ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದಿನವೂ ಹೊಸತು ಕಲಿತು...

Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನಾವು ಯಾವುದೇ ಊರಿಗೆ ಭೇಟಿ ನೀಡಿದಾಗ ಅಲ್ಲಿನ ಸ್ಥಳಗಳ ಕುರಿತು ತಿಳಿದುಕೊಳ್ಳಲು ಪ್ರವಾಸಿ ಮಾರ್ಗದರ್ಶಿಗಳ ಸಹಾಯ ಪಡೆದಿರುತ್ತೇವೆ. ಆಯಾ ಪ್ರದೇಶಗಳ ಕುರಿತಾಗಿ ಅವರು ಕೊಡುವ ಮಾಹಿತಿ ನಮ್ಮ ತಿಳಿವಳಿಕೆಯನ್ನು ವಿಸ್ತರಿಸುತ್ತದೆ. ಪ್ರದೇಶಗಳು ಮತ್ತು ವ್ಯಕ್ತಿಗಳ ನಡುವೆ ಕೊಂಡಿಯಾಗುವ ಕೆಲಸ ಪ್ರವಾಸಿ ಮಾರ್ಗದರ್ಶಿಗಳದ್ದು.

ಈ ಕಾರ್ಯದಲ್ಲಿ ಕೆ.ಧನಪಾಲ ಅವರಿಗೆ 10 ವರ್ಷದ ಅನುಭವ. ಬಿಎಂಟಿಸಿಯಲ್ಲಿ ಚಾಲಕ ಹಾಗೂ ಪ್ರವಾಸಿ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಿರುವ ಅವರಿಗೆ ಚಾಲಕನಾಗಿ 20 ವರ್ಷದ ಅನುಭವ.

ಧನಪಾಲ ತಮ್ಮ ವೃತ್ತಿ ಬದುಕನ್ನು ಕೇವಲ ‘ಹಣ ಗಳಿಸುವ’ ಕೆಲಸವಾಗಿ ನೋಡುವುದಿಲ್ಲ. ಬೆಂಗಳೂರು ನಗರದ ಬಗ್ಗೆ ಪ್ರವಾಸಿಗರಿಗೆ ಇರಬಹುದಾದ ಕಲ್ಪನೆಗಳನ್ನು ವಿಸ್ತರಿಸಿ ಅದಕ್ಕೊಂದು ರೂಪ ಕೊಡುವ ಜವಾಬ್ದಾರಿ ಅವರ ಹೆಗಲ ಮೇಲಿದೆ. ‘ಇಂಥ ಅದೃಷ್ಟ ಕೆಲವರಿಗೆ ಮಾತ್ರ ಸಿಗುತ್ತದೆ’ ಎಂಬುದು ಅವರ ಅನಿಸಿಕೆ.

ಪ್ರತಿದಿನವೂ ಬೆಂಗಳೂರಿನ ಇತಿಹಾಸ ಮತ್ತು ಪ್ರಸ್ತುತತೆಯನ್ನು ಸ್ಥಳಗಳ ಮೂಲಕ ಪರಿಚಯಿಸುವ ಇವರು ತಮ್ಮ ಅನುಭವ ಹಂಚಿಕೊಳ್ಳುತ್ತಾ ನೆನಪುಗಳನ್ನು ಮೆಲುಕು ಹಾಕುವುದು ಹೀಗೆ...

‘ಬೆಂಗಳೂರನ್ನು ಪರಿಚಯಿಸಲು ಬಿಎಂಟಿಸಿ ‘ಬೆಂಗಳೂರು ದರ್ಶಿನಿ’ ಶುರುಮಾಡಿದಾಗ ಅದಕ್ಕೆ ಮೊದಲಿಗೆ ಬಳಕೆಯಾಗಿದ್ದು ‘ಕಾವೇರಿ’ ಎಂಬ ಡಬಲ್ ಡೆಕ್ಕರ್ ಬಸ್. ನಂತರ ಬ್ರೆಜಿಲ್ ದೇಶದಲ್ಲಿದ್ದಂತೆ ‘ಕ್ಯೂರಿಟುಬ’ ಎಂಬ ಅತ್ಯಾಧುನಿಕ ಸೌಲಭ್ಯಗಳಿರುವ ಬಸ್ ನಿಯೋಜಿಸಲಾಯಿತು. ಆಗಲೇ ಅದಕ್ಕೆ ಚಾಲಕನಾಗಿ ಕೆಲಸ ಶುರು ಮಾಡಿದೆ.

ಪ್ರವಾಸಿಗರ ಆಸಕ್ತಿ ಮತ್ತು ಬೆಂಗಳೂರಿನ ಬಗ್ಗೆ ತಿಳಿದುಕೊಳ್ಳುವ ಅವರ ಹಂಬಲ ನನ್ನಲ್ಲಿ ಆಸಕ್ತಿಯನ್ನೂ ಹೆಚ್ಚಿಸಿತು. ನನ್ನ ಸ್ವ-ಆಸಕ್ತಿಯಿಂದ ಬೆಂಗಳೂರಿನ ಅನೇಕ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಶುರು ಮಾಡಿದೆ. ಅನೇಕ ಗೆಳೆಯರ ಸಲಹೆ ಸಹಕಾರವನ್ನು ನಾನಿಲ್ಲಿ ನೆನೆಯಬೇಕು. ಅದರಲ್ಲೂ ‘ಬೆಂಗಳೂರಿನ ‘ಹೆರಿಟೆಜ್ ಮ್ಯಾನ್’ ಎಂದೇ ಖ್ಯಾತರಾಗಿರುವ ಸುರೇಶ ಮೂನ ಅವರೊಂದಿಗಿನ ಒಡನಾಟ ನಗರದ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ಸಹಾಯ ಮಾಡಿತು.

ಗೆಳೆಯ ವೇಮಗಲ್ ಸೋಮಶೇಖರ ಅವರೊಂದಿಗೆ ಬೆಂಗಳೂರು ನಗರದ ಪ್ರಮುಖ ಸ್ಥಳಗಳ ಬಗ್ಗೆ ಮಾಹಿತಿ ನೀಡುವ ಚಿಕ್ಕ ಪುಸ್ತಕವನ್ನು ಹೊರತಂದಿದ್ದೇನೆ. ‘ಬೆಂಗಳೂರು ದರ್ಶಿನಿ’ ಬಸ್ಸಿಗೆ ಬರುವ ಪ್ರವಾಸಿಗರಿಗೆ ಕಡಿಮೆ ಬೆಲೆಗೆ ಈ ‘ಮಾಹಿತಿ ಪುಸ್ತಕ’ವನ್ನು ಮಾರುವುದರೊಂದಿಗೆ ಪ್ರವಾಸಿಗರ ಕೂತೂಹಲದ ಹಸಿವನ್ನು ನೀಗಿಸುತ್ತೇನೆ.

ಪ್ರತಿದಿನವೂ ಹೊಸ ಪ್ರವಾಸಿಗರೊಂದಿಗೆ ಭಿನ್ನ ಅನುಭವ ಪಡೆಯುತ್ತೇನೆ. ಎಷ್ಟೋ ವರ್ಷಗಳ ನಂತರ ಕೂಡ ಪ್ರವಾಸಿಗರು ಅಚಾನಕ್ಕಾಗಿ ಸಿಕ್ಕು ಮಾತನಾಡಿಸಿ ನಾನು ನೀಡಿದ ಮಾರ್ಗದರ್ಶನವನ್ನು ನೆನೆಯುತ್ತಾರೆ. ಆಗ ನನಗೆ ಹೇಳಿಕೊಳ್ಳಲು ಆಗದಷ್ಟು ಸಂತೋಷವಾಗುತ್ತೆ. ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಈ ಉದ್ಯಮ ಇನ್ನೂ ದೊಡ್ಡಮಟ್ಟಕ್ಕೆ ಬೆಳೆಯಬೇಕಿದೆ.

ಬೆಂಗಳೂರಿನಲ್ಲಿ ನಾವು ನೋಡಿರದ, ಹೆಸರೇ ಕೇಳಿರದ ಹಲವು ಸಾಕಷ್ಟು ಪ್ರದೇಶಗಳಿವೆ. ಅವುಗಳನ್ನು ಪರಿಚಯಿಸುವ ಕೆಲಸ ಶುರು ಆಗಬೇಕು. ಪ್ರವಾಸೋದ್ಯಮ ದಿನ ಆಚರಿಸುವುದರೊಂದಿಗೆ ಈ ನಗರವನ್ನು ಪ್ರವಾಸಿಗರ ‘ನೆಚ್ಚಿನ ತಾಣ’ವಾಗಿ ಮಾಡುವ ನೂತನ ಕಾರ್ಯಕ್ರಮಗಳನ್ನು ಪ್ರವಾಸೋದ್ಯಮ ಇಲಾಖೆ ಶುರು ಮಾಡಬೇಕು.

ಮಾಹಿತಿ ತಂತ್ರಜ್ಞಾನದ ಸಹಾಯದಿಂದ ನಗರದ ಪ್ರವಾಸಿ ಸ್ಥಗಳ ಬಗ್ಗೆ ಹೆಚ್ಚು ಪ್ರಚಾರ ನೀಡಬೇಕು. ಬೇರೆ ದೇಶಗಳಲ್ಲಿ ಬೆಳೆದಿರುವ ಮಾದರಿಯಲ್ಲಿ ನಮ್ಮ ನಗರದಲ್ಲಿಯೂ ಪ್ರವಾಸೋದ್ಯಮ ಬೃಹತ್ತಾಗಿ ಬೆಳೆಯಬೇಕು. ಇದರಿಂದ ಸ್ಥಳೀಯರ ಆರ್ಥಿಕತೆ ಸುಧಾರಿಸುತ್ತದೆ.’ 

ಪ್ರವಾಸಿ ಗೈಡ್‌ ಅಂದ್ರೆ ಸಾಂಸ್ಕೃತಿಕ ರಾಯಭಾರಿಗಳು
ರಾಜ್ಯದ ಹಲವು ಪ್ರದೇಶಗಳನ್ನು ಪ್ರವಾಸಿಗರಿಗೆ ಪರಿಚಯಿಸಿರುವ, ಸುಮಾರು 3 ದಶಕಗಳಿಂದ ಕೆಎಸ್‌ಟಿಡಿಸಿ (ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ) ಸಂಸ್ಥೆಯಲ್ಲಿ ಪ್ರವಾಸಿ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ ನಾಗರಾಜ ಮೂರ್ತಿ.

ಬೆಂಗಳೂರು ನಗರ ಸೇರಿದಂತೆ ಕರ್ನಾಟಕದ ಹತ್ತು-ಹಲವು ಪ್ರದೇಶಗಳಿಗೆ ಮಾರ್ಗದರ್ಶಿಯಾಗಿ ಹೋಗಿದ್ದಾರೆ. ದೀರ್ಘ ಕಾಲದ ಅನುಭವವಿರುವ ನಾಗರಾಜಮೂರ್ತಿಯವರು ಪ್ರವಾಸಿ ಮಾರ್ಗದರ್ಶಿ ಎಂದರೆ ಒಂದು ರಾಜ್ಯದ ಸಾಂಸ್ಕೃತಿಕ ರಾಯಭಾರಿ ಎಂದು ಅಭಿಪ್ರಾಯಪಡುತ್ತಾರೆ.

‘ಇಂತಹ ದೊಡ್ಡ ಜವಾಬ್ದಾರಿಯ ಭಾರಕ್ಕೆ ನಲುಗದೆ ದಿನವೂ ಖುಷಿಯಿಂದ ಕೆಲಸ ಮಾಡುತ್ತೇನೆ’ ಎನ್ನುವ ಅವರು ಪ್ರವಾಸಿಗರ ಕಣ್ಣುಗಳಲ್ಲಿನ ಕೂತೂಹಲ ಕೆಲಸದೆಡೆಗಿನ ಆಸಕ್ತಿ ಇಮ್ಮಡಿಸುವ ಹಾಗೆ ಮಾಡುತ್ತದೆ ಎನ್ನುತ್ತಾರೆ.

ಅವರ ನೆನಪಿನ ಮೆರವಣಿಗೆಯಲ್ಲಿ ಮೇಲೆದ್ದು ಬಂದ ಅನುಭವಗಳಿವು...
ಮಾಹಿತಿ ಸಂಗ್ರಹಿಸುವ ವಿಷಯದಲ್ಲಿ 3 ದಶಕಗಳ ಹಿಂದೆ ಇದ್ದ ಪರಿಸ್ಥಿತಿ ಈಗಿಲ್ಲ. ಹಿಂದೆಲ್ಲ ಕಷ್ಟಪಟ್ಟು ಮಾಹಿತಿ ಸಂಗ್ರಹಿಸಿ, ಆಯಾ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳಿಯರೊಂದಿಗೆ ಮಾತನಾಡಿ ನೋಟ್ಸ್ ಮಾಡಿಕೊಳ್ಳುತ್ತಿದ್ದೆ. ಈಗಲೂ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತೇನೆ. ಆದರೆ ಮುಂಚಿನಷ್ಟು ಶ್ರಮ ಹಾಕಬೇಕಿಲ್ಲ. ಯಾಕೆಂದರೆ ತಂತ್ರಜ್ಞಾನ ಇಂದು ಬಹುದೊಡ್ಡ ವಿಶ್ವಕೋಶವಾಗಿದೆ.

ಪ್ರವಾಸಿ ಮಾರ್ಗದರ್ಶಕರು ಭಾಷೆಯ ಕಷ್ಟ ಅನುಭವಿಸಬೇಕಾದ್ದು ಅನಿವಾರ್ಯ. ಕೆಲ ಪ್ರವಾಸಿಗರು ಸ್ಥಳಗಳ ಕುರಿತು ಮುಂಚೆಯೇ ಆಳವಾಗಿ ಅಭ್ಯಸಿಸಿ ಬಂದಿರುತ್ತಾರೆ. ಹಾಗಾಗಿ ಅವರ ಭಾಷೆಯಲ್ಲಿಯೇ ಇನ್ನಷ್ಟು ಮಾಹಿತಿಗಳನ್ನು ಸ್ಪಷ್ಟವಾಗಿ ತಿಳಿಸುವುದು ಅವಶ್ಯಕ.

ಹಾಗಾಗಿ ಮಾರ್ಗದರ್ಶನ ನೀಡುವ ಸಮಯದಲ್ಲಿ ಅದು ಹಲವು ಭಾಷೆಗಳಿಗೆ ಅನುವಾದವಾಗಿ ಇಯರ್‌ಫೋನ್‌ಗಳ ಮೂಲಕ ಪ್ರವಾಸಿಗರು ಕೇಳುವಂತಾಗಬೇಕು. ಇದು ಪ್ರವಾಸೋದ್ಯಮದ ಗುಣಮಟ್ಟ ಹೆಚ್ಚಿಸುತ್ತದೆ. ನಮ್ಮ ಪ್ರವಾಸೋದ್ಯಮ ಇಲಾಖೆ ಇತ್ತ ಕಡೆ ಗಮನ ಹರಿಸುವುದು ಒಳ್ಳೆಯದು.

ವೃತ್ತಿ ಬದುಕಿನ ಶುರುವಿನಿಂದ ಇಲ್ಲಿಯವರೆಗೂ ಎಷ್ಟೋ ಪ್ರವಾಸಿಗರನ್ನು ನೋಡುವ, ಮಾತನಾಡುವ, ನಮ್ಮ ನೆಲದ ಸೊಗಡನ್ನು ಪರಿಚಯಿಸುವ ಭಾಗ್ಯ ನನ್ನದಾಗಿದೆ. ಇದು ನನಗೆ ಹೆಮ್ಮೆ.

ಪ್ರವಾಸಿಗರ ನಾಡಿ ಮಿಡಿತ ಅರಿತುಕೊಳ್ಳಬೇಕಾದ್ದು ಎಲ್ಲ ‘ಪ್ರವಾಸಿ ಮಾರ್ಗ ದರ್ಶಿಗಳ’ ಜವಾಬ್ದಾರಿ. ಮಾರ್ಗದರ್ಶಕನಾದವನು ಕೇವಲ ಮಾಹಿತಿ ನೀಡಿ ವಿವರಿಸುವುದಷ್ಟೇ ಅಲ್ಲದೆ ಪ್ರದೇಶದ ಬಗ್ಗೆ ಕಥನ ಸೃಷ್ಟಿಸಿ ಹೇಳುವ ಕಲೆ ಕರಗತ ಮಾಡಿಕೊಂಡರೆ ಮಾತ್ರ ನಿಜವಾದ ಅರ್ಥದಲ್ಲಿ  ನಮ್ಮ ಪ್ರದೇಶಗಳ ಸಾಂಸ್ಕೃತಿಕ ಮಹತ್ವವನ್ನು ಎತ್ತಿಹಿಡಿಯುವ ರಾಯಭಾರಿ ಆಗಬಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT