ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲಿ ಇಲ್ಲಿ ವಿಹಾರ, ಚಪ್ಪರಿಸುವ ಆಹಾರ

Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಐಟಿಬಿಟಿ ಸಿಟಿ ಎಂಬ ಹೆಸರಿನೊಂದಿಗೆ ಪರಿಚಿತವಾಗಿರುವ ಬೆಂಗಳೂರು ಬಹು ಸಂಸ್ಕೃತಿ ಹಾಗೂ ಆಹಾರ ಪರಂಪರೆಯನ್ನು ಒಳಗೊಂಡಿದೆ. ಬೀದಿಬದಿಯ ಗರಮಾಗರಂ ಪಾನಿಪುರಿಯಿಂದ ಹಿಡಿದು ಬಹುತಾರಾ ರೆಸ್ಟೊರೆಂಟ್‌ಗಳ ದೇಶವಿದೇಶಿ ಖಾದ್ಯಗಳು ಇಲ್ಲಿ ಸಿಗುತ್ತವೆ. ನಗರದ ಜನತೆ ಮೆಚ್ಚಿದ ಆಹಾರ ಬೀದಿಯ ಪಟ್ಟಿ ಇಲ್ಲಿದೆ.

ಗಾಂಧಿಬಜಾರ್
ಸಾಹಿತಿಗಳಿಂದ ಹಿಡಿದು ಶಾಲಾ ಮಕ್ಕಳವರೆಗೆ ಎಲ್ಲರ ನೆಚ್ಚಿನ ತಾಣ ಗಾಂಧಿಬಜಾರ್. ಸೊಂಪಾದ ಹೂವಿನ ಅಂಗಡಿಗಳು, ಸಾಲುಸಾಲು ಪುಸ್ತಕದ ಅಂಗಡಿಗಳು ಕಣ್ಣಿಗೆ ಹಿತವಾದರೆ, ಘಮಘಮಿಸುವ ಹಣ್ಣಿನ ಮಳಿಗೆ ಮತ್ತು  ಹೋಟೆಲ್‌ಗಳು ಹೊಟ್ಟೆ ತಂಪು ಮಾಡುತ್ತವೆ.

ಗಾಂಧಿ ಬಜಾರ್‌ನ ವಿದ್ಯಾರ್ಥಿಭವನ ಮಸಾಲೆ ದೋಸೆಗಾಗಿ ಅದೆಷ್ಟು ಜನರು ನಿಂತು ಗಂಟೆಗಳನ್ನು ಕಳೆದಿದ್ದಾರೋ. ಇನ್ನು ರೋಟಿ ಘರ್‌ನಲ್ಲಿ ಫುಲ್‌ ಮೀಲ್ಸ್‌, ರೋಟಿ, ನೂಡಲ್ಸ್‌, ವಿವಿಧ ಬಗೆಯ ಐಸ್‌ಕ್ರೀಂ ವಿಶೇಷವಾಗಿದೆ.  ಎಸ್‌ಎಲ್‌ವಿ ರೆಸ್ಟೊರೆಂಟ್ ಚೈನೀಸ್‌ ಮೀಲ್ಸ್‌ ಫೇಮಸ್‌. ಆನಂದ್‌ ಭವನ್, ಶಿವಸಾಗರ್, ಪುಳಿಯೋಗರೆ ಪಾಂಯಿಟ್‌ ಇನ್ನು ಹಲವು ಹೋಟೆಲ್‌ಗಳು ಆಹಾರ ಪ್ರಿಯರ ನಾಲಿಗೆ ಚಪಲವನ್ನು ತಣ್ಣಿಸುತ್ತಿವೆ.

ಚರ್ಚ್‌ಸ್ಟ್ರೀಟ್‌
ಪಕ್ಕಾ ಹೈಫೈ ಆಹಾರ ತಾಣ. ಉತ್ತಮ ದರ್ಜೆಯ ಬೀರ್‌ಗೆ ಈ ರಸ್ತೆ ಜನಪ್ರಿಯ. ಕೋಶಿಸ್‌, ಸೋಶಿಯಲ್‌, ಎಂಪೈಯರ್‌, ಭೀಮಾಸ್‌, ಮಾಯಾ, ಬ್ಲೂ ಫ್ರಾಗ್‌, ಹೈಗೇಟ್ಸ್‌ ಹೀಗೆ ರೆಸ್ಟೊರೆಂಟ್‌ಗಳ ಸಾಲು ಇಲ್ಲಿದೆ. ಚರ್ಚ್‌ಸ್ಟ್ರೀಟ್‌ ಪಬ್‌ಗಳ ಬೀದಿಯೂ ಹೌದು.

ಬನಶಂಕರಿ
ಬೆಂಗಳೂರಿಗೆ ಬಂದವರು ಬನಶಂಕರಿ 2ನೇ ಹಂತದಲ್ಲಿ ಇರುವ  ರಂಗಣ್ಣ ಮಿಲ್ಟ್ರಿ ಹೋಟೆಲ್‌ನಲ್ಲಿ ಕಾಲುಸೂಪ್‌ ಕುಡಿದೇ ಹೋಗಬೇಕು. ಹಲವು ವರ್ಷಗಳಿಂದ ಉತ್ಕೃಷ್ಟ ಗುಣಮಟ್ಟದ ಕಾಲುಸೂಪ್‌ ಇಲ್ಲಿ ಸಿಗುತ್ತದೆ. ಬನಶಂಕರಿ ಬಸ್‌ ನಿಲ್ದಾಣದ ಬಳಿ ಶಿವಾಜಿ ದೊನ್ನೆ ಬಿರಿಯಾನಿ ಹೋಟೆಲ್ ಇದೆ. ಕಾಲುಸೂಪು ಕುಡಿದ ಮೇಲೆ ಹೊಟ್ಟೆ ತುಂಬಾ ದೊನ್ನೆ ಬಿರಿಯಾನಿ ತಿಂದು ಸಂತೃಪ್ತರಾಗಬಹುದು.

ಜಯನಗರ
ಲ್ಯಾಂಡ್‌ ಮಾರ್ಕ್‌ ಅಂಗಡಿ ಎಂದರೆ ಕೂಲ್‌ ಜಾಯಿಂಟ್‌. ಇಲ್ಲಿ ಹೆಚ್ಚು ಜನಪ್ರಿಯ ಎಂದರೆ ಮಾವಿನ ಹಣ್ಣಿನ ಮಿಲ್ಕ್‌ಶೇಕ್‌. ವೆಂಕಟೇಶ್ವರ ಜೋಳದ ರೊಟ್ಟಿ ಊಟ (ಕಲಬುರ್ಗಿ ಶೈಲಿ), ಪ್ಯಾರಡೈಸ್‌ ಬಿರಿಯಾನಿ ಇಲ್ಲಿನ ಹಾಟ್‌ಸ್ಪಾಟ್‌. ಅಲ್ಲದೆ ನಾಲ್ಕನೇ ಬ್ಲಾಕ್‌ನ ಕಾಂಪ್ಲೆಕ್ಸ್‌ನಲ್ಲಿ ಸಾಕಷ್ಟು ಚಾಟ್ಸ್‌ ಅಂಗಡಿಗಳು ಇವೆ.

ಇಂದಿರಾನಗರ
ಅಥೆಂಟಿಕ್‌ ಚೈನೀಸ್‌ ಖಾದ್ಯಗಳು ಬೇಕೆಂದರೆ ಇಂದಿರಾನಗರ ಮೆಟ್ರೊ ನಿಲ್ದಾಣ ಬಳಿ ಇರುವ ವ್ಯಾಂಗ್ಲಿ ರೆಸ್ಟೊರೆಂಟ್‌ಗೆ ಭೇಟಿ ನೀಡಬಹುದು. ಒಂದೊಳ್ಳೆ ಪುಸ್ತಕವಿದ್ದರೆ ವ್ಯಾಂಗ್ಲಿ ರೆಸ್ಟೊರೆಂಟ್‌ ಪಕ್ಕವಿರುವ ಬಿಯರ್ ಕೆಫೆಯಲ್ಲಿ ಅಂತರರಾಷ್ಟೀಯ ಬ್ರ್ಯಾಂಡ್‌ನ ಬಾರ್ಲಿ ಬಿಯರ್‌ ಕುಡಿಯುತ್ತಾ ಪುಸ್ತಕ ಓದಬಹುದು. ಹಿಂಬದಿಯ ರಸ್ತೆಯಲ್ಲಿ ಮಿಲಾನೊ ಐಸ್‌ಕ್ರೀಂ ಮಳಿಗೆ ಇದೆ. ತಾಜಾ ಹಣ್ಣುಗಳಿಂದ ತಯಾರಿಸಿದ ಇಟಾಲಿಯನ್ ಶೈಲಿಯ ಐಸ್‌ಕ್ರೀಂ ಲಭ್ಯ.

ನೂರುಅಡಿ ರಸ್ತೆಯಲ್ಲಿ ಕ್ಯಾಲಿಫೋರ್ನಿಯ ಪಿಜ್ಜಾ ಅಂಗಡಿಯ ಪಕ್ಕ ಬೀದಿಬದಿಯಲ್ಲಿ ಆಟೊದಲ್ಲೇ ದೋಸೆ ತಯಾರಿಸುತ್ತಾರೆ. ಇಲ್ಲಿ ಹತ್ತಾರು ಬಗೆಯ ದೋಸೆ ಲಭ್ಯ. ನೂರು ಅಡಿ ರಸ್ತೆಯಲ್ಲಿ ಹಲವು ಚಾಟ್‌ ಅಂಗಡಿ, ನಾಗಾಲ್ಯಾಂಡ್‌ ಶೈಲಿಯ ಮೊಮೊ ಲಭ್ಯ.

ರಸೆಲ್ ಮಾರುಕಟ್ಟೆ
ಪಂಚತಾರಾ ಹೋಟೆಲ್‌ಗಳ ಝಗಮಗ ಬೆಳಕು, ಅಪರಿಚಿತವೆನಿಸುವ ಅತಿಯಾದ ನಿಶ್ಯಬ್ದ ಇಲ್ಲಿಲ್ಲ. ಬೀದಿಬದಿಯಲ್ಲೇ ಹತ್ತಾರು ಹೋಟೆಲ್‌ಗಳು ಇವೆ. ದಿನಗೂಲಿ ಕಾರ್ಮಿಕರು, ಗುಜರಿ, ಮರ ವ್ಯಾಪಾರಿಗಳ ಕುಟುಂಬವೂ ವಾಸವಿದ್ದು ಊಟಕ್ಕೆ ಹೋದರೆ ಇಲ್ಲಿನ ಜನಸಂಸ್ಕೃತಿಯ ಪರಿಚಯವೂ ಆಗುತ್ತದೆ.

ರಸೆಲ್ ಮಾರುಕಟ್ಟೆಯ ವೃತ್ತದ ರಸ್ತೆಗಳಲ್ಲಿ ಸಿಗುವ ಬೀಫ್, ಕೋಳಿ, ಮಟನ್ ಖಾದ್ಯ ತಿನ್ನುವುದಕ್ಕಿಂತ ಅವರು ಬಡಿಸುವ ಪ್ರೀತಿಯಿಂದಲೇ ಹೊಟ್ಟೆ ತುಂಬುತ್ತದೆ. 51 ವರ್ಷ ಹಳೆಯದಾದ ಅಪ್ಸರ ಬೀಫ್ ಬಿರಿಯಾನಿ ಹೋಟೆಲ್‌, ಅಬ್ದುಲ್ ಟೀ ಶಾಪ್, ದಿಲ್‌ ಖುಷ್ ಟೀ ಅಂಗಡಿ, ಲತೀಫ್ ಪಾಯ ಶಾಪ್ ಹಾಗೂ ಹೆಸರೇ ಇಲ್ಲದ ಹಲವು ಬೀಫ್ ರೋಸ್ಟ್‌ ಅಂಗಡಿಗಳು ಆಫ್ಘಾನಿಸ್ತಾನ, ಹೈದರಾಬಾದ್‌ ಶೈಲಿ ಆಹಾರ ರುಚಿಯನ್ನು ಉಣಬಡಿಸುತ್ತಿವೆ.

ವಿಶ್ವೇಶ್ವರಪುರ
ಸೂರ್ಯ ಅತ್ತ ಮುಳುಗುತ್ತಿದ್ದಂತೆ ವಿಶ್ವೇಶ್ವರಪುರದ ಆಹಾರ ಬೀದಿ (ಫುಡ್‌ಸ್ಟ್ರೀಟ್) ರಂಗೇರುತ್ತದೆ. ಬಗೆಬಗೆಯ ದೋಸೆ, ಪಾನಿಪುರಿ, ಜ್ಯೂಸ್, ಕಾಟಿನೆಂಟಲ್, ಚೈನೀಸ್ ಒಂದೇ ಎರಡೇ. ಮನದಣಿಯೇ ತಿಂದು ತೃಪ್ತರಾಗಬಹುದು.

ಇನ್ನು ಸಜ್ಜನರಾವ್ ಸರ್ಕಲ್‌ನಲ್ಲಿರುವ ವಿ.ಬಿ.ಬೇಕರಿ ಬಗ್ಗೆ ಹೇಳಲೇ ಬೇಕು. ಇಲ್ಲಿನ ಕ್ರೀಂ ಬನ್, ಬೆಣ್ಣೆ ಬಿಸ್ಕತ್‌, ದಿಲ್‌ ಪಸಂದ್ ತಿನ್ನದ ಬೆಂಗಳೂರಿಗರ ಬಗ್ಗೆ ಏನೆಂದು ಹೇಳಲು ಸಾಧ್ಯ? ಅಯ್ಯೋ ಪಾಪ ಎಂದು ಸುಮ್ಮನಾಗಬೇಕು.

ಮೂರು ಸೆಲೆಬ್ರೆಟಿ ಸ್ಪಾಟ್‌
ಮೆಜೆಸ್ಟಿಕ್‌ ಗಾಂಧಿನಗರದ ‘ಮುದ್ದೆ ಮಾದಪ್ಪ ಮೆಸ್‌’ ಕಾಲುಸೂಪ್‌ ಹಾಗೂ ತಲೆ ಮಾಂಸಕ್ಕೆ ಜನಪ್ರಿಯ ತಾಣ. ಡಾ.ರಾಜಕುಮಾರ ಅವರಿಗೆ ಈ ಹೋಟೆಲ್‌ನಿಂದಲೇ ಬಿಸಿಬಿಸಿ ರಾಗಿಮುದ್ದೆ ತಲೆ–ಕಾಲು ಸಾರು ರವಾನೆಯಾಗುತ್ತಿತ್ತಂತೆ. ನಟ ದರ್ಶನ್‌, ಸೃಜನ್‌ ಲೋಕೇಶ್‌ ಮತ್ತು ಗೆಳೆಯರಿಗೆ ಚಿಕ್ಕಪೇಟೆಯಲ್ಲಿ ಸಿಗುವ ಚಾಕಣ ಎಂದರೆ ತುಂಬಾ ಇಷ್ಟ. ಪ್ರೇಮ್‌ ಕೂಡ ಈ ಚಾಕಣವನ್ನು ಇಷ್ಟಪಟ್ಟು ತಿನ್ನುವವರೆ.

ಇನ್ನು ಚಾಮರಾಜಪೇಟೆಯಲ್ಲಿ ಇರುವ ‘ಕನ್ನಡ ತಿಂಡಿ ಕೇಂದ್ರ’ದ ಚಿತ್ರಾನ್ನ, ವಡೆ ರುಚಿ ನೋಡಲೇಬೇಕು ಎಂದು ಶಿಫಾರಸ್ಸು ಮಾಡುತ್ತಾರೆ ಮುಖ್ಯಮಂತ್ರಿ ಚಂದ್ರು. ನಗರದ ಆಟೊ ಚಾಲಕರ ನೆಚ್ಚಿನ ‘ಚಿತ್ರಾನ್ನ ಪಾಂಯಿಟ್‌’ ಇದು. ನಟ ಉಪೇಂದ್ರ ಕೂಡ ಇಲ್ಲಿನ ಚಿತ್ರಾನ್ನ, ಪಲಾವ್ ಅಭಿಮಾನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT