ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಡಿಗೇಡಿಗಳ ಉದ್ದೇಶಿತ ಕೃತ್ಯ: ಪೊಲೀಸರ ಲೋಪ ಸಾಬೀತು

ಯಮನೂರಿನಲ್ಲಿ ‘ಪೊಲೀಸರಿಂದ ದೌರ್ಜನ್ಯ’
Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಯಮನೂರಿನಲ್ಲಿ ‘ಪೊಲೀಸರಿಂದ ನಡೆದಿದ್ದ ದೌರ್ಜನ್ಯ’ ಕುರಿತು ತನಿಖೆ ನಡೆಸಿದ ಎಡಿಜಿಪಿ ಕಮಲ್‌ ಪಂತ್‌ ನೇತೃತ್ವದ ಸಮಿತಿ ಗೃಹ ಇಲಾಖೆಗೆ ವರದಿ ಸಲ್ಲಿಸಿದೆ.

‘ಜಿಲ್ಲೆಯ ಡಿವೈಎಸ್ಪಿ ಹಾಗೂ ನವಲಗುಂದ ಠಾಣೆಯ ಇನ್‌ಸ್ಪೆಕ್ಟರ್‌ ಅವರು ಲೋಪವೆಸಗಿದ್ದೇ ಘಟನೆಗೆ ಕಾರಣ. ಜತೆಗೆ ಕೆಲ ಕಿಡಿಗೇಡಿಗಳು, ಕಾನೂನು ಕೈಗೆತ್ತಿಕೊಂಡು ಉದ್ದೇಶಪೂರ್ವಕವಾಗಿ ಸರ್ಕಾರದ ಆಸ್ತಿ ನಾಶ ಮಾಡಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು  ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಮಹಾದಾಯಿ ನದಿ ಯೋಜನೆ ಜಾರಿಗಾಗಿ ಧಾರವಾಡ, ಗದಗ ಜಿಲ್ಲೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ನವಲಗುಂದದಲ್ಲೂ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ಕೆಲ ಕಿಡಿಗೇಡಿಗಳು, ಸ್ಥಳೀಯ ನ್ಯಾಯಾಲಯ ಹಾಗೂ ಸರ್ಕಾರಿ ಕಚೇರಿಗಳಿಗೆ ನುಗ್ಗಿ ಪೀಠೋಪಕರಣಗಳನ್ನು ಸುಟ್ಟು ಹಾಕಿದ್ದಾರೆ. ಜತೆಗೆ ಅಂದು ಕಚೇರಿಯಲ್ಲಿದ್ದ ಕೆಲವರ ಮೇಲೆ ಹಲ್ಲೆಯನ್ನೂ ನಡೆಸಿದ್ದು, ಅವರು ಇಂದಿಗೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ’ ಎಂಬ ಅಂಶ ವರದಿಯಲ್ಲಿದೆ.
‘ಸರ್ಕಾರದ ಆಸ್ತಿ ನಾಶ ಮಾಡಿದ್ದ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿದ್ದ ಪೊಲೀಸರು, ಯಮನೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಹಿಡಿಯಲು ಜುಲೈ 29ರಂದು ಹೋಗಿದ್ದರು. ಈ ವೇಳೆ ಪೊಲೀಸ್‌ ಬಲವೂ ಹೆಚ್ಚಿತ್ತು.

‘ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡುವಲ್ಲಿ ಡಿವೈಎಸ್ಪಿ ವಿಫಲರಾದರು. ಪರಿಣಾಮ ಮನೆಗೆ ನುಗ್ಗಿದ ಕೆಲ ಸಿಬ್ಬಂದಿ, ಆರೋಪಿಗಳು ಎಲ್ಲಿದ್ದಾರೆ ಎಂದು ಪ್ರಶ್ನಿಸಿ ಮಹಿಳೆಯರು, ವೃದ್ಧರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದರು. ಅದರಿಂದ ಅಮಾಯಕರು ಸಹ ಗಾಯಗೊಳ್ಳುವಂತಾಯಿತು’ ಎಂದು ವರದಿಯಲ್ಲಿ ಸಮಿತಿ ಉಲ್ಲೇಖಿಸಿದೆ. 

400 ಪುಟಗಳ ವರದಿ: ಸರ್ಕಾರದ ನಿರ್ದೇಶನದಂತೆ ರಾಜ್ಯ ಸಶಸ್ತ್ರ ಮೀಸಲು ಪಡೆಯ ಕಮಲ್‌ ಪಂತ್‌ ನೇತೃತ್ವದ ಸಮಿತಿ ನವಲಗುಂದಕ್ಕೆ ಹೋಗಿ ತನಿಖೆ ನಡೆಸಿದೆ. ಈ ವೇಳೆ ಯಮನೂರಿನ 112 ಮಂದಿ, ಘಟನಾ ಸ್ಥಳದಲ್ಲಿದ್ದ 38 ಪೊಲೀಸರು ಹಾಗೂ 12  ಪತ್ರಕರ್ತರ ಹೇಳಿಕೆಯನ್ನು ವಿಡಿಯೊ ಸಮೇತವಾಗಿ ಸಮಿತಿಯು ಸಂಗ್ರಹಿಸಿದೆ. ಆ ಎಲ್ಲ ಅಂಶಗಳನ್ನು ಒಳಗೊಂಡು ಸಿದ್ಧಪಡಿಸಿದ 400 ಪುಟಗಳ ವರದಿನ್ನು ಸಮಿತಿಯು ಸೆ. 19ರಂದು ಗೃಹ ಇಲಾಖೆಗೆ ಸಲ್ಲಿಸಿದೆ.
*
‘ನವಲಗುಂದ, ಯಮನೂರು, ಅರೆಕುರಹಟ್ಟಿ ಗ್ರಾಮಗಳಲ್ಲಿ ವಾರಗಳ ಕಾಲ ಸುತ್ತಾಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇವೆ. ಈ ವೇಳೆ ಹಲವರು ತಪ್ಪು ಎಸಗಿದ್ದು ಸ್ಪಷ್ಟವಾಗಿದೆ. ಅದನ್ನು ಸಾಕ್ಷ್ಯ ಸಮೇತವಾಗಿ ವರದಿಯಲ್ಲಿ  ಉಲ್ಲೇಖಿಸ ಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಯಮನೂರಿನ ಘಟನೆ ಸಂಬಂಧ ಗೃಹ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಪ್ರತಿಯೊಬ್ಬರ ತಪ್ಪುಗಳನ್ನು ಅದರಲ್ಲಿ ಉಲ್ಲೇಖಿಸಲಾಗಿದೆ. ಗೃಹ ಇಲಾಖೆಯೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.
–ಕಮಲ್‌ ಪಂತ್‌, ಎಡಿಜಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT