ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾಗುವ ಅಂಚಿನಲಿ ಬಾವಲಿ

Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಸೂರ್ಯ ಮುಳುಗುವ ಸಮಯ. ವಿಶ್ರಾಂತಿ ಮುಗಿಸಿ ವಾಸಸ್ಥಾನದಿಂದ ಹೊರ ಬೀಳುವ ಬಾವಲಿಗಳು. ಮುಸ್ಸಂಜೆ ಆಗುವುದನ್ನೇ ಕಾಯುವ ಈ ಹಾರುವ ಸಸ್ತನಿಗಳು ತಮ್ಮ ಗುಂಪಿನೊಂದಿಗೆ ತುತ್ತಿನ ಬುತ್ತಿ ತುಂಬಿಕೊಳ್ಳಲು ಹೊರಟೇ ಬಿಡುತ್ತವೆ. ಯಾರದ್ದೋ ಮೇಲೆ ಯುದ್ಧ ಸಾರಿದಂತೆ ಹೋಗುವ ಸೈನಿಕರಂತೆ ಸಂಜೆಯಾಗುತ್ತಿದ್ದಂತೆ ಆಗಸದಲ್ಲಿ ಹಾರುತ್ತಾ ಹೋಗುವ ಬಾವಲಿಗಳು ಸೂರ್ಯೋದಯವಾಗುತ್ತಿದ್ದಂತೆಯೇ ಮತ್ತೆ ಗೂಡು ಸೇರಿ ಜೋತು ಬೀಳುತ್ತವೆ. ಹೀಗಾಗಿಯೇ ಜನರ ಕಣ್ಣಿಗೆ ಹೆಚ್ಚಾಗಿ ಬೀಳುವುದಿಲ್ಲ.

ಬಾವಲಿಗಳ ಸಂಖ್ಯೆ ಹಿಂದೆ ಎಷ್ಟಿತ್ತು ಹಾಗೂ ಈಗ ಎಷ್ಟಿದೆ? ಹೆಚ್ಚಾಗಿದೆಯೇ ಅಥವಾ ಕಡಿಮೆಯಾಗಿದೆಯೇ ಎಂದು ಹೇಳಲು ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ.ಇವುಗಳ ಕುರಿತು ಹೆಚ್ಚಿನ ಅಧ್ಯಯನಗಳೂ ನಡೆದಿಲ್ಲ. ಹಾರುವ ಈ ಸಸ್ತನಿ ನಮ್ಮ ಪರಿಸರದಲ್ಲಿ ಒಂದು ರೀತಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎನ್ನಬಹುದು.

ನಮ್ಮ ಪೂರ್ವಜರು ಹಾಗೂ ಗ್ರಾಮದಲ್ಲಿನ ಹಿರಿಯರು ಕಂಡಂತೆ ಬಾವಲಿಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ. ಹಿಂದೆ ಹಳ್ಳಿಗಳಲ್ಲಿನ ಬೆಟ್ಟಗುಡ್ಡಗಳು, ಗುಹೆಗಳು, ಒಣಗಿದ ಮರಗಳು, ದೊಡ್ಡ ಆಲದ ಮರಗಳಲ್ಲಿ ಸಾವಿರಾರು ಬಾವಲಿಗಳು ಇರುತ್ತಿದ್ದವು. ಆದರೆ ಅಭಿವೃದ್ಧಿ ಹೆಸರಿನಲ್ಲಿ ಮರಗಳು, ಬಂಡೆಗಳು, ಗುಹೆಗಳು ಕಣ್ಮರೆಯಾಗುತ್ತಿದ್ದಂತೆ ಅವುಗಳ ಸಂಖ್ಯೆಯಲ್ಲೂ ಇಳಿಮುಖವಾಗಿದೆ.

ಬೆಟ್ಟಗಳಲ್ಲಿನ ಕ್ವಾರಿ ಕೆಲಸ, ಯಾವುದೋ ಕೈಗಾರಿಕೆ ಅಥವಾ ಬೃಹತ್ ಕಟ್ಟಡ ನಿರ್ಮಾಣಕ್ಕಾಗಿಯೋ ಗುಹೆಗಳನ್ನು ನಾಶ ಮಾಡುವ ಕಾರ್ಯ ನಡೆಯುತ್ತಲೇ ಇದೆ.ನಗರಗಳಲ್ಲಂತೂ ಹೇಳುವುದೇ ಬೇಕಿಲ್ಲ. ರಸ್ತೆ ವಿಸ್ತರಣೆ, ಬಹು ಮಹಡಿ ಕಟ್ಟಡ ನಿರ್ಮಾಣ, ಅಪಾರ್ಟ್ಮೆಂಟ್ ಸೇರಿದಂತೆ ನಾನಾ ಕಾರಣಗಳನ್ನು ನೀಡಿ ಮರಗಳನ್ನು ಕಡಿಯಲಾಗುತ್ತಿದೆ. ಹೀಗಾಗಿಯೇ ಈಗ ನಗರದಲ್ಲಿ ತಲಾ ಒಬ್ಬರಿಗೆ ಒಂದು ಮರವೂ ಇಲ್ಲದಂತಾಗಿದೆ.

ಜೊತೆಗೆ ಮನೆ ನಿರ್ಮಾಣದಲ್ಲಾಗಿರುವ ಬದಲಾವಣೆಗಳೂ  ಬಾವಲಿಗಳು ಕಡಿಮೆಯಾಗಲು ಒಂದು ಕಾರಣ. ಹಿಂದೆ ಹೆಂಚಿನ ಮನೆಗಳು, ಕಿಟಕಿ ಬಾಗಿಲ ಮೇಲಿರುತ್ತಿದ್ದ ಕಮಾನುಗಳಲ್ಲಿ ಬಾವಲಿಗಳು, ಗುಬ್ಬಿಗಳು ಮನೆ ಮಾಡಿಕೊಳ್ಳುತ್ತಿದ್ದವು. ಆದರೆ ಈಗ ಅದೂ ಸಾಧ್ಯವಿಲ್ಲ.

ಸದ್ಯಕ್ಕೆ ನಗರಗಳಲ್ಲಿ ಎಲ್ಲೆಲ್ಲಿ ಉದ್ಯಾನಗಳಿವೆ ಹಾಗೂ ಮರಗಳಿವೆ ಅಲ್ಲಿ ಮಾತ್ರ ಬಾವಲಿಗಳು ಉಸಿರಾಡುತ್ತಿವೆ. ಅದರಲ್ಲೂ ಕಡಿಮೆ ಜಾಗದಲ್ಲಿ ವಾಸಸ್ಥಾನ ಹಾಗೂ ಆಹಾರಕ್ಕಾಗಿ ಪೈಪೋಟಿ. ಸಂಜೆಯಾಗುತ್ತಿದ್ದಂತೆಯೇ ಆಹಾರ ಹುಡುಕಿ ಹೊರಡುವ ಬಾವಲಿಗಳು ಇಡೀ ರಾತ್ರಿ ಆಹಾರಕ್ಕಾಗಿ ಮೈಲಿಗಟ್ಟಲೆ ಅಲೆದಾಡುತ್ತವೆ. ಕೆಲವೊಮ್ಮೆ ಆಹಾರ ಸಿಗದೇ ಅವುಗಳ ಸಂತಾನೋತ್ಪತ್ತಿ ಸಹ ಸರಿಯಾಗಿ ನಡೆಯುವುದಿಲ್ಲ. ಆಹಾರ ಸಿಗದೆ ನಿತ್ರಾಣವಾಗಿ ಸಾವಿಗೆ ಸಮೀಪವಾಗುತ್ತದೆ.

ರಾಜ್ಯದಲ್ಲಿ ಸಾವನದುರ್ಗ, ಕೋಲಾರ ಸೇರಿದಂತೆ ಗುಹೆಗಳಿರುವ ಪ್ರದೇಶದಲ್ಲಿ 15 ವರ್ಷಗಳ ಹಿಂದೆ ಸಾವಿರಾರು ಸಂಖ್ಯೆಯಲ್ಲಿದ್ದ ಬಾವಲಿಗಳು ಈಗ ನೂರರಿಂದ ಐವತ್ತಕ್ಕೆ ಇಳಿದಿದೆ.  ವಿಶ್ವದಲ್ಲಿ 1017 ಪ್ರಭೇದದ ಬಾವಲಿಗಳಿವೆ. ಭಾರತದಲ್ಲಿ 126, ರಾಜ್ಯದಲ್ಲಿ ಅಂದಾಜು 36 ಪ್ರಭೇದಗಳಿರಬಹುದು ಎಂದು ಊಹಿಸಲಾಗಿದೆ. ಖಚಿತವಾಗಿ ಎಷ್ಟು ಪ್ರಭೇದಗಳಿವೆ ಎಂಬ ಕುರಿತು ಸೂಕ್ತ ಅಧ್ಯಯನ ನಡೆದಿಲ್ಲ. ಬಾವಲಿಗಳನ್ನು ದೊಡ್ಡ (ಮೆಗಾ ಬ್ಯಾಟ್ಸ್) ಹಾಗೂ ಚಿಕ್ಕ ಬಾವಲಿ (ಮೈಕ್ರೊ ಬ್ಯಾಟ್ಸ್) ಎಂದು ವಿಂಗಡಿಸಬಹುದು.

ದೊಡ್ಡ ಬಾವಲಿಗಳು ಹಣ್ಣು ಹಾಗೂ ಹೂವಲ್ಲಿನ ಮಕರಂದ ಹೀರಿ ಜೀವಿಸುತ್ತವೆ. ಗಾತ್ರದಲ್ಲಿ ಚಿಕ್ಕದಾಗಿರುವ ಬಾವಲಿಗಳು ಕ್ರಿಮಿಕೀಟ ಹಾಗೂ ಹುಳುಗಳನ್ನು ತಿಂದು ಜೀವಿಸುತ್ತವೆ. ದೊಡ್ಡ ಬಾವಲಿಗಳು 40 ರಿಂದ 150 ಗ್ರಾಂ ತೂಕವಿದ್ದು, ಒಂದೇ ಹಾರುತ್ತಿರುವಾಗ ಹದ್ದಿನಂತೆ ಕಾಣುತ್ತದೆ. ಚಿಕ್ಕ ಬಾವಲಿಗಳು 10 ರಿಂದ 25 ಗ್ರಾಂ ಇರುತ್ತದೆ.ಇದನ್ನು ಕಪಟ, ತೊಲೆಹಕ್ಕಿ ಎಂದೂ ಕರೆಯಲಾಗುತ್ತದೆ.

ಕಪಟ, ಗಂಟೆಗೆ ಒಂದು ಸಾವಿರದಿಂದ ಎರಡು ಸಾವಿರ ಸೊಳ್ಳೆಗಳನ್ನು ತಿನ್ನುತ್ತದೆ. ತೊಲೆಹಕ್ಕಿ, ಕಂಬಳಿ ಹುಳು ಸೇರಿದಂತೆ ಇತರೆ ಕೀಟಗಳನ್ನು ತಿನ್ನುತ್ತದೆ. ಸಾಮಾನ್ಯವಾಗಿ ಚಿಕ್ಕ ಬಾವಲಿಗಳು ಅಂದಾಜು 8 ರಿಂದ 10 ವರ್ಷ ಬದುಕಿದರೆ, ದೊಡ್ಡ ಬಾವಲಿಗಳು 30–40 ವರ್ಷ ಬದುಕಿರುವ ನಿದರ್ಶನಗಳಿವೆ. ಬಂಡೆ, ಪಾಳು ಬಿದ್ದ ಕೋಟೆ, ಮನೆಗಳಲ್ಲಿ ಕೀಟಗಳನ್ನು ತಿನ್ನುವ ಬಾವಲಿಗಳು ಜೀವಿಸುತ್ತವೆ.

ಉಳಿದಂತೆ ಮರಗಳು ಹೆಚ್ಚಾಗಿದ್ದು, ಹಣ್ಣಿನ ಮರಗಳಿರುವ ಕಡೆ ದೊಡ್ಡ ಬಾವಲಿಗಳು ಇರುತ್ತವೆ. ಅದರಲ್ಲೂ ಬದಲಾವಣೆಗಳಿಗೆ ತಕ್ಕಂತೆ ಮನುಷ್ಯನೊಂದಿಗೆ ಹೊಂದಿಕೊಂಡಿರುವ ಬಾವಲಿಗಳೆಂದರೆ, ಕಪಟ ಹಾಗೂ ಇಂಡಿಯನ್ ಫ್ಲೈಯಿಂಗ್ ಫಾಕ್ಸ್ ಹಾಗೂ ಗಿಡ್ಡ ಮೂಗಿನ ಬಾವಲಿ. ಗಿಡ್ಡ ಮೂಗಿನ ಬಾವಲಿ ಹಾಗೂ ಇಂಡಿಯನ್ ಫ್ಲೈಯಿಂಗ್ ಫಾಕ್ಸ್ ಎರಡೂ, ಹಣ್ಣುಗಳನ್ನು ತಿಂದು ಜೀವಿಸುತ್ತವೆ. ಹೀಗಾಗಿಯೇ ಮರಗಳು ಇರುವ ಕಡೆಗಳಲ್ಲಿ ಸಂಜೆಯಾಗುತ್ತಿದ್ದಂತೆಯೇ ಇವುಗಳ ಹಾರಾಟ ಕಾಣಬಹುದು.ಅತ್ತಿ ಹಣ್ಣು, ಆಲದ ಮರದ ಹಣ್ಣು, ಸೀಬೇಕಾಯಿ, ಗಸಗಸೆ ಹಣ್ಣು ಹಾಗೂ ಕಾಡು ಹಣ್ಣುಗಳು ಇವುಗಳ ಆಹಾರ.

ಬಾವಲಿಗಳ ವಾಸಸ್ಥಾನ: ಬಾವಲಿಗಳು ಸದಾ ಗುಂಪಿನಲ್ಲಿ ವಾಸಿಸುತ್ತವೆ. ಪಾಳುಬಿದ್ದ ಮನೆ, ಗುಹೆ, ಹಳೇ ಕೋಟೆ, ಕಲ್ಲುಬಂಡೆಗಳು, ಬಂಡೆಗಳ ನಡುವಿನ ಕೊರಕಲು ಪ್ರದೇಶ, ಗೋಡೆಗಳ ನಡುವಿನ ಕಿರಿದಾದ ಸ್ಥಳಗಳು, ಪೊಟರೆ, ಒಣಗಿದ ಮರಗಳೇ ಇವುಗಳ ವಾಸಸ್ಥಾನ.

‘ಬಾವಲಿಗಳು ವರ್ಷಕ್ಕೆ ಒಂದು ಬಾರಿ ಮಾತ್ರ ಮರಿ ಹಾಕುತ್ತವೆ. ಅದರಲ್ಲೂ ಒಂದೇ ಮರಿಗೆ ಜನ್ಮ ನೀಡಿ, ಅದು ಭಾರವೆನಿಸುವವರೆಗೂ ಅದನ್ನು ಅಪ್ಪಿಕೊಂಡೇ ಜೀವನ ಸಾಗಿಸುತ್ತವೆ. ಆಹಾರ ಹುಡುಕಲು ಹೊರಟಾಗಲೂ ಅದನ್ನು ಎತ್ತಿಕೊಂಡೇ ಹೋಗುತ್ತದೆ.

ಒಮ್ಮೆ ಮರಿ  ಭಾರವೆನಿಸಿದಾಗ ತಮ್ಮ ಗುಂಪಿನಲ್ಲೇ ಇರುವ ಮರಿಗಳನ್ನು ಒಂದೆಡೆ ಸೇರಿಸಿ ನೋಡಿಕೊಳ್ಳುತ್ತವೆ. ಇಲ್ಲಿಯೂ ಗಂಡು ಬಾವಲಿ ಬೆದೆಗೆ ಬಂದಾಗ ಹೆಣ್ಣನ್ನು ಆಕರ್ಷಿಸಲು ನಾನಾ ರೀತಿಯ ಕಸರತ್ತನ್ನು ಮಾಡುತ್ತದೆ. ಕೆಲವೊಂದು ಪ್ರಭೇದಗಳಲ್ಲಿ ಬೆದೆಗೆ ಬಂದಾಗ ಗಂಡು ಮತ್ತು ಹೆಣ್ಣು ಬಾವಲಿಗಳೆರಡರ ದೇಹದ ಬಣ್ಣ ಬದಲಾಗುತ್ತದೆ.

ಅವುಗಳಲ್ಲೂ ಗಡಿ ಸಮಸ್ಯೆ ಇರುತ್ತದೆ. ಅದಕ್ಕಾಗಿ ಕಾಳಗವೂ ನಡೆಯುತ್ತದೆ’ ಎಂದು ವಿವರಿಸುತ್ತಾರೆ ರಾಜೇಶ್ ಪುಟ್ಟಸ್ವಾಮಯ್ಯ. ನಮ್ಮ ದೇಶದಲ್ಲಿರುವ ಚಿಕ್ಕ ಬಾವಲಿಗಳು 20 ಕಿಲೊ ಹರ್ಟ್ಸ್‌ನಿಂದ 150 ಕಿಲೊ ಹರ್ಟ್ಸ್‌ವರೆಗೆ ಶಬ್ದವನ್ನು ಗ್ರಹಿಸಿಕೊಳ್ಳುತ್ತವೆ. ಶಬ್ದತರಂಗಗಳ ಮೂಲಕವೇ ಚಿಕ್ಕ ಬಾವಲಿಗಳು ಕೀಟಗಳನ್ನು ಹಿಡಿದು ತಿನ್ನುತ್ತವೆ. ದೊಡ್ಡ ಬಾವಲಿಗಳು ಹಣ್ಣಿನ ಮರಗಳು ಇರುವುದನ್ನು ಗುರುತಿಸಿ ಅದನ್ನು ನೆನಪಿನಲ್ಲಿಟ್ಟುಕೊಂಡಿರುತ್ತವೆ. ಸಂಜೆಯಾಗುತ್ತಿದ್ದಂತೆ ಹಣ್ಣಿಗಾಗಿ ಹೊರಟು, ಮಧ್ಯದಲ್ಲಿ ಅದನ್ನು ತಿನ್ನಲು ಒಂದು ಸ್ಥಳ ಮಾಡಿಕೊಂಡಿರುತ್ತವೆ. ಹಣ್ಣನ್ನು ತಿಂದು ಸ್ವಲ್ಪ ವಿಶ್ರಾಂತಿ ಪಡೆದು ನಂತರ ಮತ್ತೆ ಹಣ್ಣು ತಿಂದು ಗೂಡಿನತ್ತ ಹೊರಡುತ್ತವೆ.

ನಿತ್ಯ ಸಂಜೆ 6ರಿಂದ 8 ಗಂಟೆ ಒಳಗೆ ಆಹಾರಕ್ಕೆ ಗೂಡಿನಿಂದ ಹೊರಡುವ ಬಾವಲಿಗಳು ರಾತ್ರಿ 12ರವರೆಗೆ ಹಣ್ಣು ತಿನ್ನುತ್ತವೆ. ನಂತರ ವಿಶ್ರಾಂತಿ ಮಾಡಿ ಮತ್ತೆ 3 ಗಂಟೆಗೆ ಹುಡುಕಾಟ ಆರಂಭಿಸಿ ಬೆಳಿಗ್ಗೆ ಸುಮಾರು ಆರು ಗಂಟೆಗೆ ಗೂಡು ಸೇರುತ್ತವೆ. ಬಾವಲಿಗಳನ್ನು ನೋಡಲು ಬಯಸುವವರು ಮರಗಳು ಹೆಚ್ಚಿದ್ದ ಕಡೆ ಸಂಜೆಯಾಗುತ್ತಿದ್ದಂತೆ ಐದು ನಿಮಿಷ ಆಕಾಶ ನೋಡಿದರೆ ಸಾಕು, ಅವುಗಳ ಹಾರಾಟ ಕಾಣುತ್ತದೆ.

ಬಾವಲಿಯ ಉಪಯೋಗ
ಹಣ್ಣು ತಿನ್ನುವ ಬಾವಲಿಗಳು ತಿಂದ ಹಣ್ಣಿನ ಬೀಜಗಳನ್ನು ತಮ್ಮ ಹಿಕ್ಕೆಗಳ ಮೂಲಕ ಬೇರೆಡೆ ಹೊರ ಹಾಕುತ್ತವೆ. ಇದರಿಂದ ಅಲ್ಲಿ ಆ ಹಣ್ಣಿನ ಗಿಡಗಳು ಬೆಳೆಯುತ್ತವೆ. ಗಿಡ–ಮರಗಳ ಹುಟ್ಟಿಗೆ ಕಾರಣವಾಗುತ್ತವೆ. ಮರಗಳು ಮಾಯವಾಗುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ ಬಾವಲಿಗಳು ಗಿಡ–ಮರಗಳನ್ನು ಬೆಳೆಸುವ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.

ಕೀಟಗಳನ್ನು ತಿನ್ನುವ ಸಣ್ಣ ಗಾತ್ರದ ಬಾವಲಿಗಳು ಒಂದು ಗಂಟೆಗೆ ಸುಮಾರು ಸಾವಿರ ಸೊಳ್ಳೆ ಹಾಗೂ ಇತರೆ ಕೀಟಗಳನ್ನು ತಿನ್ನುತ್ತವೆ. ಇದರಿಂದ ಸೊಳ್ಳೆ, ನೊಣ ಹಾಗೂ ಇತರೆ ಕೀಟಗಳಿಂದ ಬರುವ ರೋಗಗಳೂ ನಿಯಂತ್ರಣದಲ್ಲಿರುತ್ತವೆ. ರೈತನ ಬೆಳೆಗೆ ಕಾಡುವ ಕೊರಕು ಹುಳು, ರಾತ್ರಿ ವೇಳೆ ಸಂಚರಿಸುವ ಚಿಟ್ಟೆ ಅಥವಾ ಇನ್ನೂ ಲಾರ್ವಾ ಹಂತದಲ್ಲಿರುವ ಚಿಟ್ಟೆಗಳನ್ನು ಕೊಂದು ರೈತನ ಬೆಳೆಗೆ ಆಗುವ ಹಾನಿಯನ್ನು ತಪ್ಪಿಸುತ್ತವೆ.

ಸಾಲದ್ದಕ್ಕೆ ಮಕರಂದ ಹೀರುವ ಬಾವಲಿಗಳು ಮರ ಹಾಗೂ ಗಿಡಗಳಲ್ಲಿ ಪರಾಗಸ್ಪರ್ಶ ಕ್ರಿಯೆ ನಡೆಸುತ್ತವೆ. ಇದರಿಂದ ಇಳುವರಿ ಹೆಚ್ಚುತ್ತದೆ. ಬಾವಲಿಗಳು ಇಡುವ ಹಿಕ್ಕೆಯನ್ನು ಬೆಳೆಗಳಿಗೆ ಗೊಬ್ಬರವಾಗಿ ಬಳಸಬಹುದು. ಸುಮಾರು ಹದಿನೈದರಿಂದ ಇಪ್ಪತ್ತು ವರ್ಷಗಳ ಹಿಂದೆ ಹಳ್ಳಿಗಳಲ್ಲಿ ಬೆಳೆಗಳಿಗೆ ಈ ಗೊಬ್ಬರವನ್ನು ಬಳಕೆ ಮಾಡುತ್ತಿದ್ದರು.

ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳು
ಎಲ್ಲೇ ಕ್ವಾರಿ, ಕಟ್ಟಡ ನಿರ್ಮಾಣ ಅಥವಾ ಯಾವುದೇ ಅಭಿವೃದ್ಧಿ ಕಾರ್ಯಕ್ಕಾಗಿ ಅನುಮತಿ ನೀಡುವ ಬದಲು ಸ್ಥಳ ಪರಿಶೀಲನೆ ನಡೆಸಿ ಅಲ್ಲಿ ಬಾವಲಿಗಳ ಇರುವಿಕೆ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಅವುಗಳ ವಾಸ ಕಂಡುಬಂದಲ್ಲಿ ಅನಿವಾರ್ಯ ಪರಿಸ್ಥಿತಿ ಹೊರತುಪಡಿಸಿ ಅನುಮತಿ ನೀಡಬಾರದು. ಮೂಢನಂಬಿಕೆಗಳಿಂದ ಬಾವಲಿಗಳನ್ನು ಕೊಲ್ಲುವುದು ಅವುಗಳ ವಾಸಸ್ಥಾನ ಕಂಡ ಕೂಡಲೇ ನಾಶಪಡಿಸುವ ಕಾರ್ಯ ನಿಲ್ಲಬೇಕು.

ಒಣಗಿದ ಮರಗಳನ್ನು ಕಡಿಯದೇ ಹಾಗೇ ಬಿಡುವುದು. ಮನೆಅಂಗಳದಲ್ಲಿ ಬಾವಲಿಗಳ ವಾಸಸ್ಥಾನ ಕಂಡು ಬಂದಲ್ಲಿ ಹೆದರಿಕೊಂಡು ಅವುಗಳನ್ನು ಹಾಳು ಮಾಡಬಾರದು.  ಬೆಳೆಗಳಿಗೆ ಕೀಟನಾಶಕಗಳ ಬಳಕೆ ನಿಲ್ಲಿಸಬೇಕು. ಕೀಟನಾಶಕಗಳ ಬಳಕೆಯಿಂದ ಬಾವಲಿಗಳಿಗೆ ಆಹಾರದ ಕೊರತೆ ಎದುರಾಗುತ್ತಿದೆ.

ಕೋಲಾರ ಹಾಗೂ ಬೆಳಗಾವಿಯ ಖಾನಾಪುರದ ಗುಹೆಗಳಲ್ಲಿ ಅತಿ ವಿರಳವಾದ ಪ್ರಭೇದದ ಬಾವಲಿಗಳಿವೆ. ಆದರೆ ಅವುಗಳ ಸಂಖ್ಯೆ 100–150 ಇರಬಹುದು ಅಷ್ಟೆ.ಕೋಲಾರದ ಗುಹೆಯೊಂದರಲ್ಲಿ ಪತ್ತೆಯಾಗಿರುವ ಬಾವಲಿ ಬೇರೆಲ್ಲೂ ಪತ್ತೆಯಾಗಿಲ್ಲ. ಹೀಗಾಗಿಯೇ ಇದಕ್ಕೆ ‘ಕೋಲಾರದ ಎಲೆ ಮೂಗಿನ ಬಾವಲಿ’ ಎಂದು ಹೆಸರಿಡಲಾಗಿದೆ. ಇದೂ ಅಳಿವಿನ ಅಂಚಿನಲ್ಲಿದೆ.

ಕ್ವಾರಿ ಕೆಲಸ ನಡೆಯುತ್ತಿದ್ದ ಪ್ರದೇಶದಲ್ಲಿರುವ ಗುಹೆಯಲ್ಲಿ ಇದು ಪತ್ತೆಯಾಗಿದ್ದು, ಕಳೆದ 6 ತಿಂಗಳಿನಿಂದ ಇಲ್ಲಿ ಕ್ವಾರಿ ಕೆಲಸ ನಿಲ್ಲಿಸಲಾಗಿದೆ. ಇದರೊಂದಿಗೆ ಮಧ್ಯಪ್ರದೇಶದ ಜಬಲ್‌ಪುರದ ಗುಹೆಗಳಲ್ಲಿರುವ ‘ಕಜುರಾಹೊ ಎಲೆಮೂಗಿನ’ ಬಾವಲಿಯೂ ಕೋಲಾರದ ಇದೇ ಗುಹೆಯಲ್ಲಿ ಪತ್ತೆಯಾಗಿರುವುದು ಮತ್ತೊಂದು ವಿಶೇಷ. ಉಳಿದಂತೆ ವಿಶ್ವದಲ್ಲಿ ಕೇವಲ ಮೂರು ಕಡೆ ಕಂಡು ಬರುವ ವಿರಳವಾದ ‘ರಾಟನ್ಸ್ ಫ್ರೀ ಟೇಲ್’ ಬಾವಲಿ. ಮೇಘಾಲಯ, ಕಾಂಬೋಡಿಯ ಹಾಗೂ ಖಾನಾಪುರದಲ್ಲಿ ಇದೆ. ಇದು ಖಾನಾಪುರದಗುಹೆಗಳಲ್ಲಿ ಈಗ ಕೇವಲ 150– 200ರ ಸಂಖ್ಯೆಯಲ್ಲಿದೆ.

***
ದೇಶದಲ್ಲಿರುವ ಬಾವಲಿಗಳ ಪ್ರಭೇದಗಳ ಕುರಿತು ಸಾಕಷ್ಟು ಅಧ್ಯಯನ ನಡೆಯಬೇಕಿದೆ. ಯಾವಾಗಲೋ ನಡೆಯುವ ಅಧ್ಯಯನಗಳು ಜನರನ್ನು ತಲುಪುತ್ತಿಲ್ಲ. ಹೀಗಾಗಿಯೇ ಬಾವಲಿಗಳು ಅವನತಿಯತ್ತ ಸಾಗುತ್ತಿವೆ. ಅವುಗಳನ್ನು ಉಳಿಸುವ ಉದ್ದೇಶದಿಂದಲೇ ‘ಬ್ಯಾಟ್ ಕನ್ಸರ್ವೇಷನ್ ಇಂಡಿಯಾ ಟ್ರಸ್ಟ್’ ಅನ್ನು ಸ್ಥಾಪಿಸಲಾಗಿದೆ. ಇಲ್ಲಿ ಕಳೆದೆರಡು ವರ್ಷಗಳಿಂದ ಬಾವಲಿಗಳ ಕುರಿತು ಅಧ್ಯಯನ ನಡೆಸಲಾಗುತ್ತಿದೆ.  ಇದರಿಂದಾಗಿ ಬಾವಲಿಗಳ ಕುರಿತು ಅರಿಯುವವರಿಗೆ ಸಾಕಷ್ಟು ಮಾಹಿತಿ ಲಭ್ಯವಾಗುತ್ತದೆ.

ಬಾವಲಿಗಳ ಸಂಖ್ಯೆ ಹಿಂದೆ ಎಷ್ಟಿತ್ತು, ಈಗ ಎಷ್ಟಿದೆ ಎಂದು ಹಳ್ಳಿಗಳಿಗೆ ಭೇಟಿ ನೀಡಿ, ಅಲ್ಲಿನ ಹಿರಿಯರನ್ನು ಸಂಪರ್ಕಿಸಿ ಅಂದಾಜಿಸಲಾಗುತ್ತಿದೆ. ಜೊತೆಗೆ ಬಾವಲಿಗಳ ಕುರಿತು ಇರುವ ಮೂಢನಂಬಿಕೆಗಳನ್ನು ಹೋಗಲಾಡಿಸುವ ಪ್ರಯತ್ನವನ್ನೂ ಮಾಡುತ್ತಿದ್ದೇವೆ. ಮುಂದಿನ ವರ್ಷ ಶಾಲೆಗಳಲ್ಲೂ ಅರಿವಿನ ಕಾರ್ಯಕ್ರಮ ನಡೆಸುವ ಉದ್ದೇಶ ಇದೆ.
– ರಾಜೇಶ್ ಪುಟ್ಟಸ್ವಾಮಯ್ಯ
ಬ್ಯಾಟ್ ಕನ್ಸರ್ವೇಷನ್ ಇಂಡಿಯಾ ಟ್ರಸ್ಟ್‌ನ ಸ್ಥಾಪಕ
batconservationindia.org, 9448313180

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT