ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಲವಣೀಕರಣವೆಂಬ ನಿಚ್ಚಣಿಕೆ

Last Updated 25 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ವಾಸನೆ, ಬಣ್ಣ, ರುಚಿ ಇಲ್ಲದ ನೀರು ಜೀವವೈವಿಧ್ಯದ ಅಸ್ತಿತ್ವಕ್ಕೆ ಇಷ್ಟೊಂದು ಅನಿವಾರ್ಯವಾದುದೆ ಬಲು ಸೋಜಿಗ. ನೀರಿನಂಥ ಪರಮ ಶುಚಿಕಾರಕ ವಸ್ತು ಮತ್ತೊಂದಿಲ್ಲ. ನೀರು ನಿತ್ಯ ಸಂಜೀವಿನಿ. ನಮ್ಮ ಶರೀರದ ಶೇಕಡ 60 ಭಾಗ ನೀರೆ. ವಿಶ್ವದ ಪ್ರತಿ ಪ್ರಜೆಗೆ ದಿನಕ್ಕೆ ಸರಾಸರಿ ಕನಿಷ್ಠ 20 ಲೀಟರ್ ನೀರು ಅಗತ್ಯ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಪ್ರತಿ ಪ್ರಜೆಯ ನೀರಿನ ದಿನಬಳಕೆಯ ಪ್ರಮಾಣ 100  ಲೀಟರ್‌ಗಳು. ಜಗತ್ತಿನ 36 ದೇಶಗಳು ತೀವ್ರತರ ಜಲಕ್ಷಾಮ ಎದುರಿಸುತ್ತಿವೆ.

ಆ ಯಾದಿಯಲ್ಲಿರುವ ಸಿಂಗಪುರ ಜಾಣತನ ಮೆರೆದು ಮಾದರಿಯಾಗಿದೆ. ಮಳೆ ನೀರು ಸಂಗ್ರಹ, ನೀರಿನ ಪುನರ್‌ಬಳಕೆ, ಮಲೇಷ್ಯಾದಿಂದ ಆಮದು ಜೊತೆಗೆ ಸಮುದ್ರದ ನೀರಿನ ನಿರ್ಲವಣೀಕರಣ- ಇವು ಅದು ಕೈಗೊಂಡ ದಿಟ್ಟ ಹೆಜ್ಜೆಗಳು. ಅನುಕ್ರಮವಾಗಿ ಶೇಕಡ 20, 40, 30 ಮತ್ತು 10 ನೀರಿನ ಅಗತ್ಯ ಪೂರೈಕೆಯಾಗಿದ್ದರ ಫಲವಾಗಿ ಅಲ್ಲಿ ಶೌಚ, ಸ್ನಾನಕ್ಕೂ ಶುದ್ಧ ನೀರು.

ಅಮೆರಿಕದ ಕ್ಯಾಲಿಫೋರ್ನಿಯ ಪ್ರಾಂತ್ಯದಲ್ಲಿ ಮನೆ ಮನೆಗೂ ಮಿತವಾಗಿಯಷ್ಟೆ ನೀರು ಸರಬರಾಜು. ಮಿತಿ ಮೀರಿ ನೀರು ಉಪಯೋಗಿಸಿದರೆ ಕೊಳಾಯಿ ತಂತಾನೆ ಬಂದ್ ಆಗುವ ವ್ಯವಸ್ಥೆ ಅಲ್ಲಿ. ಸಮುದ್ರದ ನೀರಿನ ನಿರ್ಲವಣೀಕರಣ ಪ್ರಕ್ರಿಯೆ ದುಬಾರಿಯೆ. ಸ್ಥಳೀಯ ಕೆರೆ, ಬಾವಿ, ಕುಂಟೆಯ ಲಭ್ಯ ನೀರನ್ನು ಲವಣಮುಕ್ತಗೊಳಿಸಿ ಬಳಸುವುದು ಯುಕ್ತವೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಆ ಜಲಮೂಲಗಳು ಬತ್ತಿದಾಗ ಸಮುದ್ರದತ್ತ ನೋಡದೆ ಅನ್ಯ ಮಾರ್ಗವಿಲ್ಲ. ಕಡಲು ಹತ್ತಿರವಿರಬೇಕು ಮಾತ್ರ.

ಕಳೆದ ವರ್ಷ ನವೆಂಬರ್ 19, 20ರಂದು ಷಾರ್ಜಾದಲ್ಲಿ ನೆರವೇರಿದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಭಾಗವಹಿಸಿದ ಸಂದರ್ಭ. ನಮ್ಮ ತಂಡವನ್ನು ಬಸ್ಸಿನಲ್ಲಿ ಷಾರ್ಜಾ, ದುಬೈಗೆ ನಗರ ಪ್ರದಕ್ಷಿಣೆಗೆ ಕರದೊಯ್ಯುತ್ತಿದ್ದ ಗೈಡ್ ವಿವರಣೆ ನೀಡುತ್ತಿದ್ದ. ‘ಕುಡಿಯುವ ನೀರಿಗೇನು ಮಾಡುತ್ತೀರಿ’ ಎಂಬ ನಮ್ಮ ಪ್ರಶ್ನೆಗೆ ಆತ ‘ನಮಗೇನು ಸಾರ್, ನೀರಿಗೆ ಬರವಿಲ್ಲ. ಧಾರಾಳವಾಗಿ ಸಮುದ್ರವೆ ಉಂಟಲ್ಲ!’ ಎಂದಾಗ ನಾವು ಗೊಳ್ಳನೆ ನಕ್ಕೆವು. ಗಂಭೀರನಾದ ಗೈಡ್ ‘ನಿಮಗೆ ಗೊತ್ತೇ ಇಲ್ಲವೆ, ಸಮುದ್ರದ ನೀರನ್ನು ಉಪ್ಪು ಬೇರ್ಪಡಿಸಿ ಶುದ್ಧನೀರನ್ನಾಗಿಸಬಹುದು.

ಇಲ್ಲಿ ನಾವು ಹಾಗೆಯೇ  ಮಾಡುವುದರಿಂದ ನಮಗೆ ಕುಡಿಯುವ ನೀರಿಗೇತರ ಭಯ?’ ಎಂದ. ಮಾತ್ರವಲ್ಲ,  ಒಂದು ವಿಶಾಲ ಉದ್ಯಾನವನದ ಬಳಿ ನಮ್ಮನ್ನು ಇಳಿಸಿ ಅಲ್ಲಿ ನೆಟ್ಟಿರುವ ಐದು ಸಾವಿರ ತಾಳೆ ಮರಗಳನ್ನು ತೋರಿಸಿದಾಗ ನಮ್ಮ ಅಚ್ಚರಿಗೆ ಸಾಟಿಯಿರಲಿಲ್ಲ.  ‘ನಿಜ, ನಮ್ಮದು ಮರುಭೂಮಿ. ಆದರೆ ಸಸಿಗಳ ಜೊತೆಯಲ್ಲಿ ಹೊರಗಿನಿಂದ ಮಣ್ಣನ್ನೂ ತರಬಹುದಲ್ಲ’ ಅಂತ ಗೈಡ್ ನಗೆ ಬೀರಿದಾಗ ನಾವು ಮಾತು ಹೊರಡದೆ ಮೂಕರಾಗಿದ್ದೆವು. ಸಾಲದ್ದಕ್ಕೆ ಸಮುದ್ರ ಉಕ್ಕೇರುವುದನ್ನು ತಡೆಯಲು ಕಿನಾರೆಯುದ್ದಕ್ಕೂ ಪೇರಿಸಿರುವ ಕಲ್ಲು ಬಂಡೆಗಳೂ ಬೇರೆಡೆಯಿಂದ ಹಡಗಿನಿಂದ ಸಾಗಿಸಿದವೆ. ಸಂಕಲ್ಪ ಶಕ್ತಿಯೆಂದರೆ ಇದೇ ಅಲ್ಲವೆ ಅನ್ನಿಸಿತು.

ಸೌದಿ ಅರೇಬಿಯಾ ಹಾಗೂ ಯು.ಎ.ಇ.  ದೇಶಗಳ ಪಾಲಿಗೆ ‘ಎಲ್ಲೆಲ್ಲೂ ನೀರು. ಕುಡಿಯಲು ಮಾತ್ರ ಒಂದು ಹನಿಯೂ ಇಲ್ಲ’ ಎಂಬ ಸಮುದ್ರ ಕುರಿತ ಕವಿಯುಕ್ತಿ ಹುಸಿ! ಅಲ್ಲಿ ಸಾಗರ ನೀರನ್ನು ನಿರ್ಲವಣೀಕರಿಸುವ ಬೃಹತ್ ಸ್ಥಾವರಗಳಿವೆ. ಕ್ಯಾಲಿಫೋರ್ನಿಯದ ಸ್ಯಾಂಡಿಯಾ ಗೊನಲ್ಲೂ ತಲೆದೋರುತ್ತಿರುವ ಜಲಾಭಾವ ನೀಗಲು ಇಂಥ ಘಟಕಗಳು ಸ್ಥಾಪನೆಯಾಗಿವೆ.

ಇಸ್ರೇಲ್ ದಿನಕ್ಕೆ 62.40 ಕೋಟಿ ಲೀಟರ್‌ಗಳಷ್ಟು ಕುಡಿಯಲು ಯೋಗ್ಯವಾದ ನೀರನ್ನು ಸಮುದ್ರದಿಂದ ಸಂಸ್ಕರಿಸಿ ಅತ್ಯಗ್ಗದ ದರದಲ್ಲಿ ಅಲ್ಲಿನ ಪ್ರಜೆಗಳಿಗೆ ಸರಬ ರಾಜು ಮಾಡುತ್ತದೆ. ಸೌದಿ ಅರೇಬಿಯಾದಲ್ಲಿ ದಿನಕ್ಕೆ 100 ಕೋಟಿ ಲೀಟರುಗಳಷ್ಟು ಶುದ್ಧ ನೀರು ಸಾಗರದ ನೀರಿನ ನಿರ್ಲವಣೀಕರಣದಿಂದ ಲಭ್ಯ. ಅದರ ರಾಜ ಧಾನಿ ರಿಯಾದ್ ನಗರ ಇಚ್ಛಾಶಕ್ತಿಯ ದ್ಯೋತಕವಾಗಿ ನಳನಳಿಸಿದೆ.

ತಮಿಳುನಾಡಿನ ಕಟ್ಟುಪಳ್ಳಿ ಹಾಗೂ ನೆಮ್ಮಲಿ ಎಂಬಲ್ಲಿ ದಿನಕ್ಕೆ ಅನುಕ್ರಮವಾಗಿ ಒಂದು ಮತ್ತು ಹತ್ತು ಕೋಟಿ ಲೀಟರ್‌ಗಳ ನಿರ್ಲವಣೀಕರಣ ಸಾಮರ್ಥ್ಯದ ಯಂತ್ರ ಸ್ಥಾವರಗಳಿವೆ. ಆದರೆ ದೇಶದ ಏರುತ್ತಿರುವ ಜನಸಾಂದ್ರತೆ ಯನ್ನು ಲಕ್ಷ್ಯದಲ್ಲಿರಿಸಿಕೊಂಡು ಸಾಧ್ಯವಿರುವೆಡೆಗಳಲ್ಲೆಲ್ಲ ಇಂತಹ ಘಟಕಗಳು ನೆಲೆಗೊಳ್ಳುವ ಅನಿವಾರ್ಯ ಇದೆ.

ನಿರ್ಲವಣೀಕರಣ ಯಂತ್ರಸ್ಥಾವರಗಳಿಗೆ ಅಗತ್ಯವಾದ ಇಂಧನ ಸಮಸ್ಯೆ ಸರಿ. ಅದಕ್ಕಾಗಿ ಸೂರ್ಯನ ಬಾಗಿಲು ತಟ್ಟುವುದೇ ವಿವೇಕ! ಹೇಳಿಕೇಳಿ ಭಾರತ ಉಷ್ಣವಲ ಯದ ದೇಶ. ಸಾಗರವೆಂದರೇನೆ ಸಮೃದ್ಧ. ಸಮುದ್ರ ಮಥನದಿಂದಲೇ ನಮ್ಮನ್ನು ಕಾಡುತ್ತಿರುವ ನೀರಿನ ಅಭಾವಕ್ಕೆ ತಕ್ಕ ಪರಿಹಾರ. ರಾಜ್ಯ ರಾಜ್ಯಗಳ ನಡುವೆ ಅನ್ಯೋನ್ಯತೆ, ಸೋದರ ಭಾವವಿದ್ದರೇನೆ ಪ್ರಜೆಗಳು ಒಂದೇ ಕುಟುಂಬವಾಗಿರುವುದು, ದೇಶ ಅಖಂಡವಾಗಿರುವುದು.

ನಮ್ಮ ಜಲಾಶಯಗಳಲ್ಲಿ ನೀರು ಬರಿದಾಗಿದೆ. ಹರಿದ ರಲ್ಲವೆ ಬಿಡುವುದು ಎಂದು ತಮಿಳುನಾಡಿಗೆ ಕಾವೇರಿ ಕೊಳ್ಳದಲ್ಲಿ ಬಟ್ಟೆ ಹಿಂಡಿ ತೋರಿಸಿ ಮನವರಿಕೆ ಮಾಡಿ ತೋರಿಸಬೇಕಾದಂಥ ಅಸಹಾಯಕತೆ ನಮಗೊದಗಿದೆ. ನೀರು ನಿಸರ್ಗ ನಿರ್ಮಿತ. ಹನಿ ನೀರನ್ನೂ ಸೃಷ್ಟಿಸಲಾಗದು. ಎರಡು ಜಲಜನಕದ ಪರಮಾಣುಗಳು, ಒಂದು ಆಮ್ಲಜನಕದ ಪರಮಾಣು ಸೇರಿ ಒಂದು ನೀರಿನ ಅಣು ರೂಪುಗೊಳ್ಳುತ್ತದೆ ಎನ್ನುವುದು ವಿಜ್ಞಾನ ಪಾಠ ಸರಿಯೆ. ಆದರೆ ಆ ಪಾಕ ತಯಾರಿ ಅತಿ ದುಬಾರಿ! ಪದೇ ಪದೇ ವ್ಯಾಜ್ಯ, ವಾಗ್ವಾದ, ಮನಸ್ತಾಪಕ್ಕೆ ಕೊಂಚಮಟ್ಟಿಗಾದರೂ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಮುದ್ರದ ನೀರಿನ ನಿರ್ಲವಣೀಕರಣ ಯೋಜನೆ ಆಶಾದಾಯಕ. ಈ ಗುರಿ ಸಾಧನೆಗೆ ತುರ್ತಾಗಿ ದಕ್ಷಿಣದ ನಾಲ್ಕೂ ರಾಜ್ಯಗಳು ಪೂರ್ವಗ್ರಹಪೀಡಿತರಾಗದೆ ಒಟ್ಟಾಗಿ ಚಿಂತಿಸಬೇಕು.

ಆರೋಪ ಪ್ರತ್ಯಾರೋಪಗಳಿಂದ ಏನನ್ನೂ ಸಾಧಿಸಲಾಗದು. ಚರಿತ್ರೆ ನಮಗೆ ಮುಂಬೆಳಕನ್ನು ತೋರಬೇಕೇ ಹೊರತು ವೈಮನಸ್ಸೆಂಬ ಅಂಧಕಾರಕ್ಕೆ ದೂಡಬಾರದು. ಪುಸ್ತಕದ ಓದಿದ ಪುಟವನ್ನೇ ಪುನಃ ಪುನಃ ಓದುತ್ತಿದ್ದರೆ ಮುಂದಿನ ಪುಟಗಳನ್ನು ಓದಲಾಗದು.

ಅಮೆರಿಕ, ಇಸ್ರೇಲ್, ಸೌದಿ ಅರೇಬಿಯಾ, ಯು.ಎ.ಇ. ರಾಷ್ಟ್ರಗಳಿಂದ ತಾಂತ್ರಿಕ ಸಲಹೆ ಪಡೆದು ಒಂದು ಕ್ರಿಯಾ ಯೋಜನೆ  ತಯಾರಿಸಿ ಕಾರ್ಯೋ ನ್ಮುಖವಾಗಬೇಕು. ಸಾಗರದಿಂದ ಶುದ್ಧ ಜಲ ಪಡೆಯು ವುದು ಅನಾದಿ ಕಾಲ ದಿಂದಲೂ ನಡೆದು ಬಂದಿದೆ. ಹಡಗಿನಲ್ಲಿ ಬಹು ದೂರ ಪ್ರಯಾಣಿಸುತ್ತಿದ್ದ ನಾವಿಕರು ಶುದ್ಧ ನೀರಿಗೆ ಕಂಡು ಕೊಂಡಿದ್ದ ಸರಳ ಉಪಾಯವೇನು? ಸಮುದ್ರದ ನೀರನ್ನು ಮೊಗೆದು ಕಾಯಿಸಿ ಉಪ್ಪನ್ನು ಬೇರ್ಪಡಿಸಿ ಸೇವಿಸುತ್ತಿದ್ದರು.

ಸಾಗರದಲ್ಲಿ ಎಲ್ಲವೂ ಇದೆ. ಉಪ್ಪೆಂದುಕೊಂಡರೆ ಉಪ್ಪು. ಹೊನ್ನೆಂದುಕೊಂಡರೆ ಹೊನ್ನು. ಗ್ರಹೋಪ ಗ್ರಹಗಳಲ್ಲಿ ನೀರಿನ ಅಸ್ತಿತ್ವ ಕುರಿತು ಜಿಜ್ಞಾಸೆ ಹಾಗಿರಲಿ. ನಮ್ಮದೇ ನೆಲೆಯಾದ ಭೂಮಿಯ ಮುಕ್ಕಾಲು ಮೇಲ್ಮೈ ಭಾಗ ನೀರು ಆವರಿಸಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಹೇಗೆಂದು ಮನುಷ್ಯ ಮನಃಪೂರ್ವ ಕವಾಗಿ ಆಲೋಚಿಸಿದ್ದಾನೆಯೇ ಎನ್ನುವುದು ಪ್ರಶ್ನೆ. ಸಾಗರದ ನೀರು ಹೇರಳ.  ಸೂರ್ಯ ರಶ್ಮಿ ಧಾರಾಳ. ಇನ್ನೇಕೆ ನಿರ್ಲವಣೀಕರಣಕ್ಕೆ ತಳಮಳ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT