ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿಗಳನ್ನು ಕೊಂದು ಮೆರವಣಿಗೆ ನಡೆಸಿದ ರಾಜಕಾರಣಿಗಳು!

Last Updated 27 ಸೆಪ್ಟೆಂಬರ್ 2016, 11:26 IST
ಅಕ್ಷರ ಗಾತ್ರ

ಕೋಟ್ಟಯಂ: ಕೇರಳದಲ್ಲಿ ಬೀದಿ ನಾಯಿ ಉಪಟಳಕ್ಕೆ ರಾಜ್ಯ ಸರ್ಕಾರ ಲಗಾಮು ಹಾಕಬೇಕೆಂದು ಒತ್ತಾಯಿಸಿ ಕೋಟ್ಟಯಂ ಜಿಲ್ಲೆಯಲ್ಲಿ ಯೂತ್ ಫ್ರಂಟ್ ಕಾಂಗ್ರೆಸ್ (ಮಾಣಿ) ಪಕ್ಷದ ಕಾರ್ಯಕರ್ತರು 'ವಿಚಿತ್ರ' ಪ್ರತಿಭಟನೆ ನಡೆಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಬೀದಿನಾಯಿಗಳು ಮನುಷ್ಯರ ಮೇಲೆ ದಾಳಿ ನಡೆಸಿದ ಪ್ರಕರಣಗಳು ಹೆಚ್ಚಾಗಿದ್ದವು. ಬೀದಿ ನಾಯಿ ಉಪಟಳವನ್ನು ನಿಯಂತ್ರಿಸುವ ಸಲುವಾಗಿ ನಾಯಿಗಳನ್ನು ಕೊಲ್ಲಲು ಕೇರಳ ಸರ್ಕಾರ ಆದೇಶಿಸಿತ್ತು. ಆದರೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ, ನಾಯಿಗಳನ್ನು ಕೊಲ್ಲುವ ಆದೇಶದ ವಿರುದ್ಧ ಕಿಡಿಕಾರಿದ್ದರು. ಪ್ರಾಣಿಹತ್ಯೆಯನ್ನು ಖಂಡಿಸಿದ ಮನೇಕಾ ಗಾಂಧಿ ರಾಜ್ಯ ಸರ್ಕಾರದ ತೀರ್ಮಾನವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇತ್ತ, ಕೇರಳದಲ್ಲಿನ ಪ್ರಾಣಿ ದಯಾ ಸಂಘಟನೆಗಳು ಮನೇಕಾ ಗಾಂಧಿ ಜತೆ ದನಿಗೂಡಿಸಿದ್ದವು.

ಆದರೆ ದಿನೇ ದಿನೇ ಬೀದಿ ನಾಯಿಗಳ ಉಪದ್ರವ ಹೆಚ್ಚಾಗುತ್ತಿರುವುದರಿಂದ ಯೂತ್ ಫ್ರಂಟ್ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ 10 ಬೀದಿ ನಾಯಿಗಳನ್ನು ಕೊಂದು, ಆ ನಾಯಿಗಳನ್ನು ಬಡಿಗೆಗೆ ಕಟ್ಟಿ ಮೆರವಣಿಗೆ ನಡೆಸಿದ್ದಾರೆ.

ನಗರದಾದ್ಯಂತ ಮೆರವಣಿಗೆ ನಡೆಸಿದ ಕಾರ್ಯಕರ್ತರು ಸತ್ತ ನಾಯಿಗಳನ್ನು ಮನೇಕಾ ಗಾಂಧಿ ಅವರಿಗೆ ಅಂಚೆ ಮೂಲಕ ಕಳುಹಿಸಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿ ಅಂಚೆ ಕಚೇರಿಯ ಮುಂದೆ ಸತ್ತ ನಾಯಿಗಳನ್ನು ರಾಶಿ ಹಾಕಿದ್ದಾರೆ.

ಕೋಟ್ಟಯಂನಲ್ಲಿ ಹಲವಾರು ವ್ಯಕ್ತಿಗಳು ನಾಯಿಗಳ ದಾಳಿಗೆ ತುತ್ತಾಗಿದ್ದಾರೆ, ನಾನೂ ನಾಯಿಯನ್ನು ಇಷ್ಟ ಪಡುತ್ತೇನೆ. ಆದರೆ ಆಕ್ರಮಣಕಾರಿಯಾದ ನಾಯಿಗಳನ್ನು ಕೊಂದು ಜನರನ್ನು ರಕ್ಷಿಸಬೇಕಾಗಿದೆ ಎಂದು ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆ.

ಪ್ರತಿಭಟನಾಕಾರರು ಅಂಚೆ ಕಚೇರಿ ಮುಂದೆ ರಾಶಿ ಹಾಕಿದ್ದ ಸತ್ತ ನಾಯಿಗಳನ್ನು ಸರ್ಕಾರಿ ಸಿಬ್ಬಂದಿಗಳು ತೆರವು ಗೊಳಿಸಿದ್ದಾರೆ.
ವರದಿಗಳ ಪ್ರಕಾರ ನಾಯಿಗಳನ್ನು ಕೊಂದು ಪ್ರತಿಭಟನೆ ನಡೆಸಿದ 15 ಜನರ ವಿರುದ್ಧ ಪೊಲೀಸರು ಪ್ರಾಣಿ ಹತ್ಯಾ ತಡೆ ಕಾಯ್ದೆಯಡಿಯಲ್ಲಿ ಭಾರತೀಯ ದಂಡ ಸಂಹಿತೆ 428 ಮತ್ತು 429 ಸೆಕ್ಷನ್  ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT