದೇವತೆಗಳಾಗಿದ್ದವು. ಕಾಡುಗಳೆಲ್ಲ ವನದೇವತೆಗಳಾಗಿದ್ದವು. ಪರ್ವತ, ಬೆಟ್ಟ ಗುಡ್ಡಗಳು ಕಲ್ಲುಮುಳ್ಳಿನ ಪ್ರದೇಶವಾಗಿರಲಿಲ್ಲ; ಪರ್ವತರಾಜನಾಗಿದ್ದ.

ಕೆರೆಗಳಲ್ಲಿ ಯಕ್ಷದೇವತೆಗಳೋ, ನಾಗದೇವತೆಗಳೋ ಇರುತ್ತಿದ್ದವು. ಮರಗಳಲ್ಲಿಯೂ ಯಾವುದಾದರೊಂದು ‘ದೇವಿ’ ಇರುತ್ತಿದ್ದಳು. ಅವಳು ನಮ್ಮನ್ನು ಕಾಪಾಡುತ್ತಾಳೆ ಎಂಬ ನಂಬಿಕೆ ಇತ್ತು. ಈಗ ಆ ಭಯಗಳೆಲ್ಲಾ ದೂರವಾಗಿ ಪರ್ವತಗಳು ‘ಜೆಸಿಬಿ’ ಯಂತ್ರಗಳಿಗೆ ಸಿಲುಕಿ ಕರಗಿಹೋಗುತ್ತಿವೆ. ಕಲ್ಲುಗಳೂ ನಮ್ಮ ಮನೆಯ ಶೃಂಗಾರ ಸಾಮಗ್ರಿಗಳಾಗಿವೆ. ಮರಗಳು ಗರಗಸಕ್ಕೆ ತುತ್ತಾಗಿ ಉರುಳುತ್ತಿವೆ. ಭೂಮಿ ತಾಯಿ ಒತ್ತುವರಿಯ ಪಾಶಕ್ಕೆ ಸಿಲುಕಿ ನಲುಗುತ್ತಿದ್ದಾಳೆ.

‘ಪಂಪ ಭಾರತ’ದಲ್ಲಿ ಒಂದು ಸನ್ನಿವೇಶ ಬರುತ್ತದೆ. ವೈಶಂಪಾಯನ ಸರೋವರದಲ್ಲಿ ಮುಳುಗಿ ಅಡಗಿಕೊಳ್ಳಲು ಕೌರವ ಬಂದಾಗ ‘ಭೀಮಾರ್ಜುನರ ಕೋಪಾಗ್ನಿ ಸರೋವರವನ್ನು ಪ್ರವೇಶಿಸಿ ಸುಟ್ಟು ನಾಶ ಮಾಡಿ ಕೊಲ್ಲದೆ ಬಿಡುವುದಿಲ್ಲ. ಇಲ್ಲಿ ನೆಮ್ಮದಿಯಿಂದ ಬಾಳುತ್ತಿರುವ ನಮ್ಮನ್ನು ಕದಡಬೇಡ. ಹತ್ತಿರ ಬರುವುದು ಬೇಡ’ ಎಂದು ಅಲ್ಲಿರುವ ಪ್ರಾಣಿಪಕ್ಷಿಗಳು ದುರ್ಯೋಧನನಿಗೆ ಕೂಗಿ ಕೂಗಿ ಹೇಳಿದವಂತೆ. ದುರುದ್ದೇಶವುಳ್ಳ ಮನುಷ್ಯನ ಪ್ರವೇಶದಿಂದ ಪ್ರಾಕೃತಿಕ ವ್ಯವಸ್ಥೆ ಹದಗೆಡುತ್ತದೆ ಎಂಬುದನ್ನು ಪಂಪ ಸೊಗಸಾಗಿ ಚಿತ್ರಿಸಿದ್ದಾನೆ.

ರನ್ನ ಕೂಡ ಇಂತಹದೇ ಮಾತುಗಳನ್ನು ಹೇಳುತ್ತಾನೆ. ‘ಕೌರವ ಕಾಲಿಟ್ಟರೆ ನದಿಗಳೇ ಬತ್ತಿ ಹೋಗುತ್ತವೆ. ದುರಾತ್ಮನೂ ನೀಚನೂ ಆದ ಕೌರವನನ್ನು ಸೇರಿಸಿಕೊಂಡರೆ ಭೀಮ ಈ ಸರೋವರವನ್ನೂ ಪಕ್ಷಿಗಳಾದ ನಮ್ಮನ್ನೂ ನಾಶ ಮಾಡದೇ ಬಿಡಲಾರ. ಬರಬೇಡ ತೊಲಗು’ ಎಂದು ವೈಶಂಪಾಯನ ಸರೋವರದಲ್ಲಿ ಇದ್ದ ಕೊಕ್ಕರೆ, ಚಕ್ರವಾಕ, ಹಂಸ ಮುಂತಾದವುಗಳು ಕೌರವನನ್ನು ಬೆದರಿಸಿದವಂತೆ. ಕೌರವನ ಅತಿಯಾದ ರಾಜ್ಯ ವ್ಯಾಮೋಹ ಮತ್ತು ಭೀಮನ ಅತಿಯಾದ ದ್ವೇಷ – ಎರಡೂ ಪ್ರಕೃತಿಗೆ ಮಾರಕ ಎನ್ನುವುದು ರನ್ನನ ಅಭಿಮತ. ಈಗ ನೋಡಿ ಎಲ್ಲ ಕಡೆಯೂ ರಾಜ್ಯ (ಭೂಮಿ) ವ್ಯಾಮೋಹಿಗಳೇ ಕಾಣುತ್ತಿದ್ದಾರೆ.

ರಾಜ ಮಹಾರಾಜರ ಕಾಲದಲ್ಲಿ ಮಗುವಿಗೆ ನಾಮಕರಣ ಮಾಡುವಾಗ – ‘ಮಗನೇ, ದೊಡ್ಡವನಾಗಿ ಅಧಿಕಾರಕ್ಕೆ ಬಂದಾಗ ಇತರ ಕಲ್ಯಾಣ ಕಾರ್ಯಗಳ ಜೊತೆಗೆ ಒಂದು ಕಲ್ಯಾಣಿಯನ್ನೂ ಕಟ್ಟಿಸು’ ಎಂದು ಹರಸುತ್ತಿದ್ದರಂತೆ. ಈಗ ನಾವು ಕಲ್ಯಾಣಿಗಳನ್ನು ಒಣಗುವಂತೆ ಮಾಡಿ ಅಲ್ಲಿ ಭವ್ಯಸೌಧ ಕಟ್ಟುವುದು ಹೇಗೆಂದು ಆಲೋಚಿಸುತ್ತಿದ್ದೇವೆ.

ಈಗ ಎಲ್ಲ ಕಡೆಯೂ ನಡೆಯುವತ್ತಿರುವ ನೀರಿನ ಚರ್ಚೆಯ ಹಿನ್ನೆಲೆಯಲ್ಲಿ ಇಷ್ಟೆಲ್ಲಾ ಪೀಠಿಕೆ. ‘ಕಾವೇರಿ ನೀರು ಬಿಡಿ’ ಎಂದು ತಮಿಳುನಾಡಿನವರು ಕೇಳುತ್ತಾರೆ. ‘ಬಿಡಲು ಹನಿ ನೀರಿಲ್ಲ’ ಎಂದು ಕರ್ನಾಟಕದವರು ವಾದಿಸುತ್ತಾರೆ. ‘ಮಹಾದಾಯಿ ನೀರು ಕೊಡಿ’ ಎಂದು ನಮ್ಮವರು ಪ್ರದರ್ಶನ ಮಾಡುತ್ತಾರೆ. ‘ಕೊಡಲು ನೀರೇ ಇಲ್ಲ’ ಎಂದು ಗೋವಾದವರು ಹೇಳುತ್ತಾರೆ.

ಹವಾಮಾನ ಇಲಾಖೆಯವರು ‘ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತದೆ’ ಎಂದು ಭವಿಷ್ಯ ನುಡಿಯುತ್ತಾರೆ. ಆದರೆ ಅವರ ಭವಿಷ್ಯವನ್ನು ಸುಳ್ಳು ಮಾಡುವ ಪಣ ತೊಟ್ಟಂತೆ ವರುಣರಾಯ ಮಾತ್ರ ಕಾಣೆಯಾಗಿಬಿಟ್ಟಿದ್ದಾನೆ. ನೋಡಿ, ನಮಗೆ ಮಳೆ ಕೂಡ ಕೇವಲ ಮಳೆಯಲ್ಲ –  ಅದು ವರುಣ ದೇವರು. ಜೀವವೈವಿಧ್ಯಗಳ ಗಣಿಯೇ ಆಗಿರುವ ಪಶ್ಚಿಮಘಟ್ಟವನ್ನು ರಕ್ಷಿಸಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಶುಂಠಿ ಬೆಳೆಯಲು, ಕಾಫಿ, ಅಡಿಕೆ, ರಬ್ಬರ್ ಬೆಳೆಗಳಿಗಾಗಿ ಪಶ್ಚಿಮಘಟ್ಟ ಪ್ರದೇಶ ಕಡಿಮೆಯಾಗುತ್ತಲೇ ಇದೆ. ನದಿ, ಹಳ್ಳ, ಕೊಳ್ಳಗಳು ಕಣ್ಮರೆಯಾಗುತ್ತಲೇ ಇವೆ.

‘ಅರಣ್ಯ ಹಕ್ಕು ಕಾಯ್ದೆ’ ಜಾರಿಗೆ ಬಂದ ನಂತರವಂತೂ ಅರಣ್ಯ ಒತ್ತುವರಿ ಅವ್ಯಾಹತವಾಗಿ ಮುಂದುವರಿಯುತ್ತಲೇ ಇದೆ. ರಾಜ್ಯದಲ್ಲಿ 43 ಲಕ್ಷ ಹೆಕ್ಟೇರ್ ಅರಣ್ಯ ಭೂಮಿ ಇದೆ. ಆದರೆ ಈಗಾಗಲೇ ಲಕ್ಷಾಂತರ ಎಕರೆಗಳು ಒತ್ತುವರಿಯಾಗಿದೆ. ವಾಸದ ಮನೆ ಮತ್ತು ಜೀವನ ನಿರ್ವಹಣೆಗಾಗಿ ಬಡವರು ಒತ್ತುವರಿ ಮಾಡಿಕೊಂಡ ಅರಣ್ಯ ಭೂಮಿ 82 ಸಾವಿರ ಹೆಕ್ಟೇರ್. ಆದರೆ ಶ್ರೀಮಂತರು ಒತ್ತುವರಿ ಮಾಡಿಕೊಂಡಿದ್ದು ಲಕ್ಷಾಂತರ ಹೆಕ್ಟೇರ್.

1978ಕ್ಕಿಂತ ಮೊದಲೇ ಒತ್ತುವರಿ ಮಾಡಿಕೊಂಡಿದ್ದರೆ, ಆ ಅಕ್ರಮ ಸಕ್ರಮ ಮಾಡಬಹುದು ಎಂಬ ಕಾಯ್ದೆ ಬಂದ ಮೇಲೆ ಹಾಗೂ 2006ರ ‘ಅರಣ್ಯ ಹಕ್ಕು ಕಾಯ್ದೆ’ ಬಂದ ಮೇಲೆ  ಅರಣ್ಯ ಒತ್ತುವರಿ ಎಗ್ಗಿಲ್ಲದೆ ನಡೆಯುತ್ತಿದೆ. ‘ಅರಣ್ಯ ಹಕ್ಕು ಕಾಯ್ದೆ’ ಪ್ರಕಾರ, ‘ಭೂಮಿ ಮಂಜೂರು ಮಾಡಿ’ ಎಂದು ರಾಜ್ಯದಲ್ಲಿ ಈಗಾಗಲೇ 25 ಲಕ್ಷ ಎಕರೆ ಅರಣ್ಯ ಭೂಮಿಗಾಗಿ 10 ಲಕ್ಷ ಅರ್ಜಿಗಳು ಬಂದಿವೆ. ಶಿವಮೊಗ್ಗ ಜಿಲ್ಲೆಯಲ್ಲಿ 3.57 ಲಕ್ಷ ಹೆಕ್ಟೇರ್ ಅರಣ್ಯವಿದೆ. 2014ರಲ್ಲಿ 32,601 ಹೆಕ್ಟೇರ್ ಅರಣ್ಯ ಭೂಮಿ ಒತ್ತುವರಿಯಾಗಿತ್ತು.

ಈಗ ಒತ್ತುವರಿ ಭೂಮಿಯನ್ನು ಸಕ್ರಮ ಮಾಡಬೇಕೆಂದು 85,518 ಅರ್ಜಿ ಸಲ್ಲಿಕೆಯಾಗಿದೆ. ಎಲ್ಲರಿಗೂ ಅರಣ್ಯ ಭೂಮಿಯನ್ನು ಕೊಟ್ಟರೆ ಶಿವಮೊಗ್ಗ ಜಿಲ್ಲೆಯಲ್ಲಿ ಅರಣ್ಯ ಉಳಿಯುವುದೇ ಇಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ 7.62 ಲಕ್ಷ ಹೆಕ್ಟೇರ್ ಅರಣ್ಯ ಇದೆ. ಈಗಾಗಲೇ 92,779  ಹೆಕ್ಟೇರ್ ಅರಣ್ಯ ಒತ್ತುವರಿಯಾಗಿದೆ. ಈಗ 90,758 ಅರ್ಜಿಗಳು ಬಂದಿದ್ದು, ಕನಿಷ್ಠ 5 ಎಕರೆಯಂತೆ ಭೂಮಿ ಮಂಜೂರು ಮಾಡಿದರೂ 5 ಲಕ್ಷ ಎಕರೆ ಅರಣ್ಯ ಭೂಮಿ ನಾಶವಾಗುತ್ತದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 2.53 ಲಕ್ಷ ಹೆಕ್ಟೇರ್ ಅರಣ್ಯ ಇದೆ. ಅಲ್ಲಿಯೂ 24,670 ಅರ್ಜಿಗಳು ಬಂದಿವೆ. ಕೊಡಗು, ಚಾಮರಾಜನಗರಗಳ ಚಿತ್ರಣ ಕೂಡ ಭಿನ್ನವಾಗಿಲ್ಲ.

ಜಗತ್ತಿನ 12 ಅತಿ ದೊಡ್ಡ ಜೀವ ವೈವಿಧ್ಯ ಕೇಂದ್ರಗಳಲ್ಲಿ ಭಾರತವೂ ಒಂದು. ವಿನಾಶದ ಭೀತಿ ಎದುರಿಸುತ್ತಿರುವ ಪಶ್ಚಿಮಘಟ್ಟ ಮತ್ತು ಪೂರ್ವ ಹಿಮಾಲಯ ಪ್ರದೇಶಗಳು ಇಲ್ಲಿವೆ. 45 ಸಾವಿರ ಸಸ್ಯ ಮತ್ತು 89 ಸಾವಿರ ಪ್ರಾಣಿ ಪ್ರಭೇದಗಳನ್ನು ಇಲ್ಲಿ ಗುರುತಿಸಲಾಗಿದೆ. ಇನ್ನೂ ಗುರುತಿಸಲು ಸಾಧ್ಯವೇ ಆಗದ ಲಕ್ಷಾಂತರ ಪ್ರಭೇದಗಳು ಇಲ್ಲಿವೆ.

ನಮ್ಮ ಬದುಕು ಸುತ್ತಲಿನ ಜೀವಿಗಳೊಂದಿಗೆ ತಳಕು ಹಾಕಿಕೊಂಡಿದೆ. ಕಪ್ಪೆಗಳನ್ನು ನಾಶ ಮಾಡಿದರೆ ಹಾವುಗಳೂ ನಾಶವಾಗುತ್ತವೆ. ಕೀಟಗಳ ಸಂಖ್ಯೆ ಹೆಚ್ಚಾಗುತ್ತದೆ. ಕೀಟಗಳು ಹೆಚ್ಚಾದರೆ ರೈತರು ಬೆಳೆದ ಬೆಳೆ ನಾಶವಾಗುತ್ತದೆ. ಕೇವಲ ಹುಲಿಗಳನ್ನು ಮಾತ್ರ ಉಳಿಸಲು ಹೊರಟರೆ ಜಿಂಕೆಗಳು ನಾಶವಾಗುತ್ತವೆ. ಜಿಂಕೆಗಳನ್ನು ಮಾತ್ರ ಉಳಿಸಿದರೆ ಹುಲಿಗಳು ನಾಶವಾಗುತ್ತವೆ. ಕಾಡೆಮ್ಮೆಗಳನ್ನು ರಕ್ಷಿಸದಿದ್ದರೆ ಕಾಡೆಮ್ಮೆಯೂ ನಾಶವಾಗುತ್ತದೆ – ಹುಲಿ, ಸಿಂಹ, ಚಿರತೆಗಳೂ ನಾಶವಾಗುತ್ತವೆ. ಪ್ರಕೃತಿಯಲ್ಲಿ ‘ಅನುಪಯುಕ್ತ’ ಎನ್ನುವುದು ಯಾವುದೂ ಇಲ್ಲ.

ಕಾಡಿನಲ್ಲಿ ಒಣಗಿದ ಮರಗಳನ್ನು ನಾಶ ಮಾಡಿದರೆ ಹಾರುವ ಅಳಿಲುಗಳ ಸಂತತಿ ಅಳಿದುಹೋಗುತ್ತದೆ. ಜೀವಶೃಂಖಲೆಯಲ್ಲಿ ಎಲ್ಲ ಕೊಂಡಿಗಳೂ ಮುಖ್ಯ. ಯಾವುದೇ ಒಂದು ಕೊಂಡಿ ತಪ್ಪಿದರೂ ಸರಪಳಿ ಕಳಚಿ ಬೀಳುತ್ತದೆ. ಕೇವಲ ಮನುಷ್ಯ ಮಾತ್ರ ಬದುಕಿದರೆ ಸಾಕು ಎಂಬ ಭಾವನೆಯೇ ನಿಸರ್ಗ ವಿರೋಧಿ. ಅದೇ ರೀತಿ, ಹುಲಿಗಳನ್ನು ಮಾತ್ರ ರಕ್ಷಿಸಿದರೆ ಸಾಲದು – ಅಮೀಬಾದಿಂದ ಹಿಡಿದು ಶಿಲೀಂಧ್ರ, ತಿಮಿಂಗಿಲ ಎಲ್ಲವೂ ಇರಬೇಕು. ಇಷ್ಟು ಸಣ್ಣ ಸತ್ಯ ಮನುಷ್ಯನಿಗೆ ಅರ್ಥವಾಗುವುದಿಲ್ಲ ಎಂದರೆ ಹೇಗೆ? ಅದನ್ನು ಅರ್ಥ ಮಾಡಿಸಲು ಈಗಿರುವ ಯಾವ ದೇವರಿಗೂ ಸಾಧ್ಯವಾಗುತ್ತಿಲ್ಲವಲ್ಲ.

ನಮ್ಮ ದೇಶದಲ್ಲಿ ಅತ್ಯಂತ ವರ್ಚಸ್ಸಿರುವ ಪದವಿ ಎಂದರೆ ‘ಐಎಎಎಸ್’. ಆದರೆ ಲಂಚ ತೆಗೆದುಕೊಳ್ಳಬಾರದು ಎನ್ನುವುದನ್ನು ಈ ಪದವಿ ಕಲಿಸುವುದಿಲ್ಲ ಎಂದರೆ ಅದೆಂತಹ ಪದವಿ ಎಂದು ನನ್ನೊಬ್ಬ ಸ್ನೇಹಿತ ಕೇಳುತ್ತಾನೆ. ಹಾಗೆಯೇ ನಿಸರ್ಗವನ್ನು ಹಾಳು ಮಾಡಬಾರದು, ಅದನ್ನು ಉಳಿಸಬೇಕು, ಮುಂದಿನ ಪೀಳಿಗೆಗೂ ಅದು ಬೇಕು ಎಂಬ ಚಿಕ್ಕ ವಿಚಾರ ನಮಗೆ ಗೊತ್ತಾಗುವುದಿಲ್ಲ ಎಂದರೆ ನಮ್ಮನ್ನು ಮನುಷ್ಯ ಎಂದು ಹೇಗೆ ಕರೆಯವುದು?

ಮಹಾಭಾರತದಲ್ಲಿ ಬಕಾಸುರನನ್ನು ಭೀಮ ಕೊಂದು ಮುಗಿಸಿದ. ಆದರೆ ಪ್ರಕೃತಿಯ ಪಾಲಿಗೆ ಬಕಾಸುರನಾಗಿ ಬೆಳೆಯುತ್ತಿರುವ ಮನುಷ್ಯನಿಗೆ ಬುದ್ಧಿ ಹೇಳಲು ಯಾವ ದೇವರಿಗೂ ಆಗುತ್ತಿಲ್ಲ. ಮನುಷ್ಯನನ್ನು ಬಕಾಸುರ ಎಂದು ಕರೆದಿರುವುದಕ್ಕೂ ಕಾರಣ ಇದೆ. ಈ ಬ್ರಹ್ಮಾಂಡದಲ್ಲಿ ಉತ್ಪತ್ತಿಯಾಗುವ ಆಹಾರದಲ್ಲಿ ನೂರಕ್ಕೆ 40ರಷ್ಟನ್ನು ಮನುಷ್ಯನೇ ಕಬಳಿಸುತ್ತಿದ್ದಾನೆ. ಅವನನ್ನು ಬಕಾಸುರ ಎಂದಲ್ಲದೆ ಇನ್ನೇನು ಹೇಳಲು ಸಾಧ್ಯ.

ವಾತಾವರಣದ ಬಿಸಿ ಏರಿಕೆಯಿಂದ 2050ರ ವೇಳೆಗೆ ಶೇ 25ರಷ್ಟು ಸಸ್ಯ ಮತ್ತು ಪ್ರಾಣಿಗಳು ನಾಮಾವಶೇಷವಾಗುತ್ತವೆ ಎಂದು ಅಧ್ಯಯನಗಳು ಹೇಳಿವೆ. 1998ರಲ್ಲಿ 400 ಜೀವವಿಜ್ಞಾನಿಗಳು ಒಟ್ಟಾಗಿ ನಡೆಸಿದ ಸಮೀಕ್ಷೆಯ ಪ್ರಕಾರ, ಶೇ 70ರಷ್ಟು ಜೀವಿಗಳು ಮನುಷ್ಯ ನಿರ್ಮಿತ ಕಾರಣಗಳಿಗಾಗಿಯೇ ನಾಶವಾಗುತ್ತಿವೆ. ಮನುಷ್ಯನಿಂದ ಭೂಗೋಳದ ನಾಶ ಹೀಗೆಯೇ ಮುಂದುವರಿದರೆ, 2028ರ ವೇಳೆಗೆ ಇನ್ನೂ ಶೇ 20ರಷ್ಟು ಜೀವ ಸಂಕುಲಗಳು ನಿರ್ನಾಮವಾಗುತ್ತವೆ. ಇದು ಸರ್ವನಾಶಕ್ಕೂ ಕಾರಣವಾಗುತ್ತದೆ. ಭೂಮಿಯ ಚರಿತ್ರೆಯಲ್ಲಿ ಈವರೆಗೆ 5 ಬಾರಿ ಸಾಮೂಹಿಕ ನಿರ್ವಂಶ ಪ್ರಕ್ರಿಯೆ ನಡೆದಿದೆ.

ಡೈನೋಸಾರ್‌ಗಳ ವಿನಾಶದ ಚರಿತ್ರೆ ನೆನಪಿಸಿಕೊಳ್ಳಿ. ಕಾಡಿನಲ್ಲಿ ಹುಲಿ ಸತ್ತರೆ ನನಗೇನು? ಪಶ್ಚಿಮ ಘಟ್ಟದ ಒಂದಿಷ್ಟು ಭಾಗ ಒತ್ತುವರಿಯಾದರೆ ತಪ್ಪೇನು? ಸಮುದ್ರದಲ್ಲಿ ಮೀನುಗಳು ಮರಣ ಹೊಂದಿದರೆ ಏನಾದೀತು? – ಹೀಗೆಲ್ಲ ಅಂದುಕೊಂಡರೆ 6ನೇ ಬಾರಿ ಸಾಮೂಹಿಕ ವಿನಾಶದ ದುರಂತಕ್ಕೆ ನಮ್ಮ ಪಾಲನ್ನೂ ಸಲ್ಲಿಸಿದಂತಾಗುತ್ತದೆ.

ಹಕೀಕತ್ ಹೀಗಿದ್ದರೂ ರಾಜ್ಯದ ಕಂದಾಯ ಸಚಿವರು ಮಾತ್ರ ‘ಮೊದಲು ಮನುಷ್ಯ ಉಳಿಯಬೇಕು. ಭೂರಹಿತ ಬಡವರಿಗೆ ಭೂಮಿ ಸಿಗಬೇಕು’ ಎಂದು ಫರ್ಮಾನು ಹೊರಡಿಸುತ್ತಾರೆ. ಭೂಮಿರಹಿತರಿಗೆ ಭೂಮಿ ಸಿಗಬೇಕು ಎನ್ನುವುದರಲ್ಲಿ ಯಾರದ್ದೂ ಆಕ್ಷೇಪವಿಲ್ಲ. ಆದರೆ ಶ್ರೀಮಂತರು ಕಬಳಿಸಿದ ಅರಣ್ಯ ಭೂಮಿಯನ್ನೂ ರಕ್ಷಿಸುವ ಕೆಲಸವಾಗಬೇಕಲ್ಲ.

ಅರಣ್ಯ ಒತ್ತುವರಿ ಮಾಡಿಕೊಂಡವರಿಗೆ ಅರ್ಜಿ ಸಲ್ಲಿಸಲು ಇನ್ನಷ್ಟು ಕಾಲ ವಿಸ್ತರಣೆ ಮಾಡಲಾಗಿದೆ. ಅರಣ್ಯ ಒತ್ತುವರಿ ನಿರಂತರ ನಡೆಯುತ್ತಲೇ ಇದೆ. ಇದಕ್ಕೆ ಆಡಳಿತ ಪಕ್ಷದವರು ಮೌನಸಮ್ಮತಿ ನೀಡುತ್ತಿದ್ದರೂ ವಿರೋಧ ಪಕ್ಷದವರೂ ಮಾತನಾಡುತ್ತಿಲ್ಲ. ಯಾಕೆಂದರೆ ಎಲ್ಲರಿಗೂ ಕುರ್ಚಿಯ ಚಿಂತೆ. ಮತಬ್ಯಾಂಕ್ ರಾಜಕಾರಣ ಎಲ್ಲರ ಬಾಯಿಯನ್ನೂ ಮುಚ್ಚಿಸಿದೆ.

ಹೋಗಲಿ, ಅರ್ಹರಿಗೆ ಭೂಮಿ ಸಿಗುತ್ತದೆಯೇ ಎಂದರೆ ಅದೂ ಇಲ್ಲ. ‘ಅರಣ್ಯ ಹಕ್ಕು ಕಾಯ್ದೆ’ ಪ್ರಕಾರ ಸಲ್ಲಿಕೆಯಾದ 3.11 ಲಕ್ಷ ಅರ್ಜಿಗಳ ಪೈಕಿ ನಿಜವಾದ ಅರಣ್ಯವಾಸಿಗಳ ಅರ್ಜಿ ಕೇವಲ 46 ಸಾವಿರ. ಅವರಲ್ಲಿ ಭೂಮಿ ಪಡೆದುಕೊಂಡವರು 11 ಸಾವಿರ ಜನರು ಮಾತ್ರ. ಇತ್ತೀಚೆಗೆ ಅರಣ್ಯಕ್ಕೆ ಬೇಲಿ ಹಾಕಿಕೊಂಡವರಿಗೆ ಹಕ್ಕುಪತ್ರ ಸಿಕ್ಕಿದೆ. ಆದರೆ ತಲೆತಲಾಂತರಗಳಿಂದ ಕಾಡಿನಲ್ಲಿಯೇ ಇರುವ ಕುಣಬಿಗಳು, ಗೌಳಿಗಳು, ಜೇನು ಕುರುಬರು, ಕಾಡು ಕುರುಬರು, ಸೋಲಿಗರು, ಇರುಳಿಗರಿಗೆ ಭೂಮಿ ಸಿಕ್ಕಿಲ್ಲ.

ಕೋಪನ್ ಹೇಗನ್‌ನಲ್ಲಿ ಹವಾಮಾನ ವೈಪರೀತ್ಯದ ಬಗ್ಗೆ ವಿಶ್ವ ಶೃಂಗಸಭೆ ನಡೆದಾಗ ಕೊಡಗು ಜಿಲ್ಲೆ ಕುಶಾಲನಗರ ಬಳಿಯ ಆದಿವಾಸಿಯೊಬ್ಬರು ಪಾಲ್ಗೊಂಡಿದ್ದರು. ಶೃಂಗಸಭೆ ಮುಗಿಸಿ ಬಂದ ಅವರನ್ನು ನಾನು – ‘ಅಲ್ಲಿಗೆ ಹೋಗಿ ಏನು ಮಾಡಿಬಂದಿರಿ’ ಎಂದು ಕೇಳಿದೆ. ಅದಕ್ಕೆ ಅವರು ‘ಆದಿವಾಸಿಗಳ ಹಾಗೆ ಪ್ರಕೃತಿಯ ಜೊತೆಗೇ ಬದುಕಿ.

ನಮಗೆ ಹವಾನಿಯಂತ್ರಣ ಯಂತ್ರ ಬೇಡ. ನೀರು ಶುದ್ಧೀಕರಣ ಯಂತ್ರ ಬೇಡ. ನಮ್ಮ ಅಗತ್ಯಗಳು ಬಹಳ ಕಡಿಮೆ. ರಾತ್ರಿಯನ್ನು ಬೆಳಗು ಮಾಡುವುದು ಬೇಡ. ಹಗಲು ರಾತ್ರಿಯಾಗುವುದೂ ಬೇಡ. ನಿಸರ್ಗ ಹೇಗೆ ನಡೆಸುತ್ತದೋ ಹಾಗೆ ಬದುಕಿದರೆ ಇಂತಹ ಶೃಂಗಸಭೆಗಳೆಲ್ಲಾ ಅನಗತ್ಯ ಎಂದು ಹೇಳಿಬಂದೆ’ ಎಂದರು. ಅವರ ಮಾತು ನೂರಕ್ಕೆ ನೂರು ಸತ್ಯ.

ಆದಿವಾಸಿಗಳಿಗೆ ದೇವರು ಬೇರೆಲ್ಲಿಯೂ ಇಲ್ಲ. ಯಾವ ಮೂರ್ತಿಯನ್ನೂ ಅವರು ಪೂಜೆ ಮಾಡುವುದಿಲ್ಲ. ಮರ, ಗಿಡ, ಬೆಟ್ಟ ಗುಡ್ಡಗಳಲ್ಲಿಯೇ ಅವರ ದೇವರು ಇರುತ್ತಾನೆ. ಆದರೆ ನಮ್ಮಂತಹ ನಾಗರಿಕರಿಗೆ ಅವುಗಳಲ್ಲಿ ದೇವರು ಕಾಣುವುದಿಲ್ಲ. ನಾವೇ ಸೃಷ್ಟಿಸಿಕೊಂಡ 333 ಕೋಟಿ ದೇವರುಗಳು ಪಶ್ಚಿಮಘಟ್ಟವನ್ನು ಉಳಿಸಲು ನೆರವಾಗುತ್ತಿಲ್ಲ. ಕಾವೇರಿಯಲ್ಲಿ ನೀರನ್ನೂ ಹರಿಸುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT