ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಅಂಕಪಟ್ಟಿ ಜಾಲ: 8 ಆರೋಪಿಗಳ ಬಂಧನ

ಪುಣೆ ಕೇಂದ್ರ ಸ್ಥಾನ: 9 ಶಿಕ್ಷಣ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲು, ರಾಜ್ಯದಲ್ಲಿ 3 ಸಾವಿರಕ್ಕೂ ಹೆಚ್ಚು ವಿತರಣೆ
Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ಎಸ್‌ಎಸ್‌ಎಲ್‌ಸಿ, ಪಿಯು ನಕಲಿ ಅಂಕಪಟ್ಟಿ ಮುದ್ರಿಸಿ, ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಜಿಲ್ಲಾ ಪೊಲೀಸರು ಈ ಸಂಬಂಧ ರಾಜ್ಯದ 9 ಶಿಕ್ಷಣ ಸಂಸ್ಥೆಗಳ ಮೇಲೆ ಪ್ರಕರಣ ದಾಖಲಿಸಿ, ಎಂಟು ಮಂದಿಯನ್ನು ಬಂಧಿಸಿದ್ದಾರೆ.

ಸೊರಬ ಪಟ್ಟಣದ ತೌಸಿಫ್(29), ಬಿ.ಕೆ.ಹನುಮಂತಪ್ಪ (50), ಹುಬ್ಬಳ್ಳಿಯ ಪ್ರವೀಣ್‌ ಕುಮಾರ್ (30), ಪುಣೆಯ ವಿವೇಕ್‌  ದಿನಕರ್‌ ಪಾಟೀಲ್‌ (35), ವಿಶಾಲ್‌ ದಿನಕರ್ ಪಾಟೀಲ್ (31), ಬೆಂಗಳೂರಿನ ಸಾಗರ್ (30), ರವಿಕುಮಾರ್ (30), ಆರ್. ಗೋಪಾಲಕೃಷ್ಣ (34) ಅವರು ಈ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳು.

ಬೆಂಗಳೂರಿನ ಎಲೈಟ್‌ ಅಕಾಡೆಮಿ, ಗ್ರೋಟೆಕ್‌ ಎಜುಕೇಶನ್‌ ಟ್ರಸ್ಟ್, ಓಂ ಸಾಯಿ ದೂರ ಶಿಕ್ಷಣ ಸಂಸ್ಥೆ, ಎಸ್‌.ಎಲ್‌.ವಿ. ದೂರ ಶಿಕ್ಷಣ ಸಂಸ್ಥೆ, ಬಳ್ಳಾರಿಯ ಫೋರ್ಡ್‌ ಅಸೋಸಿಯೇಷನ್, ಕಲಬುರ್ಗಿಯ ಶ್ರೀಶೈಲ ಮಲ್ಲಿಕಾರ್ಜುನ ಎಜುಕೇಶನ್‌, ಮುದ್ದೇಬಿಹಾಳದ ಕೃಷ್ಣ ರಾಥೋಡ್‌ ದೂರ ಶಿಕ್ಷಣ ಸಂಸ್ಥೆ, ಬೀದರ್‌ನ ನಂದಿನಿ ಕಂಪ್ಯೂಟರ್‌ ಎಜುಕೇಶನ್, ಹೆಸರಘಟ್ಟದ ಕಲ್ಪವೃಕ್ಷ ಎಜುಕೇಶನ್‌ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬೆಳಕಿಗೆ ಬಂದಿದ್ದು ಹೀಗೆ: ಸೊರಬ ಪಟ್ಟಣದ ಕಾನಕೇರಿಯ ತೌಸಿಫ್‌ ನಾಲ್ಕು ತಿಂಗಳ ಹಿಂದೆ ಮಂಗಳೂರಿನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಸಮಯದಲ್ಲಿ ವಿದ್ಯಾರ್ಹತೆ 6ನೇ ತರಗತಿ ಎಂದು ನಮೂದಿಸಿದ್ದ ಕಾರಣ ಅರ್ಜಿ ತಿರಸ್ಕೃತವಾಗಿತ್ತು. ಎರಡು ತಿಂಗಳ ನಂತರ ಮತ್ತೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯ ಜತೆ ಅರ್ಜಿ ಸಲ್ಲಿಸಿದ್ದರು.

ಎರಡನೇ ತಿಂಗಳಲ್ಲಿ ವಿದ್ಯಾರ್ಹತೆ ಬದಲಾಗಿದ್ದನ್ನು ಗಮನಿಸಿದ ಪಾಸ್‌ಪೋರ್ಟ್‌ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸುವಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದರು.ಸೊರಬದಲ್ಲಿ ಶೀಘ್ರಲಿಪಿ ಸಂಸ್ಥೆ ನಡೆಸುವ ಹನುಮಂತಪ್ಪ ಅವರು ₹ 12 ಸಾವಿರ ಪಡೆದು ಪುಣೆಯಿಂದ ಈ ಅಂಕಪಟ್ಟಿ ತರಿಸಿಕೊಟ್ಟಿರುವುದು ಬೆಳಕಿಗೆ ಬಂತು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಎಸ್‌ಪಿ ಅಭಿನವ್‌ ಖರೆ ಅವರು ಪಿಎಸ್‌ಐಗಳಾದ ಮಂಜು
ನಾಥ್, ಸುಭಾಷ್‌, ರಾಜಶೇಖರ್‌ ನೇತೃತ್ವದಲ್ಲಿ ಮೂರು ಪ್ರತ್ಯೇಕ ತಂಡ ರಚಿಸಿದರು.

ಬೆಂಗಳೂರು, ಪುಣೆ ಹಾಗೂ ಉತ್ತರ ಕರ್ನಾಟಕದ ವಿವಿಧ ಭಾಗಗಳಿಗೆ ತೆರಳಿದ ತಂಡ ನಕಲಿ ಅಂಕಪಟ್ಟಿ ಜಾಲ ಭೇದಿಸಿದೆ.‘ಸಹೋದರರಾದ ವಿವೇಕ್‌ ದಿನಕರ್‌ ಪಾಟೀಲ್‌, ವಿಶಾಲ್‌ ದಿನಕರ್ ಪಾಟೀಲ್‌ ಹಾಗೂ ಪ್ರವೀಣ್‌ ಕುಮಾರ್‌ ಅವರು ಪುಣೆಯಯಲ್ಲೇ ಕಚೇರಿ ಸ್ಥಾಪಿಸಿಕೊಂಡು ನಕಲಿ ಅಂಕಪಟ್ಟಿಗಳನ್ನು ಮುದ್ರಿಸಿ, ರಾಜ್ಯದ ದೂರ ಶಿಕ್ಷಣ ಕೇಂದ್ರಗಳ ಮೂಲಕ ಅಭ್ಯರ್ಥಿಗಳಿಗೆ ರವಾನಿಸುತ್ತಿದ್ದರು.

ಆರೋಪಿಗಳಿಂದ ಸಾವಿರಾರು ನಕಲಿ ಅಂಕಪಟ್ಟಿಗಳು ಹಾಗೂ ಅವುಗಳನ್ನು ಮುದ್ರಿಸುತ್ತಿದ್ದ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ರಾಜ್ಯದಲ್ಲಿ ಈಗಾಗಲೇ 3 ಸಾವಿರಕ್ಕೂ ಅಧಿಕ ಅಂಕಪಟ್ಟಿಯನ್ನು ಆರೋಪಿಗಳು ವಿತರಿಸಿದ್ದಾರೆ’ ಎಂದು ಎಸ್‌ಪಿ ಅಭಿನವ್‌ ಖರೆ ಅವರು ಮಾಹಿತಿ ನೀಡಿದರು.

ಮುಖ್ಯಾಂಶಗಳು
* ಬೆಂಗಳೂರು, ಬಳ್ಳಾರಿ, ಕಲಬುರ್ಗಿ, ಮುದ್ದೇಬಿಹಾಳ, ಬೀದರ್‌, ಹೆಸರಘಟ್ಟದ ಶಿಕ್ಷಣ ಸಂಸ್ಥೆಗಳು
* ಸಾವಿರಾರು ನಕಲಿ ಅಂಕಪಟ್ಟಿ, ಮುದ್ರಣಯಂತ್ರ ವಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT