ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಕ್ಕಿಂತ ಮಾರಕವಾದ ಪರಿಹಾರ

Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ದೇಶದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಕಾಡುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ಶಿಫಾರಸುಗಳನ್ನು ನೀಡಲು ಸಂಸತ್ ಸ್ಥಾಯಿ ಸಮಿತಿಯು ಕಳೆದ ಮಾರ್ಚ್‌ನಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ಕೆ.ಮಿಶ್ರಾ ಹಾಗೂ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗರಿಯ ಈ ಸಮಿತಿಯಲ್ಲಿದ್ದರು.

ಇತ್ತೀಚೆಗಷ್ಟೆ ಬಹಿರಂಗಗೊಂಡಿರುವ ಸಮಿತಿಯ ಶಿಫಾರಸುಗಳು ಇಂತಿವೆ: ವೈದ್ಯಕೀಯ ಶಿಕ್ಷಣ ಸಂಪೂರ್ಣ ಅಧೋಗತಿಗೆ ಇಳಿದಿದೆ; ಆರೋಗ್ಯ ಸೇವೆ ಗುಣಮಟ್ಟ, ವೈದ್ಯರ ಗುಣಮಟ್ಟ ಇವೆರಡನ್ನೂ ಕಾಯ್ದುಕೊಂಡು ಹೋಗುವುದರಲ್ಲಿ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ವಿಫಲಗೊಂಡಿದೆ; ವೈದ್ಯಕೀಯ ಶಿಕ್ಷಣದಲ್ಲಿ ವ್ಯಾಪಾರೀಕರಣ ಅವ್ಯಾಹತವಾಗಿದೆ; ವೈದ್ಯರ ವೃತ್ತಿಧರ್ಮದಲ್ಲಿ ಭಾರಿ ಕುಸಿತ ಕಂಡಿದೆ; ಇವೆಲ್ಲಕ್ಕೂ ಭಾರತೀಯ ವೈದ್ಯಕೀಯ ಮಂಡಳಿಯೇ ಕಾರಣ. ಹಾಗಾಗಿ, ಅದನ್ನು ರದ್ದುಗೊಳಿಸಬೇಕು, ಮತ್ತು ಅದರ ಜಾಗಕ್ಕೆ 22 ಸದಸ್ಯರುಳ್ಳ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ)  ರಚಿಸಬೇಕು ಎಂದು ಹೇಳಿದೆ.

ಸಮಿತಿಯು ಹೇಳಿರುವ ಎಲ್ಲಾ ಪಿಡುಗುಗಳು ನಮ್ಮ ವೈದ್ಯಕೀಯ ಕ್ಷೇತ್ರಕ್ಕೆ ಅಂಟಿಕೊಂಡಿರುವುದು ನಿಜವೆ. ಆದರೆ ಅದಕ್ಕೆ ಕಾರಣಗಳೇನು? ವೈದ್ಯಕೀಯ ಶಿಕ್ಷಣದಲ್ಲಿ ಶೇ 70ರಷ್ಟು ಸೀಟುಗಳು (ಸೀಟ್ ಬ್ಲಾಕಿಂಗ್ ಮುಂತಾದ ಎಲ್ಲಾ ವಾಮಮಾರ್ಗದಿಂದ) ಕಾಮೆಡ್-ಕೆ ಮತ್ತು ಆಡಳಿತ ಮಂಡಳಿಯವು.  ಇದರಲ್ಲಿ ಕೆಲವು ಸೀಟು ಲಕ್ಷಾಂತರ, ಕೋಟ್ಯಂತರ ರೂಪಾಯಿಗೆ ಬಿಕರಿಯಾಗುತ್ತವೆ. ಈ ರೀತಿಯಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ವೈದ್ಯರಾಗುವವರ ಗುಣಮಟ್ಟ ಏನಿದ್ದೀತೆಂಬುದನ್ನು ವಿವರಿಸಬೇಕಿಲ್ಲವಷ್ಟೆ. ಇನ್ನು ವೈದ್ಯಕೀಯ ವೃತ್ತಿಧರ್ಮ ಉಳಿಯುವುದು ತಮ್ಮದು ಮಹಾನ್ ಸೇವೆ ಎಂಬುದು ತಿಳಿದಾಗ.

ಆದರೆ ಅಪಾರವಾದ ಹಣ ಹೂಡಿ ಸೀಟು ಗಿಟ್ಟಿಸಿಕೊಂಡಾಗ ಅದರಿಂದ ಲಾಭ ಗಳಿಸುವ ಮನೋಧರ್ಮ ಹೆಚ್ಚಿ ನೈತಿಕತೆ ಸಮಾಧಿಯಾಗದೆ ಇರುತ್ತದೆಯೇ? ಹಾಗಾಗಿಯೇ ರೋಗರುಜಿನಗಳು ಬಂದಲ್ಲಿ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಸುಗ್ಗಿಯೇ ಸರಿ. ಅವಶ್ಯಕತೆ ಇಲ್ಲದಿದ್ದರೂ ಎಲ್ಲಾ ರೀತಿ ಪರೀಕ್ಷೆಗಳು, ಸ್ಕ್ಯಾನಿಂಗ್ ಮುಂತಾದವುಗಳನ್ನು ಅವಶ್ಯವಾಗಿ ಮಾಡಬೇಕೆಂಬ ‘ಪ್ರೋಟೊಕಾಲ್‌’ ಇದೆ ಎಂಬುದನ್ನು ಕಾರ್ಪೊರೇಟ್ ಆಸ್ಪತ್ರೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರೊಬ್ಬರು ಹೇಳಿದಾಗ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದೆನಿಸಿತು.

ವೃತ್ತಿಧರ್ಮಕ್ಕೆ ನಿಷ್ಠೆಯಿಂದ ಇರಬೇಕೆಂದುಕೊಂಡ ವೈದ್ಯನಿಗೆ ಅಲ್ಲಿ ಅವಕಾಶವಿಲ್ಲ. ವೈದ್ಯಕೀಯ ಕ್ಷೇತ್ರ ಬಹಳ ದೊಡ್ಡ ಉದ್ಯಮ ಹಾಗೂ ಅದರಲ್ಲಿ  ಹೆಚ್ಚು ಸಂಪಾದನೆ ಮಾಡಬಹುದು ಎಂಬ ವಿಚಾರ ಹೊಂದಿರುವವರಿಗೆ ಮಾತ್ರ ಅಲ್ಲಿ ಜಾಗವಿದೆ. ಈ ಮಟ್ಟದ ದುಡ್ಡಿನ ದಂಧೆ ರಾರಾಜಿಸುತ್ತಿರುವಾಗ ಭ್ರಷ್ಟಾಚಾರ ಸರ್ವೇ ಸಾಮಾನ್ಯ ಮತ್ತು ವೈದ್ಯಕೀಯ ಮಂಡಳಿ ಭ್ರಷ್ಟಾಚಾರದ ಕೂಪವಾಗಿರುವುದು ಆಶ್ಚರ್ಯವೇನಲ್ಲ.

ಇವೆಲ್ಲವೂ ಹೇಗೆ ಒಂದಕ್ಕೊಂದು ಪೋಣಿಸಿಕೊಂಡಿವೆ ಎಂದು ಗಮನಿಸಬೇಕು. ಇದರ ತಾಯಿಬೇರು ಅಡಕವಾಗಿರುವುದು ಶಿಕ್ಷಣದ ವ್ಯಾಪಾರೀಕರಣದಲ್ಲಿ ಎಂಬುದು ಸ್ಪಷ್ಟವಾಗಿ ಗೋಚರವಾಗುವ ಸಂಗತಿ. ಹಾಗಾದರೆ ಪ್ರಸಕ್ತ ಸಮಿತಿಯು ಶಿಕ್ಷಣದ ವ್ಯಾಪಾರೀಕರಣವನ್ನು ತಡೆಗಟ್ಟುವುದಕ್ಕೆ ಯಾವ ಕ್ರಮ ಕೈಗೊಂಡಿದೆ? ಬದಲಿಗೆ ವ್ಯತಿರಿಕ್ತವಾಗಿ ಈ ಸಮಿತಿಯು ಬಹಳ ದೊಡ್ಡ ಆಘಾತಕಾರಿ ಶಿಫಾರಸನ್ನು ನೀಡಿದೆ. ಅದೆಂದರೆ, ವೈದ್ಯಕೀಯ ಶಿಕ್ಷಣದಲ್ಲಿ ಈಗಾಗಲೇ ವಿಪರೀತವಾದ ಶುಲ್ಕ ವಸೂಲಿ ಮಾಡಲಾಗುತ್ತಿದ್ದು ಇದನ್ನು ತಡೆಗಟ್ಟುವ ವ್ಯರ್ಥ ಪ್ರಯತ್ನ ಮಾಡುವ ಬದಲಿಗೆ, ಹಣ ವಸೂಲಿ ಮಾಡಲು ಕಾನೂನುಬದ್ಧ ಹಕ್ಕನ್ನು ಪ್ರದಾನಿಸಬೇಕೆಂದು ವಾದಿಸಿದೆ!

ಈ ವಾದ ಸರಣಿಯನ್ನು ವಿಸ್ತರಿಸಿ ನೋಡಿದರೆ ಇದರ ಹಾಸ್ಯಾಸ್ಪದ ತಿರುಳು ಅರ್ಥವಾಗುತ್ತದೆ. ಪೊಲೀಸ್‌ ವ್ಯವಸ್ಥೆ ಇದ್ದಾಗಿಯೂ ಕೊಲೆ, ದರೋಡೆಗಳು ಸಮಾಜದಲ್ಲಿ ಹೆಚ್ಚುತ್ತಿವೆ ಎಂದ ಮೇಲೆ ಅವನ್ನು ಕಾನೂನುಬದ್ಧಗೊಳಿಸಿ ಎಂದಂತಾಯಿತಲ್ಲವೇ?

ಇಷ್ಟು ಸಾಲದೆಂಬಂತೆ ಸಮಿತಿಯು ‘ಲಾಭಕ್ಕಾಗಿರುವ ಸಂಸ್ಥೆ’ಗಳಿಗೆ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಪರವಾನಗಿ ನೀಡುವ ಶಿಫಾರಸನ್ನು ಮಾಡಿದೆ. ಇದರ ಫಲದಿಂದಾಗಿ ಟಾಟಾ, ಅಂಬಾನಿಯವರಂಥ  ಕಾರ್ಪೊರೇಟ್‌ ಮನೆತನಗಳವರು ನಿವ್ವಳ ಲಾಭಕ್ಕಾಗಿ ಹೂಡಿಕೆ ಮಾಡಲು ಮುಂದಾಗುತ್ತಾರೆ. ಇಂತಹ ವ್ಯವಸ್ಥೆ ನಮ್ಮ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿರುವುದರಿಂದ ‘ಲಾಭಕ್ಕಾಗಿರುವ ಸಂಸ್ಥೆಗಳು’ ಇನ್ನು ಮುಂದೆ ಶಿಕ್ಷಣದಲ್ಲಿ ಹೂಡಿಕೆ ಮಾಡಬಹುದೆಂದು ಸಂವಿಧಾನಕ್ಕೆ ತಿದ್ದುಪಡಿ ತರುವ ಯೋಚನೆಯನ್ನು ಸರ್ಕಾರ ಮಾಡುತ್ತಿದೆ.

ಇಂದು ನಮ್ಮ ವೈದ್ಯಕೀಯ ಕ್ಷೇತ್ರವನ್ನು ಬಾಧಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವಾದ ಶಿಕ್ಷಣದ ವ್ಯಾಪಾರೀಕರಣವನ್ನೇ ಇನ್ನಷ್ಟು ಅವ್ಯಾಹತವಾಗಿ ಮುಂದುವರೆಸಲು ಸಮಿತಿ ಶಿಫಾರಸು ಮಾಡಿರುವುದು ವಿಷಾದನೀಯ. ಸ್ವತಂತ್ರ ಭಾರತದಲ್ಲಿ ರಚಿಸಲಾದ ಬಹುತೇಕ ಸಮಿತಿಗಳ ವಿಶೇಷವೇನೆಂದರೆ, ಅಂಥ ಸಮಿತಿಯನ್ನು  ಹಳೆಯ ವ್ಯವಸ್ಥೆಯೊಂದರಿಂದ ಜನರು ರೋಸಿಹೋದ ಸಂದರ್ಭದಲ್ಲಿ ರಚಿಸಲಾಗುತ್ತದೆ.

ಹಳೆಯ ವ್ಯವಸ್ಥೆ ಯಾವ ಕಂಟಕವನ್ನು ಜನರಿಗೆ ಒಡ್ಡಿರುತ್ತದೋ ಅದನ್ನು ತೆಗಳಿ ತಾನು ಜನಪರ ಬದಲಾವಣೆಗಳನ್ನು ತರುವುದಾಗಿ ಅದು ನಂಬಿಸುತ್ತದೆ. ಈ ಮೂಲಕ ಜನರ ಸಹನೆಯ ಕಟ್ಟೆ ಒಡೆದು ಹೋಗದಂತೆ ನೋಡಿಕೊಳ್ಳುತ್ತದೆ. ಆದರೆ ಅದು ಸೂಚಿಸುವ ಶಿಫಾರಸು ವಾಸ್ತವದಲ್ಲಿ ಬಂಡವಾಳಶಾಹಿ ಪರ ಇರುತ್ತದೆ. ವಾಸ್ತವದಲ್ಲಿ ಕಾರ್ಪೊರೇಟ್‌ ಕಂಪೆನಿಗಳಿಗೆ ಸದಾ ಹಸಿರಾಗಿರುವ, ಯಥೇಚ್ಛ, ಆರ್ಥಿಕ ಬಿಕ್ಕಟ್ಟಿಲ್ಲದ ಹೂಡಿಕೆಯ ಒಂದು ಸುವರ್ಣಾವಕಾಶವನ್ನು ಈ ಸಮಿತಿ ಮಾಡಿಕೊಟ್ಟಂತಾಗಿದೆ.

ಎಂಸಿಐ  ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬುದು ನಿಜ. ಆದರೆ ಇಲ್ಲಿ ಉಲ್ಲೇಖಿಸಲಾಗಿರುವ ಎಲ್ಲಾ ಸಮಸ್ಯೆ ಎಂಸಿಐ ಅನ್ನು ಎನ್‌ಎಂಸಿಯಾಗಿ ಬದಲಿಸುವುದರಿಂದ ಹೇಗೆ ಮಾಯವಾಗುತ್ತದೆ ಎಂಬ ಸ್ಪಷ್ಟತೆ ಸರ್ಕಾರಕ್ಕಾಗಲಿ, ಸಮಿತಿಗಾಗಲಿ ಇಲ್ಲ. ರಾಷ್ಟ್ರೀಯ ವೈದ್ಯಕೀಯ ಆಯೋಗದಲ್ಲಿರುವ ಯಾವ ಸದಸ್ಯರೂ ಚುನಾಯಿತರಾಗಿರುವುದಿಲ್ಲ. ಬದಲಿಗೆ ಉನ್ನತ ಮಟ್ಟದ ಸಮಿತಿಯಿಂದ ನೇಮಕಗೊಂಡಿರುತ್ತಾರೆ. ಹೀಗೆ ಮಾಡುವುದರಿಂದ ಎಂಸಿಐಗೆ ಅಂಟಿದ್ದ ಬಾಧೆ ಎನ್‌ಎಂಸಿಗೆ ತಗಲುವುದಿಲ್ಲ ಎಂಬ ಸಮಿತಿ ವಾದ ಬಾಲಿಶ ಎನಿಸುತ್ತದೆ. ಇದು ಕೇಂದ್ರ ಸರ್ಕಾರ ಎಲ್ಲಾ ಕ್ಷೇತ್ರಗಳನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವ ಯೋಜನೆಯ ಭಾಗವಾಗಿದೆ ಎಂದರೆ ತಪ್ಪಾಗಲಾರದು.

ದೇಶದಲ್ಲಿ ಪ್ರತಿ 6 ನಿಮಿಷಕ್ಕೆ ಒಬ್ಬ ಗರ್ಭಿಣಿ ಹೆರಿಗೆಯ ವೇಳೆ ನಿಧನಳಾಗುತ್ತಾಳೆ. ಪ್ರತಿದಿನ 4 ಸಾವಿರಕ್ಕೂ ಹೆಚ್ಚು ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಅಸುನೀಗುತ್ತಿದ್ದಾರೆ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವರದಿ). ಹುಟ್ಟುವ ಸಾವಿರಾರು ಮಕ್ಕಳಿಗೆ ವಿಟಮಿನ್ ಎ ಗುಳಿಗೆ ದೊರಕದೆ ದೃಷ್ಟಿಮಾಂದ್ಯರಾಗಿ  ಹುಟ್ಟುತ್ತಿದ್ದಾರೆ.

ದೇಶದಲ್ಲಿ ಆರೋಗ್ಯದ ಒಟ್ಟಾರೆ ಖರ್ಚಿನಲ್ಲಿ ಶೇ 72ರಷ್ಟನ್ನು ಜನರೇ ತಮ್ಮ ಜೇಬಿನಿಂದ ಭರಿಸುವಷ್ಟು ಆರೋಗ್ಯ ಕ್ಷೇತ್ರ ಖಾಸಗೀಕರಣಗೊಂಡಿದೆ (ಎನ್‌ಎಸ್‌ಎಸ್‌ಒ ವರದಿ).  ಬಹುತೇಕ ಭಾರತೀಯರು ತಮ್ಮ ಮನೆ ಮಠವನ್ನೆಲ್ಲ ಮಾರಿ ಚಿಕಿತ್ಸೆ ಪಡೆಯುವ ದಾರುಣ ಪರಿಸ್ಥಿತಿ ನಿರ್ಮಾಣವಾಗಿದೆ. ಏತನ್ಮಧ್ಯೆ ಸರ್ಕಾರಿ ಆಸ್ಪತ್ರೆಗಳನ್ನು ಕುಂಟು ನೆಪವೊಡ್ಡಿ ಖಾಸಗಿ ಕ್ಷೇತ್ರಕ್ಕೆ ಪುಡಿಗಾಸಿಗೆ ‘ದಾನ’ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗಾಯದ ಮೇಲೆ ಮತ್ತೊಂದು ಬರೆ ಎಂಬಂತೆ ಈ ಸಮಿತಿಯ ಶಿಫಾರಸುಗಳಿರುವುದು ದುರದೃಷ್ಟಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT