ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್! ಮನದ ಗುಟ್ಟು ರಟ್ಟಾಗುವ ಸಮಯ

Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನಮ್ಮೊಂದಿಗೆ ನಾವಿರುವುದು ಅತ್ಯಂತ ಮಧುರವಾದ ಸಮಯ ಎನ್ನುತ್ತಾರೆ ತಿಳಿದವರು. ನಮ್ಮಲ್ಲಿ ನಾವು ಕಳೆದುಹೋದಾಗ ಆಲೋಚನೆಗಳ ಪ್ರವಾಹಕ್ಕೆ ತಡೆಯೆಲ್ಲಿ? ಅಕಸ್ಮಾತ್, ನಮ್ಮ ಯೋಚನಾಲಹರಿಯು ಇತರರಿಗೆ ತಿಳಿಯುವಂತಿದ್ದರೆ, ನಾವು ನಮ್ಮಂತೆಯೇ ಇರಲು ಸಾಧ್ಯವಿತ್ತೇ? ನಮ್ಮ ಮನಸಿನ ಭಾವನೆಗಳು ಎಲ್ಲರಿಗೂ ಕಾಣುವಂತಿದ್ದರೆ, ನಮ್ಮ ಸ್ವಚ್ಛಂದ ಆಂತರಿಕ ವಿಹಾರಕ್ಕೆ ಭಂಗ ತಪ್ಪಿದ್ದಲ್ಲ. ಆದರೆ ಇಂತಹ ದಿನಗಳೂ ಬರುತ್ತಿವೆ ಎಂದರೆ ನೀವು ನಂಬಲೇಬೇಕು.

ನಮ್ಮ ಮನಸ್ಸಿನಲ್ಲಿ ಚಾಲ್ತಿಯಲ್ಲಿರುವ ಯೋಚನೆ ಅಥವಾ ನಮ್ಮ ನಿದ್ರೆಯ ಭಾಗವಾಗಿದ್ದ ಕನಸಿನ ಮರ್ಮವು ಇನ್ನು ಸುಲಭವಾಗಿ ಬಟಾಬಯಲು ಎನ್ನುತ್ತಾರೆ ನರವಿಜ್ಞಾನಿಗಳು.ನಮ್ಮ ಮೆದುಳುನೂರು ಶತಕೋಟಿ ನರಕೋಶಗಳ ಆಗರ. ನಮ್ಮ ಪ್ರತಿಯೊಂದು ಅಂಗದ ಚಲನೆ, ಅಂಗಗಳ ಹಾಗೂ ಅಂಗಾಂಶಗಳ ಕಾರ್ಯನಿರ್ವಹಣೆಯ ಹಿಂದೆ, ಈ ನರಕೋಶಗಳ ನಡುವಿನ ಸಂವಹನ ಬಹುಮುಖ್ಯ ಪಾತ್ರ ನಿರ್ವಹಿಸುತ್ತದೆ.

ಒಂದು ನರಕೋಶದಿಂದ ಮತ್ತೊಂದಕ್ಕೆ, ವಿದ್ಯುತ್ ಸಂಕೇತಗಳು ಹರಿಯುತ್ತವೆ ಮತ್ತು ಈ ವಿದ್ಯುತ್ ಸಂಕೇತಗಳೇ, ಯಾಂತ್ರಿಕ ಕಾರ್ಯವಾಗಿ ಅಥವಾ ಯೋಚನಾಧಾರೆಯಾಗಿ ಮಾರ್ಪಾಟಾಗುತ್ತವೆ. ನಮ್ಮ ಯೋಚನೆಯನ್ನು ಮನಗಾಣಬೇಕಿದ್ದರೆ, ಈ ನರಕೋಶಗಳ ನಡುವೆ ಹರಿಯುವ ವಿದ್ಯುತ್ಸಂಕೇತಗಳನ್ನು ಅರ್ಥೈಸಿಕೊಳ್ಳಬೇಕು. ಈ ಪ್ರಯತ್ನವನ್ನು ಬಗೆಬಗೆಯಾಗಿ ಮಾಡಿದ ಹಲವಾರು ವಿಜ್ಞಾನಿಗಳ ತಂಡಗಳು, ಬಹುಪಾಲು ಯಶ ಕಂಡಿವೆ.

ಮನದಾಳದ ಮಾತನ್ನು ಅಥವಾ ಕನಸಿನ ಹೂರಣವನ್ನು ಅರಿಯಲು ಇರುವ ಹಲವಾರು ಮಾರ್ಗಗಳಲ್ಲಿ, ಬಹುಮುಖ್ಯವಾಗಿ ಉಪಯುಕ್ತವಾದವು, ಮೆದುಳಿನಲ್ಲಿ ಕೃತಕ ಸಂವೇದಕಗಳನ್ನು ಇರಿಸುವ ವಿಧಾನ ಮತ್ತು ಕ್ರಿಯಾತ್ಮಕ ಕಾಂತೀಯ ಅನುರಣನ ಚಿತ್ರಣದ ಬಳಕೆಯ ವಿಧಾನ.

ಯಾವುದೇ ಸಾಮಾನ್ಯ ವ್ಯಕ್ತಿಯು, ತನ್ನ ಮೆದುಳಿನೊಳಗೆ ಕೃತಕ ಸಂವೇದಕಗಳನ್ನು ಇರಿಸಬಹುದೇ ಎಂಬ ಯೋಚನೆಗೇ ಹೌಹಾರುತ್ತಾನೆ; ಇನ್ನು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಸಂವೇದಕಗಳನ್ನು ತನ್ನ ಮೆದುಳಿನ ಭಾಗವಾಗಿಸಿಕೊಳ್ಳುವುದಂತೂ ದೂರದ ಮಾತು. ಆದರೆ, ದೇಹದ ಕೆಳಭಾಗದ ಸ್ವಾಧೀನ ಕಳೆದುಕೊಂಡ ಮಹಿಳೆಯೊಬ್ಬರು ಸ್ವಯಂಪ್ರೇರಿತರಾಗಿ, ತಮ್ಮ ಮೆದುಳಿನಲ್ಲಿ ಈ ಕೃತಕ ಸಂವೇದಕಗಳನ್ನು ಇರಿಸಿಕೊಂಡು ವಿಜ್ಞಾನಿಗಳ ಸಂಶೋಧನೆಗೆ ಸಹಕಾರಿಯಾಗಿದ್ದಾರೆ.

ಇವರ ಕೈಕಾಲುಗಳು ಚಲನೆ ಕಳೆದುಕೊಂಡಿದ್ದ ಕಾರಣ ಇವರಿಗೆ ಕೃತಕ ಅವಯವವೊಂದನ್ನು ನೀಡಿದ ವಿಜ್ಞಾನಿಗಳು, ಆ ಅವಯವಕ್ಕೂ ಇವರ ಮೆದುಳಿಗೂ ಸಂಪರ್ಕ ಏರ್ಪಡಿಸಿದರು. ಇವರ ಮೆದುಳು ಆ ಕೃತಕ ಅವಯವಕ್ಕೆ ತಮ್ಮ ಮೆದುಳಿನಲ್ಲಿರುವ ಸಂವೇದಕದ ಮುಖಾಂತರ ಸಂದೇಶಗಳನ್ನು ರವಾನಿಸುತ್ತಿತ್ತು ಮತ್ತು ಆ ಅವಯವವು ಆ ಸಂದೇಶದ ಅನುಸಾರವಾಗಿ ಕಾರ್ಯನಿರ್ವಹಿಸುತ್ತಿತ್ತು.

ಆ ಸಂವೇದಕವು ಗಣಕೀಕೃತ ವ್ಯವಸ್ಥೆಯ ಜಾಲಕ್ಕೆ ಸಂಪರ್ಕಿತವಾಗಿದ್ದು, ಇದರಿಂದಾಗಿ, ಈ ಯೋಚನೆಗಳನ್ನು ಮತ್ತು ಅದಕ್ಕೆ ಸಂಬಂಧಿತ ವಿದ್ಯುತ್ಸಂಕೇತಗಳನ್ನು, ಕಂಪ್ಯೂಟರ್ ಪ್ರೊಗ್ರಾಮ್ಗಳ ಮೂಲಕ ದಾಖಲಿಸಲು ಮತ್ತು ವಿಶ್ಲೇಷಿಸಲು ಸಾಧ್ಯವಾಯಿತು.

ಈ ವಿದ್ಯಮಾನದಲ್ಲಿ, ಪಾರ್ಶ್ವವಾಯು ಪೀಡಿತರಿಗೆ ಆಶಾಕಿರಣವಾಗಬಲ್ಲ ಹೊಸ ಅನುಕೂಲತೆಯ ಜೊತೆಜೊತೆಗೇ, ಅವರು ಏನು ಯೋಚಿಸಿದಾಗ, ಮೆದುಳು ಯಾವ ರೀತಿಯ ವಿದ್ಯುತ್ ಸಂಕೇತಗಳನ್ನು ಎಷ್ಟು ಪ್ರಮಾಣದಲ್ಲಿ ಕಳಿಸುತ್ತದೆ ಎಂಬುದನ್ನು ಅರಿಯಲು ಸಾಧ್ಯವಾಯಿತು. ಈ ಮೂಲಕ, ವಿದ್ಯುತ್ ಸಂಕೇತಗಳ ಮಾದರಿಗೂ ನಮ್ಮ ಯೋಚನೆಯ ವಿಧಕ್ಕೂ ಇರುವ ಸಂಬಂಧಕ್ಕೆ ಸಾಕ್ಷಿ ದೊರೆಯಿತು.

ನಾವು ಜಾಗೃತರಾಗಿದ್ದಾಗ ನಮ್ಮ ಮನಸ್ಸಿನಲ್ಲಿ ನಡೆಯುವ ಸಂಗತಿಗಳನ್ನಷ್ಟೇ ಅಲ್ಲದೆ, ನಿದ್ರೆಯಲ್ಲಿದ್ದಾಗ ಕಾಣುವ ಕನಸನ್ನೂ ಕೂಡ ಡೀಕೋಡ್ ಮಾಡಬಹುದಾಗಿದೆ. ಇದಕ್ಕೆ ಬಳಸಲಾಗುವ ತಂತ್ರಜ್ಞಾನವು ಎಫ್.ಎಂ.ಆರ್.ಐ. ಎಂದು ಪರಿಚಿತವಿರುವ ಕ್ರಿಯಾತ್ಮಕ ಕಾಂತೀಯ ಅನುರಣನ ಚಿತ್ರಣ ಅಥವಾ ಫಂಕ್ಷನಲ್ ಮ್ಯಾಗ್ನೆಟಿಕ್ ರೆಸೋನನ್ಸ್ ಇಮೇಜಿಂಗ್.

ಈ ವಿಧಾನವು ನರಗಳ ಕಾರ್ಯಾತ್ಮಕತೆಯ ಚಿತ್ರಣವನ್ನು, ಮೆದುಳಿನ ಚಟುವಟಿಕೆಯಿಂದ ಅಳೆಯುತ್ತದೆ ಹಾಗೂ ಇದಕ್ಕಾಗಿ ಮೆದುಳಿನ ರಕ್ತದ ಹರಿವಿನಲ್ಲಾಗುವ ಬದಲಾವಣೆಗಳ ನಮೂನೆಯನ್ನು ಗಮನಿಸುತ್ತದೆ. ಈ ತಂತ್ರಜ್ಞಾನವನ್ನು ಬಳಸಿ ಮಾಡುವ ಪರೀಕ್ಷೆಗೆ, ತಮ್ಮನ್ನು ತಾವು ಒಡ್ಡಿಕೊಳ್ಳಲು ಒಪ್ಪಿದ ಜನರನ್ನು, ಇಂತಹ ಎಫ್.ಎಂ.ಆರ್.ಐ. ಯಂತ್ರಗಳ ಒಳಗೆ ಮಲಗಿ ನಿದ್ರಿಸಲು ಸೂಚಿಸಲಾಯಿತು.

ಆಗ ಅವರು ಕನಸು ಕಾಣುವ ಸಂದರ್ಭದಲ್ಲಿ, ಮೆದುಳಿನ ಕಾರ್ಯದಲ್ಲಿ ಆಗುವ ಬದಲಾವಣೆ ಮತ್ತು ರಕ್ತಚಲನೆಯ ನಮೂನೆಯನ್ನು ದಾಖಲಿಸಿ ವಿಶ್ಲೇಷಿಸಿದ ನರವಿಜ್ಞಾನಿಗಳು, ಅವರು ನಿದ್ರೆಯಿಂದ ತಿಳಿದೆದ್ದ ನಂತರ ಆಗಷ್ಟೇ ಕಂಡ ಕನಸಿನ ಬಗ್ಗೆ ಅವರಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಅವರೆಲ್ಲರೂ ನೀಡಿದ ಉತ್ತರಗಳನ್ನೂ, ಗಣಕಯಂತ್ರದಲ್ಲಿ ದಾಖಲಾದ ಮೆದುಳಿನ ಕಾರ್ಯದ ಚಿತ್ರಣವನ್ನೂ ತಾಳೆ ಹಾಕಿ, ವಿಶ್ಲೇಷಿಸಿದರು.

ಇದರ ಫಲವಾಗಿ ತಿಳಿದದ್ದೆಂದರೆ, ನಾವು ಕನಸಿನಲ್ಲಿ ಒಂದು ವಸ್ತುವನ್ನು ಕಂಡಾಗ ನಮ್ಮ ಮೆದುಳಿನಲ್ಲಿ ಹರಿಯುವ ವಿದ್ಯುತ್ ಸಂಕೇತಗಳ ಪ್ರವಾಹಕ್ಕೊ, ನಾವು ನಿಜಜೀವನದಲ್ಲಿ ಆ ವಸ್ತುವನ್ನು ಕಂಡಾಗ ಮೆದುಳಿನಲ್ಲಿ ಹರಿಯುವ ವಿದ್ಯುತ್ ಸಂಕೇತಗಳ ಪ್ರವಾಹಕ್ಕೊ ಏನೂ ವ್ಯತ್ಯಾಸವಿಲ್ಲ ಎಂಬುದು. ಇಂತಹ ಸಂಶೋಧನ ಫಲಶ್ರುತಿಗಳ ಒಟ್ಟು ಮೊತ್ತವೇ, ಜನರ ಮನಸಿನ ಯೋಚನೆ ಅಥವಾ ಕನಸಿನ ತಿರುಳನ್ನು ಅರಿಯುವ ಸಂಭಾವ್ಯತೆ.

ಇನ್ನೂ ಬಾಲ ಹೆಜ್ಜೆಯಿಡುತ್ತಿರುವ ಈ ಅಚ್ಚರಿದಾಯಕ ಅಧ್ಯಯನ, ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲು ಇನ್ನೂ ಸಮಯ ಬೇಕಿದೆ; ಇದರಿಂದ ನಮ್ಮ ಖಾಸಗಿತನದೊಳಗೆ ಅತಿಕ್ರಮ ಪ್ರವೇಶವಾಗುತ್ತದೆ ಎನಿಸಿದರೂ, ಹಲವು ಬಗೆಯ ಮಾನಸಿಕ ಮತ್ತು ಮನೋದೈಹಿಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಇದರಿಂದ ಅನನ್ಯ ಕೊಡುಗೆ ಸಾಧ್ಯವಿದೆ.                                            
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT