ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂದಕಾಳೂರೆಂಬ ಮಹಾನದಿಯೂ, ಬಿಎಂಟಿಸಿ ಎಂಬ ಹರಿಗೋಲೂ...

ಲಹರಿ
Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

‘ನಮ್ಮ ಮೆಟ್ರೊ’ ಬಂದ ಮೇಲೂ ಬೆಂಗಳೂರಿನ ಪ್ರಮುಖ ಸಂಚಾರ ವ್ಯವಸ್ಥೆಯಾಗಿರುವ ಬಿಎಂಟಿಸಿ ಇಲ್ಲಿನ ಪ್ರಯಾಣಿಕರಿಗೆ ಮಾತ್ರವಲ್ಲ ಇಲ್ಲಿಗೆ ಬರುವ ಪ್ರವಾಸಿಗರನ್ನೂ ಹೊತ್ತು ತಿರುಗುತ್ತಾ ‘ಪರೋಪಕಾರ’ ಮಾಡುತ್ತಿದೆ. ಬೆಂಗಳೂರಿಗೆ ಬರುವ ಮಧ್ಯಮ ವರ್ಗದ ಪ್ರವಾಸಿಗರ ಮೊದಲ ಆಯ್ಕೆ ಬಿಎಂಟಿಸಿ.

ಬೆಂಗಳೂರಿನಲ್ಲಿ ಸಿಟಿ ಬಸ್‌ ಏರಿ ಪ್ರವಾಸ ಹೊರಡುವುದೆಂದರೆ ಅದು ಹರಿಗೋಲು ಹತ್ತಿ ಮಹಾನದಿ ದಾಟಿದಂತೆ. ಟ್ರಾಫಿಕ್‌ನಲ್ಲಿ ಕಾದು ಬಿಸಿಯಾಗಿ, ಸೇರಬೇಕಾದ ತಾಣಕ್ಕೆ ಸೇರುವ ಕಾತರವನ್ನು ತಾಳಿಕೊಂಡು, ತಮ್ಮ ನಿಲ್ದಾಣ ಬಂದಾಗ ಇಳಿಯುವಷ್ಟರಲ್ಲಿ ಪ್ರವಾಸಿಗ ಇಲ್ಲಿ ಹೈರಾಣು. ಆದರೂ ಬಿಎಂಟಿಸಿ ಸಂಚಾರದ ಅನುಭವ ಅವರ್ಣನೀಯ!

ಬೆಂಗಳೂರು ಎಂದೊಡನೆ ನೆನಪಾಗುವ ವಿಧಾನಸೌಧ, ಲಾಲ್‌ಬಾಗ್‌ನಿಂದ ಹಿಡಿದು ಇಸ್ಕಾನ್‌ವರೆಗೆ ಅನೇಕ ಪ್ರೇಕ್ಷಣೀಯ ಸ್ಥಳಗಳು ಈ ಮಾಯಾನಗರಿಯ ಸೆಳೆತವನ್ನು ಹೆಚ್ಚಿಸಿವೆ. ಒಂದು ಕಡೆ ಹತ್ತಿ ಇನ್ನೊಂದು ಕಡೆ ಇಳಿದು, ಮತ್ತೊಂದು ಕಡೆ ಹತ್ತಿ ಇನ್ನೆಲ್ಲೋ ಇಳಿದು, ನೋಡಬೇಕೆಂದಿರುವ ಸ್ಥಳಗಳನ್ನು ಸೇರಲು ಬಿಎಂಟಿಸಿಯೇ ಇಂದಿಗೂ ಬೆಸ್ಟ್‌.

ಮೆಜೆಸ್ಟಿಕ್‌ ಎಂಬ ಹೃದಯದಿಂದ ಹೊರಟು ಬೆಂಗಳೂರಿನ ನರನಾಡಿಗಳಲ್ಲಿ ಹರಿದಾಡುವ ಬಿಎಂಟಿಸಿ ಎಂಬ ನಗರ ಸಾರಿಗೆ ವ್ಯವಸ್ಥೆಯು ಪ್ರವಾಸಿಗರ ಪಾಲಿಗೆ ಕೈಗೆಟುಕುವ ತಿರುಗಾಟದ ಗೆಳೆಯ. ಮೊದಲ ಬಾರಿ ಬೆಂಗಳೂರಿಗೆ ಬಂದವರನ್ನು ಕೈಬೀಸಿ ಕರೆಯುವ ಮೆಜೆಸ್ಟಿಕ್‌ ಅವರನ್ನು ಅವರು ಹೋಗಬೇಕೆಂದ ಕಡೆಗೆ ಬಸ್‌ ಹತ್ತಿಸಿ ಕಳಿಸುತ್ತದೆ.

ಹೊಸದಾಗಿ ಬೆಂಗಳೂರಿಗೆ ಬಂದ ಪ್ರವಾಸಿಗರಿಗೆ ಬಸ್‌ನ ಕಿಟಕಿಯಾಚೆಗೆ ಕಾಣುವುದೆಲ್ಲವೂ ಬೆರಗಿನ ಲೋಕ. ಗಗನ ಚುಂಬಿಸಲು ಹೊರಟ ಕಟ್ಟಡಗಳನ್ನು ನೋಡಲು ಕೆಲ  ಪ್ರವಾಸಿಗರು ಬಸ್‌ನ ಕಿಟಕಿಯಾಚೆ ತಲೆ ತೂರಿಸಿ ಡ್ರೈವರ್‌ನಿಂದ ಬೈಯಿಸಿಕೊಳ್ಳುವುದೂ ಇದ್ದೇ ಇದೆ. ಆದರೆ, ಕುತೂಹಲದ ಮುಂದೆ ಡ್ರೈವರ್‌, ಕಂಡಕ್ಟರ್‌ಗಳ ಬೈಗುಳಕ್ಕೆ ಹೆಚ್ಚಿನ ಬೆಲೆ ಸಿಗದು.

ಬಸ್‌ನ ಬೋರ್ಡ್‌ ನೋಡಿಯೂ, ಕಂಡಕ್ಟರ್‌ ಕೂಗುತ್ತಿರುವುದು ಕೇಳಿಯೂ ತಾವು ಹೋಗಬೇಕಿರುವ ಸ್ಥಳಕ್ಕೆ ಆ ಬಸ್‌ ಹೋಗುತ್ತದೆಯೇ ಎಂದು ಡ್ರೈವರ್‌ ಬಳಿ ಎರಡೆರಡು ಬಾರಿ ಕೇಳಿ ಖಾತರಿಪಡಿಸಿಕೊಳ್ಳುವುದು ಪ್ರವಾಸಿಗರ ರೂಢಿ. ಇದು ಕೇವಲ ಇಲ್ಲಿಗೆ ಬಂದವರ ಅಭ್ಯಾಸವಲ್ಲ, ಇಲ್ಲಿನ ಹಲವರೂ ಬೇರೆ ಊರಿಗೆ ಹೋದರೆ ಮಾಡುವುದು ಇದನ್ನೇ ತಾನೆ.

‘ಸಾರ್‌, ಲಾಲ್‌ಬಾಗ್‌ ಹೋಗುತ್ತಾ’ ಎಂದು ಕೇಳುವ ಪ್ರವಾಸಿಗರಿಗೆ, ‘ಲಾಲ್‌ಬಾಗ್‌ ಎಲ್ಲಿಗೂ ಹೋಗಲ್ಲ, ನಾವೇ ಅಲ್ಲಿಗೆ ಹೋಗ್ತೀವಿ ಹತ್ರೀ’ ಎಂದು ಕಿಚಾಯಿಸುವ ಡ್ರೈವರ್‌ಗಳು, ಹತ್ತೋ ಇಪ್ಪತ್ತೋ ಕೈಗಿಟ್ಟು, ‘ವಿಧಾನಸೌಧ ಕೊಡಿ’ ಎನ್ನುವವರಿಗೆ ‘ಇಷ್ಟು ದುಡ್ಡಿಗೆ ವಿಧಾನಸೌಧ ಹೆಂಗೆ ಕೊಡ್ಲಿ’ ಎಂದು ಚಟಾಕಿ ಹಾರಿಸುವ ಕಂಡಕ್ಟರ್‌ಗಳು ಬಿಎಂಟಿಸಿ ಪ್ರಯಾಣದಲ್ಲಿ ಮಾತ್ರ ಸಿಗಲು ಸಾಧ್ಯ.

ಪರವೂರಿನ ಪ್ರವಾಸಿಗರಿಗೆ ತಾವು ನೋಡಬೇಕೆಂದಿರುವ ಸ್ಥಳ ಸೇರಲು ಇನ್ನಿಲ್ಲದ ತವಕ. ಅದು ವಿಧಾನಸೌಧವಾಗಿದ್ದರೂ ಸರಿ, ಲಾಲ್‌ಬಾಗ್‌ ಆಗಿದ್ದರೂ ಸರಿ. ಬೇಗನೆ ಹೋಗಿ ಮುಟ್ಟಬೇಕೆಂಬ ಆತುರ. ಆದರೆ, ಈ ಮಹಾನಗರಿಯ ಸಂಚಾರ ದಟ್ಟಣೆ ಅವರನ್ನೂ ಬಾಧಿಸದೆ ಬಿಡದು. ಪರವೂರಿನಿಂದ ಬಂದು ಟ್ರಾಫಿಕ್‌ನಲ್ಲಿ ಸಿಲುಕಿ ನಿದ್ರೆಗೆ ಜಾರುವ ಬಹುಪಾಲು ಪ್ರವಾಸಿಗರು ತಾವು ಇಳಿಯಬೇಕಾದ ನಿಲ್ದಾಣಕ್ಕಿಂತ ಮುಂದೆ ಹೋಗಿ ಎಚ್ಚರಗೊಂಡು ಕಂಡಕ್ಟರ್‌ ಜತೆಗೆ ಜಗಳ ತೆಗೆಯುವುದೂ ಬಿಎಂಟಿಸಿಯಲ್ಲಿ ಸಾಮಾನ್ಯವೆ.

ಬಸ್‌ ಏರಿ ಸೀಟು ಹಿಡಿದು ಕುಳಿತು ಟಿಕೆಟ್‌ ಪಡೆದಾದ ಮೇಲೆ ಪ್ರತಿ ಪ್ರವಾಸಿಗರೂ ಕಂಡಕ್ಟರ್‌ಗೆ ಕೇಳುವ ಪ್ರಶ್ನೆ, ‘ಸ್ಟಾಪ್‌ ಬಂದಾಗ ಹೇಳ್ತೀರಾ?’. ಅಂದರೆ ಪ್ರವಾಸಿಗರಿಗೆ ಈ ಕಂಡಕ್ಟರ್‌ಗಳ ಮೇಲೆ ಯಾವಾಗಲೂ ಅನುಮಾನವೇ. ಸ್ಟಾಪ್‌ ಬಂದರೂ ಹೇಳದೆ ಮರೆತು ಮುಂದೆಲ್ಲೋ ಇಳಿಸಿ, ‘ಹಿಂಗೇ ಹಿಂದಕ್ಕೆ ಫರ್ಲಾಂಗು ಹೋಗಿ ಸಿಗುತ್ತೆ’ ಎನ್ನುವ ಕಂಡಕ್ಟರ್‌ ಮಹಾಶಯರೂ ಇಲ್ಲಿ ಕಡಿಮೆಯೇನಿಲ್ಲ.

‘ಸ್ಟಾಪ್‌ ಬಂತಾ?’,  ‘ಸರ್‌ ಬಂತಾ?’ , ‘ನೆಕ್ಸ್ಟ್ ಸ್ಟಾಪಾ?’ ಎಂದು ಕೇಳುತ್ತಾ ಕಂಡಕ್ಟರ್‌ಗೆ ಕಿರಿಕಿರಿ ಮಾಡುವುದು ಬಹುತೇಕ ಪ್ರವಾಸಿಗರ ಅಭ್ಯಾಸ. ಈ ಕಿರಿಕಿರಿ ಕೇವಲ ಕಂಡಕ್ಟರ್‌ಗೆ ಮಾತ್ರವಲ್ಲ. ಅಕ್ಕಪಕ್ಕದಲ್ಲಿ ಕುಳಿತಿರುವವರಿಗೂ ತಪ್ಪಿದ್ದಲ್ಲ. ‘ಸ್ಟಾಪ್‌ ಬಂದಾಗ ಹೇಳ್ತೀನಿ ಕುಂತ್ಕೊಳ್ಳಿ ಸುಮ್ನೆ’ ಎಂದು ರೇಗಿದರೂ ಇವರಿಗೆ ಮತ್ತೆ ಮತ್ತೆ ಕೇಳುವುದರಲ್ಲಿ ಏನೋ ಸಂಭ್ರಮ.

ಮಕ್ಕಳು ಮರಿಗಳನ್ನು ಕಟ್ಟಿಕೊಂಡು ಬೆಂಗಳೂರು ನೋಡಲು ಬರುವವರ ಪಾಡಂತೂ ಹೇಳತೀರದು. ಸೀಟು ಸಿಗದ ಬಸ್‌ನಲ್ಲಿ ಮಕ್ಕಳನ್ನು ಎಳೆದುಕೊಂಡು ‘ಗುರಿ’ ತಲುಪುವುದು ಇಲ್ಲಿ ಮಹಾಯಾನ ಪೂರೈಸಿದಂತೆ. ಟಿಕೆಟ್‌ ಗೊಡವೆ ಬೇಡವೆಂದು ದಿನದ ಪಾಸ್‌ ತೆಗೆದುಕೊಂಡವರು, ‘ಮಕ್ಕಳಿಗೆ ಅರ್ಧ ರೇಟಿನ ಪಾಸ್‌ ಕೊಡಿ’ ಎಂದು ಕೇಳುವುದೂ ಇದೆ!

ಕನ್ನಡ ಮಾತನಾಡುವ ಪ್ರವಾಸಿಗರದ್ದು ಒಂದು ಬಗೆಯಾದರೆ ಬೇರೆ ರಾಜ್ಯಗಳ, ಬೇರೆ ದೇಶದ ಪ್ರವಾಸಿಗರ ಬಿಎಂಟಿಸಿ ಯಾನ ಇನ್ನೊಂದು ಬಗೆಯದ್ದು. ಹಿಂದಿಯಲ್ಲೋ ಇಂಗ್ಲಿಷ್‌ನಲ್ಲೋ ಹೇಳಿದ್ದು ಪೂರ್ತಿಯಾಗಿ ಅರ್ಥವಾಗದಿದ್ದರೂ ಕೇಳಿದ ಕಡೆಗೆ ಇಳಿಸುವ ಜವಾಬ್ದಾರಿಯನ್ನಂತೂ ಕಂಡಕ್ಟರ್‌ಗಳು ನಿಭಾಯಿಸುತ್ತಾರೆ.

ಬೆಂಗಳೂರು ರೌಂಡ್ಸ್‌ ಹಾಗೂ ಎಸಿ ಬಸ್‌ಗಳಲ್ಲಿ ಮಾತ್ರವಲ್ಲದೆ ಬಿಎಂಟಿಸಿಯ ಸಾಮಾನ್ಯ ಬಸ್‌ಗಳಲ್ಲೂ ಓಡಾಡುವುದೆಂದರೆ ವಿದೇಶಿಗರಿಗೆ ಎಂಥದೋ ಖುಷಿ.ಅಕ್ಕಪಕ್ಕದವರನ್ನು ಮಾತಾಡಿಸುತ್ತಾ, ಅರ್ಥವಾದಷ್ಟು ಮಾಹಿತಿ ಪಡೆದುಕೊಳ್ಳುತ್ತಾ ತಾವು ಇಳಿಯಬೇಕಿರುವ ನಿಲ್ದಾಣದಲ್ಲಿ ಇಳಿದು ಕಂಡಕ್ಟರ್‌ ಕಡೆಗೂ, ಮಾತನಾಡಿದ ಪಕ್ಕದಲ್ಲಿ ಕುಳಿತಿದ್ದವರ ಕಡೆಗೂ ಕೈ ಬೀಸಿ, ನಗೆ ಬೀರುವುದು ಬಹುತೇಕ ವಿದೇಶಿಗರ ಅಭ್ಯಾಸ.

‘ನಮ್ಮ ಮೆಟ್ರೊ’ ಸಂಚಾರ ಆರಂಭವಾದ ಮೇಲೆ ಬಿಎಂಟಿಸಿಯಲ್ಲಿ ನಗರ ಸುತ್ತುವವರ ಸಂಖ್ಯೆ ತಕ್ಕಮಟ್ಟಿಗೆ ಕಡಿಮೆಯಾಗಿದೆ. ಪೂರ್ವ–ಪಶ್ಚಿಮ ಕಾರಿಡಾರ್‌ನಲ್ಲಿ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ಹಾಗೂ ಉತ್ತರ– ದಕ್ಷಿಣ ಕಾರಿಡಾರ್‌ನಲ್ಲಿ ನಾಗಸಂದ್ರದಿಂದ ಮಂತ್ರಿ ಸ್ಕ್ವೇರ್‌ ನಡುವಿನ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಲು ಈಗ ಬಹುತೇಕರು ಮೆಟ್ರೊ ಏರುವುದು ಹೆಚ್ಚಾಗಿದೆ. ಆದರೆ, ಮೆಟ್ರೊವರೆಗೆ ತಲುಪಲು ಹಾಗೂ ಮೆಟ್ರೊ ಇಳಿದ ಮೇಲೆ ಮುಂದೆ ಹೋಗಲು ಹಲವರು ಅವಲಂಬಿಸುವುದು ಬಿಎಂಟಿಸಿಯನ್ನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT