ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಿಕಾ ಖುಷಿ ಮಾತು...

Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

‘ಒಬ್ಬ ಅತ್ಯುತ್ತಮ ಸಹನಟ ಸಿಕ್ಕರೆ ಸಾಕು, ನಟಿಸುವ   ವಿಷಯದಲ್ಲಿ ಅರ್ಧ ಕೆಲಸ ಸಲೀಸಾದಂತೆ’ ಹೀಗೆ ಖುಷಿಯಿಂದ ಹೇಳಿಕೊಂಡಿರುವುದು ಬಾಲಿವುಡ್ ನಟಿ ರಸಿಕಾ ದುಗ್ಗಲ್. ತಮ್ಮ ಮುಂದಿನ ‘ಮಾಂಟೊ’ ಸಿನಿಮಾದಲ್ಲಿ  ಸಹ ನಟ ನವಾಜುದ್ದೀನ್ ಸಿದ್ದಿಕಿ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು ಈ ರೀತಿ.

ಪಾಕಿಸ್ತಾನದ ಲೇಖಕ ಸದ್ದತ್ ಹಸನ್ ಮಾಂಟೊ  ಕುರಿತ ಚಿತ್ರ ‘ಮಾಂಟೊ’ದಲ್ಲಿ ಮಾಂಟೊನ ಪಾತ್ರದಲ್ಲಿ ನವಾಜುದ್ದೀನ್ ಕಾಣಿಸಿಕೊಳ್ಳುತ್ತಿದ್ದು, ಪತ್ನಿ ಸಾಫಿಯಾ ಪಾತ್ರದಲ್ಲಿ ರಸಿಕಾ ಇದ್ದಾರೆ. ‘ಖಿಸ್ಸಾ’ ಚಿತ್ರದಲ್ಲಿನ ಪ್ರೌಢ ನಟನೆಯಿಂದ ಗಮನ ಸೆಳೆದ ರಸಿಕಾ, ‘ಮಾಂಟೊ’ ಕುರಿತು ಕೌತುಕಗಳನ್ನು ತುಂಬಿಕೊಂಡಿದ್ದಾರೆ.

‘ನವಾಜ್‌ನಂಥ ನಟನ ಜೊತೆ ಕೆಲಸ ಮಾಡುವುದು ತುಂಬಾ ಒಳ್ಳೆ ಅವಕಾಶ. ಅಂಥವರು ಸಹ ನಟರಾಗಿ ಸಿಕ್ಕಿಬಿಟ್ಟರೆ ನಟನಾಸಾಮರ್ಥ್ಯ ಪಕ್ವಗೊಳ್ಳುತ್ತದೆ. ನಾನು ಎಷ್ಟೋ ಜನರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಕಲಿಯಲು ಸಿಕ್ಕಿದ್ದು ಕಡಿಮೆ. ಅದು ತುಂಬಾ ಬೇಜಾರಿನ ಸಂಗತಿ’ ಎಂದು ಹೇಳಿಕೊಂಡಿದ್ದಾರೆ.

ರಸಿಕಾ, ತಹಾನ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದವರು. ದೂರದರ್ಶನ, ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರೂ, ತಮ್ಮನ್ನು ಗುರುತಿಸುವಂತೆ ಮಾಡಿದ್ದು ‘ಖಿಸ್ಸಾ’ ಸಿನಿಮಾ ಎಂದು ಪದೇ ಪದೇ ನೆನೆಸಿಕೊಳ್ಳುತ್ತಾರೆ. ಆ ಚಿತ್ರ ಬಿಡುಗಡೆಗೊಂಡ ನಂತರ ಹಲವು ನಿರ್ದೇಶಕರಿಂದ ಕರೆ ಬಂದಿರುವುದಾಗಿ ಉತ್ಸಾಹ ತುಂಬಿ ಬೀಗುತ್ತಾರೆ.

‘ಖಿಸ್ಸಾ ನಂತರ ಜೀವನ ಬದಲಾಯಿತು. ಸಿನಿಮಾ ಮಂದಿ ಹಾಗೂ ಜನರು ನನ್ನನ್ನು ಗುರುತಿಸಲು ಆರಂಭಿಸಿದರು. ನನ್ನ ಕೆಲಸವನ್ನು ಅಭಿನಂದಿಸಿದರು. ಇದೀಗ ಮೂರು ನಾಲ್ಕು ನಿರ್ದೇಶಕರು ನನಗೆ ಅಭಿನಯಿಸುವಂತೆ ಕೇಳಿದ್ದಾರೆ. ಇದಕ್ಕಾಗಿ ಖಿಸ್ಸಾಗೆ ಆಭಾರಿಯಾಗಿದ್ದೇನೆ’ ಎಂದಿದ್ದಾರೆ. ಆದರೆ ಆ ಚಿತ್ರಕ್ಕೆ ದಕ್ಕಬೇಕಾದ ಬೆಲೆ ದಕ್ಕಿಲ್ಲ ಎಂಬ ಬೇಸರವೂ ಅವರಿಗಿದೆ.

‘ಚಿತ್ರಕ್ಕೆ ಅರ್ಹವಾದ ಬೆಲೆ ಸಿಕ್ಕಿಲ್ಲ. ಅದೊಂದೇ ನಿರಾಶೆ ತರುವ ವಿಷಯ. ಈ ವಿಷಯವನ್ನು ನಿರ್ದೇಶಕ ಅನೂಪ್‌ಗೆ ಹೇಳುತ್ತಲೇ ಇರುತ್ತೇನೆ’ ಎಂದಿದ್ದಾರೆ. ತಮ್ಮ ಭವಿಷ್ಯ ಹೀಗೆ ರೂಪು ಪಡೆಯುತ್ತಿರುವುದರ ಬಗ್ಗೆ ರಸಿಕಾಗೆ ತುಂಬಾ ಖುಷಿಯಾಗಿದೆ. ತಮ್ಮಿಷ್ಟದ ನಟರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕುತ್ತಿರುವುದು ತೀರದ ಸಂತೋಷ ಎಂದಿದ್ದಾರೆ. ಖಿಸ್ಸಾದಲ್ಲಿ ಇರ್ಫಾನ್ ಜೊತೆ, ಮಾಂಟೊದಲ್ಲಿ ನವಾಜ್ ಜೊತೆ, ಇಂಡೋ ಜರ್ಮನ್ ಚಿತ್ರ ‘ಒನ್ಸ್‌ ಅಗೇನ್’ನಲ್ಲಿ ನೀರಜ್ ಕಬಿ ಜೊತೆ ಹಾಗೂ ಕಿರುಚಿತ್ರವೊಂದರಲ್ಲಿ ಆದಿಲ್ ಹುಸೇನ್‌ ಜೊತೆ ನಟಿಸುತ್ತಿದ್ದಾರೆ.

‘ನಾನು ನಟಿಸಬೇಕೆಂದಿರುವ ನಟರ ಒಂದಿಷ್ಟುದ್ದ ಪಟ್ಟಿಯೇ ಇದೆ. ಅದರಲ್ಲಿ ಸ್ವಲ್ಪ ಮಂದಿ ಜೊತೆ ನಟಿಸಿದ್ದೇನೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಸಿನಿಮಾಗಳ ಹೊರತಾಗಿ, ರಸಿಕಾ, ನಿಖಿಲ್ ಅಡ್ವಾಣಿ ನಿರ್ದೇಶನದ ಟಿ.ವಿ ಶೋ ಕೂಡ ಮಾಡುತ್ತಿದ್ದಾರೆ. ಸದ್ಯಕ್ಕೆ, ಪರಿಸ್ಥಿತಿಗೆ ತಕ್ಕಂತೆ ಹೇಗೆ ಪಲ್ಲಟಗೊಳ್ಳುವ ಸಂಬಂಧದ ಕಥೆಯ ಎಳೆ ಇರುವ ಸಿನಿಮಾ ‘ಮಾಂಟೊ’ ಕುರಿತು ಖುಷಿ ತುಂಬಿದ ಕಣ್ಣುಗಳಿಂದ ಕಾಯುತ್ತಿದ್ದಾರೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT