ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಸ್ಕರ್ಸ್ ನಾಕೌಟ್ ಕನಸಿಗೆ ಬಲ ತುಂಬಿದ ಜಯ

Last Updated 26 ಸೆಪ್ಟೆಂಬರ್ 2016, 16:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬ್ಯಾಟಿಂಗ್ ವೈಫಲ್ಯ; ನೀರಸ ಬೌಲಿಂಗ್‌, ಅವಕಾಶಗಳನ್ನು ಕೈಚೆಲ್ಲಿದ ಫೀಲ್ಡಿಂಗ್‌...ಇದೆಲ್ಲದರ ಫಲವಾಗಿ ಬೆಳಗಾವಿ ಪ್ಯಾಂಥರ್ಸ್‌ ಸೋಲಿನ ಸುಳಿಯಲ್ಲಿ ಸಿಲುಕಿತು. ಬಳ್ಳಾರಿ ಟಸ್ಕರ್ಸ್ ಜಯದ ನಗೆ ಸೂಸಿ ನಾಕೌಟ್ ಹಂತಕ್ಕೇರುವ ಕನಸನ್ನು ಜೀವಂತವಾಗಿರಿಸಿತು.

ರಾಜನಗರದ ಕೆ.ಎಸ್.ಸಿ.ಎ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್‌) ಟೂರ್ನಿಯ ಹತ್ತನೇ ದಿನವಾದ ಸೋಮವಾರದ ಪಂದ್ಯದಲ್ಲಿ ಪ್ಯಾಂಥರ್ಸ್‌ ವಿರುದ್ಧ ಟಸ್ಕರ್ಸ್ ಸುಲಭ ಗೆಲುವು ದಾಖಲಿಸಿತು.

139 ರನ್‌ಗಳ ಗುರಿ ಬೆನ್ನತ್ತಿದ ಟಸ್ಕರ್ಸ್‌ ಮೂರು ಓವರ್‌ಗಳಲ್ಲಿ 15 ರನ್ ಗಳಿಸಿದಾಗ ಮಳೆ ಕಾಡಿದ ಕಾರಣ 18 ಓವರ್‌ಗಳಲ್ಲಿ 129 ರನ್‌ಗಳ ಗುರಿ ನಿಗದಿ ಮಾಡಲಾಯಿತು. ಆರಂಭಿಕ ಬ್ಯಾಟ್ಸ್‌ಮನ್‌ ರೋಹನ್‌ ಕದಮ್‌ ಗಳಿಸಿದ ಅಮೋಘ ಅರ್ಧ ಶತಕ (53; 36 ರನ್‌, 7 ಬೌಂ, 1 ಸಿ) ಮತ್ತು ಮಧ್ಯಮ ಕ್ರಮಾಂಕದಲ್ಲಿ ಅಮಿತ್ ವರ್ಮಾ ತೋರಿದ ಪ್ರತಿರೋಧ ತಂಡಕ್ಕೆ ಸುಲಭ ಜಯ ತಂದುಕೊಟ್ಟಿತು.

ನೀರಸ ಬ್ಯಾಟಿಂಗ್‌ ಪ್ರದರ್ಶನ
ಮೊದಲು ಬ್ಯಾಟಿಂಗ್ ಮಾಡಿದ ಬೆಳಗಾವಿ ಪ್ಯಾಂಥರ್ಸ್‌ ಪ್ರದರ್ಶನ ನೀರಸವಾಗಿತ್ತು. ಟಾಸ್‌ ಸೋತು ಬೌಲಿಂಗ್ ಆರಿಸಿಕೊಂಡ ಅಮಿತ್ ವರ್ಮಾ ಬಳಗದ ಬೌಲರ್‌ಗಳ ಮುಂದೆ ಪ್ಯಾಂಥರ್ಸ್‌ ಆಟಗಾರರು ರನ್‌ ಗಳಿಸಲು ಪರದಾಡಿದರು.

ನಾಲ್ಕು ಪಂದ್ಯಗಳಿಂದ ನಾಲ್ಕು ಪಾಯಿಂಟ್‌ ಮಾತ್ರ ಕಲೆ ಹಾಕಿದ್ದ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಿಬ್ಬರೂ 28 ರನ್‌ಗಳಾಗುವಷ್ಟರಲ್ಲಿ ವಾಪಸಾದರು. ಮಿರ್ ಕೌನೇನ್‌ ಅಬ್ಬಾಸ್ ಮತ್ತು ಸ್ಥಳೀಯ ಆಟಗಾರ ಶೊಯೆಬ್ ಮ್ಯಾನೇಜರ್‌ ಎದುರಾಳಿಗಳ ದಾಳಿ ಮೆಟ್ಟಿ ನಿಂತು ಇನಿಂಗ್ಸ್‌ಗೆ ಬಲ ತುಂಬಿದರು. ಶೊಯೆಬ್‌ ಜೊತೆ ಅಬ್ಬಾಸ್ (52; 44 ಎಸೆತ, 5 ಬೌಂ) 61 ರನ್‌ ಜೋಡಿಸಿದರು. ಈ ಜೊತೆಯಾಟ ಮುರಿದು ಬಿದ್ದ ನಂತರ ಯಾರಿಗೂ ಕ್ರೀಸ್‌ನಲ್ಲಿ ನೆಲೆಯೂರಲು ಆಗಲಿಲ್ಲ.

ಬುಲ್ಸ್‌ ನಾಕೌಟ್ ಕನಸು ಜೀವಂತ
ರಾತ್ರಿ ನಡೆದ ಪಂದ್ಯದಲ್ಲಿ ರಾಕ್‌ ಸ್ಟಾರ್ಸ್ ತಂಡವನ್ನು 68 ರನ್‌ಗಳಿಂದ ಮಣಿಸಿದ ಹಾಲಿ ಚಾಂಪಿಯನ್‌ ಬಿಜಾಪುರ ಬುಲ್ಸ್‌ ನಾಕೌಟ್‌ ಕನಸು ಜೀವಂತವಾಗಿರಿಸಿತು. ಐದು ಪಂದ್ಯಗಳಲ್ಲಿ ಕೇವಲ ಐದು ಪಾಯಿಂಟ್‌ ಗಳಿಸಿದ್ದ ಬುಲ್ಸ್‌ ಈ ಗೆಲುವಿನೊಂದಿಗೆ ಏಳು ಪಾಯಿಂಟ್‌ಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು. ಮೈಸೂರು ವಾರಿಯರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್‌ ಮೊದಲ ಎರಡು ಸ್ಥಾನದಲ್ಲಿವೆ.

ಸಂಕ್ಷಿಪ್ತ ಸ್ಕೋರ್‌
ಬೆಳಗಾವಿ ಪ್ಯಾಂಥರ್ಸ್‌ : 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 138 (ಮಿರ್ ಕೌನೇನ್ ಅಬ್ಬಾಸ್‌ 52, ಶೊಯೆಬ್‌ ಮ್ಯಾನೇಜರ್‌ 32; ಪ್ರಸಿದ್ಧ ಕೃಷ್ಣ 26ಕ್ಕೆ2, ಪ್ರತೀಕ ಜೈನ್‌ 33ಕ್ಕೆ3);
ಬಳ್ಳಾರಿ ಟಸ್ಕರ್ಸ್‌ : 16.5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 129 (ರೋಹನ್ ಕದಮ್‌ 53, ಅಮಿತ್ ವರ್ಮಾ 30, ಚಿರಂಜೀವಿ 20).
ಫಲಿತಾಂಶ: ಬಳ್ಳಾರಿ ಟಸ್ಕರ್ಸ್‌ಗೆ ವಿಜೆಡಿ ನಿಯಮದ ಪ್ರಕಾರ 5 ವಿಕೆಟ್ ಜಯ. ಪಂದ್ಯ ಶ್ರೇಷ್ಠ–ರೋಹನ್ ಕದಮ್‌.
ಬಿಜಾಪುರ ಬುಲ್ಸ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 175 (ಭರತ್‌ ಚಿಪ್ಲಿ 32, ಎಂ.ಜಿ.ನವೀನ 52; ಚರಣ್‌ ತೇಜ 22ಕ್ಕೆ2, ರಾಜುಗೌಡ 24ಕ್ಕೆ3);
ರಾಕ್ ಸ್ಟಾರ್ಸ್‌: 19.6 ಓವರ್‌ಗಳಲ್ಲಿ 107ಕ್ಕೆ ಆಲೌಟ್‌ (ಬಿ.ಆರ್.ಶರತ್‌ 24, ಚರಣ್ ತೇಜ 28; ಆರ್ಷದೀಪ್ ಸಿಂಗ್‌ ಬ್ರಾರ್‌ 19ಕ್ಕೆ2, ಸಿನಾನ್ ಅಬ್ದುಲ್ ಖಾದರ್‌ 18ಕ್ಕೆ3). ಪಂದ್ಯಶ್ರೇಷ್ಠ–ಎಂ.ಜಿ.ನವೀನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT