ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂಜರಾ ನದಿಯಲ್ಲಿ ಮುಂದುವರಿದ ಪ್ರವಾಹ

Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಸೋಮವಾರ ಮಳೆ ಬಹುತೇಕ ಕಡಿಮೆಯಾಗಿತ್ತು.

ಕಲಬುರ್ಗಿ ಜಿಲ್ಲೆಯಲ್ಲಿ ಪ್ರವಾಹ ಇಳಿಮುಖವಾಗಿದ್ದು ಸೇಡಂ ತಾಲ್ಲೂಕಿನ ಮಳಖೇಡ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 10ರ ರಾಜ್ಯ ಹೆದ್ದಾರಿ ಮೇಲೆ ವಾಹನಗಳು ಎಂದಿನಂತೆ ಸಂಚರಿಸಿದವು.

ಚಿತ್ತಾಪುರ ತಾಲ್ಲೂಕು ದಂಡೋತಿ ಸೇತುವೆ ಮೇಲೆ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿಲ್ಲ. ಬೆಣ್ಣೆತೊರಾ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಬಿಟ್ಟ ಕಾರಣ ಚಿತ್ತಾಪುರ ತಾಲ್ಲೂಕಿನ ತೆಂಗಳಿ ಬಳಿ ಸೇತುವೆ ಕೊಚ್ಚಿ ಹೋಗಿದೆ.

ಜೇವರ್ಗಿ ತಾಲ್ಲೂಕಿನಾದ್ಯಂತ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಹುಲ್ಲೂರಿನ ಗುರಪ್ಪ ಪಟ್ಟೇದ್‌ಗೆ ಸೇರಿದ 10 ಕುರಿಗಳು ಮೃತಪಟ್ಟಿವೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌)ಯ 25ಜನರನ್ನು ಒಳಗೊಂಡ ಒಂದು ತಂಡವು ಕಲಬುರ್ಗಿಯಲ್ಲಿ ತಂಗಿದೆ.

(ಬೀದರ್‌ ವರದಿ:) ಮಹಾರಾಷ್ಟ್ರದ ಲಾತೂರ ಜಿಲ್ಲೆಯ ಅಣೆಕಟ್ಟೆ ಹಾಗೂ ಬ್ಯಾರೇಜ್‌ಗಳಿಂದ ನೀರು ಬಿಟ್ಟಿರುವುದರಿಂದ ಬೀದರ್‌ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ಮುಂದುವರಿದಿದೆ.

ಲಾತೂರ ಜಿಲ್ಲೆಯ ಧನೆಗಾಂವ ಅಣೆಕಟ್ಟೆ ಹಾಗೂ ನಾಲ್ಕು ಬ್ಯಾರೇಜ್‌ಗಳಿಂದ ನೀರು ಬಿಡಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಎರಡು ತಂಡಗಳು ಭಾಲ್ಕಿ ಹಾಗೂ ಬಸವಕಲ್ಯಾಣದಲ್ಲಿ ಬೀಡುಬಿಟ್ಟಿವೆ.

‘ಭಾರಿ ಮಳೆಯಿಂದ ಜಿಲ್ಲೆಯ 1,50,087 ಹೆಕ್ಟೇರ್  ಪ್ರದೇಶದಲ್ಲಿನ ಸೋಯಾ, ತೊಗರಿ, ಉದ್ದು, ಜೋಳ ಮತ್ತಿತರ ಬೆಳೆಗಳು ಹಾಳಾಗಿವೆ. 2,290 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆ ನೀರು ಪಾಲಾಗಿದ್ದು, ಸುಮಾರು ₹112 ಕೋಟಿ ನಷ್ಟವಾಗಿದೆ’ ಎಂದು ಅವರು ಹೇಳಿದರು.

ಮಂಗಗಳಿಗೆ ಆಹಾರ ಪೂರೈಕೆ : ಮಾಂಜರಾ ನದಿ ಪ್ರವಾಹದಿಂದಾಗಿ ಔರಾದ್ ತಾಲ್ಲೂಕಿನ ಮೂರು ಗ್ರಾಮಗಳಲ್ಲಿ ಮರಗಳಲ್ಲೇ ಉಳಿದಿರುವ 100ಕ್ಕೂ ಹೆಚ್ಚು ಮಂಗಗಳಿಗೆ ಆಹಾರ ಪೂರೈಸಲಾಯಿತು.

ರಾಷ್ಟ್ರೀಯ ವಿಪತ್ತು ನಿರ್ವಹಣೆಯ ಪಡೆಯ ಸದಸ್ಯರು ಧುಪತಮಹಾಗಾಂವದಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಿಗ್ಗೆ ದೋಣಿಯಲ್ಲಿ ತೆರಳಿ ಮರಗಳಿಗೆ ಬ್ರೆಡ್‌ಗಳ ಪೊಟ್ಟಣ ಕಟ್ಟಿ ಬಂದರು.

ಖಾನಾಪುರ ಹಾಗೂ ಹಾಲಹಳ್ಳಿಗಳ ಮರಗಳಲ್ಲಿ ಆಶ್ರಯ ಪಡೆದಿರುವ ಸುಮಾರು 70 ಮಂಗಗಳಿಗೆ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ನೆರವಿನೊಂದಿಗೆ ಮೀನುಗಾರರು ಬಾಳೆಹಣ್ಣು ಹಾಗೂ ಬ್ರೆಡ್‌ಗಳನ್ನು ಮರಕ್ಕೆ ಕಟ್ಟಿ ಬಂದರು.

ಬೀದರ್ ತಾಲ್ಲೂಕಿನ ಯರನಳ್ಳಿ ಗ್ರಾಮದಲ್ಲೂ ಮೂರು ಮರಗಳಲ್ಲಿ ಸುಮಾರು 60 ರಿಂದ 75 ಮಂಗಗಳು ಸಿಲುಕಿವೆ. ಅವುಗಳ ರಕ್ಷಣೆಗೆ ಜಿಲ್ಲಾ ಆಡಳಿತ ಇನ್ನೂ ಮುಂದಾಗಿಲ್ಲ.

ಈಜಲು ಹೋಗಿದ್ದ ವಿದ್ಯಾರ್ಥಿ ಸಾವು
ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕಿನ ಕುಣಿಸಂಗಾವಿ (ಬಸವನಸಂಗೊಳಗಿ)ಯ ಗೋಕಟ್ಟಾದಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿಯೊಬ್ಬ ಭಾನುವಾರ ಮೃತಪಟ್ಟಿದ್ದು, ಸೋಮವಾರ ಶವ ಪತ್ತೆಯಾಗಿದೆ.

ಬಸವರಾಜ ರೇವಣಸಿದ್ದಪ್ಪ (13) ಮೃತಪಟ್ಟವ. ಮೂಲತಃ ಬಿಲಗುಂದಿ ಗ್ರಾಮದ ಈತ ಕುಣಿಸಂಗಾವಿಯ ಅಜ್ಜಿಯ ಮನೆಯಲ್ಲಿ ವಾಸವಾಗಿದ್ದು, 6ನೇ ತರಗತಿಯಲ್ಲಿ ಓದುತ್ತಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT