ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳೇ ಅಭಿವೃದ್ಧಿಪಡಿಸಿದ ಲೈಬ್ರರಿ ಆ್ಯಪ್‌

Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಶೈಕ್ಷಣಿಕ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಳವಡಿಕೆಯು ಕಲಿಕೆಯನ್ನು ಸರಳಗೊಳಿಸಿದೆ.  ಕ್ಷಣಮಾತ್ರದಲ್ಲಿಯೇ ಮಾಹಿತಿ ಶೋಧಿಸುವುದಲ್ಲದೇ ಅದನ್ನು ಸಹಪಾಠಿಗಳ ಜತೆ  ಹಂಚಿಕೊಳ್ಳಲು, ಚರ್ಚೆ ನಡೆಸಲೂ ತಂತ್ರಜ್ಞಾನ ಬಹಳಷ್ಟು ಅನುಕೂಲ ಮಾಡಿಕೊಡುತ್ತಿದೆ. ಅದರಲ್ಲೂ ಆಧುನಿಕ ಜಗತ್ತಿನಲ್ಲಿ  ಅತ್ಯಂತ ಜನಪ್ರಿಯವಾಗಿರುವ ಮತ್ತು ನಿತ್ಯ ಬದುಕಿನ ಅವಿಭಾಜ್ಯ ಭಾಗವಾಗಿರುವ ಸ್ಮಾರ್ಟ್‌ಫೋನ್‌, ಈಗ ವಿದ್ಯಾರ್ಥಿಗಳ ಕಲಿಕೆ ಮತ್ತು ಮನರಂಜನೆಯ ಸಾಧನವೂ ಆಗಿದೆ.

ಗಣಿತದ ಸಮಸ್ಯೆ ಬಿಡಿಸಲು, ಸಾಮಾನ್ಯ ಜ್ಞಾನ, ಟಿಪ್ಪಣಿ ಮಾಡಿಕೊಳ್ಳಲು ಹೀಗೆ ಇನ್ನೂ ಹಲವು ಆ್ಯಪ್‌ಗಳು ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚಿಸಲು ನೆರವಾಗುತ್ತಿವೆ. ಈ ನಿಟ್ಟಿನಲ್ಲಿಯೇ ಕರ್ನಾಟಕ ಕಾನೂನು ಸೊಸೈಟಿಯ (ಕೆಎಲ್‌ಎಸ್‌) ಬೆಳಗಾವಿಯ ಗೋಗಟೆ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ  ಕಂಪ್ಯೂಟರ್‌ ಸೈನ್ಸ್‌ನ ನಾಲ್ವರು ವಿದ್ಯಾರ್ಥಿಗಳು ‘GIT Library’  ಎಂಬ ಆ್ಯಪ್‌ ಅಭಿವೃದ್ಧಿಪಡಿಸಿದ್ದಾರೆ.

ಅಂತಿಮ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಉಮರ್‌ ಮುಖ್ತರ್‌ ಮುಜಾಲ್‌, ಸಾಯಿಪ್ರಕಾಶ್‌ ಬಿರಾದಾರ, ಉತ್ಕರ್ಷ್ ನಾಯಕ್, ಪ್ರಭಾಕರ ನಾಯಕ್‌ ಅವರು ಈ ಆ್ಯಪ್‌ ಅಭಿವೃದ್ಧಿಪಡಿಸಿದ್ದಾರೆ.

ಉಚಿತವಾಗಿ ಲಭ್ಯವಿರುವ ಕೋಹಾ ಲೈಬ್ರಿ ಸಾಫ್ಟ್‌ವೇರ್‌ ಬಳಸುತ್ತಿರುವವರು ಈ ಆ್ಯಪ್‌ ಬಳಸಬಹುದು. ಜಿಐಟಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಒಪಿಎಸಿ (online public access catalog) ಲಾಗಿನ್‌ ಬಳಸಿ ಮೊಬೈಲ್‌ ಆ್ಯಪ್‌ಗೆ ಲಾಗಿನ್‌ ಆಗಬಹುದು.

‘ಈ  ಆ್ಯಪ್‌ ಸದ್ಯಕ್ಕೆ ಕಾಲೇಜು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಮಾತ್ರವೇ ಸೀಮಿತವಾಗಿದೆ. ಇನ್ನೊಂದು ಹಂತದ ಪರೀಕ್ಷೆ ನಡೆಸಿ ಎಲ್ಲರೂ ಬಳಸುವಂತೆ ಸಾಫ್ಟ್‌ವೇರ್‌ನ ‘ಸೋರ್ಸ್‌ ಕೋಡ್‌’ಗಳನ್ನು ಮುಕ್ತಗೊಳಿಸಲಾಗುವುದು. ಆ ನಂತರ ಯಾರು ಬೇಕಾದರೂ ತಮಗೆ ಬೇಕಾದಂತೆ ಅಭಿವೃದ್ಧಿಪಡಿಸಿಕೊಳ್ಳಬಹುದು ಎನ್ನುತ್ತಾರೆ ಆ್ಯಪ್‌  ಸೃಷ್ಟಿಯ ಪರಿಕಲ್ಪನೆಯ ಹಿಂದಿರುವ ಕಾಲೇಜಿನ ಲೈಬ್ರರಿಯನ್ ಅರುಣ್‌ ಅಡ್ರಕಟ್ಟಿ.

‘ವಾಣಿಜ್ಯ ಉದ್ದೇಶದ (ದುಡ್ಡು ಕೊಟ್ಟು ಖರೀದಿಸುವಂತಹ) ಲೈಬ್ರರಿ ಆ್ಯಪ್‌ಗಳು ಬಹಳಷ್ಟಿವೆ. ಅವುಗಳ ಬಹಳ ಕಡಿಮೆ ಇದೆ. ಆದರೆ ನಮ್ಮ ವಿದ್ಯಾರ್ಥಿಗಳು ಯಾರು ಬೇಕಾದರೂ ಉಚಿತವಾಗಿ ಬಳಸಬಹುದಾದಂತಹ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಕರ್ನಾಟಕದಲ್ಲಿಯೇ ಮೊದಲು. ಇದರಲ್ಲಿ ಇನ್ನೂ ಸುಧಾರಣೆ ಆಗಬೇಕಿದೆ.

ಎಲ್ಲರಿಂದ ಪ್ರತಿಕ್ರಿಯೆ, ಸಲಹೆ ಪಡೆದು ಆ ಬಳಿಕ ಸುಧಾರಿತ ಆ್ಯಪ್‌ ಬಿಡುಗಡೆ ಮಾಡುತ್ತೇವೆ. ಅದಾದ ಬಳಿಕ ಯಾರು ಬೇಕಾದರೂ ಬಳಸಲು ಅನುಕೂಲ ಆಗುವಂತೆ ‘ಓಪನ್‌ ಸೋರ್ಸ್‌’ ಆಗಿ ಬಿಡಲು ನಿರ್ಧರಿಸಿದ್ದೇವೆ’  ಎಂದು ಅವರು ತಿಳಿಸುತ್ತಾರೆ.

ಸದ್ಯ, ಆಂಡ್ರಾಯ್ಡ್‌ ಫೋನ್‌ಗಳಿಗೆ ಮಾತ್ರ ಈ  ಆ್ಯಪ್‌ ಲಭ್ಯವಿದೆ. ಶೀಘ್ರವೇ ಐಫೋನ್‌ನಲ್ಲಿಯೂ ಬಳಸಲು ಅನುಕೂಲವಾಗುವಂತೆ ಮಾಡಲಾಗುವುದು ಎಂದು ಹೇಳಿದ್ದಾರೆ. ‘ಪ್ರತಿ ವರ್ಷ ನಮ್ಮ ಕಾಲೇಜಿಗೆ ಕನಿಷ್ಠ ಒಂದು ಸಾವಿರ ಹೊಸ ವಿದ್ಯಾರ್ಥಿಗಳು ಸೇರುತ್ತಾರೆ. ನಮ್ಮ ಲೈಬ್ರರಿಯಲ್ಲಿ 95 ಸಾವಿರ ಪುಸ್ತಕಗಳಿವೆ. 18 ಸಾವಿರ ಇ–ಬುಕ್‌ಗಳಿವೆ. ಹೀಗಾಗಿ ವಿದ್ಯಾರ್ಥಿಗಳಿಗೆ ಈ ಆ್ಯಪ್‌ ಹೆಚ್ಚು ಪ್ರಯೋಜನಕಾರಿಯಾಗಿದೆ.

‘ರಹಸ್ಯ ಸಂಖ್ಯೆ (ಪಾಸ್‌ವರ್ಡ್‌) ಮರೆಯುವುದು ಸಹಜ. ಅದನ್ನು ರಿಸೆಟ್‌ ಮಾಡಲು ಸಮಯ ಹಿಡಿಯುತ್ತದೆ. ಈ ಸಮಸ್ಯೆ ನಿವಾರಿಸಲು ಕಾಲೇಜ್‌ ಐಡಿಯಲ್ಲಿರುವ ಬಾರ್‌ ಕೋಡ್‌ ಬಳಸಿ ಲಾಗಿನ್ ಆಗುವ ವ್ಯವಸ್ಥೆ ಕಲ್ಪಿಸಲಾಗಿದೆ.

‘ಎರಡು ವರ್ಷದಿಂದ ಪ್ರಯತ್ನ ಪಡುತ್ತಿದ್ದೆ. ಆದರೆ, ವಿದ್ಯಾರ್ಥಿಗಳು ಯಾರೂ ಆಸಕ್ತಿ ತೋರುತ್ತಿರಲಿಲ್ಲ. ಕಳೆದ ವರ್ಷ ನಡೆಸಿದ ಒಂದು ಪ್ರಯತ್ನ ವಿಫಲವೂ ಆಗಿತ್ತು. ಎರಡನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದೇವೆ ಎನ್ನುವ ಸಂತೋಷವಿದೆ.

‘ಸರ್ಕಾರದ ಬಹಳಷ್ಟು ಗ್ರಂಥಾಲಯಗಳಲ್ಲಿ ಕಂಪ್ಯೂಟರ್‌, ಇಂಟರ್‌ನೆಟ್‌ ಕೊರತೆ ಇದೆ. ಇದರಿಂದ ಆ್ಯಪ್‌ಗಳ ಬಳಕೆ ಕಷ್ಟ. ಇನ್ನು ಕಾಲೇಜುಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ವಿದ್ಯಾರ್ಥಿಗಳೇ ಅಭಿವೃದ್ಧಿಪಡಿಸಿರುವುದರಿಂದ ಲೈಬ್ರರಿಯಲ್ಲಿ ಅವರಿಗೆ ಇರುವ ಅಗತ್ಯಗಳ ಬಗ್ಗೆ ಸರಿಯಾಗಿ ಗೊತ್ತಿರುತ್ತದೆ. ಹಾಗಾಗಿ ಎಲ್ಲರಿಗೂ ಇಷ್ಟವಾಗಲಿದೆ.

‘ವಿದ್ಯಾರ್ಥಿಗಳಿಗೆ ನೀಡಿರುವ ಪುಸ್ತಕ, ತಡವಾಗಿ ಹಿಂದಿರುಗಿಸಿರುವುದಕ್ಕೆ ವಿಧಿಸಿದ ದಂಡ, ಪುಸ್ತಕವನ್ನು ಓದಿರುವವರ ಮಾಹಿತಿಗಳ ಜತೆಗೆ ಪುಸ್ತಕ ಯಾವ ಕಪಾಟಿನಲ್ಲಿದೆ ಎನ್ನುವ ವಿವರವನ್ನೂ ಪಡೆದುಕೊಳ್ಳಬಹುದು. ಈ ಪುಸ್ತಕ ನನಗೆ ಬೇಕು ಎಂದು ಆ್ಯಪ್‌ನಲ್ಲಿಯೇ ಮನವಿ ಸಲ್ಲಿಸಲು ಅವಕಾಶ ನೀಡಬಹುದು. ಆದರೆ, ಒಂದು ನಿರ್ದಿಷ್ಟ ಪುಸ್ತಕಕ್ಕೆ ಹಲವು ವಿದ್ಯಾರ್ಥಿಗಳಿಂದ ಬೇಡಿಕೆ ಬಂದರೆ ಲೈಬ್ರರಿಯಲ್ಲಿ ಬಹಳಷ್ಟು ಪ್ರತಿಗಳು ಇಲ್ಲದೇ ಹೋದರೆ ಅದನ್ನು ಪೂರೈಸುವುದು ಕಷ್ಟ. ಹೀಗಾಗಿ ಆ ಆಯ್ಕೆ ಇಟ್ಟಿಲ್ಲ. ಅದಕ್ಕೆ ಬದಲಾಗಿ, ಬುಕ್‌ ಸಜೆಶನ್‌ ಆಯ್ಕೆ ಇದೆ. ವಿದ್ಯಾರ್ಥಿಗಳು ತಮಗೆ ಇಂತಹ ಹೊಸ ಪುಸ್ತಕ ಬೇಕೆಂದು ಸಲಹೆ ನೀಡಬಹುದು’ ಎಂದು ಅರುಣ್‌ ಸಮರ್ಥನ್‌ ಹೇಳುತ್ತಾರೆ.

ವಿಶೇಷತೆ
* ಪುಸ್ತಕ ಲಭ್ಯವಿರುವ ಬಗ್ಗೆ ಮಾಹಿತಿ.
* ಪುಸ್ತಕ ಯಾವ ಕಪಾಟಿನಲ್ಲಿದೆ ಎನ್ನುವುದನ್ನು ನೋಡಬಹುದು
* ಲೈಬ್ರರಿ ಖಾತೆಗೆ ಸಂಪರ್ಕ ಪಡೆಯಬಹುದು
* ಲೈಬ್ರರಿಗೆ ಹೊಸದಾಗಿ ಪುಸ್ತಕ ಬಂದರೆ ಅದರ ಬಗ್ಗೆ ಆ್ಯಪ್‌ನಲ್ಲಿ ಸೂಚನೆ ಬರುತ್ತದೆ
* ಪುಸ್ತಕ ಹಿಂದಿರುಗಿಸುವ ಅವಧಿ ಮುಗಿಯುವ ಬಗ್ಗೆ ನೆನಪಿಸುವ ವ್ಯವಸ್ಥೆ ಇದೆ
* ಪುಸ್ತಕ ಪಡೆದಿರುವ ಅವಧಿ ಮುಗಿದರೆ ಆ್ಯಪ್‌ ಮೂಲಕವೇ ಅವಧಿ ಮುಂದುವರಿಸುವಂತೆ ಮನವಿ ಸಲ್ಲಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT