ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ: ಒಂದು ಸಾವಿರ ಗ್ರಾಮಸ್ಥರ ಸ್ಥಳಾಂತರ

ಮಳೆ ಅಬ್ಬರ ತೀವ್ರ, ತುಂಬಿ ಹರಿಯುತ್ತಿರುವ ಗೋದಾವರಿ
Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಹೈದರಾಬಾದ್ : ತೆಲಂಗಾಣದಲ್ಲಿ ಮಳೆಯ ಆರ್ಭಟ ಇನ್ನಷ್ಟು ತೀವ್ರಗೊಂಡಿದ್ದು, ಕರೀಮ್‌ನಗರ ಜಿಲ್ಲೆಯಿಂದ ಸುಮಾರು ಒಂದು ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಕರೀಮ್‌ನಗರದ ಬೊಯಿನಪಲ್ಲಿ ಗ್ರಾಮದಲ್ಲಿ ನಿರ್ಮಾಣಹಂತದಲ್ಲಿದ್ದ ಮಿದ್‌ಮನೇರು ಅಣೆಕಟ್ಟು ತುಂಬಿ ಹರಿ ದಿದ್ದರಿಂದ ಹಲವು ಲಕ್ಷ ಕ್ಯುಸೆಕ್‌ಗಳಷ್ಟು ನೀರು ನಾಲ್ಕು ಹಳ್ಳಿಗಳಿಗೆ ನುಗ್ಗಿದೆ.

‘ಮಿದ್‌ಮನೇರು ಅಣೆಕಟ್ಟಿನ ಸಮೀಪದಲ್ಲಿನ ಆರು ಹಳ್ಳಿಗಳಲ್ಲಿ ವಾಸವಿರುವ ಒಂದು ಸಾವಿರಕ್ಕೂ ಹೆಚ್ಚು ಗ್ರಾಮಸ್ಥರನ್ನು ಭಾನುವಾರ ಸಂಜೆ ಸ್ಥಳಾಂತರಿಸಲಾಗಿದೆ. ಇದು ಮುನ್ನೆಚ್ಚರಿಕೆಯ ದೃಷ್ಟಿಯಿಂದ ತೆಗೆದುಕೊಂಡ ಕ್ರಮ ವಾಗಿದ್ದು, ಪರಿಸ್ಥಿತಿ ಸುಧಾರಿಸಿದೆ. ಹೀಗಾಗಿ ಅವರನ್ನು ಮರಳಿ ಊರಿಗೆ ಕಳುಹಿಸಲಾಗುವುದು’ ಎಂದು ವಿಶೇಷ ಮುಖ್ಯ ಕಾರ್ಯದರ್ಶಿ (ಕಂದಾಯ) ಪ್ರದೀಪ್‌ ಚಂದ್ರ ತಿಳಿಸಿದರು.

ಮೇದಕ್‌ನಿಂದ ಸಂಪರ್ಕ ಕಲ್ಪಿಸುವ ಚೆಗುಂಟಾ, ಹೈದರಾಬಾದ್‌, ಬೊದ್ಮಟಪಲ್ಲಿ, ನಾರಾಯಣಖೇಡ್‌ ಮತ್ತು ಯೆಲ್ಲಾರೆಡ್ಡಿ ಪ್ರದೇಶಗಳ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಜುರಾಲ, ನಾಗಾರ್ಜುನ ಸಾಗರ, ಶ್ರೀಶೈಲಂ, ಮುಸಿ, ಪುಲಿ ಚಿಂತಲ, ನಿಜಾಮನಗರ, ಶ್ರೀರಾಮ್‌ ಸಾಗರ, ಯೆಲ್ಲಮಪಲ್ಲಿ, ಕದೆಂ, ಸಿಂಗೂರ್‌ ಜಲಾಶಯಗಳಿಂದ ಹೆಚ್ಚುವರಿ  ನೀರನ್ನು ಹೊರಬಿಡಲಾಗುತ್ತಿದೆ.

ತಮ್ಮ ಕ್ಷೇತ್ರಗಳಲ್ಲಿಯೇ ಇದ್ದುಕೊಂಡು ಪ್ರವಾಹ ಪರಿಸ್ಥಿತಿ ಅವಲೋಕಿ ಸುವಂತೆ ಮತ್ತು ಪರಿಹಾರ ಕಾರ್ಯಾ ಚರಣೆಗಳ ಉಸ್ತುವಾರಿ ನಿರ್ವಹಿಸುವಂತೆ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ತಮ್ಮ ಸಹೋದ್ಯೋಗಿಗಳಿಗೆ ಭಾನುವಾರ ಸೂಚಿಸಿದ್ದಾರೆ.

ಸೋಮವಾರ ನಡೆಯಬೇಕಿದ್ದ ಸಚಿವ ಸಂಪುಟದ ಸಭೆಯನ್ನು ರದ್ದುಗೊಳಿಸಿರುವ ರಾವ್‌ ಅವರು , ಜಿಲ್ಲಾ ಮಟ್ಟದ ಅಧಿಕಾರಿಗಳ ಸಹಯೋಗದಲ್ಲಿ ಕೆಲಸ ಮಾಡುವಂತೆ ಮತ್ತು ತಗ್ಗುಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಪ್ರದೇಶ ಗಳಿಗೆ ಸ್ಥಳಾಂತರಿಸುವತ್ತ ಗಮನ ಹರಿಸು ವಂತೆಯೂ ಸಚಿವರಿಗೆ ನಿರ್ದೇಶಿಸಿದ್ದಾರೆ.

ಗೋದಾವರಿ ಮತ್ತು ಅದರ ಉಪನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿರುವುದರಿಂದ ಮಹಾರಾಷ್ಟ್ರದಲ್ಲಿನ ನದಿ ಜಲಾನಯನ  ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸುವಂತೆ ಅವರು ಅದಿಲಾಬಾದ್‌, ನಿಜಾಮಾಬಾದ್, ವಾರಂಗಲ್‌ ಮತ್ತು ಖಮ್ಮಂ ಜಿಲ್ಲೆಗಳ  ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

‘ಹೈದರಾಬಾದ್‌ ಸೇರಿದಂತೆ ರಾಜ್ಯದ ಹಲವೆಡೆ ಭಾರಿ ಮಳೆಯಾಗುತ್ತಿರುವುದರಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಗರದಲ್ಲಿ 1908ರ ಬಳಿಕ ಈ ಮಟ್ಟದಲ್ಲಿ ಪ್ರವಾಹ ಸ್ಥಿತಿ ಉಂಟಾಗಿರುವುದು ಇದೇ ಮೊದಲು’ ಎಂದು ಚಂದ್ರಶೇಖರ ರಾವ್ ಹೇಳಿದ್ದಾರೆ.

ವಾರಂಗಲ್‌ ಮತ್ತು ಭದ್ರಾಚಲಂ ಜಿಲ್ಲೆಗಳಲ್ಲಿ ಗೋದಾವರಿ ನೀರು ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ಗೋದಾವರಿ ಜಲಾನಯನ ಪ್ರದೇಶದ ಎಲ್ಲ ಜಲಾಶಯಗಳೂ ಒಳಹರಿವಿನ ಹೆಚ್ಚಳದಿಂದ ಭರ್ತಿಯಾಗಿವೆ.

ಅಪಾಯಕಾರಿಯಾಗುತ್ತಿರುವ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಸಂಬಂಧ ನೀರಾವರಿ ಸಚಿವ ಹರೀಶ್‌ ರಾವ್‌ ಅವರು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದ್ದಾರೆ.

9 ವರ್ಷದ ಬಳಿಕ ತುಂಬಿದ ಮಾಂಜರಾ
ಮುಂಬೈ:
ಬರದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯಲ್ಲಿ ಕಳೆದ ವಾರಾಂತ್ಯದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಮಾಂಜರಾ ನದಿ ತುಂಬಿ ಹರಿಯುತ್ತಿದ್ದು, ಅಣೆಕಟ್ಟು ಭರ್ತಿಯಾಗಿದೆ.

ಒಸ್ಮಾನಾಬಾದ್‌ ಜಿಲ್ಲೆಯ ಕೈಜ್‌ ಮತ್ತು ಕಾಲಂಬ್‌ಗಳ ಬಳಿ ಹರಿಯುವ ಮಾಂಜರಾ ನದಿ (ಮಂಜಿರಾ ಅಥವಾ ಮಾಂಜ್ರಾ ಎಂಬ ಹೆಸರೂ ಇವೆ) ಲಾತೂರ್‌ ಜಿಲ್ಲೆಗೆ ಕುಡಿಯುವ ನೀರಿನ ಪ್ರಮುಖ ಮೂಲವಾಗಿದೆ. ನಾಲ್ಕು ವರ್ಷದ ಬರದಿಂದ ಅದು ಸಂಪೂರ್ಣ ಬತ್ತಿಹೋಗಿತ್ತು.

ಒಸ್ಮಾನಾಬಾದ್‌ ಜಿಲ್ಲೆಯ ಉತ್ತರದ ಗಡಿಭಾಗದಲ್ಲಿ  ಹರಿಯುವ ನದಿಯು ಲಾತೂರ್‌ ಜಿಲ್ಲೆಯನ್ನು ದಾಟಿ ಕರ್ನಾಟಕದ ಬೀದರ್‌ಗೆ ಪ್ರವೇಶಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT