ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸವೂ ಆಹಾರದ ನಂಟೂ...

Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಇಪ್ಪತ್ತು ವರ್ಷಗಳ ಕಾಲ ಪಾಕಶಾಲೆಯಲ್ಲಿ ಪಳಗಿರುವ ಚೀನಾ ಮೂಲದ ಆಂಟನಿ ಎನ್‌ ಯಾನ್‌ಹಾಂಗ್, ಬಾಣಸಿಗ ಕುಟುಂಬದ ಮೂರನೇ ತಲೆಮಾರು.  ಕೊಚ್ಚಿ ಮ್ಯಾರಿಯಟ್‌ನಲ್ಲಿದ್ದ ಆಂಟನಿ,  ಇದೀಗ ಬೆಂಗಳೂರಿನ ಜೆ.ಡಬ್ಲ್ಯು ಮ್ಯಾರಿಯಟ್ ಹೋಟೆಲ್‌ನಲ್ಲಿ ಮುಖ್ಯ ಬಾಣಸಿಗ.

‘ಏಷ್ಯನ್ ಖಾದ್ಯ’ದಲ್ಲಿ ಪರಿಣತಿ ಪಡೆದು, ‘ಕಾಂಟಿನೆಂಟ್ ಶೆಫ್ ಆಫ್ ದಿ ಇಯರ್–ಏಷ್ಯಾ ಪೆಸಿಫಿಕ್’ ಎಂಬ ಪ್ರಶಸ್ತಿಯನ್ನೂ ಇತ್ತೀಚೆಗೆ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲೇ ಬೆಳೆದ ಆಂಟನಿಗೆ ಇಲ್ಲಿನ ಪ್ರವಾಸಿಗಳ ಹಾಗೂ ಇಲ್ಲಿಗೆ ಬರುವ ವಿದೇಶೀಯರ ರುಚಿ–ಅಭಿರುಚಿಗಳ ಅರಿವು ಇದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿನ ಹೋಟೆಲ್‌ಗಳ, ಬಾಣಸಿಗರ ಪಾತ್ರದ ಕುರಿತು ಅವರು ಮಾತನಾಡಿದ್ದಾರೆ.

* ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಹೋಟೆಲ್‌ಗಳ, ಬಾಣಸಿಗರ ಪಾತ್ರ ಎಷ್ಟಿದೆ?
ನಾವು ಬೇರೆ ದೇಶಕ್ಕೆ ಮೊದಲ ಬಾರಿ ಹೋಗುತ್ತಿದ್ದೇವೆ ಎಂದಿಟ್ಟುಕೊಳ್ಳಿ. ಅಲ್ಲಿ ವಿಮಾನ ಇಳಿಯುತ್ತಿದ್ದಂತೆಯೇ ಎದುರಾಗುವ ಮೊದಲ ಪ್ರಶ್ನೆ, ಆಹಾರದ್ದೇ. ಅಲ್ಲಿ ನಮ್ಮ ದೇಶದ ಆಹಾರವಿರುವ ಹೋಟೆಲ್‌ಬಗ್ಗೆ ಹುಡುಕದೇ ಇರಲು ಸಾಧ್ಯವಿಲ್ಲ. ಇದೇ ಹೋಟೆಲ್‌ಗೂ ಪ್ರವಾಸೋದ್ಯಮಕ್ಕೂ ಇರುವ ನಂಟು.

ನಾವು ಹೊರ ರಾಜ್ಯಕ್ಕೆ ಅಥವಾ ವಿದೇಶಕ್ಕೆ ಹೋದಾಗ, ನಮ್ಮ ಆಹಾರ ಪದ್ಧತಿಗೆ ಸೂಕ್ತವಾದ ಆಹಾರ ದೊರಕುವುದು ತುಂಬಾ ಮುಖ್ಯ. ಉದಾಹರಣೆಗೆ, ಸಸ್ಯಾಹಾರಿ ಭಾರತೀಯರಲ್ಲಿ ಕೆಲವರು, ಆಗ್ನೇಯ ದೇಶಗಳಿಗೆ ಹೋದಾಗ ತಮ್ಮೊಟ್ಟಿಗೆ ಸಿದ್ಧ ಆಹಾರಗಳನ್ನೂ ತೆಗೆದುಕೊಂಡು ಹೋಗುತ್ತಾರೆ.

ಇದರರ್ಥ, ಅವರಿಗೆ ತಿನ್ನಲು ಅಲ್ಲಿ ಆಯ್ಕೆಗಳಿಲ್ಲ ಎನ್ನುವುದು. ಅದು ಒಂದು ರೀತಿ ಅನನುಕೂಲವಾದಂತೆ. ಪ್ರವಾಸೋದ್ಯಮಕ್ಕೆ ಈ ಅಂಶ ಹಿನ್ನಡೆಯೂ ಆಗಬಹುದು. ಈ ವಿಚಾರದಲ್ಲಿ ಹೋಟೆಲ್‌ಗಳು, ಬಾಣಸಿಗರು ಪ್ರಮುಖವಾಗುತ್ತಾರೆ.

* ‘ಶೆಫ್ ಇಮೇಜ್’  ಅಥವಾ ‘ಭೋಜನ ಅನುಭವ’ (ಡೈನಿಂಗ್ ಎಕ್ಸ್‌ಪೀರಿಯನ್ಸ್‌) ಗ್ರಾಹಕರನ್ನು ಸೆಳೆಯುವಲ್ಲಿ ಎಷ್ಟು ಮುಖ್ಯವಾಗುತ್ತದೆ?
ಬಾಣಸಿಗನಾದವನಿಗೆ ಆಹಾರ ತಯಾರಿಕೆಯೊಂದಿಗೆ, ಹೇಗೆ ಬಡಿಸಬೇಕು, ಹೇಗೆ ಸಂವಹನ ನಡೆಸಬೇಕು, ಎಷ್ಟು ಆತಿಥ್ಯ ನೀಡಬೇಕು ಎಂಬುದರ ಅರಿವೂ ಇರಬೇಕಾಗುತ್ತದೆ.

ಇದು ಹೋಟೆಲ್ ಅಥವಾ ಬ್ರ್ಯಾಂಡ್‌ನ ಅತಿ ಪ್ರಮುಖ ಅಂಶ. ಇದೇ ಅಂಶಗಳು ಗ್ರಾಹಕರನ್ನು ಮತ್ತೆ ಮತ್ತೆ ಬರುವಂತೆ ಪ್ರೋತ್ಸಾಹಿಸುವುದು. ನಮಗೆ ನಮ್ಮ ಗ್ರಾಹಕರ ಕುರಿತು ಜವಾಬ್ದಾರಿ ಇರುತ್ತದೆ. ನಮ್ಮ ಬ್ರ್ಯಾಂಡ್‌ಗೆ ಧಕ್ಕೆ ಬರದಂತೆ ಕೆಲಸ ಮಾಡುತ್ತೇವೆ.

ನಮ್ಮ ಹೋಟೆಲ್‌ಗೆ ಬಂದರೆ, ಅವರು ಆರ್ಡರ್ ಮಾಡಿದ್ದನ್ನು ಪೂರೈಸುವುದು, ಜೊತೆಗೆ ಅವು ರುಚಿಕರ, ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುವುದೇ ನಮ್ಮ ಆದ್ಯತೆ. ಇಷ್ಟು ಬದ್ಧತೆ ಒಬ್ಬ ಬಾಣಸಿಗನಿಗಿದ್ದರೆ, ಗ್ರಾಹಕರನ್ನು ಆಕರ್ಷಿಸುವಲ್ಲಿ ಸಂದೇಹವಿಲ್ಲ. ಇವೇ ಪರೋಕ್ಷವಾಗಿ ಪ್ರವಾಸೋದ್ಯಮಕ್ಕೆ ಪ್ರೇರಕ ಅಂಶಗಳಾಗಬಹುದು.

* ಭಿನ್ನ ನೆಲೆಯ ಸಂಸ್ಕೃತಿ, ಅಭಿರುಚಿ ಹೊಂದಿರುವ ಜನರು ಇಲ್ಲಿಗೆ ಭೇಟಿ ಕೊಡುತ್ತಿರುತ್ತಾರೆ. ಅವರ ನಿರೀಕ್ಷೆಗಳನ್ನು ಪೂರೈಸುವಲ್ಲಿನ ನಿಮ್ಮ ಪ್ರಯೋಗಗಳೇನು?
ಐಷಾರಾಮಿ ಹೋಟೆಲ್‌ಗಳು ವಿದೇಶಿ ಪ್ರವಾಸಿಗರ ಆದ್ಯತೆ. ಆದ್ದರಿಂದಲೇ ಆಯಾ ದೇಶದ ಆಹಾರ ವೈವಿಧ್ಯಕ್ಕೆಂದು ಕೆಲವು ದೇಶಗಳ ಆಹಾರ ಪದ್ಧತಿಯಲ್ಲಿ ಪರಿಣತಿ ಪಡೆದವರನ್ನು ನೇಮಿಸಿಕೊಳ್ಳಲಾಗುತ್ತದೆ.

ತಮ್ಮ ಊರಿನ ಆಹಾರವನ್ನೇ ಬಯಸುವ ಮಂದಿಗಾಗಿ ಸಾಕಷ್ಟು ಆಯ್ಕೆಗಳನ್ನು ನೀಡುವುದು, ಅವರಿಗೆ ಸ್ಥಳೀಯ ಆಹಾರ ವೈವಿಧ್ಯದ ಪ್ರಕಾರವನ್ನು ಪರಿಚಯಿಸುವುದು, ಖಾದ್ಯಗಳಲ್ಲಿ ಬೇರೆ ಬೇರೆ ರೀತಿಯ ಪ್ರಯೋಗಗಳನ್ನು ನಡೆಸುವುದು ನಿರಂತರವಾಗಿರುತ್ತವೆ. ಏಕೆಂದರೆ ಕಾಲದೊಂದಿಗೆ ಮುನ್ನಡೆಯುವುದು ಎಲ್ಲಾ ಕ್ಷೇತ್ರದಲ್ಲೂ ಬಹುಮುಖ್ಯವಾಗುತ್ತದೆ. ಗ್ರಾಹಕರು ಕೇಳಿದ್ದನ್ನು ‘ಇಲ್ಲ’ ಎನ್ನಬಾರದು ಎನ್ನುವುದೇ ನಮ್ಮ  ಉದ್ದೇಶ.

* ಬೆಂಗಳೂರಿನ ಆಹಾರ ಸಂಸ್ಕೃತಿ ಹೇಗಿದೆ? ಹೊರಗಿನವರಿಗೆ ಇಲ್ಲಿನ ಆಯ್ಕೆಗಳೇನು?
ಬೆಂಗಳೂರು ಆಹಾರದ ವಿಷಯದಲ್ಲಿ ಸದಾ ಮುಂದಿದೆ. ಇಲ್ಲಿನ ಹೋಟೆಲ್‌ಗಳಲ್ಲಿ ಆಯ್ಕೆಗಳು ನೂರಾರು. ಪಾಶ್ಚಾತ್ಯ ಆಹಾರ, ಏಷ್ಯನ್ ಫುಡ್, ಗ್ರೇಟ್ ಇಟಾಲಿಯನ್ ರೆಸ್ಟೊರೆಂಟ್‌ಗಳು ಹೀಗೆ ಹಲವು ದೇಶಗಳ ಆಹಾರ ವೈವಿಧ್ಯ ಇಲ್ಲಿರುವುದು ಇಲ್ಲಿಗೆ ಭೇಟಿ ಕೊಟ್ಟವರನ್ನು ಮತ್ತೆ  ಬರಲು ಪ್ರೇರೇಪಿಸುವ ಅಂಶಗಳು.

ಜೊತೆಗೆ ಹೊಸ ಪರಿಕಲ್ಪನೆಗಳನ್ನು ಪರಿಚಯಿಸುವಲ್ಲಿ ಬೆಂಗಳೂರು ಸದಾ ಮುಂದಿರುವುದು ಹೊಸತನ ಬಯಸುವ ಮಂದಿಗೆ ಆಕರ್ಷಕ ತಾಣ. ಬೆಂಗಳೂರು ಪ್ರವಾಸೋದ್ಯಮಕ್ಕೆ ಪೂರಕವಾಗಿದೆ.

* ಯಾವ ವರ್ಗದ ಜನರು ಇಲ್ಲಿಗೆ ಹೆಚ್ಚು ಭೇಟಿ ಕೊಡುತ್ತಾರೆ?
ಬೆಂಗಳೂರಿಗೆ ಬರುವವರಲ್ಲಿ ಯುವಜನರ ಪಾಲು ಹೆಚ್ಚು. ಅದರಲ್ಲೂ ಬಿಸಿನೆಸ್‌ ವಿಚಾರವಾಗಿ ಇಲ್ಲಿಗೆ ಭೇಟಿ ಕೊಡುವವರು, ಹೊಸ ಹೊಸ ಉದ್ದಿಮೆಗಳ ಕಾರಣ ದೇಶ ವಿದೇಶಗಳಿಗೆ ಭೇಟಿ ಕೊಡುವ ಯುವ ಜನರು ಬೆಂಗಳೂರಿಗೆ ಬರುತ್ತಾರೆ.

ಕೊರಿಯನ್, ಚೀನಾ, ಆಗ್ನೇಯ ದೇಶಗಳು, ಅಮೆರಿಕ, ಇಟಲಿಯವರು ಇಲ್ಲಿ ಹೆಚ್ಚು ಬರುವವರು. ಇಲ್ಲಿಗೆ ಬರುವ ಸಾಹಸ ಯಾತ್ರಿಗಳು ಸ್ಥಳೀಯ ಆಹಾರ ಪದಾರ್ಥಗಳ ರುಚಿ ನೋಡಲು ಬಯಸುತ್ತಾರೆ. ಅಂಥವರಿಗೆ ವಿಶೇಷ ಆತಿಥ್ಯ ಊಟೋಪಚಾರ ನೀಡುವುದು ಪರೋಕ್ಷವಾಗಿ ಪ್ರವಾಸೋದ್ಯಮಕ್ಕೆ ಧನಾತ್ಮಕ ಅಂಶವಾಗುತ್ತದೆ.

* ಬಾಣಸಿಗ ವೃತ್ತಿಯನ್ನು ನೆಚ್ಚಿಕೊಂಡಿದ್ದೇಕೆ?
ನನಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ.  ಅದಕ್ಕೆ, ಪಶುವೈದ್ಯನಾಗಬೇಕೆಂದು ತುಂಬಾ ಆಸೆ ಇಟ್ಟಕೊಂಡಿದ್ದೆ. ಆದರೆ ಅದಕ್ಕಿಂತ ನನ್ನನ್ನು ಹೆಚ್ಚು ಸೆಳೆದದ್ದು ಬಾಣಸಿಗ ವೃತ್ತಿ. ನಮ್ಮದು ಬಾಣಸಿಗ ಕುಟುಂಬ. ನಮ್ಮ ಹಿರಿಯರು ಹಲವು ಆಹಾರ ವೈವಿಧ್ಯಗಳನ್ನು ಪರಿಚಯಿಸುವಲ್ಲಿ ಹೆಸರು ಮಾಡಿದ್ದವರು. ನಾನೂ ಅದೇ ದಾರಿಯಲ್ಲಿ ನಡೆದು ಹೊಸ ಹೊಸ ಪ್ರಯೋಗಗಳನ್ನು ಮಾಡಿದೆ.

ಬೈಕ್‌ ಮೋಹಿ ಆಂಟನಿ
ಬೆಂಗಳೂರಿನಲ್ಲೇ ಓದಿ ಬೆಳೆದವರು ಆಂಟನಿ ಅವರು ಬೈಕ್ ಮೋಹಿಯೂ ಹೌದು. ‘ನನಗೆ ಬೈಕ್‌ ಓಡಿಸುವುದೆಂದರೆ ತುಂಬಾ ಇಷ್ಟ. ಶಾಲಾ ದಿನಗಳಿಂದಲೇ ಬೈಕ್‌ ಕ್ರೇಜ್ ಇತ್ತು. ನಾನು ಬೆಳೆದಿದ್ದು ಬೆಂಗಳೂರಿನಲ್ಲೇ. ರಸ್ತೆಗಳು ಖಾಲಿ ಖಾಲಿ ಇದ್ದ ದಿನಗಳ ಹಳೇ ಬೆಂಗಳೂರು ಅದು.

ಕಾಲೇಜಿಗಿಂತ ರಸ್ತೆಯಲ್ಲೇ ನಾವು  ಹೆಚ್ಚಾಗಿ ಇರುತ್ತಿದ್ದುದು. ಪ್ರತಿ ವಾರಾಂತ್ಯ ನಂದಿ ಬೆಟ್ಟ, ಮೇಕೆದಾಟು ಎಂದು ನಾನು ನನ್ನ ಸ್ನೇಹಿತರು ಹೊರಟುಬಿಡುತ್ತಿದ್ದೆವು. ಹಳ್ಳಿಗಳೆಂದರೆ ನನಗೆ ತುಂಬಾ ಇಷ್ಟ. ಈಗಲೂ ಸಮಯ ಸಿಕ್ಕಿದರೆ ಬೈಕ್‌ ತೆಗೆದುಕೊಂಡು ಊರು ಸುತ್ತಲು ಹೊರಟುಬಿಡುತ್ತೇನೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT