ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೋಷ ಹಂಚಲಿಕ್ಕಾಗಿಯೇ ಹುಟ್ಟಿದವರು ನಾವು!

Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನಮ್ಮೆಲ್ಲರದ್ದೂ ಬಹಳ ಸಾಮಾನ್ಯವಾದ ಆಸೆಯೊಂದಿದೆ. ಸಂತೋಷದಿಂದ ಬದುಕಬೇಕು ಎನ್ನುವ ತೀರಾ ಸಾಮಾನ್ಯವಾದ ಆಸೆ ಅದು! ಸಂತೋಷದಿಂದ ಬದುಕಬೇಕು ಎಂಬ ಆಸೆ ಇರುವುದು ತೀರ ಸಹಜ; ಸತ್ಯವಾಗಿಯೂ ಸಂತೋಷದಿಂದ ಬದುಕಲಿಕ್ಕಾಗಿಯೇ ಹುಟ್ಟಿದವರು ನಾವು!

ಹಾಗಾದರೆ, ಸಂತೋಷವಾಗಿ ಇದ್ದೇವೆಯೆ – ಎಂದು ಪ್ರಶ್ನಿಸಿಕೊಂಡರೆ, ಸಂಪೂರ್ಣವಾಗಿ ಸಂತೋಷದಿಂದ ಇದ್ದೇವೆ ಎಂದು ಹೇಳುವವರು ನಮ್ಮ ಸುತ್ತ ಮುತ್ತ ಹತ್ತೂರಿನಲ್ಲೆಲ್ಲೂ ಸಿಗಲಿಕ್ಕಿಲ್ಲ. ಸಂಸಾರ ಅಂದಮೇಲೆ ಯಾರಿಂದಲಾದರೂ ಹಾಗೆಲ್ಲ ಸಂತೋಷದಿಂದ ಇರಲಿಕ್ಕೆ ಸಾಧ್ಯವಾ – ಎಂದು ಕೇಳುತ್ತಾರೆ.

ಜಗತ್ತಿನಲ್ಲಿ ಯಾರೂ ಕೂಡ ಯಾವಾಗಲೂ ಸಂತೋಷದಿಂದ ಇರಲಾರರು ಎಂದೂ ಹೇಳುತ್ತಾರೆ. ಇನ್ನು ಕೆಲವರು ತಾವು ಸಂತೋಷವಾಗಿ ಇಲ್ಲದಿರುವುದಕ್ಕೆ ಸಾಕಷ್ಟು ಕಾರಣಗಳನ್ನು ಪಟ್ಟಿ ಮಾಡಿಕೊಂಡಿರುತ್ತಾರೆ.

ತನ್ನ ಅಸಂತೋಷಕ್ಕೆ ಯಾರುಯಾರು ಕಾರಣ ಎಂದೂ, ತನ್ನ ಅಸಂತೋಷಕ್ಕೆ ಯಾವುದೆಲ್ಲ ಇಲ್ಲದಿರುವುದು ಕಾರಣ ಎಂದೂ ಹೇಳುತ್ತಾರೆ. ತಾನು ಬೇರೇನೋ ಕೆಲಸವನ್ನು ಮಾಡಿರುತ್ತಿದ್ದರೆ ಸಂತೋಷವಾಗಿರುತ್ತಿದ್ದೆ ಎಂದೋ, ತನಗೆ ಬೇರೊಂದು ಕಂಪೆನಿಯಲ್ಲಿ ಕೆಲಸ ಸಿಕ್ಕಿರುತ್ತಿದ್ದರೆ ಸಂತೋಷವಾಗಿರುತ್ತಿದ್ದೆ ಅಂತಲೋ, ತಾನು ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಿದಿದ್ದರೆ ಖಂಡಿತವಾಗಿಯೂ ಸಂತೋಷವಾಗಿರುತ್ತಿದ್ದೆ ಎಂದೋ,

ಪದೇ ಪದೇ ತನಗೆ ನೆಗಡಿಯಾಗುವುದು ಇಲ್ಲವಾಗಿದ್ದರೆ ಸಂತೋಷವಾಗಿರುತ್ತಿದ್ದೆ ಎಂದೋ, ತಾನು ಬೆಳ್ಳಗಿದಿದ್ದರೆ, ತಾನು ಇನ್ನೂ ಮೂರಿಂಚು ಎತ್ತರವಾಗಿ, ತಾನು ಸಿಕ್ಸ್ ಪ್ಯಾಕ್ ಮಾಡಿಕೊಂಡಿದಿದ್ದರೆ ಅಥವಾ ಅದೇನನ್ನೋ ಗೆದ್ದುಕೊಂಡಿದಿದ್ದರೆ ಸಂತೋಷವಾಗಿರುತ್ತಿದ್ದೆ ಎಂದೋ, ಅಮೆರಿಕದಲ್ಲಿ ಹುಟ್ಟಿದಿದ್ದರೆ ನಿಜಕ್ಕೂ ಸಂತೋಷದಿಂದ ಇರುತ್ತಿದ್ದೆ ಎಂದೋ ಹೇಳುವವರು ಸಿಗುತ್ತಾರೆ! ಅವರಂದುಕೊಂಡಂತೆಯೇ ಆಗಿರುತ್ತಿದ್ದರೆ ನಿಜಕ್ಕೂ ಅವರು ನಿತ್ಯ ಸಂತೋಷದಿಂದ ಇರುತ್ತಿದ್ದರೆ? ಇಲ್ಲ! ಹಾಗಿರುತ್ತಿದ್ದರೆ ಅಥವಾ ಹಾಗಾದಾಗ ಅಥವಾ ಅಲ್ಲೆಲ್ಲೋ ಇರುತ್ತಿದ್ದರೆ, ನಿಜಕ್ಕೂ ಸಂತೋಷವಾಗಿ ಇರುತ್ತಿದ್ದೆವೆ? ಖಂಡಿತ ಇಲ್ಲ!

ತನ್ನ ಸಂತೋಷಕ್ಕೆ ಬೇರೊಂದು ವ್ಯಕ್ತಿ, ಶಕ್ತಿ ಅಥವಾ ಸನ್ನಿವೇಶ ಕಾರಣ ಎನ್ನುವ ಮನಃಸ್ಥಿತಿಯ ವ್ಯಕ್ತಿ ಎಲ್ಲೇ ಇದ್ದರೂ, ಹೇಗೇ ಇದ್ದರೂ ಸಂತೋಷದಿಂದ ಇರಲಾರ.ಅಕಸ್ಮಾತ್ ಅವನು ಆಸೆ ಪಡುತ್ತಿರುವುದು ಸಿಕ್ಕರೂ ಅಲ್ಲಿಂದ ಮುಂದೆ ಆತ ಸಂತೋಷವಾಗಿ ಬದುಕುತ್ತಾನೆ ಎನ್ನುವಂತಿಲ್ಲ.

ತನ್ನಲ್ಲಿ ಇರುವುದರಲ್ಲಿ ಈಗ ಸಂತೋಷವನ್ನು ಕಾಣಲಾರದ ವ್ಯಕ್ತಿ ಮುಂದೊಮ್ಮೆ ಅವನು ಆಸೆ ಪಡುತ್ತಿರುವುದು ಸಿಕ್ಕಾಗಲೂ ಮತ್ತೇನನ್ನೋ ಆಸೆಪಡುತ್ತ ಇರುತ್ತಾನೆಯೇ ವಿನಾ ಹೃತ್ಪೂರ್ವಕವಾಗಿ ಸಂತೋಷವನ್ನು ಅನುಭವಿಸಲಾರ. ಮಳೆಗಾಲದಲ್ಲಿ ಮಳೆ ಬರುತ್ತಿದ್ದರೆ ಬಿಸಿಲನ್ನು ಬಯಸುತ್ತಾ ಬೇಸರಿಸಿಕೊಳ್ಳುವವರಿದ್ದಾರೆ.

ಬೇಸಿಗೆಯಲ್ಲಿ ಧಗೆ ಧಗೆ ಎನ್ನುತ್ತಾ ಮಳೆಗಾಲದ ತಂಪನ್ನು ಬಯಸುತ್ತಾ ದುಃಖಿಸುತ್ತಾರೆ. ಇನ್ನು ಚಳಿಗಾಲದ ಕತೆಯಂತೂ ಹೇಳತೀರದು. ಅವರು ಬೇಸಿಗೆಯಲ್ಲಿ ಬಿಸಿಲನ್ನು ಸಂತೋಷದಿಂದ ಅನುಭವಿಸಲಾರರು. ಮುಂದೆ ಮಳೆಗಾಲ, ಚಳಿಗಾಲದಲ್ಲಿಯೂ ಇದೇ ಕತೆ. ಇವರೆಲ್ಲರೂ ಇರುವುದನ್ನು ಬಿಟ್ಟು, ಇಲ್ಲದಿರುವುದರಲ್ಲಿ ತಮ್ಮ ಸಂತೋಷವನ್ನು ಇಟ್ಟುಕೊಂಡಿರುತ್ತಾರೆ! ಇಂತಹ ಮನಃಸ್ಥಿತಿಯ ಮನುಷ್ಯರು ಯಾವಾಗಲೂ ಸಂತೋಷಪಡಲಾರರು.

ಅವರು ಅಸಂತೋಷಪಡಲಿಕ್ಕಾಗಿಯೇ ಹುಟ್ಟಿದವರು! ಅವರು ಸಂತೋಷವನ್ನು ಗುರುತಿಸಲಾರರು. ಇನ್ನೂ ವಿಚಿತ್ರವೆಂದರೆ, ಅವರು ಸಂತೋಷಪಡುವವರನ್ನು ಕೂಡ ಸಹಿಸಲಾರರು! ಇತರರು ಸಂತೋಷವಾಗಿದ್ದಾರೆ ಅಂತಂದುಕೊಂಡು ಇವರು ಅಸಂತೋಷವನ್ನು ಅನುಭವಿಸುತ್ತಾರೆ! ಇಂತಹ ವ್ಯಕ್ತಿಗಳಿಗೆ ಸುಖವಾದ ನಿದ್ರೆಯೂ ಬರುವುದಿಲ್ಲ. ರಾತ್ರಿ ಆರೆಂಟು ತಾಸು ಸೊಗಸಾದ ನಿದ್ರೆಯೇ ಬರದಿದ್ದರೆ ಯಾರಾದರೂ ಮತ್ತೆಂತಹ ಸಂತೋಷವನ್ನು ಅನುಭವಿಸಿಯಾರು?

ನಿಮಗೆ ಏನು ಸಿಕ್ಕರೆ ಸಂತೋಷವಾಗಿರುತ್ತೀರಾ? ಎಂದು ಮಿ. ರಾವ್ ಅವರನ್ನು ಕೇಳಿದೆ: ‘ನನಗೆ ಅರ್ಜೆಂಟಿಗೆ ಒಂದು ಕೋಟಿ ರೂಪಾಯಿ ಸಿಕ್ಕರೆ ನನ್ನ ಸದ್ಯದ ಸಮಸ್ಯೆಗಳು ನಿವಾರಣೆಯಾಗುತ್ತವೆ. ನಂತರ ನಾನು ಸಂತೋಷವಾಗಿರುತ್ತೇನೆ’ ಅಂದರು.

‘ಸರಿ. ನಾಳೆಯೇ ನಿಮಗೆ ಒಂದು ಕೋಟಿ ರೂಪಾಯಿ ಸಿಕ್ಕಿತು ಅಂತಿಟ್ಟುಕೊ.. ’ ನನ್ನ ಮಾತನ್ನು ಅರ್ಧದಲ್ಲಿಯೇ ತಡೆದು, ಮಿ.ರಾವ್, ‘ತಮಾಷೆ ಮಾಡಬೇಡಿ, ಸ್ವಾಮೀ’ ಎಂದು ನಕ್ಕರು. ನಾನು ನಗಲಿಲ್ಲ. ಮತ್ತೆ ನನ್ನ ಮಾತನ್ನು ಮುಂದುವರೆಸಿದೆ.  ‘ನಾಳೆಯೇ ನಿಮಗೆ ಒಂದು ಕೋಟಿ ರೂಪಾಯಿ ಸಿಕ್ಕಿತು ಅಂತಿಟ್ಟುಕೊಳ್ಳಿ.. ನಿಮ್ಮ ಸಮಸ್ಯೆಗಳೆಲ್ಲ ಪರಿಹಾರವಾಗುತ್ತವೆ.. ’

ಮತ್ತೆ ನನ್ನ ಮಾತನ್ನು ಅರ್ಧದಲ್ಲಿಯೇ ತಡೆದು ಮಿ. ರಾವ್, ‘ನಿಜಕ್ಕೂ ನನಗೆ ಸಂತೋಷವಾಗುತ್ತದೆ’ ಎಂದು ಕಣ್ಣರಳಿಸಿದರು. ಅವರ ಮುಖದಲ್ಲಿ ಮಿಂಚು ಹಾದು ಹೋಯಿತು. ‘ಅದು ಸರಿ. ಮಿ.ರಾವ್, ಆ ಒಂದು ಕೋಟಿಯಲ್ಲಿ ಹತ್ತು ಪರ್ಸೆಂಟನ್ನು ನನಗೆ ಕೊಡಬೇಕು!’ ಅಂದೆ. ಅದಕ್ಕೆ ಅವರು ‘ ಅರೆರೇ, ಕೋಟಿ ಸಿಗುವುದು ನನಗೆ. ಅದರಲ್ಲಿ ನಿಮಗೇತಕ್ಕೆ ಪಾಲು ಕೊಡಬೇಕು? ಅದಾಗಲ್ಲ!!’ ಅಂದುಬಿಟ್ಟರು. ಇನ್ನೂ ಕೈಸೇರದ ಹಣದಲ್ಲಿ ಒಂದಿಷ್ಟನ್ನು ಕೊಡಲಿಕ್ಕೆ ಮನಸ್ಸಿಲ್ಲದ ಮಿ. ರಾವ್‌ಗೆ ಸಂತೋಷ ಎನ್ನುವುದು ಕನ್ನಡಿಯೊಳಗಿನ ಗಂಟು.

ಹಂಚಿಕೊಂಡರೆ ಮಾತ್ರ ಸಂತೋಷ ಹೆಚ್ಚುತ್ತದೆ ಎನ್ನುವುದು ನಿಸರ್ಗದ ನಿಯಮ. ಆಪ್ತೇಷ್ಟರಲ್ಲಿ ಹಂಚಿಕೊಳ್ಳುವುದರಿಂದ ದುಃಖ ಕಡಿಮೆಯಾಗುತ್ತದೆ ಎನ್ನುವುದೂ ಅಷ್ಟೇ ನಿಜ.

ಇಲ್ಲಿ ಹೇಳಬೇಕಾಗಿರುವ ಮತ್ತೊಂದು ಮುಖ್ಯವಾದ ವಿಷಯವೇನೆಂದರೆ ಹಣವೇ ಬೇರೆ, ಸಂತೋಷವೇ ಬೇರೆ. ಹಣದಿಂದ ಸಂತೋಷವನ್ನು ಖರೀದಿಸಲಿಕ್ಕೆ ಸಾಧ್ಯವಿಲ್ಲ. ಹಣ ಎನ್ನುವುದು ಬದುಕಿಗೆ ಒಂದಿಷ್ಟು ಭದ್ರತೆಯನ್ನು ಒದಗಿಸುತ್ತದೆ. ಆ ಮೂಲಕ ಖಂಡಿತವಾಗಿಯೂ ಒಂದಿಷ್ಟು ನೆಮ್ಮದಿ ಸಿಗುತ್ತದೆ. ಅಷ್ಟರ ಮಟ್ಟಿಗೆ ಎಲ್ಲರಿಗೂ ಹಣದ ಅಗತ್ಯವಿದೆ.

ಅವರವರ ಅಗತ್ಯ ಮತ್ತು ಅರ್ಹತೆಗೆ ತಕ್ಕಂತೆ ಎಲ್ಲರೂ ದುಡಿಯುತ್ತಾರೆ ಮತ್ತು ಹಣವನ್ನು ಗಳಿಸುತ್ತಾರೆ. ಇದು ಜೀವನ ಧರ್ಮ. ಒಳ್ಳೆಯ ಗೆಳೆಯರು, ಒಳ್ಳೆಯ ಓದು, ಒಳ್ಳೆಯ ಹವ್ಯಾಸ, ಬರವಣಿಗೆ, ನೃತ್ಯ, ವ್ಯಾಯಾಮ, ಪ್ರವಾಸ, ಧನಾತ್ಮಕ ಆಲೋಚನೆ, ಹೊಸ ಹೊಸ ಕಲಿಕೆ – ಎಲ್ಲವೂ ಬದುಕಿನಲ್ಲಿ ಸಂತೋಷವನ್ನು ಕೊಡುತ್ತವೆ. 

ಇನ್ನು ಮನಸ್ಸಿಗೆ ಬೇಸರವಾದಾಗ ತನ್ನ ಜೇಬಿನಲ್ಲಿರುವ ಹಣವನ್ನು ತೆಗೆದು ಎಣಿಸುವುದರಿಂದಾಗಲೀ, ತನ್ನ ಬೆಲೆ ಬಾಳುವ ಕಾರನ್ನು ಸವರುವುದರಿಂದಾಗಲೀ, ತನ್ನ ಬಂಗಾರದ ಹಾರವನ್ನು ಹಾಕಿಕೊಳ್ಳುವುದರಿಂದಾಗಲೀ ಸಂತೋಷ ಸಿಗುತ್ತದೆ ಎಂದು ಯಾರೂ ಹೇಳಲಾರರು. ಬೇಸರವಾದಾಗ, ಒಂಟಿತನ ಕಾಡಿದಾಗ ತಕ್ಷಣಕ್ಕೆ ಹೀಗೆ ಮಾಡಿ. ಹುಲ್ಲುಹಾಸಿನ ಮಲೆ ಅಂಗಾತ ಮಲಗಿಕೊಳ್ಳಿ. ಅಥವಾ ಗೋಡಿಗೋ, ಮರಕ್ಕೋ ಒರಗಿ ನಿಂತುಕೊಳ್ಳಿ. ಕತ್ತೆತ್ತಿ ಆಕಾಶವನ್ನು ನೋಡಿ.

ಮೇಲೆ ಆಕಾಶದಲ್ಲಿ ಬಣ್ಣ ಬಣ್ಣಗಳ ಮೋಡಗಳ ಚಲನೆಯನ್ನು ನೋಡಿ. ಕ್ಷಣಕ್ಷಣಕ್ಕೆ ಅವುಗಳ ಆಕಾರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸಿ. ಮೂರರಿಂದ ಐದು ನಿಮಿಷಗಳಲ್ಲಿ ನಿಮ್ಮ ಮನಸ್ಸು ಸಾಕಷ್ಟು ಉಲ್ಲಸಿತವಾಗುವುದನ್ನು ಕಂಡುಕೊಳ್ಳಿ. ಹಾಗೆಯೇ ನಿಮ್ಮ ಎರಡೂ ಕೈಗಳನ್ನು ಮೇಲೆತ್ತಿ, ಹಸ್ತಗಳಿಂದ ಮೋಡಗಳನ್ನು ಚದುರಿಸುವ ಆಟವಾಡಿ. ಮೂರರಿಂದ ಐದು ನಿಮಿಷ ಹೀಗೆ ಒಬ್ಬರೇ ಆಡಬಹುದಾದ ಆಕಾಶದ ಆಟವನ್ನು ಆಡಿದ ನಂತರ ನಿಮ್ಮ ಮನಸ್ಸು ಮತ್ತು ಶರೀರದಲ್ಲಿ ಸುಸ್ತು ಕಡಿಮೆಯಾಗಿ, ಗೆಲುವಿನ ಭಾವನೆ ತುಂಬಿಕೊಂಡಿರುವುದನ್ನು ಅನುಭವಿಸಿ.  

ಹೀಗೇ ತೀರಾ ನೈಸರ್ಗಿಕವಾಗಿ ಕ್ಷಣಕ್ಷಣವೂ ಸಂತೋಷದಿಂದ ಇರಲಿಕ್ಕೆ ನಿಮ್ಮ ಸುತ್ತಮುತ್ತಲೂ ಇರುವ ಅವಕಾಶಗಳನ್ನು ಗುರುತಿಸಿಕೊಳ್ಳಿ. ನಿಮ್ಮ ಕಾರಿನಲ್ಲಿಯೋ, ಪಾರ್ಕಿನ ಬೆಂಚಿನ ಮೇಲೋ, ನಿಮ್ಮ ಮನೆಯ ಅಂಗಳದಲ್ಲಿಯೋ, ಆಫೀಸಿನ ಖುರ್ಚಿಯಲ್ಲಿಯೋ ಕುಳಿತುಕೊಳ್ಳಿ. ಕಣ್ಣುಗಳನ್ನು ಮುಚ್ಚಿಕೊಳ್ಳಿ. ದೀರ್ಘವಾಗಿ ಉಸಿರಾಡಿ. ಮೂಗಿನ ಮೂಲಕ ಪ್ರಾಣವಾಯುವನ್ನು ಒಳಗೆಳೆದುಕೊಳ್ಳಿ. ಅದನ್ನು ಕೆಲವು ಕ್ಷಣಗಳವರೆಗೆ ಹೊಟ್ಟೆಯೊಳಗೆ ಇಟ್ಟುಕೊಳ್ಳಿ.

ನಂತರ ನಿಧಾನವಾಗಿ ನಿಮ್ಮ ಬಾಯಿಯ ಮೂಲಕ ಹೊರಗೆ ಕಳಿಸಿ. ನಂತರ ಕೆಲವು ಕ್ಷಣಗಳವರೆಗೆ ನಿಮ್ಮ ಶರೀರದೊಳಗೆ ಗಾಳಿಯು ಇಲ್ಲದಂತೆ ಇರಿ. ನಂತರ ಮತ್ತೆ ಮೂಗಿನ ಮೂಲಕ ಪವಿತ್ರವಾದ ಗಾಳಿಯನ್ನು ನಿಧಾನವಾಗಿ ಒಳಗೆಳೆದುಕೊಳ್ಳಿ. ಅದನ್ನು ಕೆಲವು ಕ್ಷಣಗಳವರೆಗೆ ಹೊಟ್ಟೆಯೊಳಗೆ ಇಟ್ಟುಕೊಳ್ಳಿ. ನಂತರ ನಿಧಾನವಾಗಿ ನಿಮ್ಮ ಬಾಯಿಯ ಮೂಲಕ ಹೊರಗೆ ಕಳಿಸಿ.

ನಂತರ ಕೆಲವು ಕ್ಷಣಗಳವರೆಗೆ ನಿಮ್ಮ ಶರೀರದೊಳಗೆ ಗಾಳಿಯು ಇಲ್ಲದಂತೆ ಇರಿ. ಇದನ್ನು ಹತ್ತೆಂಟು ಸಲ ಮಾಡಿ. ನಂತರ ಎದ್ದುನಿಂತುಕೊಳ್ಳಿ. ಕಣ್ಣುಗಳನ್ನು ಬಿಟ್ಟು ಸುತ್ತಲೂ ನೋಡಿ. ನಿಮ್ಮ ಮನಸ್ಸು ಮತ್ತು ಶರೀರದಲ್ಲಿ ಹೊಸತನ ಮತ್ತು ಸಂತೋಷ ತುಂಬಿಕೊಂಡಿರುವದನ್ನು ಕಂಡುಕೊಳ್ಳಿ. ಇದನ್ನು ಮಾಡಲಿಕ್ಕೆ ನಿಮಗೆ ಒಂದರೆಡು ನಿಮಿಷಗಳಷ್ಟೇ ಸಾಕು.

ಹೀಗೇ ನಿಮ್ಮನ್ನು ನೀವು ಸಂತೋಷವನ್ನಾಗಿಟ್ಟುಕೊಳ್ಳುವುದಕ್ಕೆ ನಿಮ್ಮ ಸುತ್ತಮುತ್ತಲೂ ಸಾಕಷ್ಟು ಅವಕಾಶಗಳಿರುವುದನ್ನು ಗಮನಿಸಿ. ಮತ್ತು ಅವುಗಳನ್ನು ನಿಮ್ಮ ಸಂತೋಷಕ್ಕಾಗಿ ಬಳಸುವುದನ್ನು ರೂಢಿಮಾಡಿಕೊಳ್ಳಿ. ನಿಮ್ಮ ಸಂತೋಷವನ್ನು ನಿಮ್ಮವರೊಂದಿಗೆ ಹಂಚಿಕೊಳ್ಳಿ. ಯಾಕೆಂದರೆ ಸಂತೋಷದಿಂದ ಬದುಕುವುದಕ್ಕಾಗಿಯೇ ಮತ್ತು ಸಂತೋಷವನ್ನು ಹಂಚಲಿಕ್ಕಾಗಿಯೇ ಹುಟ್ಟಿದವರು ನಾವು!

(ಲೇಖಕರು ಆಪ್ತಸಮಾಲೋಚಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT