ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ಮಳೆ: ರೈತ ಕಂಗಾಲು

ಎಚ್‌.ಡಿ. ಕೋಟೆ: ಒಣಗುತ್ತಿರುವ ರಾಗಿ, ಮೆಕ್ಕೆಜೋಳ; ಕುಸಿದ ಹತ್ತಿ ಇಳುವರಿ
Last Updated 26 ಸೆಪ್ಟೆಂಬರ್ 2016, 10:51 IST
ಅಕ್ಷರ ಗಾತ್ರ

ಹಂಪಾಪುರ: ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ ಹಂಪಾಪುರ ಹೋಬಳಿಯಲ್ಲಿ  ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿದಿದ್ದು, ಮುಸುಕಿನ ಜೋಳ, ರಾಗಿ ಬೆಳೆ ಒಣಗುತ್ತಿದ್ದು ರೈತರು ಕಂಗಾಲಾಗಿದ್ದಾರೆ.

ತಾಲ್ಲೂಕಿನಲ್ಲಿ ಜ. 1 ರಿಂದ ಸೆ.19 ರವರೆಗೆ 726.8 ಮಿಲಿ ಮೀಟರ್ ವಾಡಿಕೆ ಮಳೆಯಾಗಬೇಕಿತ್ತು.  ಆದರೆ, ಈ ಬಾರಿ  480.3 ಮಿಲಿ ಮೀಟರ್ ಮಾತ್ರ ಮಳೆಯಾಗಿದ್ದು ತಾಲ್ಲೂಕಿನ ಬಹುಪಾಲು ಬೆಳೆ ಒಣಗಿದೆ.

ಹಂಪಾಪುರ ಹೋಬಳಿಯೊಂದನ್ನು ಪರಿಗಣಿಸಿದಾಗ ಕೇವಲ ಶೇ 57 ರಷ್ಟು ಮಾತ್ರ ಮಳೆಯಾಗಿದೆ. ಅದು, 2 ದಿನಗಳಲ್ಲಿ ಸುರಿದ ಮಳೆಯ ಪ್ರಮಾಣವಾಗಿದೆ.
ಶೇ 43 ರಷ್ಟು ಮಳೆಯ ಕೊರತೆಯಿಂದಾಗಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆ ಕೊರತೆ ಹೊಂದಿದ ಹೋಬಳಿ ಪ್ರದೇಶ ಹಂಪಾಪುರ.

ತಾಲ್ಲೂಕಿನಲ್ಲಿ ಭತ್ತವನ್ನು 6,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತುವ ಗುರಿಯನ್ನು ಹೊಂದಲಾಗಿತ್ತು. ಆದರೆ,  ಕಬಿನಿಯಿಂದ ತಮಿಳುನಾಡಿಗೆ ನೀರು ಹರಿಸಿದ್ದರಿಂದ ಕೇವಲ 3,500 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತ ನಾಟಿ ಕಾರ್ಯ ಪೂರ್ಣಗೊಂಡಿದೆ. ಈ ಬೆಳೆಗೆ 80ರಿಂದ 90 ದಿನಗಳ ನೀರಿನ  ಅವಶ್ಯಕತೆ ಇದೆ. ಆದರೆ, ಈಗಾಗಲೇ ಕಟ್ಟೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಮುಂದೇನು    ಎಂದು ಕೃಷಿ ಇಲಾಖೆಯ ತಾಂತ್ರಿಕಾಧಿಕಾರಿ ಗುರುಪ್ರಸಾದ್ ಆತಂಕ ವ್ಯಕ್ತಪಡಿಸಿದ್ದಾರೆ.

ಮೇ ತಿಂಗಳ ಆರಂಭದಲ್ಲಿ ತಾಲ್ಲೂಕಿನಲ್ಲಿ ಬಿತ್ತನೆ ಮಾಡಿದ್ದ ದ್ವಿದಳ ಧಾನ್ಯಗಳು ಶೇ 50ರಿಂದ 60 ರಷ್ಟು ರೈತರ ಕೈ ಸೇರಿದ್ದರೆ ಉಳಿದ ಶೇ 40 ರಷ್ಟು ಬೆಳೆ ಬಿಸಿಲಿನಿಂದ ಒಣಗಿ ಹೋಗಿದ್ದು, ರೈತರನ್ನು ಚಿಂತೆಗೀಡುಮಾಡಿದೆ.

ಜೂನ್ ನಂತರದ ತಿಂಗಳಿನಲ್ಲಿ ಬಿತ್ತನೆ ಮಾಡಿದ್ದ ದ್ವಿದಳ ಧಾನ್ಯಗಳು ಸಂಪೂರ್ಣ ನೆಲಕಚ್ಚಿವೆ. ಅದೇ ರೀತಿ ಜೂನ್ ನಂತರ ಬಿತ್ತನೆ ಮಾಡಿದ ಮೆಕ್ಕೆಜೋಳ ಸಹ ಸಂಪೂರ್ಣ ತರಗಲೆಯಾಗಿದೆ.

ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ 31 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯ ಗುರಿ ಹೊಂದಲಾಗಿತ್ತು, ಆದರೆ, ಮಳೆಯ ಕೊರತೆಯಿಂದ 29.900 ಹೆಕ್ಟೇರ್ ಪ್ರದೇಶದಲ್ಲಿ ರೈತರು ಹತ್ತಿ ಬಿತ್ತನೆ ಮಾಡಿದ್ದು. ಒಂದು ಎಕರೆಗೆ 6.5 ಕ್ವಿಂಟಲ್ ಹತ್ತಿ ಬೆಳೆಯುವ ನಿರೀಕ್ಷೆ ಯನ್ನು ರೈತರು ಹೊಂದಿದ್ದರು. ಆದರೆ, ಮಳೆಯ ಕೊರತೆಯಿಂದ ಇಳುವರಿ  ಪ್ರಮಾಣ 3 ಕ್ವಿಂಟಲ್ ಗೆ ಕುಸಿದಿದೆ.

ಎಲ್ಲಾ ಹೋಬಳಿಗಳಿಗೆ  ಕೃಷಿ ಇಲಾಖೆ ಸಿಬ್ಬಂದಿ, ಗ್ರಾಮ ಲೆಕ್ಕಿಗರ ಜತೆ ಭೇಟಿ ನೀಡಿ  ಮಾಹಿತಿ ನೀಡುವಂತೆ ಆದೇಶಿಸಲಾಗಿದೆ ಎಂದು ತಾಲ್ಲೂಕು ದಂಡಾಧಿಕಾರಿ ಎಂ. ನಂಜುಂಡಯ್ಯ ಮತ್ತು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಯರಾಮ್ ಹೇಳಿದರು.

ಮಳೆ ಕೊರತೆಯಿಂದ ಉಂಟಾಗಿರುವ ಹಾನಿ  ಪರಿಶೀಲಿಸಿ  ಸಮಗ್ರ ವರದಿಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಜಯರಾಮ್ ಹೇಳಿದರು.

ಪರಿಹಾರ: ಖುಷ್ಕಿ ಬೆಳೆಗಳಿಗೆ 1ಕುಂಟೆ   ₹ 68ನಂತೆ 1 ಹೆಕ್ಟೇರ್ ಗೆ ₹ 6,800 ಪರಿಹಾರವನ್ನು, ಭತ್ತ, ಕಬ್ಬು ಬೆಳೆಗಳಿಗೆ 1 ಕುಂಟೆಗೆ ₹ 135ನಂತೆ  ಹೆಕ್ಟೇರ್‌ಗೆ             ₹ 13,500  ಹಾಗೂ ತೋಟಗಾರಿಕಾ ಬೆಳೆಗಳಾದ ಅರಿಸಿನ, ಬಾಳೆ, ಶುಂಠಿ ಇನ್ನಿತರ ಬೆಳೆಗಳಿಗೆ 1 ಕುಂಟೆಗೆ ₹180ನಂತೆ ಹೆಕ್ಟೇರ್ ಗೆ ₹ 18,000  ನೀಡಲಾಗುವುದು ಎಂದು ಕೃಷಿ ಇಲಾಖೆಯ ತಾಂತ್ರಿಕಾಧಿಕಾರಿ ಗುರುಪ್ರಸಾದ್ ತಿಳಿಸಿದ್ದಾರೆ.
- ರವಿಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT