ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆಫ್ಟಿನೆಂಟ್ ಜನರಲ್ ವಿರುದ್ಧ ಎಫ್‌ಐಆರ್

ಟ್ರಿನಿಟಿ ಚರ್ಚ್ ರಸ್ತೆ: ಕಾರು ಓಡಾಟಕ್ಕೆ ರಸ್ತೆ ವಿಭಜಕ ಒಡೆಸಿದ ಆರೋಪ
Last Updated 25 ಸೆಪ್ಟೆಂಬರ್ 2016, 19:49 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮ ಅನುಕೂಲಕ್ಕಾಗಿ ಭದ್ರತಾ ಸಿಬ್ಬಂದಿಯ ಮೂಲಕ ಮನೆ ಮುಂಭಾಗದ ರಸ್ತೆ ವಿಭಜಕವನ್ನು ಒಡೆಸಿದ ಆರೋಪದ ಮೇಲೆ ಲೆಫ್ಟಿನೆಂಟ್ ಜನರಲ್ ಎಸ್‌ಪಿಎಸ್‌ ಕಟೆವಾ ಎಂಬುವರ ವಿರುದ್ಧ ಹಲಸೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಟೆವಾ ಅವರು ಟ್ರಿನಿಟಿ ಚರ್ಚ್‌ ರಸ್ತೆಯಲ್ಲಿ ನೆಲೆಸಿದ್ದಾರೆ. ಭಾನುವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮೂರ್ನಾಲ್ಕು ಮಂದಿ ಸೇರಿಕೊಂಡು ಅವರ ಮನೆ ಮುಂಭಾಗದ ವಿಭಜಕ ಒಡೆದಿದ್ದಾರೆ. ಈ ಬಗ್ಗೆ ಸ್ಥಳೀಯರು ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ತೆರಳಿದ ಹಲಸೂರು ಸಂಚಾರ ಪೊಲೀಸರು, ವಿಭಜಕ ಒಡೆಯುತ್ತಿದ್ದ ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದಾರೆ. ಆಗ, ‘ಕಟೆವಾ ಸಾಹೇಬರ ಆದೇಶದಂತೆ ವಿಭಜಕ ತೆರವು ಮಾಡುತ್ತಿದ್ದೇವೆ’ ಎಂದು ಅವರು ಉತ್ತರಿಸಿದ್ದಾರೆ.

‘ವಿಭಜಕ ಒಡೆಸಿದ ಬಗ್ಗೆ ವಿವರಣೆ ಪಡೆಯಲು ಕಟೆವಾ ಅವರ ಮೊಬೈಲ್‌ಗೆ ಹಲವು ಸಲ ಕರೆ ಮಾಡಿದೆವು. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ. ಹೀಗಾಗಿ ಸಾರ್ವಜನಿಕರ ಆಸ್ತಿಗೆ ಹಾನಿ ಉಂಟು ಮಾಡಿದ (ಐಪಿಸಿ 425 ಹಾಗೂ 427) ಆರೋಪದಡಿ ಕಟೆವಾ ಹಾಗೂ ಅವರ ಸಿಬ್ಬಂದಿ ವಿರುದ್ಧ ಎಫ್‌ಐಆರ್ ಮಾಡಲಾಗಿದೆ. ವಿಚಾರಣೆಗೆ ಬರುವಂತೆ ಮನೆಗೆ ನೋಟಿಸ್ ಕಳುಹಿಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರು.

‘ಟ್ರಿನಿಟಿ ಚರ್ಚ್ ರಸ್ತೆಯು ಟ್ರಿನಿಟಿ ಜಂಕ್ಷನ್ ಮತ್ತು ಎಎಸ್‌ಸಿ ಜಂಕ್ಷನ್ ನಡುವೆ ಸಂಪರ್ಕ ಕಲ್ಪಿಸುತ್ತದೆ. ಒಂದು ಕಿ.ಮೀ ಉದ್ದದ ಈ ರಸ್ತೆಯಲ್ಲಿ ಮೂರು ವರ್ಷಗಳ ಹಿಂದೆ ವಿಭಜಕ ನಿರ್ಮಿಸಲಾಗಿದೆ. ಅಲ್ಲದೆ, ವಾಹನಗಳು ಪಕ್ಕದ ರಸ್ತೆಗೆ ಹೋಗಲು ಅನುಕೂಲವಾಗುವಂತೆ ವಿಭಜಕದ ಐದು ಕಡೆಗಳಲ್ಲಿ ಜಾಗ ಬಿಡಲಾಗಿತ್ತು’ ಎಂದು  ವಿವರಿಸಿದರು.

‘ಸೇನಾ ವಾಹನಗಳ ಹೆಚ್ಚಿನ ಓಡಾಟ ಹಾಗೂ ಸವಾರರು ಬೇಕಾಬಿಟ್ಟಿ ತಿರುವು ಪಡೆಯುತ್ತಿದ್ದ ಕಾರಣ ಈ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿತ್ತು. ಈ ಕಾರಣದಿಂದ ಪಕ್ಕದ ರಸ್ತೆಗೆ ಹೋಗಲು ಇದ್ದ ಐದು ಜಾಗಗಳ ಪೈಕಿ ಮೂರು ಜಾಗಗಳನ್ನು, ಹಾಲೋಬ್ರಿಕ್ಸ್ ಹಾಕಿ ಮುಚ್ಚಿದ್ದೆವು.’

‘ಸುಲಭವಾಗಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ಕಟೇವಾ ಅವರಿಗೆ ಇದರಿಂದ ಸ್ವಲ್ಪ ಸುತ್ತು ಹಾಕಿಕೊಂಡು ಹೋಗಬೇಕಾದ ಅನಿವಾರ್ಯತೆ ಬಂತು. ಹೀಗಾಗಿ ಅವರು ಸಿಬ್ಬಂದಿ ಮೂಲಕ ವಿಭಜಕ ಒಡೆಸಿದ್ದಾರೆ’ ಎಂದು ಮಾಹಿತಿ ನೀಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT