ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಳನಳಿಸುವ ಜವಾರಿ ನವಣೆ!

Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

‘ಈಸಲ ಅತ್ಯುತ್ತಮ ಮುಂಗಾರು’ ಎಂದು ಹವಾಮಾನ ಇಲಾಖೆ ಹೇಳಿದ ಮಾತು ಸುಳ್ಳಾಗಿದೆ. ಮುಂಗಾರು ಸಂಪೂರ್ಣ ವಿಫಲವಾಗಿದ್ದು, ಬೆಳೆದ ಬೆಳೆಯೆಲ್ಲ ನೆಲ ಕಚ್ಚಿದೆ.ಎಷ್ಟೋ ಕಡೆ ಬಿತ್ತನೆಯೂ ಆಗಿಲ್ಲ ಎಂಬುದು ಪರಿಸ್ಥಿತಿಯ ಭೀಕರತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಎರಡು ವರ್ಷಗಳಿಂದ ಕಾಡುತ್ತಿರುವ ಬರಗಾಲ, ಈಗ ಮೂರನೇ ವರ್ಷಕ್ಕೂ ಕಾಲಿಟ್ಟಿದೆ.

‘ರೈತನಿಗೆ ಕಾಡುವುದು ಮೂರು ಕುತ್ತು (ಸಂಕಷ್ಟ)’ ಎನ್ನುವ ಮಹಾಬಲೇಶ್ವರ ಹೆಬ್ಬಳ್ಳಿ ಮಾತು ಅವರ ಮಗ ಪ್ರವೀಣನಿಗೆ ಅರ್ಥವಾಗಿದೆ. ವಾತಾವರಣ, ಮಳೆಗಾಲ ಹಾಗೂ ಮಾರುಕಟ್ಟೆ- ಇವು ಮೂರು ಗೆದ್ದರೆ ಮಾತ್ರ ಕೃಷಿ ಲಾಭದ ಕಸುಬು ಆಗಬಲ್ಲದು ಎಂದು ಮಹಾಬಲೇಶ್ವರ ಹೇಳುತ್ತಾರೆ. ಹಣ ತರಬಲ್ಲವು ಎಂದು ಹಣೆಪಟ್ಟಿಸಿಕೊಂಡ ಬೆಳೆಗಳು ಒಂದರಲ್ಲಿ ಗೆದ್ದರೆ, ಇನ್ನೊಂದರಲ್ಲಿ ಸೋಲುತ್ತವೆ. ರೈತ ನಷ್ಟ ಅನುಭವಿಸುತ್ತಿರುವುದು ಹೀಗೆಯೇ ಎಂದು ವೈವಿಧ್ಯಮಯ ತಳಿಗಳ ನವಣೆ ಹೊಲದಲ್ಲಿ ನಿಂತು ಹೇಳುವ ಪ್ರವೀಣ, ಈ ಸಲ ವಿಭಿನ್ನ ಹಾದಿಯಲ್ಲಿ ಹೆಜ್ಜೆ ಹಾಕಿದ್ದಾರೆ.

ಸುತ್ತಮುತ್ತ ಬಿಟಿ ಹತ್ತಿ, ಮೆಕ್ಕೆಜೋಳ ಸೋತು ಸೊರಗಿವೆ. ಆದರೆ ಪ್ರವೀಣ ಅವರ ಹೊಲದಲ್ಲಿನ ನವಣೆ ತಳಿಗಳು ನಳನಳಿಸುತ್ತಿವೆ. ಮಳೆ ಕೊರತೆ ಹಾಗೂ ವಾತಾವರಣದ ಏರುಪೇರನ್ನು ತಡೆದುಕೊಂಡು ಹುಲುಸಾಗಿ ಬೆಳೆದಿರುವ ಸಿರಿಧಾನ್ಯ, ಬರಗಾಲಕ್ಕೆ ಸವಾಲು ಹಾಕುತ್ತಿದೆ!

ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕು ಬೆಟಸೂರು ಗ್ರಾಮದ ಪ್ರವೀಣ ಅವರದು ಮೂವತ್ತಾರು ಎಕರೆ ಜಮೀನು. ಮೊದಲೆಲ್ಲ ಹುರಳಿ, ಗೋಧಿ, ಕೆಂಜೋಳ ಇತ್ಯಾದಿ ಬೆಳೆಯುತ್ತಿದ್ದರು. ಸ್ವತಃ ಸಂಸ್ಕರಣೆ ಮಾಡಿಕೊಂಡು ಸೇವಿಸುತ್ತಿದ್ದರು. ಮಳೆಗಾಲ ಉತ್ತಮವಾಗಿದ್ದರಿಂದ ಬೇಸಾಯ ಅಷ್ಟೊಂದು ಕಷ್ಟಕರವೂ ಆಗಿರಲಿಲ್ಲ. ‘ಕಳೆದ ಮೂರು ವರ್ಷಗಳಿಂದ ಶುರುವಾಯ್ತು ನೋಡಿ, ಈ ಸಮಸ್ಯೆ’ ಎಂದು ನೆನಪಿಸಿಕೊಳ್ಳುತ್ತಾರೆ ಪ್ರವೀಣ.

ಮಳೆ ಕೊರತೆಯಿಂದ ಎರಡು ವರ್ಷ ಸರಿಯಾಗಿ ಬೆಳೆ ತೆಗೆದಿರಲೇ ಇಲ್ಲ. ಈ ವರ್ಷ ಕೂಡ ಅದೇ ದುಸ್ಥಿತಿ. ಇಂಥ ಸಮಯದಲ್ಲಿ ಪ್ರವೀಣ ಅವರ ಮನಸ್ಸು ಸಿರಿಧಾನ್ಯದ ಕಡೆಗೆ ಹರಿಯಿತು. ‘ಮೊದಲಿಗೆಲ್ಲ ನನಗೇನೂ ಅಷ್ಟು ಆಸಕ್ತಿ ಇರಲಿಲ್ಲ. ಪಿಯುಸಿ ಮುಗಿದ ಬಳಿಕ ಓದು ಮುಂದುವರಿಸದೇ ನನ್ನ ಹೊಲದಲ್ಲಿ ದುಡಿಯುವ ಉದ್ದೇಶದಿಂದ ವಾಪಸು ಹಳ್ಳಿಗೆ ಬಂದೆ. ಆ ಬಳಿಕ ವಾಣಿಜ್ಯ ಬೆಳೆಗಳ ಜತೆಗೆ ಒಂದಷ್ಟು ಗೋಧಿ, ಜೋಳ ಬೆಳೆಯುತ್ತಿದ್ದೆ. ಈ ವರ್ಷ ಮಳೆಯ ಕೊರತೆ ಎದುರಾದಾಗ ಚಿಂತೆಯಾಯಿತು. ಆಗ ಸಿರಿಧಾನ್ಯದತ್ತ ನನ್ನ ಗಮನ ಹರಿಯಿತು’ ಎಂದು ನೆನಪಿಸಿಕೊಳ್ಳುತ್ತಾರೆ.

ನವಣೆಯ ತಳಿಗಳನ್ನು ಸಂರಕ್ಷಣೆ ಮಾಡುವ ಪ್ರವೀಣ ಅವರ ಪರಿಕಲ್ಪನೆಗೆ ಬೆಂಬಲ ಕೊಟ್ಟಿದ್ದು ‘ಸ್ಪ್ರೆಡ್’ ಸ್ವಯಂಸೇವಾ ಸಂಸ್ಥೆ. ರಾಜ್ಯ ಸರ್ಕಾರದ ‘ಸಾವಯವ ಭಾಗ್ಯ’ ಯೋಜನೆ ಅನುಷ್ಠಾನಾಧಿಕಾರಿ ಶ್ರೀದೇವಿ ಎಸ್. ಭೂತಪಳ್ಳಿ ಅವರು ‘ಸಹಜ ಸಮೃದ್ಧ’ ಬಳಗದ ರೈತರ ಮೂಲಕ ಹದಿಮೂರು ತಳಿ ಜವಾರಿ ನವಣೆಯನ್ನು ಕೊಡಿಸಿದರು. ‘ಆಗ ನೆಲದಲ್ಲಿ ಒಂದಷ್ಟು ತೇವಾಂಶವಿತ್ತು. ನೋಡೋಣ ಎಂದುಕೊಂಡು ನವಣೆ ಬಿತ್ತಿದ್ದೆ. ಆದರೆ ಈಗ ತೆನೆಯೊಂದಿಗೆ ತೊನೆಯುವ ಸಸಿಗಳನ್ನು ನೋಡಿದಾಗ ನನಗೇ ಅಚ್ಚರಿಯಾಗುತ್ತದೆ’ ಎನ್ನುತ್ತಾರೆ ಪ್ರವೀಣ.

ಅವರು ಹಾಗೆ ಅಚ್ಚರಿಪಡುವುದಕ್ಕೆ ಮುಖ್ಯ  ಕಾರಣ, ನವಣೆ ಬೇಸಾಯಕ್ಕೆ ಆಗಿರುವ ಅತ್ಯಲ್ಪ ವೆಚ್ಚ. ಬಿತ್ತನೆ ಮಾಡುವಾಗ ಎರಡು ಕ್ವಿಂಟಲ್ ಎರೆಗೊಬ್ಬರ ಕೊಟ್ಟಿದ್ದಷ್ಟೇ. ಮತ್ತೇನೂ ಒಳಸುರಿ ಇಲ್ಲ. ಒಂದು ತಳಿಗೆ ಸುಳಿರೋಗದ ಲಕ್ಷಣ ಕಾಣಿಸಿದಾಗ, ಹುಳಿಮಜ್ಜಿಗೆ ಸಿಂಪಡಿಸಿದ ಕೂಡಲೇ ನಿಯಂತ್ರಣಕ್ಕೆ ಬಂದಿತಂತೆ. ಕಳೆಯನ್ನು ಒಂದೇ ಸಲ ತೆಗೆಯಲಾಗಿದೆ. ಸಕಾಲಕ್ಕೆ ಮಳೆ ಬಾರದೇ ಇದ್ದರೂ ಅದರಿಂದೇನೂ ಸಮಸ್ಯೆಯಾಗಿಲ್ಲ. ‘ಬೇರೆ ಬೆಳೆಯಾಗಿದ್ದರೆ ಇಷ್ಟು ಹೊತ್ತಿಗೆ ಏನೇನೋ ಆಗಿಬಿಡುತ್ತಿತ್ತು. ಈ ಸಿರಿಧಾನ್ಯ ಮಾತ್ರ ಅದನ್ನೆಲ್ಲ ಎದುರಿಸಿ ಹೇಗೆ ನಿಂತಿದೆ ನೋಡಿ’ ಎಂದು ಚಂದ್ರ ನವಣೆಯ ತೆನೆಯನ್ನು ಹಿಡಿದು ಪ್ರವೀಣ ಖುಷಿಯಿಂದ ಹೇಳುತ್ತಾರೆ.

ನವಣೆಯ ತಳಿಗಳದು ಒಂದು ವಿಶಿಷ್ಟ ಲೋಕ. ಕಾಳಿದಾಸನ ‘ಶಾಕುಂತಲಾ’ ಕೃತಿಯಲ್ಲಿ ಶಕುಂತಲೆಯನ್ನು ದುಶ್ಯಂತನ ಆಸ್ಥಾನಕ್ಕೆ ಕಳಿಸುವಾಗ, ಆಕೆಯ ಉಡಿಗೆ ಕಣ್ವ ಋಷಿಯು ನವಣೆ ಸುರಿದು ಕಳಿಸುವ ಪ್ರಸ್ತಾಪವಿದೆ. ಇದರಲ್ಲಿ ಪಿಷ್ಟ ಮತ್ತು ನಾರಿನಂಶ ಹೇರಳವಾಗಿದೆ. ಹೀಗಾಗಿ ಮಧುಮೇಹಿ ರೋಗಿಗಳಿಗೆ ಇದೊಂದು ಪಕ್ವ ಆಹಾರ.ದೇಹದಲ್ಲಿನ ಕೊಲೆಸ್ಟರಾಲ್ ತಗ್ಗಿಸಲು, ರಕ್ತದೊತ್ತಡ ನಿಯಂತ್ರಣಕ್ಕೆ ನವಣೆ ನೆರವಾಗುತ್ತದೆ. ಇದರ ಸೇವನೆ ದೇಹವನ್ನು ಸದೃಢ ಹಾಗೂ ರೋಗನಿರೋಧಕವಾಗಿಸುತ್ತದೆ.

ಹಲವಾರು ಪ್ರಯೋಜನಗಳ ಈ ಧಾನ್ಯದ ಹದಿಮೂರು ತಳಿಗಳನ್ನು ಸಂರಕ್ಷಿಸಿ, ರೈತರಿಗೆ ಬಿತ್ತನೆ ಬೀಜ ಕೊಡಲು ಪ್ರವೀಣ ನಿರ್ಧರಿಸಿದ್ದಾರೆ. ಮುಂದೆ ಇನ್ನಷ್ಟು ಹೆಚ್ಚು ಪ್ರದೇಶದಲ್ಲಿ ನವಣೆ ಬಿತ್ತನೆ ಮಾಡುವ ಉದ್ದೇಶ ಅವರದು. ‘ಆರೋಗ್ಯವೇ ಭಾಗ್ಯ ಎಂಬ ಅರಿವು ಜನರಲ್ಲಿ ಮೂಡುತ್ತಿದೆ. ಅದರಿಂದಾಗಿಯೇ ಸಿರಿಧಾನ್ಯ ಬಳಕೆ ಅಧಿಕವಾಗುತ್ತಿದೆ. ನಗರ- ಪಟ್ಟಣಗಳಲ್ಲಿ ಸಿರಿಧಾನ್ಯದ ಮಾರುಕಟ್ಟೆ ವಿಶಾಲವಾಗುತ್ತಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡ ರೈತರು ನವಣೆ ಇನ್ನಿತರ ಬೆಳೆಗೆ ಮುಂದಾಗಬೇಕು’ ಎಂದು ಪ್ರವೀಣ ಸಲಹೆ ಮಾಡುತ್ತಾರೆ.

‘ಹವಾಮಾನ ವೈಪರೀತ್ಯದ ಸಂಕಟದಿಂದ ರೈತರನ್ನು ಪಾರು ಮಾಡುವ ಶಕ್ತಿ ಇರುವುದು ಸಿರಿಧಾನ್ಯಗಳಿಗೆ ಮಾತ್ರ ಎಂಬುದನ್ನು ಈಗ ರೈತರೇ ತಮ್ಮ ಹೊಲಗಳ ಮೂಲಕ ತೋರಿಸುತ್ತಿದ್ದಾರೆ. ಒಂದೊಮ್ಮೆ ಆಧುನಿಕ ಕೃಷಿ ವಿಜ್ಞಾನದಿಂದ ತೃಣ ಧಾನ್ಯ ಎಂಬ ಹಣೆಪಟ್ಟಿ ಕಟ್ಟಿಸಿಕೊಂಡಿದ್ದ ಈ ಧಾನ್ಯಗಳೇ ಈಗ ಕಷ್ಟಕಾಲದಲ್ಲಿ ರೈತರ ಕೈಹಿಡಿಯುತ್ತಿವೆ.

ಅದರಲ್ಲೂ ಸಾಂಪ್ರದಾಯಿಕ ತಳಿ ಪೋಷಿಸುವ ರೈತರ ಸಂಖ್ಯೆ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದು ಪ್ರವೀಣ ಕಾರ್ಯವನ್ನು ‘ಸಹಜ ಸಮೃದ್ಧ’ದ ನಿರ್ದೇಶಕ ಜಿ. ಕೃಷ್ಣಪ್ರಸಾದ್ ಶ್ಲಾಘಿಸುತ್ತಾರೆ.

ಮುಂಗಾರು ಸಂಪೂರ್ಣವಾಗಿ ವಿಫಲವಾದ ಹಿನ್ನೆಲೆಯಲ್ಲಿ ರೈತರು ಈಗ ಹಿಂಗಾರಿನತ್ತ ಆಸೆಗಣ್ಣಿನಿಂದ ನೋಡುತ್ತಿದ್ದಾರೆ. ಈ ಮಧ್ಯೆ ದೇಶ- ದೇಶ, ರಾಜ್ಯ- ರಾಜ್ಯಗಳ ಮಧ್ಯೆ ನೀರಿಗಾಗಿ ಕದನ ಶುರುವಾಗುವ ಲಕ್ಷಣ ಗೋಚರಿಸುತ್ತಿದೆ. ನೀರನ್ನೇ ಅಧಿಕವಾಗಿ ಬಯಸುವ ಬೆಳೆಗಳ ಬದಲಿಗೆ, ಸುರಿದಷ್ಟು ಮಳೆಯಲ್ಲಿ ಬೆಳೆದು ನಿಂತ ಸಿರಿಧಾನ್ಯಗಳು ರೈತರಿಗೆ ಹೊಸ ದಾರಿ ತೋರಿಸಬಲ್ಲವು.

ಆ ಹಾದಿಯಲ್ಲಿ ಸಾಗಲು ಬಯಸುವವರಿಗೆ ಪ್ರವೀಣ ಹೊಲದಲ್ಲಿ ತೊನೆದಾಡುವ ನವಣೆ ತಳಿ ಆತ್ಮವಿಶ್ವಾಸ ನೀಡುತ್ತವೆ. ‘ಈ ಕುರಿತು ಆಸಕ್ತ ರೈತರಿಗೆ ಮಾಹಿತಿ ಕೊಡಲು ಇದೇ 29ರಂದು ಕ್ಷೇತ್ರೋತ್ಸವ ನಡೆಸಲಿದ್ದೇವೆ. ನೀವೂ ಬನ್ನಿ’ ಎಂದು ಪ್ರವೀಣ ಆಹ್ವಾನ ಕೊಡುತ್ತಾರೆ.

ಪ್ರವೀಣ ಬೆಳೆದಿರುವ ನವಣೆ ತಳಿಗಳಲ್ಲಿ ಕರಿನವಣೆ ಬಲು ಅಪರೂಪ. ಬಳ್ಳಾರಿ ಭಾಗದ ಮಳೆಯಾಶ್ರಿತ ಪ್ರದೇಶದಲ್ಲಿ ಇದನ್ನು ಹೆಚ್ಚಿಗೆ ಬೆಳೆಯಲಾಗುತ್ತಿತ್ತು. ಇತ್ತೀಚಿಗೆ ತೀರಾ ಅಪರೂಪವಾಗಿದ್ದು, ಇನ್ನೇನು ಕಣ್ಮರೆಯಾಗಲಿದೆ ಎಂಬ ದಾರಿಯಲ್ಲಿತ್ತು. ಒಂದು ಅಡಿ ಉದ್ದದ ತೆನೆ ಇದರ ವಿಶೇಷ.

ಆರು ಅಡಿಗಳಷ್ಟು ಎತ್ತರದ ಚಂದ್ರ ನವಣೆ ಇನ್ನೊಂದು ವಿಶೇಷ ತಳಿ. ತೆನೆ ಮುಕ್ಕಾಲು ಅಡಿ; ಜಾನುವಾರುಗಳಿಗೆ ಹೆಚ್ಚು ಮೇವು ಕೊಡಬಲ್ಲದು. ನೋಡಲು ಸುಂದರವಾದ ಹಾಲು ನವಣೆಯೂ ಇಲ್ಲಿದೆ. ಇವುಗಳ ಜತೆ ಮುಳ್ಳು, ಕೆಂಪು, ಬಿಳಿಹುಲ್ಲು, ಕೆಂಪುಹುಲ್ಲು, ಸಣ್ಣ, ಜಡೆ, ದೊಡ್ಡತಲೆ, ಹಾಲುಹುಲ್ಲು, ಹಾವೇರಿ ಹಾಗೂ ತಮಿಳುನಾಡಿನ ತೆನೈ ನವಣೆ ಇವರ ಹೊಲದಲ್ಲಿ ಅರಳಿವೆ. ವಿವರಗಳಿಗೆ: 8971013086.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT