ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಬದಿ ತ್ಯಾಜ್ಯದ ರಾಶಿ, ಸೌಂದರ್ಯಕ್ಕೆ ಘಾಸಿ

ತಿಪ್ಪೆಗುಂಡಿಯಾಗುತ್ತಿರುವ ನಗರದ ಪ್ರಮುಖ ರಸ್ತೆಗಳ ಇಕ್ಕೆಲ
Last Updated 26 ಸೆಪ್ಟೆಂಬರ್ 2016, 9:20 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಒಡೆದ ಗಾಜಿನ ಬಾಟಲಿಯ ಚೂರುಗಳು, ಹರಿದ ಹೋದ ಚಪ್ಪಲಿಗಳು, ಮುರಿದ ಸಿಮೆಂಟ್ ಶೀಟ್ ತುಂಡುಗಳು, ಭಗ್ನಗೊಂಡ ಇಟ್ಟಿಗೆಯ ರಾಶಿ, ಅಪ್ಪಚಿಯಾದ ಪಾಕೆಟ್ – ಗ್ಲಾಸುಗಳು, ಎಲ್ಲೆಂದರಲ್ಲಿ ಹರಡಿದ ಪ್ಲಾಸ್ಟಿಕ್ ಚೀಲಗಳು.

ಬಿ.ಬಿ.ರಸ್ತೆ, ಕಂದವಾರ ಬಾಗಿಲು ರಸ್ತೆ, ಶಿಡ್ಲಘಟ್ಟ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಕಣ್ಣು ಹಾಯಿಸಿದರೆ ಗೋಚರಿಸುವ ದೃಶ್ಯಗಳಿವು.
ಎಲ್ಲೆಂದರಲ್ಲಿ ತ್ಯಾಜ್ಯ ಸುರಿದು ಹೋಗುವ ಪ್ರವೃತ್ತಿ ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವುದು ನಗರ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುವ ಜತೆಗೆ ಸಮಸ್ಯೆಯನ್ನು ಸೃಷ್ಟಿಸುತ್ತಿದೆ.

ಸಾರ್ವಜನಿಕರಲ್ಲಿ ಪೌರಪ್ರಜ್ಞೆ ಜಾಗೃತಗೊಳಿಸುವ ಮೂಲಕ ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕಾದ ನಗರಸಭೆಯ ನಿರ್ಲಕ್ಷ್ಯದಿಂದಾಗಿ ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗಗಳು ತಿಪ್ಪೆಗುಂಡಿಯಂತೆ ಗೋಚರಿಸುತ್ತಿವೆ.

ಜಿಲ್ಲಾ ಕೇಂದ್ರದ ಹೃದಯದಂತಿರುವ ಜಿಲ್ಲಾಡಳಿತ ಭವನ ಇರುವ ಶಿಡ್ಲಘಟ್ಟರಸ್ತೆಯ ಪಾಡಂತೂ ತ್ಯಾಜ್ಯದ ರಾಶಿಗಳಿಂದಾಗಿ ಸದ್ಯ ಹೇಳತೀರದಾಗಿದ್ದು, ರಸ್ತೆಯ ಎಡಬದಿಯಂತೂ ಅಕ್ಷರಶಃ ಕಸ ಹಾಕುವ ಕೊಂಪೆಯಾಗಿದೆ.

ವಿದ್ಯಾರ್ಥಿಗಳು, ಕಾರ್ಮಿಕರು, ಸಾರ್ವಜನಿಕರು ಸೇರಿದಂತೆ ನಿತ್ಯ ಸಾವಿರಾರು ಜನರು ಓಡಾಡುವ ಈ ರಸ್ತೆಯಲ್ಲಿ ತ್ಯಾಜ್ಯದ ರಾಶಿ ರಸ್ತೆಗೆ ಬರುತ್ತಿವೆ. ಹೀಗಾಗಿ ಪಾದಚಾರಿಗಳು ಜೀವ ಭಯದಲ್ಲಿ ರಸ್ತೆಯಲ್ಲಿಯೇ ಹೆಜ್ಜೆ ಹಾಕಬೇಕಾಗಿದೆ. ವಿಶ್ವೇಶ್ವರಯ್ಯ ಪ್ರೌಢಶಾಲೆ, ವಿದ್ಯಾನಿಕೇತನ್ ಪಿಯು ಕಾಲೇಜಿನ ಬಳಿ ತ್ಯಾಜ್ಯದ ಗುಂಪೆಗಳು ಅನಾರೋಗ್ಯಕರ ವಾತಾವರಣ ಸೃಷ್ಟಿಸುತ್ತಿವೆ.

ಹಳೆಯ ಕಟ್ಟಡಗಳನ್ನು ಒಡೆದವರು, ಗಿಡಗಂಟಿಗಳನ್ನು ತೆರವು ಮಾಡಿದವರು, ಬಾರ್‌ಅಂಗಡಿಯವರು ಹೀಗೆ ಅನೇಕರಿಗೆ ತ್ಯಾಜ್ಯಗಳನ್ನು ಸುರಿಯಲು ರಸ್ತೆಗಳು ಮೆಚ್ಚಿನ ತಾಣಗಳಾಗುತ್ತಿವೆ. ರಾತ್ರೋರಾತ್ರಿ ಸದ್ದಿಲ್ಲದೆ ಕಸ ಗುಡ್ಡೆ ಹಾಕಿ ಹೋಗುವ ಚಾಳಿ ಹೆಚ್ಚುತ್ತಿದೆ. ಇದಕ್ಕೆ ಈಗಲೇ ಕಡಿವಾಣ ಹಾಕದೆ ಹೋದರೆ ಭವಿಷ್ಯದಲ್ಲಿ ಬೆಲೆ ತೆರಬೇಕಾಗುತ್ತದೆ ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.

‘ನಗರಸಭೆ ಅಧಿಕಾರಿಗಳ ಜಾಣ ಕುರುಡುತನ, ನಿರ್ಲಕ್ಷ್ಯದಿಂದಾಗಿ ರಸ್ತೆಗಳ ನೈರ್ಮಲ್ಯ ಹಾಳಾಗುತ್ತಿದೆ. ಜನಸಾಮಾನ್ಯರು ಪಾದಚಾರಿ ಮಾರ್ಗದ ಸಮಸ್ಯೆ ಎದುರಿಸುತ್ತಿರುವ ಹೊತ್ತಿನಲ್ಲಿಯೇ ಈ ರೀತಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುತ್ತಿರುವುದು  ಪಾದಚಾರಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ಎಂ.ಜಿ.ರಸ್ತೆ ನಿವಾಸಿ ಅರುಣ್‌ಹೇಳಿದರು.

‘ಚಿಕ್ಕಬಳ್ಳಾಪುರ ತಾಲ್ಲೂಕಾಗಿ ಇದ್ದಾಗಲೇ ನಗರ ಎಷ್ಟೊ ಚೆನ್ನಾಗಿತ್ತು. ಜಿಲ್ಲಾ ಕೇಂದ್ರವಾಗಿ ದಶಕ ಸಮೀಪಿಸುತ್ತ ಬಂದರೂ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ನಗರದಲ್ಲಿ ಎಲ್ಲೂ ಸುಸಜ್ಜಿತವಾದ ಪಾದಚಾರಿ ಮಾರ್ಗವಿಲ್ಲ. ಹೋಗಲಿ ನಡೆದು ಹೋಗಲು ದಾರಿಯಾದರೂ ಇದೆಯೇ ಎಂದರೆ ಅಲ್ಲಿ ಕಸದ ರಾಶಿಗಳು ಎದುರಾಗುತ್ತವೆ’ ಎಂದು ಚಾಮರಾಜಪೇಟೆ ನಿವಾಸಿ ಶ್ರೀನಿವಾಸ್ ತಿಳಿಸಿದರು.

‘ನಗರ ಪ್ರವೇಶಿಸುವ ಮಾರ್ಗಗಳನ್ನು ನಗರಕ್ಕೆ ಬರುವ ಪರಸ್ಥಳದ ಜನರಲ್ಲಿ ಬೇರೊಂದು ಚಿತ್ರಣವನ್ನೇ ಕಟ್ಟಿಕೊಡುತ್ತವೆ. ನಗರದ ಒಳಗಡೆ ಏನೆಲ್ಲ ಅಭಿವೃದ್ಧಿ ಮಾಡಿದರೂ ನಗರದ ಸೌಂದರ್ಯವನ್ನು ಹೆಚ್ಚಿಸಲು ಸಾಧ್ಯವಿಲ್ಲ. ಇತರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮುನ್ನ ಈ ಸಮಸ್ಯೆ ಬಗೆಹರಿಸಬೇಕಿದೆ’ ಎಂದು ಬಿ.ಬಿ.ರಸ್ತೆ ನಿವಾಸಿ ಜಯರಾಂ ಹೇಳಿದರು.

‘ರಸ್ತೆ ಬದಿ ಕಸ ಸುರಿಯುತ್ತಿರುವುದರಿಂದ ನಗರ ಸೌಂದರ್ಯಕ್ಕೆ ಧಕ್ಕೆಯಾಗುತ್ತಿರುವುದು ನಿಜ. ಈ ರೀತಿ ಕಸ ಹಾಕದೇ ಇರುವ ಹಾಗೇ ನಾವು ನೋಡಿಕೊಳ್ಳಬೇಕಿದೆ. ಈ ಬಗ್ಗೆ ಕ್ರಮಕೈಗೊಳ್ಳುತ್ತೇವೆ’ ಎಂದು ನಗರಸಭೆ ಪೌರಾಯುಕ್ತ ಉಮಾಕಾಂತ್ ತಿಳಿಸಿದರು.

**
ನಗರದಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವಂತಿಲ್ಲ. ರಸ್ತೆ ಬದಿ ಯಾರು ಕಸ ಹಾಕುತ್ತಿದ್ದಾರೆ ಎಂದು ನೋಡಿಕೊಂಡು ಅವರ ವಿರುದ್ಧ ಕ್ರಮ ಜರುಗಿಸುತ್ತೇವೆ .  
-ಉಮಾಕಾಂತ್, ನಗರಸಭೆ ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT