ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ವಶಕ್ಕೆ ಹೋದರೆ ದೇಗುಲದ ಲೂಟಿ ನಡೆದೀತು

ಗೋಕರ್ಣ ದೇವಾಲಯ: ರಾಘವೇಶ್ವರ ಶ್ರೀ ಆತಂಕ
Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ಸರ್ಕಾರ ಮರಳಿ ತನ್ನ ವಶಕ್ಕೆ ಪಡೆದರೆ ದೇವಾಲಯದ ಹಣವನ್ನು ಲೂಟಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ’ ಎಂದು ಹೊಸನಗರ ರಾಮಚಂದ್ರಾಪುರ ಮಠದ  ರಾಘವೇಶ್ವರ ಭಾರತೀ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ಗಿರಿನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ದೇವಾಲಯದ ಅಭಿವೃದ್ಧಿಯ ಹಿತದೃಷ್ಟಿಯಿಂದ  ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ಹಿಂಪಡೆಯುವ ತೀರ್ಮಾನ ತೆಗೆದುಕೊಳ್ಳಬಾರದು’ ಎಂದು ಆಗ್ರಹಿಸಿದರು.

‘ಇತ್ತೀಚೆಗೆ ಹೈಕೋರ್ಟ್‌ನಲ್ಲಿ ಈ ಸಂಬಂಧ ವ್ಯಾಜ್ಯದ ವಿಚಾರಣೆ ನಡೆಯುವಾಗ ಅಡ್ವೊಕೇಟ್‌ ಜನರಲ್‌  ಅವರು, ದೇವಸ್ಥಾನವನ್ನು ಮಠಕ್ಕೆ ವಹಿಸಿಕೊಟ್ಟ ತೀರ್ಮಾನದ ಕುರಿತಂತೆ ಪುನರ್‌ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.  ವಾಸ್ತವದಲ್ಲಿ ದೇವಸ್ಥಾನವನ್ನು ಸ್ವಾಧೀನಕ್ಕೆ ವಹಿಸಿಕೊಡಿ ಎಂದು ನಾವು ಯಾವತ್ತೂ ಸರ್ಕಾರವನ್ನು ಕೇಳಿಕೊಂಡಿರಲಿಲ್ಲ. ಬದಲಾಗಿ ಎಂಟು ವರ್ಷಗಳ ಹಿಂದೆ ಸರ್ಕಾರವೇ  ದೇವಾಲಯ ಮಠದ್ದು ಎಂದು ನ್ಯಾಯಾಲಯದಲ್ಲಿ ಅಫಿಡೆವಿಟ್‌ ಸಲ್ಲಿಸಿತ್ತು’ ಎಂದರು.

‘ಪುರಾತನ ಮಹಾಬಲೇಶ್ವರ ದೇವಾಲಯ ಅನಾದಿ ಕಾಲದಿಂದಲೂ ಮಠದ ಆಡಳಿತಕ್ಕೆ ಒಳಪಟ್ಟಿತ್ತು.   2007ಕ್ಕೂ ಮುನ್ನ ಕೆಲವು ಕಾಲ ಮುಜರಾಯಿ ಆಡಳಿತಕ್ಕೆ ಒಳಪಟ್ಟಿತ್ತು. ಆದರೆ 2008ರಲ್ಲಿ ಭಕ್ತರ ಒತ್ತಾಯಕ್ಕೆ  ಮಣಿದು ಸರ್ಕಾರ ಪುನಃ ಮಠಕ್ಕೆ ಹಸ್ತಾಂತರಿಸಿತು’ ಎಂದು ವಿವರಿಸಿದರು.

‘2008ರಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಹಸ್ತಾಂತರವಾದ ಮೇಲೆ ಮೂಲಸೌಕರ್ಯ ಸೇರಿದಂತೆ ನಿತ್ಯ ಅನ್ನದಾಸೋಹ, ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನದಂಥ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇವೆ. ದಲಿತರಿಗೆ, ವೀರಶೈವ ಸಂತರಿಗೆ ದೇವಾಲಯದ ಒಳಗೆ ಪ್ರವೇಶಕ್ಕೆ ಅವಕಾಶ ನೀಡಿದ್ದೇವೆ. ದೇವಾಲಯದ ಖರ್ಚು ವೆಚ್ಚದ ಸಂಪೂರ್ಣ ಲೆಕ್ಕಪತ್ರ ನಮ್ಮಲ್ಲಿದೆ.  ಅಭಿವೃದ್ಧಿ ಕಾರ್ಯಗಳಿಗೆ ಮಠದ ಹಣವನ್ನೂ ಬಳಸಿದ್ದೇವೆ’ ಎಂದು  ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT