ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಯಾ: ಸಂಕಷ್ಟದಲ್ಲಿ 20 ಲಕ್ಷ ಮಂದಿ

ಅಲೆಪ್ಪೊ ನಗರದಲ್ಲಿ ನೀರಿಗಾಗಿ ಪರದಾಟ: ವಾಯುದಾಳಿಗೆ 25 ಮಂದಿ ಬಲಿ
Last Updated 24 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಬೈರೂತ್‌ (ಎಪಿ): ಉತ್ತರ ಸಿರಿಯಾದ ಅಲೆಪ್ಪೊ ನಗರದಲ್ಲಿ ಸುಮಾರು 20 ಲಕ್ಷ ಮಂದಿಗೆ ನೀರಿನ ಕೊರತೆಯಾಗಿದ್ದು, ಪರಿಸ್ಥಿತಿ ಗಂಭೀರ ಸ್ವರೂಪ ತಾಳಿದೆ. ಜತೆಗೆ ಭದ್ರತಾ ಪರಿಸ್ಥಿತಿಯೂ ಹದಗೆಟ್ಟಿದೆ.

ಬಂಡುಕೋರರು ಗುರುವಾರ ರಾತ್ರಿ ದಾಳಿ ನಡೆಸಿದ್ದರಿಂದ 2.5 ಲಕ್ಷ ಮಂದಿಗೆ ನೀರು ಪೂರೈಸುತ್ತಿದ್ದ ಬಾಬ್ – ಅಲ್‌ – ನೈರಾಬ್‌ ನೀರು ಪೂರೈಸುವ ವಿತರಣಾ ಕೇಂದ್ರಕ್ಕೆ ಹಾನಿಯುಂಟಾಗಿದೆ. ಪೂರ್ವಭಾಗವು ಬಂಡುಕೋರರ ಹಿಡಿತದಲ್ಲಿರುವ ಕಾರಣ, ಅಲ್ಲಿಂದಲೂ ನೀರು ಪೂರೈಕೆಯಾಗುತ್ತಿಲ್ಲ.

ಜತೆಗೆ ಬಂಡುಕೋರರು ಪೂರ್ವಭಾಗದಲ್ಲಿದ್ದ ಸುಲೈಮಾನ್‌ ಅಲ್‌– ಹಲಾಬಿಯಲ್ಲಿನ ನೀರು ಪೂರೈಸುವ ಕೇಂದ್ರವನ್ನು ಮುಚ್ಚಿಸಿದ್ದಾರೆ. ಇದರಿಂದ, ಪಶ್ಚಿಮ ಭಾಗದಲ್ಲಿ  ನೆಲೆಸಿರುವ 15 ಲಕ್ಷ ಮಂದಿ ಸಂಕಷ್ಟಕ್ಕೀಡಾಗಿದ್ದಾರೆ.

ಶುದ್ಧನೀರು ಪೂರೈಕೆ  ಸ್ಥಗಿತಗೊಳಿಸಿರುವುದರಿಂದ ಮಕ್ಕಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಶುದ್ಧ ನೀರು ಕುಡಿದು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಸಿರಿಯಾದ ವಿಶ್ವಸಂಸ್ಥೆಯ ಮಕ್ಕಳ ನಿಧಿಯ (ಯುನಿಸೆಫ್‌)ನ ಪ್ರತಿನಿಧಿ ಹನಾ ಸಿಂಗರ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಾಯುದಾಳಿ: ಬಂಡುಕೋರರ ಹಿಡಿತದಲ್ಲಿರುವ ಅಲೆಪ್ಪೊ ನಗರದ ಪೂರ್ವ ಭಾಗದ ಮೇಲೆ ಸಿರಿಯಾ ಹಾಗೂ ರಷ್ಯಾ ಪಡೆಯು ನಡೆಸಿದ ವಾಯುದಾಳಿಯಲ್ಲಿ 25 ನಾಗರಿಕರು ಸಾವನ್ನಪ್ಪಿದ್ದಾರೆ.

ಅವಶೇಷಗಳ ಅಡಿಯಲ್ಲಿ ಸಿಲುಕಿರುವವರ ಪತ್ತೆ ಕಾರ್ಯ ಮುಂದುವರಿದಿದ್ದು, ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಬ್ರಿಟನ್‌ ಮೂಲದ ಸಿರಿಯಾದ ಮಾನವ ಹಕ್ಕು ಸಂಘಟನೆ ತಿಳಿಸಿದೆ. ಡಮಾಸ್ಕಸ್‌ ಮರುವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಎರಡು ಕಡೆಗಳಲ್ಲಿ ದಾಳಿಗಳು ಮುಂದುವರಿದಿವೆ.

ಬುಸ್ತಾನ್‌ ಅಲ್‌ ಖಸರ್‌ನಲ್ಲಿ ಮೊಸರು ಖರೀದಿಗಾಗಿ ಮಾರುಕಟ್ಟೆಯಲ್ಲಿ ಸಾಲಿನಲ್ಲಿ ನಿಂತಿದ್ದ ಏಳು ಮಂದಿ ನಾಗರಿಕರು ವಾಯುದಾಳಿಗೆ ಬಲಿಯಾಗಿದ್ದಾರೆ.  ಕಳೆದೆರಡು ದಿನಗಳಿಂದ ನಡೆಯುತ್ತಿರುವ ಭೀಕರ ಬಾಂಬ್‌ ದಾಳಿಗೆ ಸಾವನ್ನಪ್ಪಿದವರ ಸಂಖ್ಯೆ 47ಕ್ಕೇರಿದೆ.  ಸತತ ವಾಯುದಾಳಿಯಿಂದ ಅಲೆಪ್ಪೋ ನಗರದಲ್ಲಿ ಸ್ಮಶಾನಸದೃಶ ಸ್ಥಿತಿ ನಿರ್ಮಾಣವಾಗಿದೆ.

ವಿದ್ಯುತ್‌ ಸಂಪರ್ಕ ಸ್ಥಗಿತಗೊಂಡಿದ್ದು, ಇಂಧನ ಕೊರತೆಯಿಂದಾಗಿ ವಾಹನಗಳು ಸಂಚರಿಸುತ್ತಿಲ್ಲ.  ಅಂದಾಜಿನ ಪ್ರಕಾರ ಅಲೆಪ್ಪೋನ 2.5 ಲಕ್ಷ ಮಂದಿ ಕಳೆದ ಜುಲೈನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT