ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಡ್ಸ್‌ ನಿಯಂತ್ರಣದ ಹೆಸರಿನಲ್ಲಿ ಅವ್ಯವಹಾರ

ಕೆಎಸ್‌ಎಪಿಎಸ್‌ದಿಂದ ಹಣ ದುರ್ಬಳಕೆ: ಎನ್‌.ಆರ್‌. ರಮೇಶ್‌ ಆರೋಪ
Last Updated 26 ಸೆಪ್ಟೆಂಬರ್ 2016, 20:13 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣ ಸೊಸೈಟಿಯಿಂದ (ಕೆಎಸ್‌ಎಪಿಎಸ್‌) ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಲಾಗಿದೆ’ ಎಂದು ಬಿಜೆಪಿ ನಗರ ಜಿಲ್ಲಾ ಘಟಕದ ವಕ್ತಾರ ಎನ್‌.ಆರ್‌. ರಮೇಶ್‌ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಆರೋಗ್ಯ ಇಲಾಖೆ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಕೆಎಸ್‌ಎಪಿಎಸ್‌ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲದೆ ಬಿಲ್‌ ಗೇಟ್ಸ್‌ ಪ್ರತಿಷ್ಠಾನ ಸೇರಿದಂತೆ ವಿವಿಧ ಮೂಲಗಳಿಂದ ನೂರಾರು ಕೋಟಿ ಅನುದಾನ ಬರುತ್ತದೆ. ಏಡ್ಸ್‌ ನಿಯಂತ್ರಣದ ಹೆಸರಿನಲ್ಲಿ ಆ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ’ ಎಂದು ದೂರಿದರು.

‘ಹಣ ವ್ಯಯಿಸಿದ್ದಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಈ ಸೊಸೈಟಿಗೆ ಮುಖ್ಯಮಂತ್ರಿ ಅಧ್ಯಕ್ಷರಾದರೆ, ಆರೋಗ್ಯ ಸಚಿವರು ಉಪಾಧ್ಯಕ್ಷರು. ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಯು.ಟಿ. ಖಾದರ್‌ ಅವರ ಅವಧಿಯಲ್ಲೇ ಅಕ್ರಮಗಳು ನಡೆದಿವೆ’ ಎಂದು ನೇರ ಆರೋಪ ಮಾಡಿದರು.

‘ಏಡ್ಸ್‌ ನಿಯಂತ್ರಣಕ್ಕಾಗಿ ಕಾರ್ಯ ನಿರ್ವಹಿಸಬೇಕಿದ್ದ ಕೆಎಸ್‌ಎಪಿಎಸ್‌, ‘ಕಾಂಡೋಮ್ ಸೋಷಿಯಲ್ ಮಾರ್ಕೆಟಿಂಗ್ ಪೋಗ್ರಾಮ್’ ಆರಂಭಿಸಿ ಎಚ್‌ಐವಿಪೀಡಿತ ಹೆಣ್ಣುಮಕ್ಕಳಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಾಗ ಕಾಂಡೋಮ್ ಬಳಕೆ ಮಾಡುವಂತೆ ಹೇಳುತ್ತಿದೆ. ಆ ಮೂಲಕ ವೇಶ್ಯಾವಾಟಿಕೆಗೆ ಉತ್ತೇಜನ ನೀಡುತ್ತಿದೆ’ ಎಂದು ಆಪಾದಿಸಿದರು.

‘ಕಾಂಡೋಮ್‌ಗಳನ್ನು ಸರ್ಕಾರಿ ಸಂಸ್ಥೆಯ ಬದಲು ಖಾಸಗಿ ಉತ್ಪಾದಕರಿಂದ ಖರೀದಿಸಿ, ಅದರಲ್ಲೂ ವಂಚನೆ ಎಸಗಲಾಗಿದೆ’ ಎಂದರು.
‘82 ಸಾವಿರ ಲೈಂಗಿಕ ಕಾರ್ಯಕರ್ತೆಯರು, 29 ಸಾವಿರ ಸಲಿಂಗಕಾಮಿಗಳು ಹಾಗೂ 1,700 ಮಂಗಳಮುಖಿಯರು ಏಡ್ಸ್ ಪೀಡಿತರಾಗಿ ಕೆಎಸ್‌ಎಪಿಎಸ್‌ಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ನೀಡಲಾಗಿದೆ. ಅಲ್ಲದೆ 1.62 ಲಕ್ಷ ವಲಸಿಗರು, 80 ಸಾವಿರ ಟ್ರಕ್ ಚಾಲಕರು ಸೊಸೈಟಿಯಿಂದ ಚಿಕಿತ್ಸೆ ಪಡೆ ದುಕೊಂಡಿದ್ದಾರೆ ಎಂದು ದಾಖಲೆಗಳಲ್ಲಿ ತೋರಿಸಲಾಗಿದೆ. ಈ ಬಗ್ಗೆ ಯಾವುದಕ್ಕೆ, ಎಷ್ಟು ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ಕೇಳಿದರೆ ಕೊಡುತ್ತಿಲ್ಲ. ಏಕೆಂದರೆ, ಅವುಗಳೆಲ್ಲ ಬೋಗಸ್‌ ದಾಖಲೆಯಾಗಿವೆ’ ಎಂದು ದೂರಿದರು.

‘ಡಾ. ಲೀಲಾ ಸಂಪಿಗೆ ಎಂಬುವರಿಗೆ ಮೂರು ಹುದ್ದೆಗಳನ್ನು (ರಾಷ್ಟ್ರೀಯ ಆರೋಗ್ಯ ಅಭಿಯಾನದ ಜಂಟಿ ನಿರ್ದೇಶಕಿ, ಕೆಎಸ್‌ಎಪಿಎಸ್‌ ಜಂಟಿ ನಿರ್ದೇಶಕಿ ಹಾಗೂ ಲೈಂಗಿಕ ಕಾರ್ಯಕರ್ತರ ಸ್ಥಿತಿಗತಿ ಅಧ್ಯಯನ ಸಮಿತಿಯ ಸದಸ್ಯ ಕಾರ್ಯದರ್ಶಿ) ನೀಡಲಾಗಿದ್ದು, ಪ್ರತಿ ಹುದ್ದೆಗೆ ಪ್ರತ್ಯೇಕ ವೇತನವನ್ನೂ ನೀಡಲಾಗುತ್ತಿದೆ. ಈ ನೇಮಕದ ಕುರಿತಂತೆ ಖಾದರ್‌ ಅವರೇ ವಿವರಣೆ ನೀಡಬೇಕು’ ಎಂದು ಆಗ್ರಹಿಸಿದರು.

‘ಕೆಎಸ್‌ಎಪಿಎಸ್‌ಗೆ ಇದುವರೆಗೆ ₹ 600 ಕೋಟಿಯಷ್ಟು ಅನುದಾನ ಬಂದಿದ್ದು, ಅದರಲ್ಲಿ  ಬಹುಪಾಲು ಹಣ ದುರ್ಬಳಕೆಯಾಗಿದೆ. ಈ ಮಾಹಿತಿ ಕೇಂದ್ರ ಸರ್ಕಾರಕ್ಕೆ ಸಿಕ್ಕಿದ್ದರಿಂದ ಅನುದಾನ ಕೊಡುವುದನ್ನು ನಿಲ್ಲಿಸಲಾಗಿದೆ’ ಎಂದು ಮಾಹಿತಿ ನೀಡಿದರು. ‘ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಸಿಎಂಎಂ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT