ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನೋಡೋದು ಅಂದ್ರೆ...

Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನಿರ್ದಿಷ್ಟವಾಗಿ ಯಾವುದಾದರೂ ಒಂದು ಊರನ್ನು ನೋಡುವುದು ಎಂದರೆ ಆ ಊರಿನ ಕೆಲ ಪ್ರದೇಶಗಳನ್ನು ನೋಡುವುದೇ ಆಗಿರುತ್ತದೆ. ಬೆಂಗಳೂರಿನಲ್ಲಿ ಹೀಗೆ ಮಿಸ್ ಮಾಡದೆ ನೋಡಲೇ ಬೇಕಾಗಿರುವ ಪ್ರದೇಶಗಳ ಪಟ್ಟಿ ಇದು.

ವಿಧಾನಸೌಧ
ಬೆಂಗಳೂರು ಹೊರಗಿರುವವರಿಗೆ ಇಂದಿಗೂ ವಿಧಾನಸೌಧ ಪ್ರಮುಖ ಆಕರ್ಷಣೆ. ವಿಧಾನ ಸೌಧದ ಮುಂದೆ ನಿಂತುಕೊಂಡು ಫೋಟೊ ತೆಗೆಸಿಕೊಳ್ಳುವುದು ಬೆಂಗಳೂರಿಗೆ ಬರುವ ಪ್ರವಾಸಿಗರಿಗೆ ಅಚ್ಚುಮೆಚ್ಚು. ಆದರೆ ಈಗ ಪ್ರವಾಸಿಗರಿಗೆ ವಿಧಾನಸೌಧದ ಪ್ರವೇಶ ನಿರ್ಬಂಧಿಸಲಾಗಿದೆ.

ಹೈಕೋರ್ಟ್
ವಿಧಾನಸೌಧದ ಎದುರಿಗಿರುವ ಹೈಕೋರ್ಟ್ ಕಟ್ಟಡವನ್ನು ಕಲ್ಲು ಮತ್ತು ಕೆಂಪು ಇಟ್ಟಿಗೆಯಿಂದ ಕಟ್ಟಲಾಗಿದೆ. ಗ್ರೀಕ್‌ ಮತ್ತು ರೋಮನ್ ಶೈಲಿಯಲ್ಲಿದೆ.

ಎಚ್‌ಎಎಲ್ ಏರೋಸ್ಪೇಸ್‌ ಮ್ಯೂಸಿಯಂ
ವಿಮಾನದ ಮಾದರಿಗಳು, ಛಾಯಾಚಿತ್ರಗಳು, ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ  ದೊಡ್ಡ ಸಂಗ್ರಹ ಇಲ್ಲಿದೆ.

ಸರ್ಕಾರಿ ವಸ್ತುಸಂಗ್ರಹಾಲಯ
ಭಾರತದ ಅತಿ ಹಳೆಯ  ಮತ್ತು ದೊಡ್ಡ ವಸ್ತುಸಂಗ್ರಹಾಲಯಗಳಲ್ಲಿ (ಸ್ಥಾಪನೆ: 1865) ಒಂದು. ಪುರಾತತ್ವ ಶಾಸ್ತ್ರಕ್ಕೆ ಸಂಬಂಧಿಸಿದ ಅಪರೂಪದ ಸಂಗ್ರಹಗಳನ್ನೂ ಮತ್ತು ಭೂವಿಜ್ಞಾನ ಸಲಕರಣೆಗಳು, ಹಳೆಯ ಆಭರಣಗಳು, ಶಿಲ್ಪಗಳು, ನಾಣ್ಯಗಳು ಮತ್ತು ಶಾಸನಗಳ ಬೃಹತ್ ಸಂಗ್ರಹ ಇಲ್ಲಿದೆ. ಮೊದಲ ಕನ್ನಡ ಶಾಸನ ಎನಿಸಿದ ಹಲ್ಮಿಡಿ ಶಾಸನವೂ ಇಲ್ಲಿದೆ.

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಂತ್ರಜ್ಞಾನ ವಸ್ತುಸಂಗ್ರಹಾಲಯ
ದೇಶದ ತಾಂತ್ರಿಕ ಅಭಿವೃದ್ಧಿಯ ಸಂಕ್ಷಿಪ್ತ ಇತಿಹಾಸದ ಮಾಹಿತಿ ಇಲ್ಲಿ ಸಿಗುತ್ತದೆ. ಅನೇಕ ತಾಂತ್ರಿಕ ಆವಿಷ್ಕಾರಗಳ ನೆಲೆ ಎನಿಸಿಕೊಂಡಿರುವ ಈ ಮ್ಯೂಸಿಯಂ ಕಸ್ತೂರಬಾ ರಸ್ತೆಯಲ್ಲಿದೆ.

ಬೆಂಗಳೂರು ಅರಮನೆ
ನಗರದ ಹೃದಯ ಭಾಗವಾದ ಪ್ಯಾಲೆಸ್ ಗಾರ್ಡನ್‌ನಲ್ಲಿದೆ. ಗ್ರಾನೈಟ್ ಕಲ್ಲಿನಿಂದ ಕಟ್ಟಲಾಗಿದೆ. ಒಳಗೋಡೆಗಳಲ್ಲಿ ರಾಜಾ ರವಿವರ್ಮನ ಕಲಾಕೃತಿಗಳಿವೆ.

ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ
ಬೆಂಗಳೂರಿನ ಕೋಟೆ ಆವರಣದಲ್ಲಿ 1791ರಲ್ಲಿ ಟಿಪ್ಪುಸುಲ್ತಾನ್ ಕಟ್ಟಿಸಿದ ಬೇಸಿಗೆ ಅರಮನೆ ಇಂಡೋ ಇಸ್ಲಾಮಿಕ್‌ ಶೈಲಿಯಲ್ಲಿದೆ. ಇದೇ ಅರಮನೆಯಲ್ಲಿ ಟಿಪ್ಪು ದರ್ಬಾರ್ ನಡೆಸುತ್ತಿದ್ದ ಎಂದು ಇತಿಹಾಸ ಹೇಳುತ್ತದೆ.

ಬೆಂಗಳೂರು ಕೋಟೆ
ಕೆಂಪೇಗೌಡರು 1537ರಲ್ಲಿ ಮಣ್ಣಿನ ಕೋಟೆ ಕಟ್ಟಿ ಬೆಂಗಳೂರು ಬೆಳವಣಿಗೆಗೆ ಶ್ರೀಕಾರ ಹಾಕಿದರು. 1761ರಲ್ಲಿ ಹೈದರ್‌ ಅಲಿ ಮಣ್ಣಿನ ಕೋಟೆಯ ಬದಲಿಗೆ ಕಲ್ಲಿನ ಕೋಟೆಯನ್ನು ಕಟ್ಟಿದರು.

ಚಿತ್ರಕಲಾ ಪರಿಷತ್
ಕುಮಾರಕೃಪಾ ರಸ್ತೆಯಲ್ಲಿದೆ. ಕಲಾವಿದರ ಚಿತ್ರಕಲಾ ಪ್ರದರ್ಶನಕ್ಕೆ ಅವಕಾಶವಿದೆ. ಪ್ರತಿ ವರ್ಷ ನಡೆಯುವ ಚಿತ್ರಸಂತೆ ಪ್ರವಾಸಿಗರ ಪ್ರಮುಖ ಆಕರ್ಷಣೆ.

ಯವನಿಕಾ
ನೃಪತುಂಗ ರಸ್ತೆಯಲ್ಲಿರುವ ಯವನಿಕಾ ಸಭಾಂಗಣದಲ್ಲಿ ಸಂಗೀತ, ನೃತ್ಯ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ಜಾಮಿಯಾ ಮಸೀದಿ
ಕೆ.ಆರ್‌.ಮಾರುಕಟ್ಟೆಯಲ್ಲಿರುವ ಐದು ಅಂತಸ್ತುಗಳ ಜಾಮಿಯಾ ಮಸೀದಿ ನಗರದ ಅತಿದೊಡ್ಡ ಮಸೀದಿ. ಈ ಮಸೀದಿಯನ್ನು ರಾಜಸ್ತಾನಿ ಅಮೃತಶಿಲೆ ಬಳಸಿ ಕಟ್ಟಲಾಗಿದೆ.

ಮಹಾಲಕ್ಷ್ಮಿ ಲೇಔಟ್
ಇಸ್ಕಾನ್, ಮಹಾಲಕ್ಷ್ಮಿ ಮತ್ತು ಆಂಜನೇಯ ದೇಗುಲಗಳಿಗೆ ಭೇಟಿ ನೀಡುವುದು ಪ್ರವಾಸಿಗರ ನೆಚ್ಚಿನ ಆಯ್ಕೆ.

ರವೀಂದ್ರ ಕಲಾಕ್ಷೇತ್ರ
ಕವಿ ರವೀಂದ್ರನಾಥ ಟ್ಯಾಗೋರ್ ನೆನಪಿನಲ್ಲಿ ಕಟ್ಟಲಾದ ಈ ಭವ್ಯ ಕಟ್ಟಡ ಜೆ.ಸಿ.ರ ಸ್ತೆಯಲ್ಲಿದೆ. ಕಲಾಕ್ಷೇತ್ರಕ್ಕೆ ಈಗ ಸುವರ್ಣ ಸಂಭ್ರಮ. ನಯನ ಸಭಾಂಗಣ, ಸಂಸ ಬಯಲು ರಂಗಮಂದಿರ, ಎಡಿಎ ರಂಗಮಂದಿರ ಕಲಾಕ್ಷೇತ್ರದ ಆಸುಪಾಸಿನಲ್ಲಿಯೇ ಇವೆ.

ರಂಗಶಂಕರ
ನಟ ಶಂಕರನಾಗ್ ನೆನಪಿನಲ್ಲಿ ಅರುಂಧತಿ ನಾಗ್ ಸ್ಥಾಪಿಸಿರುವ ರಂಗಶಂಕರವನ್ನು ಸಂಕೇತ್‌ ಟ್ರಸ್ಟ್‌ ನಿರ್ವಹಿಸುತ್ತದೆ. ಜೆ.ಪಿ.ನಗರ ಎರಡನೇ ಹಂತದಲ್ಲಿದೆ.

ದೊಡ್ಡಬಸವನಗುಡಿ
16ನೇ ಶತಮಾನದಲ್ಲಿ ನಿರ್ಮಾಣಗೊಂಡ ದೊಡ್ಡ ಬಸವನಗುಡಿ  ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿದೆ. ಬೃಹತ್ ಏಕಶಿಲಾ ನಂದಿ ವಿಗ್ರಹಕ್ಕೆ ಬೆಣ್ಣೆ ಅಲಂಕಾರ ಮಾಡಿಸುವುದು ಜನಪ್ರಿಯ ಸೇವೆ.

ಗವಿಗಂಗಾಧರ ದೇಗುಲ, ರಾಮಕೃಷ್ಣಾಶ್ರಮ
ರಾಮಕೃಷ್ಣ ಪರಮಹಂಸರ ಪತ್ನಿ ಶಾರದಾ ಮಾತೆ ಅವರು ತಪಸ್ಸು ಮಾಡಿದ ಶಿಲೆ ಇರುವ ರಾಮಕೃಷ್ಣಾಶ್ರಮ ಪ್ರವಾಸಿಗರ ಪ್ರಮುಖ ಆಕರ್ಷಣೆ. ಆಶ್ರಮದ ಸಮೀಪದಲ್ಲಿಯೇ ಇರುವ ಗವಿ ಗಂಗಾಧರೇಶ್ವರ ದೇಗುಲ ಬೆಂಗಳೂರಿನ ಹಳೆಯ ದೇಗುಲಗಳಲ್ಲಿ ಒಂದು.

ಸೇಂಟ್‌ ಬೆಸಿಲಿಕಾ ಚರ್ಚ್
ಬೆಂಗಳೂರಿನ ಹಳೆಯ ಚರ್ಚ್‌ಗಳಲ್ಲಿ ಒಂದಾಗಿರುವ ಸೇಂಟ್ ಬೆಸಿಲಿಕಾ ಚರ್ಚ್‌, ಆಕರ್ಷಕ ವಿನ್ಯಾಸದಿಂದ ಗಮನ ಸೆಳೆಯುತ್ತದೆ. ಪ್ರತಿವರ್ಷ ಸೆಪ್ಟೆಂಬರ್‌ನಲ್ಲಿ ಮೇರಿ ಮಾತೆ ಹಬ್ಬ ನಡೆಯುತ್ತದೆ.

ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್ಸ್‌
ವಸಂತನಗರದಲ್ಲಿದೆ. 18ನೇ ಶತಮಾನದ ಚಿತ್ರಕಲೆ, ಶಿಲ್ಪಕಲೆ, ರೇಖಾಚಿತ್ರಗಳ ಸಂಗ್ರಹ ಇಲ್ಲಿದೆ. ರಾಜಾ ರವಿವರ್ಮ, ಅಮೃತಾ ಶೇರ್‌ಗಿಲ್‌, ರವೀಂದ್ರನಾಥ್‌ ಟ್ಯಾಗೋರ್, ನಂದಲಾಲ್‌ ಬೋಸ್‌, ಜೈಮಿನಿ ರಾಯ್‌ ಅವರಂಥ ಖ್ಯಾತನಾಮರ ಅಪರೂಪದ ಕಲಾಕೃತಿಗಳ ಸಂಗ್ರಹವಿದೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT