ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೊದಿಂದ ಮತ್ತೊಂದು ಮೈಲಿಗಲ್ಲು

ಬೆಂಗಳೂರಿನ ಪಿಇಎಸ್‌ ವಿ.ವಿ ಉಪಗ್ರಹ ನಭಕ್ಕೆ * 8 ಉಪಗ್ರಹಗಳ ಯಶಸ್ವಿ ಉಡಾವಣೆ
Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಶ್ರೀಹರಿಕೋಟ: ಹವಾಮಾನ ಮತ್ತು ಚಂಡ ಮಾರುತಗಳ ಮೇಲೆ ಕಣ್ಗಾವಲಿಟ್ಟು ತಾಜಾ ಮಾಹಿತಿ ರವಾನಿಸುವ ‘ಸ್ಕಾಟ್‌ಸ್ಯಾಟ್‌–1’ ಸೇರಿದಂತೆ ದೇಶ– ವಿದೇಶಗಳ ಒಟ್ಟು ಎಂಟು ಉಪಗ್ರಹಗಳನ್ನು ಪ್ರತ್ಯೇಕ ಕಕ್ಷೆಗಳಲ್ಲಿ ಸೇರ್ಪಡೆಗೊಳಿಸುವಲ್ಲಿ  ಪಿಎಸ್‌ಎಲ್‌ವಿ–ಸಿ. 35 ಯಶಸ್ವಿಯಾಗಿದ್ದು, ಈ ಮೂಲಕ ಇಸ್ರೊ ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದೆ.

ಪೂರ್ವ ನಿಗದಿಯಾದಂತೆ ಸೋಮವಾರ ಬೆಳಿಗ್ಗೆ ಇಲ್ಲಿನ ಸತೀಶ್‌ ಧವನ್‌ ಉಡ್ಡಯನ ಕೇಂದ್ರದಿಂದ ಪಿಎಸ್‌ಎಲ್‌ವಿ–ಸಿ.35 ಎಂಟು ಉಪಗ್ರಹಗಳನ್ನು ಹೊತ್ತು ನಭಕ್ಕೆ ಜಿಗಿಯಿತು. ಪಿಎಸ್‌ಎಲ್‌ವಿ ಪ್ರತ್ಯೇಕ  ಕಕ್ಷೆಗಳಲ್ಲಿ ಉಪಗ್ರಹಗಳನ್ನು ಸೇರ್ಪಡೆಗೊಳಿಸುತ್ತಿರುವುದು ಇದೇ ಮೊದಲು.

ಪಿಎಸ್‌ಎಲ್‌ವಿ ಉಡಾವಣಾ ವಾಹನಕ್ಕೆ ಇದು  37 ನೇ ಯಾನವಾಗಿದ್ದು, 371 ಕೆ.ಜಿ.ತೂಕದ ಸ್ಕಾಟ್‌ಸ್ಯಾಟ್‌ ಜೊತೆಗೆ ಅಮೆರಿಕ, ಕೆನಡಾ, ಅಲ್ಜೀರಿಯಾದ ಉಪಗ್ರಹಗಳು ಮತ್ತು ಬೆಂಗಳೂರಿನ ಪಿಇಎಸ್‌ ಮತ್ತು ಐಐಟಿ ಮುಂಬೈನದೂ ಸೇರಿದಂತೆ ಎರಡು ಶೈಕ್ಷಣಿಕ ಉದ್ದೇಶದ ಉಪಗ್ರಹಗಳನ್ನು (ಒಟ್ಟು 675 ಕೆ.ಜಿ ತೂಕ) ಕಕ್ಷೆಗೆ ಸೇರಿಸಿತು.

ಪಿಎಸ್‌ಎಲ್‌ವಿ ಉಡಾವಣಾ ಇತಿಹಾಸದಲ್ಲೇ ಸೋಮವಾರದ ಉಡಾವಣೆ ಮತ್ತು ಸೇರ್ಪಡೆಗೊಳಿಸುವ ಕಾರ್ಯವು ಅತ್ಯಂತ ಸುದೀರ್ಘ ಅವಧಿಯದ್ದಾಗಿದೆ.  ರಾಕೆಟ್‌ ನಭಕ್ಕೆ ಜಿಗಿದ ಕ್ಷಣದಿಂದ 2 ಗಂಟೆ 15 ನಿಮಿಷ 33 ಸೆಕೆಂಡುಗಳಲ್ಲಿ ತನ್ನ ಉದ್ದೇಶಿತ 8 ಉಪಗ್ರಹಗಳನ್ನು ಪ್ರತ್ಯೇಕ ಕಕ್ಷೆಗಳಿಗೆ ಸೇರಿಸುವ ಕಾರ್ಯವನ್ನು ಪೂರ್ಣಗೊಳಿಸಿತು.

ಪಿಎಸ್‌ಎಲ್‌ವಿ–ಸಿ35 ಭಾರತೀಯ ಕಾಲಮಾನ ಬೆಳಿಗ್ಗೆ 9.12 ಕ್ಕೆ ಸರಿಯಾಗಿ ಉಡ್ಡಯನ ವೇದಿಕೆಯಲ್ಲಿ ಪ್ರಥಮ ಹಂತದ ದಹನ  ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದಂತೆ ರಾಕೆಟ್‌ ಮೇಲಕ್ಕೆ ಚಿಮ್ಮಿತು. ಆ ಬಳಿಕ ನಾಲ್ಕು ಹಂತಗಳ ದಹನ ಮತ್ತು ಪ್ರತ್ಯೇಕಗೊಳ್ಳುವ ಕ್ರಿಯೆಯು ಯೋಜನೆಯಂತೆಯೇ ಸಂಪನ್ನಗೊಂಡಿತು.

ಪಿಎಸ್‌ಎಲ್‌ವಿ 16 ನಿಮಿಷ 56 ಸೆಕೆಂಡುಗಳಷ್ಟು ಅವಧಿ ಪಯಣದ ಬಳಿಕ  724 ಕಿ.ಮೀ ದೂರದಲ್ಲಿರುವ ಧ್ರುವೀಯ ಸೂರ್ಯ ಸ್ಥಾಯಿ ಕಕ್ಷೆಯನ್ನು ತಲುಪಿತು.

ಉದ್ದೇಶಿತ ಕಕ್ಷೆಯ ಸಮೀಪ ಅಂದರೆ, ಭೂಮಧ್ಯೆ ರೇಖೆಯ ಬಳಿ ಸಾಗುತ್ತಿದ್ದಂತೆ ಸ್ಕಾಟ್‌ಸ್ಯಾಟ್‌–1ನ್ನು ರಾಕೆಟ್‌ನಿಂದ ಪ್ರತ್ಯೇಕಗೊಳಿಸಿತು. ಮಾತೃ ನೌಕೆಯಿಂದ ಹೊರಬಂದ ಸ್ಕಾಟ್‌ಸ್ಯಾಟ್‌–1 ತನ್ನ ಸೌರಫಲಕಗಳುಳ್ಳ ರೆಕ್ಕೆಗಳನ್ನು ಬಿಡಿಸಿಕೊಂಡಿತು. ಉಪಗ್ರಹ  ಸ್ವತಂತ್ರವಾಗಿ ಈ ಕ್ರಿಯೆ ಮುಗಿಸುತ್ತಿದ್ದಂತೆ ಬೆಂಗಳೂರಿನಲ್ಲಿರುವ ಇಸ್ರೊ ಟೆಲಿಮೆಟ್ರಿ ಟ್ರಾಕಿಂಗ್‌ ಮತ್ತು ಕಮಾಂಡ್‌ ನೆಟ್‌ವರ್ಕ್‌ (ಐಎಸ್‌ಟಿಆರ್‌ಎಸಿ) ಉಪಗ್ರಹವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು.

ಈ ಹಂತ ಮುಗಿದ ಬಳಿಕ ಪಿಎಸ್ಎಲ್‌ವಿಯ  ಎರಡು ಎಂಜಿನ್‌ಗಳನ್ನು  20 ಸೆಕೆಂಡುಗಳ   ಕಾಲ ಪುನಃ ಚಾಲನೆ ನೀಡಲಾಯಿತು. ಇದರಿಂದಾಗಿ ರಾಕೆಟ್‌ ಸೂರ್ಯಸ್ಥಾಯಿ ಧ್ರುವೀಯ ಕಕ್ಷೆಯಿಂದ ಅಂಡಾಕಾರದ ಕಕ್ಷೆಯನ್ನು ಪ್ರವೇಶಿಸಿತು. ಇದು ಭೂಮಿಯಿಂದ 670 ಕಿ.ಮೀ ಎತ್ತರದಲ್ಲಿರುವ ಕಕ್ಷೆ. 50 ನಿಮಿಷಗಳ ಬಳಿಕ  ಪಿಎಸ್‌ಎಲ್‌ವಿ  ದಕ್ಷಿಣ ಧ್ರುವದ ಬಳಿ ಬಂದಾಗ ಮತ್ತೆ ಎಂಜಿನ್‌ಗಳನ್ನು 20 ಸೆಕೆಂಡುಗಳ ಕಾಲ ಚಾಲನೆ ಮಾಡಲಾಯಿತು. ನಂತರ ಪಿಎಸ್‌ಎಲ್‌ವಿಯು ಭೂಮಿಯಿಂದ 669 ಕಿ.ಮೀ ದೂರದಲ್ಲಿರುವ ವೃತ್ತೀಯ ಕಕ್ಷೆಯನ್ನು ಪ್ರವೇಶಿಸಿತು.

ಇದಾಗಿ  ಒಂದು ನಿಮಿಷದ ಬಳಿಕ  ಎಎಲ್‌ಸ್ಯಾಟ್‌–1 , ಎನ್‌ಎಲ್ಎಸ್‌–19, ಐಐಟಿ ಮುಂಬೈನ ಪ್ರಥಮ್‌, ಬೆಂಗಳೂರು ಪಿಇಎಸ್‌ ವಿ.ವಿಯ ಪೈಸ್ಯಾಟ್‌, ಎಎಲ್‌ಸ್ಯಾಟ್‌–1 ಬಿ,ಎಎಲ್‌ಸ್ಯಾಟ್‌ 2 ಬಿ ಮತ್ತು ಪಾಥ್‌ ಫೈಂಡರ್‌–1 ಉಪಗ್ರಹಗಳನ್ನು ಪ್ರತ್ಯೇಕಿಸಿ, ಕಕ್ಷೆಗೆ  ಸೇರ್ಪಡೆಗೊಳಿಸಲಾಯಿತು.

₹ 280 ಕೋಟಿಯಷ್ಟು ಬೇಡಿಕೆ
ವಿವಿಧ ದೇಶಗಳ ಉಪಗ್ರಹಗಳ ಉಡಾವಣೆಗೆ ಇಸ್ರೊ ₹ 280 ಕೋಟಿ ಮೌಲ್ಯದಷ್ಟು ಬೇಡಿಕೆ ಪಡೆದಿದೆ. ಹವಾಮಾನದ ಮಾಹಿತಿಯನ್ನು ನೀಡುವ ಉಪಗ್ರಹ ನಿರ್ಮಾಣಕ್ಕೂ ಹೊರಗಿನಿಂದ ಅಪಾರ ಬೇಡಿಕೆ ಇದೆ ಎಂದು ಇಸ್ರೊ ಅಧಿಕಾರಿಗಳು ತಿಳಿಸಿದ್ದಾರೆ.

ಉಪಗ್ರಹಗಳ ಉಡಾ ವಣೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅಂತರಿಕ್ಷ್‌ ಕಾರ್ಪೊರೇಷನ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್‌.ರಾಕೇಶ್‌, ವಿದೇಶಿ ಉಪಗ್ರಹಗಳ ಉಡಾವಣೆಗಾಗಿ ಈಗಾಗಲೇ ₹ 280 ಕೋಟಿಯಷ್ಟು ಬೇಡಿಕೆ ಬಂದಿದೆ.  ಬರುವ ಎರಡು ಅಥವಾ ಮೂರು ವರ್ಷಗಳಲ್ಲಿ ಇವುಗಳ ಉಡಾವಣೆ ಆಗಲಿದೆ ಎಂದು ತಿಳಿಸಿದರು.

ಅಲ್ಲದೆ, ಇಷ್ಟೇ ಮೌಲ್ಯದ ಇನ್ನಷ್ಟು ಉಪಗ್ರಹಗಳ ಉಡಾವಣೆಗೆ ಅಂತರ ರಾಷ್ಟ್ರೀಯ ಗ್ರಾಹಕರ ಜತೆ ಮಾತುಕತೆ ನಡೆದಿದೆ ಎಂದು ಅವರು ತಿಳಿಸಿದರು.

ಅಂತರಿಕ್ಷ್‌ ಕಳೆದ ವರ್ಷ ₹ 1,923 ಕೋಟಿ ವಹಿವಾಟು ನಡೆಸಿತ್ತು. ಈ ಹಣಕಾಸು ವರ್ಷ ಮುಗಿಯುವ ವೇಳೆಗೆ  ವಹಿವಾಟು ₹ 2,000 ಕೋಟಿ ತಲುಪುವ ಸಾಧ್ಯತೆ ಇದೆ ಎಂದರು.

ಉಪಗ್ರಹಗಳು
ಐಐಟಿ ಮುಂಬೈ ವಿದ್ಯಾರ್ಥಿಗಳು ನಿರ್ಮಿಸಿದ ಎರಡು ಪ್ರಥಮ್‌ (10 ಕೆ.ಜಿ)ಉಪಗ್ರಹಗಳು. ಬೆಂಗಳೂರಿನ ಪಿಇಎಸ್‌ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು  ನಿರ್ಮಿಸಿದ ಪೈಸ್ಯಾಟ್‌(5.25 ಕೆ.ಜಿ) ಉಳಿದ ಐದು ಉಪಗ್ರಹಗಳು ಅಂತರ್‌ ರಾಷ್ಟ್ರೀಯ ಗ್ರಾಹಕರದ್ದಾಗಿದ್ದು,  ಅಲ್ಜೀರಿಯಾದ ಮೂರು ಉಪಗ್ರಹಗಳಾದ, ಎಎಲ್‌ಸ್ಯಾಟ್‌ 1 ಬಿ, ಆಲ್‌ಸ್ಯಾಟ್‌ –2ಬಿ ಮತ್ತು ಆಲ್‌ಸ್ಯಾಟ್‌– 1ಎನ್‌, ಕೆನಡಾದ ಎನ್‌ಎಲ್‌ಎಸ್‌–19 ಮತ್ತು ಅಮೆರಿಕಾದ ಪಾಥ್‌ಫೈಂಡರ್–1.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT