ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಮಧ್ಯೆ ಸೇವಂತಿ

ಹೊಸ ಹೆಜ್ಜೆ-22
Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

- ಪ್ರೇಮಾ.ಪಿ,ಬೆಳ್ತಂಗಡಿ                                                                                                                                                                                                                           
ಎಕರೆಗಟ್ಟಲೆ ಜಮೀನಿನಲ್ಲಿ ಸೇವಂತಿಗೆ ಬೆಳೆಯುವವರನ್ನು ನೋಡಿದ್ದೇವೆ. ಇಲ್ಲೊಬ್ಬ ಮಹಿಳೆ ಅಡಿಕೆ ಗಿಡಗಳ ಮಧ್ಯೆ ಸೇವಂತಿಗೆ ಬೆಳೆದು ಅವುಗಳಿಂದ ಕೈತುಂಬಾ ಆದಾಯ ಗಳಿಸುತ್ತಿದ್ದಾರೆ.

ರತ್ನಮ್ಮ ದಾವಣಗೆರೆಯ ಆಲೂರಿನವರು. ಕಳೆದೆರಡು ವರ್ಷಗಳಿಂದ ಸೇವಂತಿಗೆ ಬೆಳೆಯುತ್ತಿರುವ ಇವರಿಗೆ ಪುಷ್ಪಕೃಷಿಯೆಂದರೆ ಅಚ್ಚುಮೆಚ್ಚು. ಎರಡು ವರ್ಷಗಳ ಹಿಂದೆ ಒಂದು ಎಕರೆ ಗದ್ದೆಯಲ್ಲಿ ಅಡಿಕೆ ಗಿಡಗಳನ್ನು ನೆಟ್ಟರು.

ಅಡಿಕೆ ಗಿಡದ ನಾಟಿಗೆ ಖರ್ಚಾದ ಹಣವನ್ನು ಹೇಗಾದರೂ ಮಾಡಿ ಹಿಂತೆಗೆಯಬೇಕೆಂಬ ನಿಟ್ಟಿನಲ್ಲಿ ಅಡಿಕೆ ಗಿಡಗಳ ಮಧ್ಯೆ 3000 ಸೇವಂತಿಗೆ ಗಿಡಗಳನ್ನು ನೆಟ್ಟರು. ಈ ಹಿಂದೆ ತೆಂಗಿನ ಮಧ್ಯೆ ಗುಲಾಬಿ, ಚೆಂಡು ಬೆಳೆದ ಅನುಭವವಿದ್ದ ರತ್ನಮ್ಮರವರ ಅದೃಷ್ಟ ಖುಲಾಯಿಸಿತು. ಮೊದಲ ವರ್ಷವೇ ಖರ್ಚು ಕಳೆದು ಆದಾಯವನ್ನು ಸೇವಂತಿಗೆ ತಂದು ಕೊಟ್ಟಿತು.

ಸೇವಂತಿಗೆ ವಾರ್ಷಿಕ ಬೆಳೆಯಾಗಿದ್ದು, ಅಡಿಕೆ ಗಿಡಕ್ಕೆ ಮೂರರಿಂದ ನಾಲ್ಕು ವರ್ಷಗಳಾಗುವವರೆಗೆ ನಾಟಿ ಮಾಡಬಹುದು. ಅಂದರೆ ಸೇವಂತಿಗೆಯಿಂದಲೂ ವರ್ಷಕ್ಕೊಂದು ಇಳುವರಿಯಂತೆ ನಾಲ್ಕು ಬಾರಿ ಇಳುವರಿ ಪಡೆಯಬಹುದಾಗಿದೆ. ಮಾರ್ಚ್-ಏಪ್ರಿಲ್ ಮಾಸ ಸೇವಂತಿಗೆ ನಾಟಿಗೆ ಸೂಕ್ತ. ಅಡಿಕೆಯನ್ನು ಗಿಡದಿಂದ ಗಿಡಕ್ಕೆ 10 ಅಡಿ ಅಂತರ ಬಿಟ್ಟು ನಾಟಿ ಮಾಡುವುದು ಸಾಮಾನ್ಯ.

ಅಡಿಕೆ ಗಿಡಗಳ ಸಾಲಿನ ಮಧ್ಯೆ 2 ಅಡಿ ಅಗಲವಾಗಿ ಸಾಲು ನಿರ್ಮಿಸಿ ಗಿಡದಿಂದ ಗಿಡಕ್ಕೆ ಎರಡು ಅಡಿ ಅಂತರ, 3 ಇಂಚು ಆಳವಾಗಿ ಸೇವಂತಿಗೆ ಗಿಡಗಳನ್ನು ನಾಟಿ ಮಾಡಿದ್ದಾರೆ. ಇವರು ನಾಟಿಗೆ ಬೇಕಾದ ಸಸಿಗಳನ್ನು ಸಸಿಯೊಂದಕ್ಕೆ 2 ರೂಪಾಯಿ ನೀಡಿ ನರ್ಸರಿಯಿಂದ ಖರೀದಿಸಿ ತಂದಿದ್ದಾರೆ.

ನಾಟಿ ಮಾಡುವಾಗ ಪ್ರತಿ ಬುಡಕ್ಕೆ ಅರ್ಧ ಕೆ.ಜಿಯಷ್ಟು ಕೊಟ್ಟಿಗೆ ಗೊಬ್ಬರ ಮತ್ತು ಮಣ್ಣು ಹಾಕಿದ್ದಾರೆ. ಪ್ರತಿನಿತ್ಯ ಅಡಿಕೆ ಗಿಡಗಳಿಗೆ ಹನಿನೀರಾವರಿ ವಿಧಾನದ ಮೂಲಕ ನೀರಾಯಿಸುತ್ತಿದ್ದು, ಸೇವಂತಿಗೆ ಗಿಡಗಳಿಗೂ ಪ್ರತಿದಿನ ಎರಡು ತಾಸುಗಳಿಗೆ ನೀರನ್ನು ನೀಡಿದ್ದಾರೆ.

ನೆಟ್ಟು ಮೂರು ತಿಂಗಳ ನಂತರ ಹೂ ಕಟಾವಿಗೆ ಲಭ್ಯ. ಎರಡು ದಿನಕ್ಕೊಮ್ಮೆ ಹೂ ಕಟಾವು ಮಾಡುತ್ತಿದ್ದು ಕಟಾವಿನ ಕೆಲಸವನ್ನು ಬೆಳಿಗ್ಗೆ ಬೇಗ ಮಾಡಿ ಮುಗಿಸಬೇಕು. ಒಮ್ಮೆ ಕಟಾವು ಮಾಡುವಾಗ ಹದಿನೈದು ಕೆ.ಜಿ ಲಭಿಸುತ್ತಿದ್ದು ಇಲ್ಲಿಂದ ಹೂವನ್ನು ದಾವಣಗೆರೆ ಮಾರುಕಟ್ಟೆಗೆ ಕೆ.ಜಿಗೆ 50-200 ರೂಪಾಯಿ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.

ಬರೋಬ್ಬರಿ ಎಂಟು ತಿಂಗಳವರೆಗೆ ಗಿಡ ಹೂ ನೀಡಿ ನಂತರ ಬಾಡುತ್ತದೆ. ಮತ್ತೆ ಆ ಗಿಡಗಳನ್ನು ಕಟಾವು ಮಾಡಿ ಹೊಸ ಗಿಡಗಳನ್ನು ನಾಟಿ ಮಾಡಿದ್ದಾರೆ. ಸೇವಂತಿಗೆಗೆ ಬಿಸಿಲಿನ ಅಗತ್ಯ. ಹುಳ ಬಾಧೆ ರೋಗ ಕಾಣಿಸಿಕೊಂಡಲ್ಲಿ ಗಿಡ ಒಣಗಲು ಆರಂಭವಾಗುತ್ತದೆ. ಕೀಟನಾಶಕವನ್ನು ಸಿಂಪಡಿಸುತ್ತಿರಬೇಕು. ನೆಟ್ಟ ಮೂರು ತಿಂಗಳ ನಂತರ ಅಧಿಕ ಇಳುವರಿ ಪಡೆಯುವ ನಿಟ್ಟಿನಲ್ಲಿ ಕೊಟ್ಟಿಗೆ ಗೊಬ್ಬರ ನೀಡಬಹುದಾಗಿದೆ. ಗಿಡಗಳಿಗೆ ಜಾಸ್ತಿ ನೀರು ನೀಡಿದರೆ ಗಿಡ ಕೊಳೆಯುವ ಸಾಧ್ಯತೆಗಳಿರುತ್ತದೆ.

ಗಿಡದಲ್ಲಿ ನೀರು ನಿಂತರೆ ಕೊಳೆರೋಗ ಬಾಧಿಸುವ ಲಕ್ಷಣಗಳಿರುತ್ತದೆ. ಆದ್ದರಿಂದ ನೀರು ನಿಲ್ಲದಂತೆ ಜಾಗರೂಕತೆ ವಹಿಸಬೇಕು. ಇವರಿಗೆ ಬೆಳೆಯ ಕುರಿತು ಹೆಚ್ಚಿನ ಮಾಹಿತಿಯನ್ನು, ಆರ್ಥಿಕ ಸಹಾಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡಿದೆ.

ರೇವಣಸಿದ್ಧೇಶ್ವರ ಸ್ವಸಹಾಯ ಸಂಘದ ಸದಸ್ಯರಾದ ಇವರೊಂದಿಗೆ ಹೂ ಕಟಾವು ಕೆಲಸಗಳಲ್ಲಿ ಸಂಘದ ಇತರ ಸದಸ್ಯರು ಜೊತೆಯಾಗುತ್ತಾರೆ. ಪ್ರತಿ ವರ್ಷ ನಾಟಿ, ಗೊಬ್ಬರಕ್ಕೆಂದು 10 ಸಾವಿರ ರೂಪಾಯಿ ಖರ್ಚು ತಗಲುತ್ತದೆ. ಅಡಿಕೆ ನಾಟಿಗೆ ಖರ್ಚಾದ ಹಣವನ್ನು ಸೇವಂತಿಗೆಯಿಂದ ವಾಪಸ್‌ ಪಡೆದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರತ್ನಮ್ಮರವರ ಸಂಪರ್ಕಕ್ಕೆ: 9663298174.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT