ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ನಿವೇಶನಗಳಾದವು ತಿ ಗುಂಡಿ

ಸ್ಮಾರ್ಟ್‌ ಸಿಟಿ ಪಟ್ಟಿಯಲ್ಲಿದ್ದರೂ ಪಾಲಿಕೆಗಿಲ್ಲ ಮುನ್ನೋಟ
Last Updated 26 ಸೆಪ್ಟೆಂಬರ್ 2016, 9:39 IST
ಅಕ್ಷರ ಗಾತ್ರ

ತುಮಕೂರು: ಒಂದು ಕಡೆ ನಗರವನ್ನು ಕೇಂದ್ರ ಸರ್ಕಾರ ಸ್ಮಾರ್ಟ್‌ ಸಿಟಿ ಪಟ್ಟಿಗೆ ಸೇರಿಸಿದೆ. ಇದು ಹಲವು ಅಭಿವೃದ್ಧಿಯ ಆಶಾವಾದಗಳನ್ನು ಗರಿಗೆದರಿಸಿದೆ. ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿದೆ ಎನ್ನುವ ಅಭಿಮಾನದಲ್ಲಿ ನಗರವನ್ನು ಒಮ್ಮೆ ಸುತ್ತಿ ಬಂದರೆ ಸುಂದರ ನಗರವೊ, ತಿಪ್ಪೆಗುಂಡಿಯೊ ಎಂದು ಮೂಗುಮುರಿಯಬೇಕಾಗುತ್ತದೆ.

ನಗರ ಸ್ಚಚ್ಛತೆಗೆ ಪಾಲಿಕೆ ಆಡಳಿತದ ನಿರ್ಲಕ್ಷ್ಯ ಧೋರಣೆ, ಮುನ್ನೋಟಗಳಿಲ್ಲದ  ಕಾರಣ ನಗರ ತಿಪ್ಪೆಗುಂಡಿಯಾಗಿ ಪರಿವರ್ತನೆಯಾಗುತ್ತಿದೆ. ಯಾವುದೇ ಬಡಾವಣೆಗೆ ಕಾಲಿಟ್ಟರೂ ಖಾಲಿ ನಿವೇಶನಗಳಲ್ಲಿ ಕಸಕಡ್ಡಿ ತುಂಬಿ ತುಳುಕುತ್ತಿದೆ. ನಿವೇಶನ ಮಾಲೀಕರ ತಾತ್ಸಾರದಿಂದ ಆ ಸ್ಥಳಗಳಲ್ಲಿ ಗಿಡಗಂಟಿಗಳು, ಪಾರ್ಥೆನಿಯಂ ಬೆಳೆದು ನಿಂತಿರುತ್ತದೆ.

ಖಾಲಿ ನಿವೇಶನಗಳಲ್ಲಿ ನಾಗರಿಕರು ಕಸವನ್ನು ಸುರಿಯುವರು. ಇದರಿಂದ ಈ ಸ್ಥಳಗಳು ಬೀದಿ ನಾಯಿ, ಹಂದಿಗಳ ವಾಸ ಸ್ಥಾನವಾಗಿವೆ.  ಸಾಕಷ್ಟು ಕಡೆಗಳಲ್ಲಿ ಪಕ್ಕದ ಮನೆಯವರೇ ಖಾಲಿ ನಿವೇಶನಗಳನ್ನು ಕಸದ ಗುಂಡಿಯನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಖಾಲಿ ನಿವೇಶನಗಳಲ್ಲಿ ಕಸ ಸುರಿಯುವ ಕ್ರಿಯೆ ನಗರದ ಲಕ್ಷಣವನ್ನು ಅವಲಕ್ಷಣವಾಗಿಸುತ್ತಿದೆ.

‘ಖಾಲಿ ನಿವೇಶನ ಮಾಲೀಕರ ಮೇಲೆ ಕ್ರಮ ತೆಗೆದುಕೊಳ್ಳುವ ಅಧಿಕಾರ, ಅವಕಾಶ ಪಾಲಿಕೆಗೆ ಇದೆ. ಇಂಥ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮಾಲೀಕರ ಕರ್ತವ್ಯ. ಇವರಿಗೆ ದಂಡ ಹಾಕುವ ಮೂಲಕ ಆ ಹಣವನ್ನು ಸ್ವಚ್ಛತೆಗೆ ಬಳಸಿಕೊಳ್ಳಬಹುದಲ್ಲವೇ’ ಎಂದು ಗೃಹಣಿ ಉಮಾ ಪ್ರಶ್ನಿಸುವರು.

‘ಟೂಡಾದಲ್ಲಿ ನಿವೇಶನ ಪಡೆದವರು ನಿಗದಿತ ಅವಧಿಯೊಳಗೆ ಮನೆ ಕಟ್ಟಿಕೊಳ್ಳಬೇಕು ಎನ್ನುವ ನಿಯಮವಿದೆ. ಇಲ್ಲವಾದರೆ ನಿವೇಶನ ವಾಪಸ್‌ ಪಡೆದು ನಿವೇಶನ ರಹಿತರಿಗೆ ಹಂಚಿದರೆ ಖಾಲಿ ನಿವೇಶನಗಳ ಕಾಟ ಕಡಿಮೆಯಾಗುತ್ತದೆ’ ಎನ್ನುವರು ಶಿರಾಗೇಟ್‌ ಬಳಿಯ ವಾಸಿ, ವಕೀಲ ಸುಧೀಂದ್ರ.

ಸೊಳ್ಳೆಗಳಿಂದ ನಗರದಲ್ಲಿ ಡೆಂಗಿ, ಚಿಕೂನ್‌ ಗುನ್ಯಾ ದಂಥ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ. ಆದರೂ ಪಾಲಿಕೆ ಆಡಳಿತ ನಗರದ ಸ್ವಚ್ಛತೆಗೆ ಗಮನ ನೀಡುತ್ತಿಲ್ಲ ಎಂದು ನಾಗರಿಕರು ತೀವ್ರವಾಗಿ  ಆರೋಪಿಸುವರು.

ಮನೆಗಳ ಕಸ ಸಂಗ್ರಹಿಸುವುದು ಬಿಟ್ಟರೆ ಉಳಿದಂತೆ ಸ್ವಚ್ಛತೆ ಬಗ್ಗೆ ಪಾಲಿಕೆ ಏನು ಮಾಡಿದೆ, ನೀವೇ ಹೇಳಿ ಎಂದು ಶಿರಾಗೇಟ್‌ ನಿವಾಸಿ ಧನಂಜಯ್ ಪ್ರಶ್ನಿಸುವರು. 
ಸಾಕಷ್ಟು ಕಡೆಗಳಲ್ಲಿ ಚರಂಡಿಗಳು ಮುಚ್ಚಿ ಹೋಗಿವೆ. ಅವುಗಳ ಹೂಳು ತೆಗೆದಿಲ್ಲ. ನಗರದ ಹೊರಭಾಗದಲ್ಲಿರುವ ವಾರ್ಡ್‌ಗಳ ಪರಿಸ್ಥಿತಿ ಈ ವಿಷಯದಲ್ಲಿ ತೀರಾ ವಿಷಮವಾಗಿದೆ.

‘ನಮ್ಮ ವಾರ್ಡ್‌ ಹಳ್ಳಿಗಿಂತಲೂ ಕಡೆಯಾಗಿದೆ. ಜನರು ಬೆಳಿಗ್ಗೆ ಬಯಲು ಶೌಚಕ್ಕೆ ಹೋಗುವರು. ಸಾಕಷ್ಟು ಮನೆಗಳಲ್ಲಿ ಶೌಚಾಲಯ ಇಲ್ಲ. ಕೆಲವು ಮನೆಯವರು ಶೌಚಾಲಯ ಇದ್ದರೂ ಬಳಸುತ್ತಿಲ್ಲ. ಈ ಬಗ್ಗೆ ಪಾಲಿಕೆಯಿಂದ ಜಾಗೃತಿ ಮೂಡಿಸುತ್ತಿಲ್ಲ’ ಎಂದು ಸತ್ಯಮಂಗಲದ ಸುರೇಂದ್ರ ಆರೋಪಿಸಿದರು.

‘ತೊಟ್ಟಿ ರಹಿತ ನಗರವಾಗಿ ಮಾಡುತ್ತೇವೆ ಎಂದು ಮೂರು ವರ್ಷದ ಹಿಂದೆಯೇ ಪಾಲಿಕೆ ಘೋಷಿಸಿತ್ತು. ಮನೆಗಳಿಗೆ ಹೋಗಿ ಕಸ ಸಂಗ್ರಹಿಸುವುದಾಗಿ ಹೇಳುವರು. ಹೀಗಿರುವಾಗ ರಸ್ತೆಗಳಲ್ಲಿ ತೊಟ್ಟಿಗಳು ಏಕೆ ಇಡಬೇಕು. ತೊಟ್ಟಿಯಲ್ಲಿ ಕಸ ತುಂಬಿ ನಾರುತ್ತಿದೆ’ ಎನ್ನುವರು ಶಿವಶಂಕರ್‌.

***
ಮತ್ತೆ ಪ್ಲಾಸ್ಟಿಕ್  ಹಾವಳಿ

ಪ್ಲಾಸ್ಟಿಕ್ ಹಾವಳಿ ನಗರದಲ್ಲಿ ಮತ್ತೆ ತಲೆ ಎತ್ತಿದೆ. ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿದ್ದರೂ ತರಕಾರಿ ಅಂಗಡಿಗಳು, ಮಾರಾಟಗಾರರು, ಬೇಕರಿ ಹಾಗೂ ಸಣ್ಣಪುಟ್ಟ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಚೀಲ ಬಳಸಲಾಗುತ್ತಿದೆ.

ಪ್ಲಾಸ್ಟಿಕ್ ನಿಷೇಧಿಸಿದ ಆರಂಭದ ದಿನಗಳಲ್ಲಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಚೀಲ ನೀಡುತ್ತಿರಲಿಲ್ಲ. ಹಣ ತೆಗೆದುಕೊಂಡು ಬಟ್ಟೆ ಚೀಲದಲ್ಲಿ ಸಾಮಾನು, ತರಕಾರಿ ಹಾಕಿ ಕೊಡುತ್ತಿದ್ದರು. ಆದರೆ ಈಗ ನಿಧಾನವಾಗಿ ಮತ್ತೆ ಪ್ಲಾಸ್ಟಿಕ್‌ ಬಳಕೆಯಾಗುತ್ತಿದೆ.

‘ಪಾಲಿಕೆ ಅಧಿಕಾರಿಗಳು ಸೂಕ್ತ ಕಣ್ಗಾವಲು ಇಡುತ್ತಿಲ್ಲ. ಕದ್ದುಮುಚ್ಚು ಪ್ಲಾಸ್ಟಿಕ್ ತಯಾರಿಸುವುದು ನಡೆದಿದೆ. ಅಲ್ಲದೇ ಹೈದರಾಬಾದ್‌ನಿಂದಲೂ ಅಕ್ರಮವಾಗಿ ತರಿಸಿಕೊಳ್ಳಲಾಗುತ್ತಿದೆ’ ಎಂದು ಅಂಗಡಿ ಮಾಲೀಕರೊಬ್ಬರು ಮಾಹಿತಿ ನೀಡುವರು.

**
–ಸಿ.ಕೆ.ಮಹೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT