ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೋಚನೆಗಳ ಟಿಪ್ಪಣಿಗೆ ಆ್ಯಪ್‌ ನೆರವು

Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ತರಗತಿಯಲ್ಲಿ ಕುಳಿತಾಗ, ಯಾರನ್ನಾದರೂ ಸಂದರ್ಶನ ಮಾಡುವಾಗ, ಇಲ್ಲವೇ ಖರೀದಿ ವಸ್ತುಗಳ ಪಟ್ಟಿ ದೊಡ್ಡದಿದ್ದಾಗ, ಆತ್ಮೀಯರ ಹುಟ್ಟು ಹಬ್ಬಕ್ಕೆ ಶುಭ ಕೋರುವಾಗ ಮರೆಯದಿರಲೆಂದು ನಮ್ಮಲ್ಲಿ ಬಹಳಷ್ಟು ಮಂದಿ  ಫೋನ್‌ನಲ್ಲಿ ಬರೆದಿಟ್ಟುಕೊಳ್ಳುತ್ತಾರೆ.  ಗಡಿಬಿಡಿ ಜೀವನ ಶೈಲಿಯಲ್ಲಿ  ಹೀಗೆ ಟಿಪ್ಪಣಿ (ನೋಟ್) ಮಾಡಿಕೊಳ್ಳುವುದು ಉತ್ತಮ ಉಪಾಯವೂ ಹೌದು. ನೋಟ್‌ ಮಾಡಿಕೊಳ್ಳಲೆಂದೇ ಈಗ ಹಲವಾರು ಆ್ಯಪ್‌ಗಳಿವೆ.

ಅವುಗಳಲ್ಲಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಬಳಸಬಹುದಾದ ಅದ್ಭುತ ಆ್ಯಪ್‌ ಒಂದಿದೆ. ಅದುವೇ ನೋಟ್‌ಷೆಲ್ಫ್  (Noteshelf), ಈ ಆ್ಯಪ್‌, ನೋಟ್‌ಪುಸ್ತಕದ ಗ್ರಂಥಾಲಯದಂತೆ ಕಾರ್ಯ ನಿರ್ವಹಿಸುತ್ತದೆ.

ಪ್ರತೀ ತರಗತಿಗೆ, ಪ್ರತೀ ಕೆಲಸಕ್ಕೆ, ಸಂದರ್ಶನಕ್ಕೆ ಹೊಸ ನೋಟ್ ಪುಸ್ತಕ ಸೃಷ್ಟಿಸಿಕೊಳ್ಳಬಹುದು. ಜೊತೆಗೆ ನಿಮ್ಮ ಮನ ಬಂದಂತೆ ನೋಟ್ ಪುಸ್ತಕ ವಿನ್ಯಾಸಗೊಳಿಸಬಹುದು. ಸಾದಾ ಹಾಳೆ ಬೇಕೆ, ಗೆರೆಗಳಿರಬೇಕೆ, ಚೌಕಾಕಾರ, ಇತರ ಆಕಾರ.? ಕ್ರೀಡಾ ಅಂಕಗಳು, ಸಂಗೀತಕ್ಕೆ ಸಂಬಂಧಿಸಿದ ಸಂಕೇತಗಳ ಗುರುತಿಗೆ ಆಕರ್ಷಕ, ವಿಶೇಷ ವಿನ್ಯಾಸಗಳಲ್ಲಿ ಬರೆದಿಡಬೇಕೆಂದರೆ ಅದಕ್ಕೂ ಅವಕಾಶವಿದೆ.

ಈ ಆ್ಯಪ್‌ನಲ್ಲಿ ನೋಟ್ ಬರೆದಿಡುವಾಗ ಟೆಕ್ಸ್ಟ್ ಬಾಕ್ಸ್‌ನಲ್ಲಿ ಟೈಪ್ ಮಾಡಬಹುದು. ಛಾಯಾಚಿತ್ರ, ಧ್ವನಿ, ರೇಖಾಚಿತ್ರಗಳನ್ನು ಸೇರಿಸಬಹುದು. ಈ ಎಲ್ಲ ಅಂಶಗಳನ್ನು ಒಂದೇ ಪುಟದಲ್ಲಿ ತುಂಬಿಸಬಹುದು. ಪುಟ ಪೂರ್ತಿ ಆದ ನಂತರ ತಾನಾಗೇ ಮುಂದಿನ ಪುಟ ತೆರೆದುಕೊಳ್ಳುತ್ತದೆ. ನೋಟ್‌ಷೆಲ್ಫ್‌ನಲ್ಲಿ ಬರೆಯುವಾಗ ಕಾಗದದ ಪುಸ್ತಕದಲ್ಲೇ ಬರೆಯುತ್ತಿರುವ ಅನುಭವವಾಗುತ್ತದೆ. ಇದರ ಮತ್ತೊಂದು ಅನುಕೂಲವೆಂದರೆ ರಾಶಿ ರಾಶಿ ಬರೆದರೂ ಕಡಿಮೆ ಜಾಗದಲ್ಲಿ, ಡಿಜಿಟಲ್ ರೂಪದಲ್ಲಿ ಇಡಬಹುದು.

ಬರೆದಿಟ್ಟ ಕಡತಗಳನ್ನು ಹುಡುಕಲು ಕೊಂಚ ತೊಂದರೆ ಆಗಬಹುದು. ಯಾಕೆಂದರೆ ಕೈ ಬರಹದ ಶೈಲಿಯಲ್ಲಿ ಮಾಹಿತಿ ಇದ್ದರೆ, ಹುಡುಕುವಾಗ ಬೇರೆ ಶೈಲಿಯ ಬರಹದಲ್ಲಿ ಕಡತದ ಹೆಸರು ಟೈಪಿಸಿದರೆ, ಆ್ಯಪ್‌ ಅದನ್ನು ಗುರುತಿಸಲು  ವಿಫಲವಾಗಬಹುದು. ಆದರೆ, ಕಡತಕ್ಕೆ ಹೆಸರು ಕೊಡುವಾಗ ಚೂರು ಬುದ್ಧಿ ಉಪಯೋಗಿಸಿ ಹುಡುಕಲು ಸಹಾಯಕವಾಗುವಂತೆ ಹೆಸರು ಕೊಟ್ಟರೆ ಆಗ ಅದೊಂದು ಸಮಸ್ಯೆ ಆಗದು.

ಬರೆದಿಟ್ಟ ನೋಟ್ಸ್‌ಅನ್ನು ಇಮೈಲ್ ಅಥವಾ ಡ್ರಾಪ್‌ಬಾಕ್ಸ್ ಮೂಲಕ ಇತರರ ಜತೆ ಹಂಚಿಕೊಳ್ಳಬಹುದು ಮತ್ತು ಪಿಡಿಎಫ್ ರೂಪದಲ್ಲಿಯೂ ಪರಿವರ್ತಿಸಬಹುದು. ನೋಟ್‌ಷೆಲ್ಫ್ ಆ್ಯಪ್‌ ಐ-ಪ್ಯಾಡ್ ನಲ್ಲಿ ಮಾತ್ರ ಉಪಯೋಗಿಸಬಹುದಾಗಿದೆ. ಇದರ ಬೆಲೆ  8 ಡಾಲರ್‌ (ಅಂದಾಜು ₹  536) ಇದೆ.

ಆಂಡ್ರಾಯ್ಡ್ ಬಳಕೆದಾರರು ನೋಟ್‌ಷೆಲ್ಫ್ ತರಹದ ಆ್ಯಪ್‌ಗಾಗಿ ಹುಡುಕುತ್ತಿದ್ದರೆ, ಲೆಕ್ಚರ್‌ನೋಟ್ಸ್ (LectureNotes) ಆ್ಯಪ್‌ಅನ್ನು ಬಳಸಬಹುದು. ಇದರಲ್ಲಿ ಕೈಬರಹದ ನೋಟ್ಸ್ ಮತ್ತು ಚಿತ್ರಗಳನ್ನು ಆರಾಮವಾಗಿ ಬರೆಯಬಹುದು. ಲೆಕ್ಚರ್‌ನೋಟ್‌ನ ಪ್ರತಿ ಪುಟದಲ್ಲಿ ಕೈಬರಹ, ಟೈಪಿಸಿದ ಬರಹ, ಫೋಟೊಗಳನ್ನು  ಸಂಗ್ರಹಿಸಿ ಇಡಬಹುದು.

ಪಿಡಿಎಫ್ ಸೌಲಭ್ಯ ಸಹ ಇದರಲ್ಲಿದೆ. ಇದರಲ್ಲಿ ಆಡಿಯೊ, ವಿಡಿಯೊ ಸಹ ಮುದ್ರಿಸಿಕೊಳ್ಳಬಹುದು. ವಿದ್ಯಾರ್ಥಿಗಳನ್ನು ಗಮನದಲ್ಲಿ ಇರಿಸಿಕೊಂಡು ಈ ಆ್ಯಪ್ ರೂಪಿಸಲಾಗಿದೆ. ಆದರೆ ವ್ಯವಹಾರಿಕ ವಲಯದವರಿಗೆ ಇದರಿಂದ ಹೆಚ್ಚು ಉಪಯೋಗವಿದೆ. ಹೊಸ ಯೋಜನೆಗಳಿದ್ದಲ್ಲಿ ಅವುಗಳ ನೀಲನಕ್ಷೆಯನ್ನು ಬಹುಮಾಧ್ಯಮದ ಮೂಲಕ ಸಮರ್ಥವಾಗಿ ವಿನ್ಯಾಸಗೊಳಿಸಬಹುದು. ಇದರ ಬೆಲೆ 3.60 ಡಾಲರ್‌ (₹ 241) ಇದೆ. ಈ ಆ್ಯಪ್ ಉಚಿತವಾಗಿ ದೊರೆಯಲಿದೆ. ಇದರ ಉಪಯೋಗ ಅರಿಯಲು ಒಮ್ಮೆ ಈ ಉಚಿತ ಆ್ಯಪ್ ಬಳಸಿ ನೋಡಬಹುದು.

ನೋಟ್ಸ್ ಬರೆದಿಡುವ ಆ್ಯಪ್‌ಗಳ ಪಟ್ಟಿಯಲ್ಲಿ ಇವರ್‌ನೋಟ್ ( Evernote) ಇಲ್ಲ ಎಂದರೆ ಆ ಆ್ಯಪ್‌ನ ಪಟ್ಟಿ ಅಪೂರ್ಣವೇ ಸರಿ. ಇವರ್‌ನೋಟ್ (ಐಒಎಸ್ ಮತ್ತು ಆಂಡ್ರಾಯ್ಡ್ ಫೋನ್‌ಗಳಲ್ಲಿ ಉಚಿತ) ಇದರಲ್ಲಿಯೂ ಅನೇಕ ಸೌಲಭ್ಯಗಳಿವೆ. ಇದೊಂದು ಉಚಿತ ಆ್ಯಪ್. ಆದರೆ ಕೆಲವು ವಿಶೇಷ ಸೌಲಭ್ಯಗಳಿಗೆ ಹಣ ಪಾವತಿಸಬೇಕು.

ನೀವು ಸರಳವಾಗಿ ನೋಟ್ ಬರೆದುಕೊಳ್ಳುವುದಾದರೆ ಜೊಹೊ (Zoho) ಆ್ಯಪ್ ನೆರವಾಗಲಿದೆ. ಬರೆದಿಟ್ಟ ನೋಟ್ಸ್‌ಗಳನ್ನು ಈ ಆ್ಯಪ್‌ ವ್ಯವಸ್ಥಿತವಾಗಿ ಜೋಡಿಸಿ ಇಡುತ್ತದೆ. ಇದರಿಂದಾಗಿ  ಬೇಕಾದ ಮಾಹಿತಿಯನ್ನು  ಸುಲಭವಾಗಿ ಹುಡುಕಬಹುದು.

ಇನ್ನು ನೋಟ್‌ಬುಕ್ (Notebook) ಆ್ಯಪ್‌.  ಯಾವುದೇ ಕಡತ ಹುಡುಕುವುದು ತುಂಬಾ ಸರಳ. ಅಲ್ಲದೇ ಯಾವುದೇ ಕಡತದಲ್ಲಿ ನಿರ್ದಿಷ್ಟ ಪದ ಹುಡುಕಲೂ ಇಲ್ಲಿ ಅವಕಾಶವಿದೆ. ಆದರೆ,  ಗಣಿತ ಸೂತ್ರ ಇತ್ಯಾದಿ ಬರೆಯಲಿಕ್ಕಿದ್ದರೆ ಬೇರೆ ಆ್ಯಪ್ ಮೊರೆಹೋಗುವುದು ಸೂಕ್ತ.

ಅಮಿಟಿ (Amity), ತಕ್ಷಣದ ಸಂದೇಶ ರವಾನಿಸಲು ಇರುವ ಉಚಿತ ಆ್ಯಪ್‌ . ಈ ಆ್ಯಪ್‌  ಮತ್ತಷ್ಟು ಉತ್ತಮ ಸೌಲಭ್ಯಗಳೊಂದಿಗೆ ವಾಟ್ಸ್‌ಆ್ಯಪ್‌, ಐಮೆಸೆಜಗಳಿಗೆ ಪೈಪೋಟಿ ಒಡ್ಡಲು ಅಣಿಯಾಗಿದೆ.  ಇದು ಆಂಡ್ರಾಯ್ಡ್‌ ಮತ್ತು ಐಒಎಸ್‌ನಲ್ಲಿ ಉಚಿತವಾಗಿ ಲಭ್ಯ ಇದೆ.

ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT