ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೆಮಾರಿ ಮಕħಳಿಗೆ ಅಕ�ರ ದೀಕೆ�

ದಾಸರಹಳ್ಳಿ ಬಳಿಯ ಭೂತಪ್ಪನ ಬಂಡೆಯಲ್ಲಿ ವಲಸೆ ಕೂಲಿ ಕಾರ್ಮಿಕರ ಮಕ್ಕಳಿಗೆ ಗುಡಾರ ಶಾಲೆ
Last Updated 26 ಸೆಪ್ಟೆಂಬರ್ 2016, 9:48 IST
ಅಕ್ಷರ ಗಾತ್ರ

ಕೊರಟಗೆರೆ: ಸುತ್ತಲೂ ಬೆಟ್ಟಗುಡ್ಡಗಳ ಸಾಲು. ಇದರೊಂದಿಗೆ ದಿಕ್ಕುದಿಕ್ಕಿಗೂ ಭೋರ್ಗರೆಯುವ ಜಲ್ಲಿ ಕ್ರಷರ್‌ಗಳು. ಇದರ ಒಳಗೊಳಗೆ ಯಾವುದೋ  ಕಾಡು ಸಂಸ್ಕೃತಿಯ ಇಣುಕು ನೋಟ. ಅಂತಹ ಕಾಡುಜನರ ಮಕ್ಕಳಿಗೆ ಅಕ್ಷರ ಸಂಸ್ಕೃತಿಯ ಮಿಣುಕು ದೀಪ ಉರಿಯುತ್ತಿದೆ. ಈಗಿಲ್ಲಿ ಕಾಡುಹಕ್ಕಿಗಳ ಅಕ್ಷರ ಕಲರವ...

ತಾಲ್ಲೂಕಿನ ದಾಸರಹಳ್ಳಿ ಗ್ರಾಮದ ಗೇಟ್‌ನಿಂದ ಸುಮಾರು ಒಂದೂವರೆ ಕಿ.ಮೀ ದೂರ ಗುಡ್ಡಗಾಡು ಪ್ರದೇಶದಲ್ಲಿ  ಸಾಗಿದರೆ ಇಂತಹದೊಂದು ಸನ್ನಿವೇಶ ಕಾಣ ಸಿಗುತ್ತದೆ. ಈ ಪ್ರದೇಶ ಭೂತಪ್ಪನ ಬಂಡೆಯೆಂದೇ ಕರೆಯಲ್ಪಡುತ್ತದೆ.

ಈ ಪ್ರದೇಶ ಈಗ ಅಲೆಮಾರಿ ಕುಟುಂಬಗಳ ಆಶ್ರಯ ತಾಣವಾಗಿದೆ. ಕೂಲಿ ಅರಸಿ ಇಲ್ಲಿನ ಕ್ರಷರ್‌ಗಳಲ್ಲಿ ಕೆಲಸ ಮಾಡಲು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಜುಮ್ಲಾ ತಾಂಡಾದಿಂದ ವಲಸೆ ಬಂದಿರುವ ಸುಮಾರು 40 ಕುಟುಂಬ ಬೀಡು ಬಿಟ್ಟಿವೆ.

ಈ ಜನರ ಮಕ್ಕಳಿಗೆ ಅನುಕೂಲವಾಗುವಂತೆ ಇಲ್ಲಿ ಒಂದು ಶಾಲೆಯನ್ನು ತೆರೆಯಲಾಗಿದೆ. ಈ ಶಾಲೆಯಲ್ಲಿ ಪ್ರಸ್ತುತ 30  ಮಕ್ಕಳು ಅಕ್ಷರ ದೀವಿಗೆ ಹಿಡಿಯುತ್ತಿದ್ದಾರೆ. 10 ಪುಟ್ಟ ಮಕ್ಕಳು ಇವರೊಂದಿಗಿದ್ದಾರೆ. ಶಿಶು ಅಭಿವೃದ್ಧಿ ಇಲಾಖೆಯಿಂದ ಆಹಾರವನ್ನು ಸರಬರಾಜು ಮಾಡಲಾಗುತ್ತಿದೆ.

ಇಲ್ಲಿನ ಕುಟುಂಬಗಳಿಗೆ ಕೂಲಿ ಕೆಲಸ ಬಿಟ್ಟರೆ ಬೇರೆನೂ ಗೊತ್ತಿಲ್ಲ. ಹಾಗಾಗಿ ಸಾಕ್ಷರ ಕೇಂದ್ರವನ್ನು ತೆರೆದು ಅಕ್ಷರ ಜ್ಞಾನ ನೀಡಲಾಗುತ್ತಿದೆ.

ಭೂತಪ್ಪನ ಬಂಡೆ ಬಳಿ ಸುಮಾರು ಮೂರು ಕ್ರಷರ್‌ಗಳು ಕೆಲಸ ಮಾಡುತ್ತಿವೆ. ಕೂಲಿಗಾಗಿ ಬಂದಿರುವ ಕುಟುಂಬಗಳು ಬೆಳಿಗ್ಗೆಯಿಂದ ಸಂಜೆ ವರೆಗೆ ಕಲ್ಲು ಗಣಿಗಾರಿಕೆಯಲ್ಲಿ ತೊಡಗುತ್ತಿದ್ದರು.  ಇವರ ಮಕ್ಕಳೂ ಇದೇ ಕೆಲಸ ಕಾರ್ಯಗಳಲ್ಲಿ ತೊಡಗುತ್ತಿದ್ದರು.

ಇದನ್ನರಿತ ಸ್ಥಳೀಯರಾದ ಗರಗದೊಡ್ಡಿ ನಟರಾಜು ಬಿಇಒ ಅವರನ್ನು ಭೇಟಿ ಮಾಡಿ, ಇಲ್ಲಿನ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದ್ದರು. ಕೂಡಲೇ ಎಚ್ಚೆತ್ತ ಶಿಕ್ಷಣ ಇಲಾಖೆ ಈ ಭಾಗದಲ್ಲಿ ಗುಡಾರ ಶಾಲೆ ಆರಂಭಿಸಿದೆ.

ಸದ್ಯಕ್ಕೆ ತುಂಬಾಡಿ ಶಾಲೆಯಿಂದ ಒಬ್ಬ ಶಿಕ್ಷಕರನ್ನು ನಿಯೋಜಿಸಲಾಗಿದೆ. ಅಲ್ಲಿ, ಇಲ್ಲಿ ಶಾಲೆಗಳಿಗೆ ಅಳಿದುಳಿದ ಸಮವಸ್ತ್ರ, ಪುಸ್ತಕಗಳನ್ನು ಮಕ್ಕಳಿಗೆ ನೀಡಲಾಗಿದೆ. ಆದರೆ ಇನ್ನೊಬ್ಬ ಶಿಕ್ಷಕರ ಅಗತ್ಯ ಇದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಗುಡಾರ ಆರಂಭವಾಗಿ ಒಂದೂವರೆ ತಿಂಗಳು ಕಳೆದಿದೆ. ಬೆಟ್ಟ– ಗುಡ್ಡದ ನಡುವೆ ಈಗ ಮಕ್ಕಳು ಕಲಿಯುತ್ತಿದ್ದಾರೆ. ಒಂದಿಷ್ಟು ಅಕ್ಷರ ಜ್ಞಾನ ಇಲ್ಲದಿದ್ದ ಮಕ್ಕಳು ಈಗ ಅಲ್ಪ–ಸ್ವಲ್ಪ ಅಕ್ಷರ ಹಾಗೂ ಅಂಕಿಗಳನ್ನು ಗುರುತಿಸಿ ಹೇಳುವ ಮಟ್ಟಿಗೆ ತಯಾರಾಗಿದ್ದಾರೆ. ಸಂಪೂರ್ಣ ಅನಕ್ಷರಸ್ಥರಾದ ಅವರ ಪೋಷಕರಿಗೂ ಅಕ್ಷರಗಳನ್ನು ಹೇಳಿಕೊಡುವ ಮಟ್ಟಿಗೆ  ಆಗಿದ್ದಾರೆ.

ಸದ್ಯಕ್ಕೆ ದಾಸರಹಳ್ಳಿ ಶಾಲೆ ಮುಖಾಂತರ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಸ್ಥಳೀಯ ದಾನಿಗಳಿಂದ ಮಕ್ಕಳಿಗೆ ತಟ್ಟೆ, ಲೋಟಗಳನ್ನು ನೀಡಲಾಗಿದೆ. ಆದರೂ ಮೂಲಸೌಲಭ್ಯಗಳೇ ಇಲ್ಲದ ಇಲ್ಲಿನ ಜನರು ರಾಜ್ಯ ಹೆದ್ದಾರಿಯ ಸುಮಾರು ಒಂದೂವರೆ ಕಿಲೋ ಮೀಟರ್‌ ದೂರದಲ್ಲಿ  ಬದುಕುತ್ತಿದ್ದಾರೆ. ಆಧಾರ್‌ ಕಾರ್ಡ್‌, ಚುನಾವಣಾ ಗುರುತಿನ ಚೀಟಿ, ಇನ್ನಿತರ ಯಾವುದೇ ರೀತಿಯ ವಿಳಾಸ ದೃಢೀಕರಣ ಪತ್ರ ಇಲ್ಲಿನ ಪೋಷಕರಿಗಾಗಲಿ ಮಕ್ಕಳಿಗಾಗಲಿ ಇಲ್ಲ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸರ್ವ ಶಿಕ್ಷಾ ಅಭಿಯಾನದಲ್ಲಿ ಹಲವಾರು ಸವಲತ್ತುಗಳಿವೆ. ಆದರೆ ಅವು ಕೇವಲ ಕಾಗದ ಮೇಲೆ ಇದೆಯಾದರೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ.

14 ವರ್ಷ ವಯಸ್ಸಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕು ಎನ್ನುವ ಕಾನೂನುಗಳಿದ್ದರೂ ಸವಲತ್ತುಗಳು ಮಾತ್ರ ಇಂತಹ ಕಡೆ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಇಂತಹ ಅಲೆಮಾರಿ ಕುಟುಂಬಗಳು ಇಂದಿಗೂ ಅಲ್ಲಲ್ಲಿ ಅನಕ್ಷರಸ್ತರಾಗಿಯೇ ಉಳಿಯುತ್ತಿದ್ದಾರೆ.

***
30 ಮಕ್ಕಳಿಗೆ ಟೆಂಟ್‌ ಶಾಲೆ

ಸುಮಾರು ಮೂರು ತಿಂಗಳ ಹಿಂದೆ ಕೂಲಿ ಕೆಲಸಕ್ಕಾಗಿ 40 ಕುಟುಂಬ ಇಲ್ಲಿಗೆ ಬಂದಿದ್ದಾರೆ. 40 ಜನ ಮಕ್ಕಳು ಇಲ್ಲಿನ ಬೆಟ್ಟ– ಗುಡ್ಡಗಳಲ್ಲಿ ಓಡಾಡುತ್ತಿದ್ದನ್ನು ಗಮನಿಸಿ ವಿಚಾರಣೆ ಮಾಡಿದಾಗ ಕೂಲಿ ಕಾರ್ಮಿಕರ ಮಕ್ಕಳೆಂದು ತಿಳಿಯಿತು.

ವಿದ್ಯಾಭ್ಯಾಸ ಇನ್ನಿತರೆ ಯಾವುದೇ ಸೌಲಭ್ಯ ಇಲ್ಲದಿರುವುದನ್ನು ಮನಗಂಡು ಬಿಇಒ ಅವರ ಗಮನಕ್ಕೆ ತಂದು ಈಗ ಇಲ್ಲಿನ 30 ಮಕ್ಕಳಿಗೆ ಟೆಂಟ್‌ ಶಾಲೆ ತೆರೆದು ವಿದ್ಯಾಭ್ಯಾಸ ನೀಡಲಾಗುತ್ತಿದೆ.
–ಗರಗದೊಡ್ಡು ನಟರಾಜು, ಲೇಖಕರು

***
ನಮ್ಮಕ್ಳು ನಾಕ್‌ ಅಕ್ಷರ ಕಲಿತಾವೆ

ನಮ್ಮ ಕಡಿ ಕೂಲಿ ಸಿಗಾಂಗಿಲ್ರಿ. ನಮ್ಗೆ ಓದೋದುಕಿಂತ ಹೊಟ್ಟೆ ಪಾಡೆ ಮುಖ್ಯರೀ. ಅದುಕಂತಾ ನಾವು ನಮ್ಮ ಮಕ್ಳು ಕೂಡೆ ಗುಳೆ ಬಂದೀವ್ರೀ. ಇಲ್ಲಿ ಬಂಡೆ ಕೆಲ್ಸ ಮಾಡೋ ಮಂದಿ ಮಕ್ಳಿಗೆ ಅಕ್ಸರ ಕಲೀಬೇಕು ಎನ್ನೋದೇನು ಇರಲಿಲ್ರಿ. ಏಪ್ರಿಲ್‌ ತಿಂಗ್ಳಾನಾಗೆ ವಾಪಸ್‌ ಒಂಟೋಕ್ತಿವಿ. ಜೂನ್‌ನಾಗ ಮತ್ತ್ಯೆ ಬರ್ತೀವ್ರೀ. ಈಗ ಅಲ್ಲಿತನಕ ನಮ್ಮ ಐಕ್ಳು ಓದೋದ್‌ ಬರಿಯೋದ್‌ನ ಕಲ್ಸಾಕೆ ಮಾಡಿರೋದು ಒಳ್ಳೆದಾತ್ರೀ. ನಮ್ಮಕ್ಳು ನಾಕ್‌ ಅಕ್ಷರ ಕಲಿತಾವೆ. ಖುಷಿ ಯಾಗತೈತ್ರಿ.
–ಗೋವಿಂದ, ಬಂಡೆ ಕಾರ್ಮಿಕ

***
ಮೊದಲು ಬಂದಾಗ ಇಲ್ಲಿನ ಮಕ್ಕಳಿಗೆ ವೈಯಕ್ತಿಕ ಸ್ವಚ್ಛತೆ, ಶಿಸ್ತು, ಜೀವನ ಕ್ರಮದ ಬಗ್ಗೆ ತಿಳಿದಿರಲಿಲ್ಲ. ಕಾಡು ಜನರಂತಿದ್ದ ಮಕ್ಕಳು ಈಗ ಕಲಿಕೆಯಲ್ಲಿ ಬಹಳಷ್ಟು ಆಸಕ್ತಿ ತೋರುತ್ತಿದ್ದಾರೆ.
-ಸಿದ್ದರಾಜು, ನಿಯೋಜನೆಗೊಂಡ ಶಿಕ್ಷಕ

***
ನಮ್ಮಪ್ಪಾ– ಅವ್ವನ್‌ ಜತೆ ನಾವು ಬಂಡೆ ಕೆಲ್ಸ ಮಾಡ್ತಿದ್ವಿರೀ, ಈಗ ಶಾಲಿ ಮಾಡಿ ಪಾಠ ಓದಸ್ಲಿಕತ್ತಾರ್ರಿ. ಬಾವು ಭಾಳ್‌ ಖುಷಿಯಿಲಿಂದ ಕಲಿಯಾಕತ್ತಿದ್ದೀವ್ರೀ.
-ಉಮೇಶ್‌, 10 ವರ್ಷದ ಬಾಲಕ

**
–ಎ.ಆರ್‌.ಚಿದಂಬರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT