ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾವಲಂಬನೆ ಎಂಬ ಬೆಳಕಿನಲಿ...

Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

-ಕೋವರ್ ಕೊಲ್ಲಿ ಇಂದ್ರೇಶ್
ಟೈಲರಿಂಗ್‌ ವೃತ್ತಿಗೆ ಮುಖ್ಯವಾಗಿ ಬೇಕಿರುವುದು ಕಣ್ಣು. ಎಷ್ಟೇ ಜಾಣ ದರ್ಜಿ ಆಗಿದ್ದರೂ ಜನರ ವಿಶ್ವಾಸ ಗಳಿಸುವುದು ಅಷ್ಟು ಸುಲಭದ ಮಾತಲ್ಲ. ಇದರ ನಡುವೆ, ದೃಷ್ಟಿಯಿಲ್ಲದ ವ್ಯಕ್ತಿಯೊಬ್ಬರು ದರ್ಜಿ ಕೆಲಸದಲ್ಲಿ ತೊಡಗಿಕೊಂಡು ಸಾಧನೆ ಮಾಡಿದ್ದಾರೆ!

ಇವರ ಹೆಸರು ರುದ್ರಾಚಾರಿ. ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ ಶೆಟ್ಟಳ್ಳಿ ಗ್ರಾಮದವರು. ಕಿತ್ತು ತಿನ್ನುವ ಬಡತನದಿಂದಾಗಿ ಉದ್ಯೋಗ ಅನಿವಾರ್ಯವಾದಾಗ  ಇವರು ಆಯ್ದುಕೊಂಡದ್ದು ದರ್ಜಿ ಕೆಲಸ. ಕಣ್ಣೇ ಅತಿಮುಖ್ಯವಾಗಿರುವ ಈ ವೃತ್ತಿಯಲ್ಲಿ, ಅಂಧತ್ವಕ್ಕೇ ಸಡ್ಡು ಹೊಡೆಯುವಂತೆ ಯಶಸ್ವಿ ಟೈಲರ್‌ ಎನಿಸಿಕೊಂಡಿದ್ದಾರೆ.

55 ವರ್ಷದ ರುದ್ರಾಚಾರಿ ಹುಟ್ಟು ಕುರುಡರೇನಲ್ಲ. 28ನೇ ವಯಸ್ಸಿನವರೆಗೆ ಇವರ ದೃಷ್ಟಿ ಚೆನ್ನಾಗಿತ್ತು. ಆರು ವರ್ಷ ಇವರು ದರ್ಜಿ ಕೆಲಸವನ್ನು ಚೆನ್ನಾಗಿ ನಿರ್ವಹಿಸುತ್ತಾ ಬಂದರು. ಆದರೆ 28ನೇ ವಯಸ್ಸಿನಲ್ಲಿ ಇರುಳುಗಣ್ಣು ಶುರುವಾಯಿತು. ಅಲ್ಲಿಂದ ಆರಂಭವಾದ ಈ ಸಮಸ್ಯೆ ಮೂರ್ನಾಲ್ಕು ವರ್ಷಗಳಲ್ಲಿಯೇ ಇಡೀ ದೃಷ್ಟಿಯನ್ನೇ ಕಿತ್ತುಕೊಂಡಿತು. ವೈದ್ಯರಲ್ಲಿ ತಪಾಸಣೆ ನಡೆಸಿದರೂ ಏನೂ ಪ್ರಯೋಜನವಾಗಲಿಲ್ಲ.

ಆದರೆ ವಯಸ್ಸಾದ ತಾಯಿ, ಪತ್ನಿ ಹಾಗೂ ಎರಡು ಮಕ್ಕಳ ಹೊಟ್ಟೆ ತುಂಬಿಸಲು ದುಡಿಮೆ ಅನಿವಾರ್ಯವಾಗಿತ್ತು. ಆದ್ದರಿಂದ ಇಷ್ಟು ವರ್ಷ ಕೈಹಿಡಿದ ಉದ್ಯೋಗವನ್ನೇ ಮುಂದುವರಿಸಿದರು. ಆರಂಭದಲ್ಲಿ ಪತ್ನಿಯ ಸಹಾಯ ಪಡೆದು ಬಟ್ಟೆ ಅಳತೆ ತೆಗೆದುಕೊಳ್ಳುವುದು, ಕತ್ತರಿಸುವುದನ್ನು ಕಲಿತರು. ‘ಮೊದ ಮೊದಲು ಇದು ತುಂಬಾ ಕಷ್ಟವಾಯಿತು. ಆದರೆ ಈಗ ಸಲೀಸಾಗಿ ಬಟ್ಟೆ ಹೊಲಿಯುತ್ತೇನೆ’ ಎನ್ನುತ್ತಾರೆ ಅವರು.

ಮಂಗಳೂರಿನ ಸಮಾಜ ಸೇವಕಿ ವನಿತಾ ಶೆಟ್ಟಿ ಅವರು ಅಂಧಸ್ನೇಹಿಯಾದ ಟೇಪ್‌ ಹಾಗೂ ಸೂಜಿಯನ್ನು ಇವರಿಗೆ ನೀಡಿದ್ದಾರೆ. ಅದರ ಸಹಾಯದಿಂದ ಬಟ್ಟೆಯನ್ನು ಇವರು ನಿರಾತಂಕವಾಗಿ ಹೊಲಿಯುತ್ತಿದ್ದಾರೆ. ಸಮೀಪದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಮವಸ್ತ್ರ ಕೂಡ ಹೊಲಿಯುವುದು ಇವರೇ. ಏನೇ ಆದರೂ ಕಾಯಕವೇ ಕೈಲಾಸ ಎಂದು ಬದುಕುತ್ತಿರುವ ಇವರು ಅನುಕರಣೀಯ. ಇವರ ಸಂಪರ್ಕಕ್ಕೆ 9481532576.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT