ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ಸೊಬಗು ಬಿಂಬಿಸಬೇಕು

Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ವಿಶ್ವ ಪ್ರವಾಸೋದ್ಯಮ ತಾಣಗಳ ಪಟ್ಟಿಯಲ್ಲಿ ಬೆಂಗಳೂರು ಈಗಾಗಲೇ ಸ್ಥಾನ ಪಡೆದಿದೆ. ಪ್ರವಾಸಿಗರಿಗೆ ನಗರದಲ್ಲಿ ಅಗತ್ಯ ಸೌಕರ್ಯ ಕಲ್ಪಿಸಲು ಇಲಾಖೆ ಹಿಂದಿನಿಂದಲೂ ಶ್ರಮಿಸುತ್ತಿದೆ. ತಾವು ಸಚಿವರಾದ ನಂತರ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೈಗೊಂಡಿರುವ ಕ್ರಮಗಳು ಮತ್ತು ಕಂಡಿರುವ ಹೊಸ ಕನಸುಗಳ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ ‘ಮೆಟ್ರೊ’ ಜೊತೆ ಹಂಚಿಕೊಂಡಿದ್ದಾರೆ

* ಬೆಂಗಳೂರಿನ ಪ್ರವಾಸೋದ್ಯಮ  ಕುರಿತು ನಿಮ್ಮ ಅಭಿಪ್ರಾಯವೇನು?
ಬೆಂಗಳೂರನ್ನು ಈವರೆಗೆ ಪ್ರವಾಸೋದ್ಯಮ ನಗರವನ್ನಾಗಿ ಪರಿಗಣಿಸಿಯೇ ಇಲ್ಲ. ಈ ನಗರವನ್ನು ಉದ್ಯಾನನಗರಿ, ಐಟಿ ರಾಜಧಾನಿ, ಪಬ್‌ ಸಿಟಿ ಎಂದಷ್ಟೇ ಗುರುತಿಸಲಾಗುತ್ತಿದೆ.  ಇಲ್ಲಿನ ಇತಿಹಾಸ, ಕಲೆ, ಆಹಾರ ಪದ್ಧತಿಯ  ಬಗ್ಗೆ  ಪ್ರಚಾರವೇ ಆಗಿಲ್ಲ.  ಬೆಂಗಳೂರಿಗೆ 480 ವರ್ಷಗಳ ಇತಿಹಾಸವಿದೆ. ಬೆಂಗಳೂರನ್ನು ವಿಶ್ವದ ‘ಕ್ಲಾಸ್‌ ಸಿಟಿ’ ಎಂದು ಬಿಂಬಿಸುವ ಅಗತ್ಯವಿದೆ.

* ಬೆಂಗಳೂರಿನ  ಪ್ರವಾಸೋದ್ಯಮ ಅಭಿವೃದ್ಧಿಗೆ ಜಾರಿ ಮಾಡಿರುವ ಯೋಜನೆಗಳ ಮಾಹಿತಿ ನೀಡಿ...
ಬೆಂಗಳೂರಿನಲ್ಲಿ ಸರ್ಕ್ಯೂಟ್‌ ಬೇಸ್ಡ್‌ ಪ್ರವಾಸೋದ್ಯಮ (ಅನೇಕ ಪ್ರವಾಸಿತಾಣಗಳ ಜೋಡಣೆ) ಅಭಿವೃದ್ಧಿಪಡಿಸಬೇಕು ಎಂಬ ಯೋಜನೆ ಹಾಕಿಕೊಂಡಿದ್ದೇವೆ. ಅದಕ್ಕೆಂದು ‘ಬೆಂಗಳೂರು ಪ್ರವಾಸೋದ್ಯಮ ಸಲಹಾ ಸಮಿತಿ’ ರಚಿಸಲಾಗಿದೆ.  ಇನ್ನೊಂದು ತಿಂಗಳಲ್ಲಿ ಸಮಿತಿ ವರದಿ ನೀಡಲಿದೆ.

* ಸರ್ಕ್ಯೂಟ್‌ ಬೇಸ್ಡ್‌ ಪ್ರವಾಸೋದ್ಯಮ ಎಂದರೇನು?
ಪ್ರವಾಸಿತಾಣಗಳ ಪಟ್ಟಿಯಲ್ಲಿ ಜನಪ್ರಿಯವಾಗಿರುವ ಸ್ಥಳಗಳ ಆಸುಪಾಸಿನಲ್ಲಿರುವ ಉಪಯುಕ್ತ ಪ್ರದೇಶಗಳನ್ನೂ ಅಭಿವೃದ್ಧಿಪಡಿಸುವುದು ಈ ಪರಿಕಲ್ಪನೆಯ ಮುಖ್ಯ ಅಂಶ.

ಉದಾ: ಕಬ್ಬನ್‌ ಪಾರ್ಕ್‌, ಲಾಲ್‌ಬಾಗ್‌ ಜೊತೆಗೆ ಅದರ ಸುತ್ತಮುತ್ತ ಇರುವ ಜಾಗಗಳ ಮಾಹಿತಿಯನ್ನೂ ಕೊಡಬೇಕು. ಕಬ್ಬನ್‌ ಪಾರ್ಕ್‌ನಲ್ಲಿ  ಸರ್ಕಾರಿ ಅಕ್ವೇರಿಯಂ ಇದೆ.ನೂರು ವರ್ಷ ತುಂಬಿದ ಗ್ರಂಥಾಲಯವಿದೆ. 150 ವರ್ಷ ಹಳೆಯದಾದ ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್‌ ಮ್ಯೂಸಿಯಂ ಇದೆ.ಅಲ್ಲಿಗೆ ಸ್ಥಳೀಯರೇ ಭೇಟಿ ನೀಡುತ್ತಿಲ್ಲ.ಇದೆಲ್ಲದರ ಮಾಹಿತಿ  ಜನರಿಗೆ ಸಿಗುವಂತಾಗಬೇಕು. ಗ್ರೀನ್‌ ಸರ್ಕ್ಯೂಟ್‌ ಅಂದ ತಕ್ಷಣ ನಗರದಲ್ಲಿರುವ ಕೆರೆಗಳ ಮಾಹಿತಿ ಸಿಗಬೇಕು. ಸ್ಯಾಂಕಿ, ಹಲಸೂರು ಮುಂತಾದ ಸುಂದರ ಕೆರೆಗಳು ಪ್ರೇಕ್ಷಣೀಯ ಸ್ಥಳವಾಗಬೇಕು.

* ಪಬ್‌ ಸರ್ಕ್ಯೂಟ್‌ ಬಗ್ಗೆಯೂ ಚರ್ಚೆಯಾಗುತ್ತಿತ್ತು.
ಬೆಂಗಳೂರು ಪಬ್‌ ಸರ್ಕ್ಯೂಟ್‌ ಕೂಡಾ ಆಗಬೇಕು. ನಮ್ಮದೇ  ಬ್ರ್ಯಾಂಡ್‌ನ ಬಿಯರ್‌ ‘ಮೆಟ್ರೊ ಬಿವರೇಜಸ್’ ಪ್ರಸಿದ್ಧವಾಗಿದೆ. ವಿಸ್ಕಿ ಉತ್ಪಾದನೆಯಲ್ಲಿಯೂ ದೇಶದಲ್ಲಿ ನಾವು ಮೂರನೇ ಸ್ಥಾನದಲ್ಲಿದ್ದೇವೆ. ನಮ್ಮದೇ ಆದ ಬೆಂಗಳೂರು ವೈನ್‌ ಇದೆ. ಇದನ್ನು ಪ್ರವಾಸಿಗರಿಗೆ ಪರಿಚಯಿಸಬೇಕು.

* ‘ಬ್ರ್ಯಾಂಡ್ ಬೆಂಗಳೂರು’ ಪ್ರವಾಸಿಗಳ ಲೋಕದಲ್ಲಿ ಜನಪ್ರಿಯಗೊಳ್ಳುವುದು ಹೇಗೆ?
ಪ್ರವಾಸಿಗರಿಗೆ ಒಂದು ದಿನದಲ್ಲಿ ನೋಡಬಹುದಾದ ಸ್ಥಳಗಳ ಪಟ್ಟಿ ಸುಲಭವಾಗಿ ಸಿಗಬೇಕು. ನಗರದಲ್ಲಿ ಎರಡು–ಮೂರು  ದಿನ ಕಳೆಯುವುದಾದರೆ ಅದಕ್ಕೂ ಪೂರಕ ಮಾಹಿತಿ ಸಿಗುವಂತಾಗಬೇಕು.

* ನಗರದ ಆಹಾರ ವೈಶಿಷ್ಟ್ಯ ಪರಿಚಯಿಸುವ ಯೋಜನೆ ಇದೆಯೇ?
ಫುಡ್‌ ಸರ್ಕ್ಯೂಟ್‌ ಕೂಡಾ ನಮ್ಮ ಪಟ್ಟಿಯಲ್ಲಿದೆ. ಬೆಂಗಳೂರಿನ ಸಾಂಪ್ರದಾಯಿಕ ಆಹಾರಗಳು ಸಿಗುವ ತಾಣಗಳ ಮಾಹಿತಿಯನ್ನು ಪ್ರವಾಸಿಗರಿಗೆ ಒದಗಿಸಬೇಕು.ಬೆಂಗಳೂರಿನಲ್ಲಿ ರುಚಿಕರವಾದ ದೊನ್ನೆ ಬಿರಿಯಾನಿ ಎಲ್ಲಿ ಸಿಗುತ್ತದೆ ಎಂಬ ಮಾಹಿತಿ ಇದ್ದರೆ ಪ್ರವಾಸಿಗರು ಎಲ್ಲಿಗೆ ಹೋಗುತ್ತಾರೆ. 

ಬೆಂಗಳೂರಿನ ಕೆಲವು ಕಡೆ ಹೋಟೆಲ್‌ಗಳಿಗೆ 50 ವರ್ಷ ದಾಟಿದೆ. ಉದಾಹರಣೆಗೆ, ಗಾಂಧಿಬಜಾರಿನ ವಿದ್ಯಾರ್ಥಿಭವನ ಈಗಲೂ ಬೆಂಗಳೂರಿನ ಸಾಂಪ್ರದಾಯಿಕ ರುಚಿಯನ್ನು ಉಳಿಸಿಕೊಂಡಿದೆ. ಇಂಥ ತಾಣಗಳ ಮಾಹಿತಿ ಪ್ರವಾಸಿಗರಿಗೆ ಸಿಗುವಂತೆ ಮಾಡಲಾಗುವುದು.

* ಪ್ರವಾಸಿ ತಾಣಗಳ ಮೂಲಸೌಕರ್ಯ ಅಭಿವೃದ್ಧಿಗೆ ಏನು ಕ್ರಮ ಕೈಗೊಂಡಿದ್ದೀರಿ?
ಬೆಂಗಳೂರಿನಲ್ಲಿ ಮೂಲಸೌಕರ್ಯ ಅಭಿವೃದ್ಧಿಯ (ರಸ್ತೆ, ನೀರು, ಶೌಚಾಲಯ  ಇತ್ಯಾದಿ) ಹೊಣೆ ಬಿಬಿಎಂಪಿಯ  ವ್ಯಾಪ್ತಿಗೆ ಬರುತ್ತದೆ. ಆದರೆ, ಈ ವರ್ಷದಿಂದ ಪ್ರವಾಸೋದ್ಯಮ ಇಲಾಖೆಯಿಂದಲೇ ಪ್ರವಾಸಿ ತಾಣಗಳ ಮೂಲ ಸೌಕರ್ಯ ಅಭಿವೃದ್ಧಿಪಡಿಸಲಾಗುತ್ತದೆ.  ಇದರಿಂದ ಪ್ರವಾಸಿಗರಿಗೆ ಅನುಕೂಲವಾಗಲಿದೆ.

* ಗ್ರಾಮೀಣ ಭಾಗದಿಂದ ಬೆಂಗಳೂರಿಗೆ ಬರುವ ಪ್ರವಾಸಿಗರ ನೆಚ್ಚಿನ ತಾಣಗಳ ಸಾಲಿಗೆ ಮಾಲ್‌ಗಳೂ ಸೇರಿವೆಯಲ್ಲಾ?
ಹೌದು, ಬೆಂಗಳೂರಿಗೆ ಬರುವ ಸ್ನೇಹಿತರು, ಸಂಬಂಧಿಗಳನ್ನು ಇಲ್ಲಿನವರು ಮಾಲ್‌ಗೆ ಕರೆದುಕೊಂಡು ಹೋಗುವುದು ಈಗ ಸಾಮಾನ್ಯ.  ಅಂಥವರಿಗೂ ಮಾಲ್‌ಗೆ ಹೋಗದೆಯೂ ಸಮಯ ಕಳೆಯಬಹುದು ಎಂಬುದನ್ನು ಮನವರಿಕೆ ಮಾಡಬೇಕಾಗಿದೆ.

* ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಸಾರ್ವಜನಿಕರ ಒಳಗೊಳ್ಳುವಿಕೆಗೆ ಏನು ಯೋಜನೆ ರೂಪಿಸಿದ್ದೀರಿ?
ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗುವ ಮೊಬೈಲ್‌ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವ ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡಲು ₹2.5 ಕೋಟಿ ಯೋಜನೆ ರೂಪಿಸಲಾಗಿದೆ. ಈಗಾಗಲೇ 127 ಅರ್ಜಿಗಳು ಬಂದಿವೆ.

* ದಸರಾ ವಿಶೇಷ ಗೋಲ್ಡನ್‌ ಚಾರಿಯೇಟ್‌ ರೈಲು ಪ್ರಯಾಣ ದರ ಈ ಬಾರಿ ಹೇಗಿದೆ?
ಈ ಬಾರಿ ಗೋಲ್ಡನ್‌ ಚಾರಿಯೇಟ್‌ ರೈಲಿನಲ್ಲಿ ಸಾಮಾನ್ಯರಿಗೂ  ಪ್ರಯಾಣಿಸುವ ಅವಕಾಶ ಸಿಗಲಿದೆ. ಕೇವಲ ₹30 ಸಾವಿರ ದರದಲ್ಲಿ 2 ರಾತ್ರಿ 1 ಹಗಲು ಕಳೆಯಬಹುದು.  ಮೈಸೂರಿನ ಏಳು ಅರಮನೆ ಮಾತ್ರವಲ್ಲದೇ, ಪ್ರಮುಖ ಮಾರುಕಟ್ಟೆಗಳಿಗೂ  ಕರೆದೊಯ್ಯಲಿದ್ದೇವೆ.

ತಂಡಕ್ಕೆ ಒಬ್ಬರಂತೆ ಗೈಡ್‌ ಇರುತ್ತಾರೆ. ಪ್ರವಾಸೋದ್ಯಮ ಬಸ್‌ನಲ್ಲಿ  ₹5 ಸಾವಿರಕ್ಕೆ   ಹತ್ತಾರು ತಾಣಗಳನ್ನು ವೀಕ್ಷಿಸಬಹುದು. ದಸರಾ ಸಂದರ್ಭ ಬೆಂಗಳೂರಿನಿಂದ ಮೈಸೂರಿಗೆ ವಿಮಾನ  ಸಂಚಾರ ಕಲ್ಪಿಸುವ ಬಗ್ಗೆ  ವಿಮಾನಯಾನ ಕಂಪೆನಿಗಳ ಜೊತೆ ಮಾತುಕತೆ ನಡೆಯುತ್ತಿದೆ

* ಪ್ರವಾಸಿತಾಣಗಳ ಅಭಿವೃದ್ಧಿಗೆ ಇರುವ ಸವಾಲುಗಳೇನು?
ವಿವಿಧ ಇಲಾಖೆಗಳ ನಡುವಿನ ಸಾಮರಸ್ಯದ ಸವಾಲು ನಮ್ಮ ಎದುರಿಗಿದೆ. ಉದಾಹರಣೆಗೆ ನಂದಿ ಬೆಟ್ಟ ಸಂಪೂರ್ಣವಾಗಿ ತೋಟಗಾರಿಕಾ ಇಲಾಖೆಗೆ ಸೇರಿದೆ.

ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಬೇಕಾದರೆ ಸಂಪರ್ಕ ರಸ್ತೆ ಬೇಕು.ರಸ್ತೆಯ ಅಭಿವೃದ್ಧಿ  ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಅಲ್ಲಿ ಪ್ರವಾಸೋದ್ಯಮ ಇಲಾಖೆ ಏನೂ ಮಾಡಲು ಸಾಧ್ಯವಿಲ್ಲ.  ಇಲಾಖೆಗಳ ನಡುವೆ ಪರಸ್ಪರ ಒಮ್ಮತ ಬೇಕಾಗುತ್ತದೆ.

ಇನ್‌ಕ್ರೆಡಿಬಲ್ ಬೆಂಗಳೂರು
ಪ್ರವಾಸೋದ್ಯಮದಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿ. ಆದರೆ, ಕೇಂದ್ರ ಸರ್ಕಾರದ ಇನ್‌ಕ್ರೆಡಿಬಲ್‌ ಇಂಡಿಯಾದಲ್ಲಿ ಕೇವಲ ತಾಜ್‌ಮಹಲ್‌, ರಾಜಸ್ತಾನ, ಜೈಪುರದಂಥ ಜಾಗಗಳನ್ನು ಮಾತ್ರ ಗುರುತಿಸಲಾಗುತ್ತಿದೆ. ಬೆಂಗಳೂರಿಗೂ ಇನ್‌ಕ್ರೆಡಿಬಲ್‌ ಇಂಡಿಯಾದಲ್ಲಿ ಸ್ಥಾನ ನೀಡಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಲಾಗಿದೆ.

***
ಸರ್ವರನ್ನೂ ತಲುಪಲು ಯತ್ನ

ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಇಲಾಖೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಡಿಜಿಟಲ್ ಫೋಟೊಗ್ರಫಿ ಸ್ಪರ್ಧೆ, ರೇಡಿಯೊ ಕ್ವಿಜ್, ಐಟಿ-ಬಿಟಿ ಸಂಸ್ಥೆಗಳ ಜತೆ ಸಂವಾದ ಸೇರಿದಂತೆ ಹಲವು ಯೋಜನೆಗಳು ಕಾರ್ಯಗತಗೊಂಡಿವೆ. ಬಿಬಿಎಂಪಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಸೆ.27ರಂದು ನಗರದ ಪ್ರವಾಸಿ ತಾಣಗಳ ಭೇಟಿಗಾಗಿ ಒಂದು ದಿನದ ಪ್ರವಾಸ ಆಯೋಜಿಸಿದೆ. ಪ್ರವಾಸದ ಬಗ್ಗೆ ಮಕ್ಕಳಲ್ಲಿ ಕುತೂಹಲ ಬೆಳೆಸುವುದು ಇಲಾಖೆಯ ಉದ್ದೇಶ.

‘ಮೈಸೂರು ಅರಮನೆ ಮತ್ತು ಶ್ರೀರಂಗಪಟ್ಟಣದಲ್ಲಿರುವಂತೆ ಧ್ವನಿ– ಬೆಳಕು ಸಂಯೋಜನೆಯನ್ನು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆರಂಭಿಸುವ ಯೋಜನೆ ಇದೆ.ಇಲ್ಲಿ ಸ್ವಾತಂತ್ರ್ಯ ಹೋರಾಟ ಬಿಂಬಿಸುವ ಕಥನಗಳನ್ನು ಪ್ರದರ್ಶಿಸುವ ಯೋಜನೆಯೂ ಇದೆ’ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಡಾ.ಎನ್.ಮಂಜುಳಾ.

‘ಈ ಯೋಜನೆಗಳು ಸಾಕಾರಗೊಂಡರೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುವುದರಲ್ಲಿ ಅನುಮಾನವಿಲ್ಲ. ತಂತ್ರಜ್ಞಾನ ಬಳಸಿಕೊಂಡು ಪ್ರವಾಸಿ ತಾಣಗಲ್ಲಿ ಬಿಟ್ರ್ಯಾಕ್ (ಮೊಬೈಲ್ ಆ್ಯಪ್) ಮತ್ತು ಟ್ರೋಲ್  (ಬದಲಾಗುವ ಚಿತ್ರಪಟಗಳು) ಪರಿಚಯಿಸುವ ಕಾರ್ಯ ನಡೆದಿದೆ. ಸಾಮಾಜಿಕ ಜಾಲ ತಾಣಗಳಾದ ಟ್ವೀಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮೂಲಕ ತಲುಪಲು ಯತ್ನಿಸುತ್ತಿದ್ದೇವೆ’ ಎಂದು ಅವರು ನುಡಿಯುತ್ತಾರೆ.

ನಗರದ ಒಂದು ಜನಪ್ರಿಯ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಪ್ರವಾಸಿಗ ಸಮೀಪದಲ್ಲಿರುವ ಮತ್ತೊಂದು ತಾಣಕ್ಕೆ ಹೇಗೆ ಹೋಗಬೇಕು ಎಂಬುದನ್ನು ಸೈನ್ ಬೋರ್ಡ್‌, ಮಾರ್ಗದರ್ಶಿ ನಕಾಶೆಗಳ ಮೂಲಕ ಪ್ರಕಟಿಸುವುದು ಟ್ರೋಲ್‌ ಯೋಜನೆಯಲ್ಲಿ ಸೇರಿದೆ. ನಗರದಲ್ಲಿನ ಪ್ರವಾಸಿ ತಾಣವೊಂದರ ಇತಿಹಾಸ, ಮಹತ್ವವನ್ನು ಮೊಬೈಲ್ ಆ್ಯಪ್‌ಗಳ ಮೂಲಕ ವೆಬ್‌ಸೈಟ್‌ ಮೂಲಕ ಒದಗಿಸುವ ಪ್ರಯತ್ನ ಬಿಟ್ರ್ಯಾಕ್. ಇತಿಹಾಸ ಪರ್ಯಟನೆ ಹೆಸರಿನಲ್ಲಿ ‘ಸೈಕಲ್ ಟ್ರೇಲ್’ ಪ್ರರಿಚಯಿಸುವ ಪ್ರಸ್ತಾವವೂ ಪ್ರವಾಸೋದ್ಯಮ ಇಲಾಖೆಯ ಮುಂದಿದೆ.

***
ಬೆಂಗಳೂರಿನಿಂದ ಪ್ರವಾಸ ಹೋಗುವವರಿಗಾಗಿ 1ದಿನದಿಂದ 1ವಾರದ ಅವಧಿಗೆ ವಿವಿಧ ಪ್ಯಾಕೇಜ್‌ ರೂಪಿಸಲಾಗುವುದು. ಹಂಪಿ, ಕೊಡಗು, ಕಬಿನಿ, ಪಟ್ಟದಕಲ್ಲು ಮುಂತಾದ ಸ್ಥಳಗಳಿಗೆ ಬಸ್‌ ವ್ಯವಸ್ಥೆ ಕಲ್ಪಿಸಲಾಗುವುದು. ಮೂರು ತಿಂಗಳಲ್ಲಿ ಯೋಜನೆ ಜಾರಿಗೆ ಬರಲಿದೆ
–ಪ್ರಿಯಾಂಕ್‌ ಖರ್ಗೆ, ಪ್ರವಾಸೋದ್ಯಮ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT