ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲಭ ಸಾಲ ನೀಡುವ ಸ್ಟಾರ್ಟ್‌ಅಪ್‌ ಅರ್ಲಿ ಸ್ಯಾಲರಿ

Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಎಲ್ಲ ಬಗೆಯ ವೆಚ್ಚಗಳಿಗೆ ತಿಂಗಳ ಸಂಬಳವನ್ನೇ ನೆಚ್ಚಿಕೊಂಡಿರುವವರಿಗೆ ಅದರಲ್ಲೂ ವಿಶೇಷವಾಗಿ ಯುವ ಜನಾಂಗದವರಿಗೆ  ತಿಂಗಳಾಂತ್ಯದಲ್ಲಿ ಎದುರಾಗುವ ಹಣಕಾಸಿನ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಸುಲಭವಾಗಿ ಸಾಧ್ಯವಾಗಲಾರದು. ಅವರ ಬಳಿ ಉಳಿತಾಯದ ಹಣ ಇರುವುದಿಲ್ಲ. ಕ್ರೆಡಿಟ್‌ ಕಾರ್ಡ್‌ ಕೂಡ ಇರಲಾರದು. ದೇಶದಲ್ಲಿ ಕ್ರೆಡಿಟ್‌ ಕಾರ್ಡ್‌ ಬಳಸುವವರ ಸಂಖ್ಯೆ ಒಂದು ಕೋಟಿಯಷ್ಟು ಮಾತ್ರ ಇರುವ ಅಂದಾಜು ಇದೆ. ಪರಿಚಿತರ ಬಳಿ ಸಾಲಕ್ಕೆ ಕೈಯೊಡ್ಡಲು ಕೆಲವರಿಗೆ ಮನಸ್ಸೂ ಇರಲಿಕ್ಕಿಲ್ಲ.

ಇಂತಹವರ ಅಗತ್ಯಗಳನ್ನು ಈಡೇರಿಸಲೆಂದೇ ಹಣಕಾಸು ತಂತ್ರಜ್ಞಾನ ಸಂಸ್ಥೆ ಅರ್ಲಿ ಸ್ಯಾಲರಿ (earlysalary) ಸ್ಟಾರ್ಟ್‌ಅಪ್‌ ನೆರವಿಗೆ ಬರುತ್ತಿದೆ. ಪುಣೆ ಮೂಲದ ಈ ಸಂಸ್ಥೆಯು ವೇತನವರ್ಗದ ತಿಂಗಳಾಂತ್ಯದ ಹಣಕಾಸಿನ ಅಗತ್ಯವನ್ನು ಸಾಲದ ಮೂಲಕ ಸುಲಭವಾಗಿ  ಒದಗಿಸಿ ಕೊಡಲಿದೆ. ಯಾವುದೇ ಭದ್ರತೆ ಇಲ್ಲದ, ವೈಯಕ್ತಿಕ ಸಾಲವನ್ನು ಕಡಿಮೆ ಬಡ್ಡಿ ದರಕ್ಕೆ ನೀಡುತ್ತಿದೆ.

‘ಕೆಲಸಕ್ಕೆ ಸೇರಿದ ಆರಂಭದಲ್ಲಿ ವೇತನದಾರರು ತಮ್ಮ  ಅನೇಕ ಅಗತ್ಯಗಳನ್ನು  ತುರ್ತಾಗಿ ಈಡೇರಿಸಿಕೊಳ್ಳಲು  ಇದರಿಂದ  ಸಾಧ್ಯವಾಗಲಿದೆ.  ಈ ಹಿಂದೆ ಸಂಸ್ಥೆಗಳಲ್ಲಿ   ಮುಂಗಡವಾಗಿ ಸಂಬಳ ನೀಡುವ ವ್ಯವಸ್ಥೆ ಇತ್ತು. ಈಗ ಅದೂ ನಿಂತು ಹೋಗಿದೆ. ಹೀಗಾಗಿ  ಐದ್ಹತ್ತು ದಿನಗಳಿಂದ ಹಿಡಿದು ಒಂದು ತಿಂಗಳ ಅವಧಿಗೆ ಮಾತ್ರ ಬೇಕಾಗುವ ಹಣ   ಹೊಂದಿಸಲು ವೇತನದಾರರು ಇನ್ನು ಮುಂದೆ ಪಡಿಪಾಟಲು ಪಡಬೇಕಾಗಿಲ್ಲ. ಅರ್ಲಿ ಸ್ಯಾಲರಿ ಮೊಬೈಲ್‌ ಆ್ಯಪ್‌ ಮೂಲಕ  ಅತ್ಯಂತ ಸುಲಭವಾಗಿ ಸಾಲ ಪಡೆಯಬಹುದು’ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಕ್ಷಯ್‌ ಮೆಹ್ರೋತ್ರಾ ಹೇಳುತ್ತಾರೆ.

‘ಮೊಬೈಲ್ ಆ್ಯಪ್‌ ಮೂಲಕವೇ ಸಾಲಗಾರರ ಮಾಹಿತಿಯನ್ನೆಲ್ಲ ಡಿಜಿಟಲ್‌ ರೂಪದಲ್ಲಿ   ಪರಿಶೀಲಿಸಿ, ಸಾಲದ ಅರ್ಹತೆ ನಿಗದಿಪಡಿಸಲಾಗುವುದು. ಇಸಿಎಸ್‌ ಪಿಡಿಎಫ್‌ ಪ್ರಿಂಟ್‌ಗೆ ಸಹಿ ಹಾಕಿ ಸ್ಕ್ಯಾನ್‌ ಮಾಡಿ ಕಳಿಸುತ್ತಿದ್ದಂತೆ 10ರಿಂದ 20 ನಿಮಿಷಗಳಲ್ಲಿ ಸಾಲ ಮಂಜೂರಾತಿ ಮಾಡಿ ಸಾಲಗಾರರ ಬ್ಯಾಂಕ್‌ ಖಾತೆಗೆ ಹಣ ಜಮಾವಣೆ ಮಾಡಲಾಗುತ್ತದೆ. ನಂತರದ ಸಂದರ್ಭಗಳಲ್ಲಿ ಇನ್ನೂ ಕಡಿಮೆ ಅವಧಿಯಲ್ಲಿ ಸಾಲ ಮಂಜೂರು ಮಾಡಲಾಗುವುದು. ಒಂದುಬಾರಿ ವೈಯಕ್ತಿಕ  ವಿವರಗಳನ್ನು ದಾಖಲಿಸಿದ ನಂತರ ಎರಡನೆ ಬಾರಿ ಸಾಲವು ಕೆಲವೇ ಕ್ಷಣಗಳಲ್ಲಿ ಮಂಜೂರು ಆಗುತ್ತದೆ’  ಎಂದು ಅವರು ಹೇಳುತ್ತಾರೆ.

ಕನಿಷ್ಠ ಅರ್ಹತೆಗಳು
ಈ ಸಾಲ ಪಡೆಯಲು ಸಾಲಗಾರರ ಬಳಿ ಸ್ಮಾರ್ಟ್‌ಫೋನ್‌, ಫೇಸ್‌ಬುಕ್‌ ಐಡಿ,  ಸಂಬಳದ ದಾಖಲೆ ಮತ್ತು ಪ್ಯಾನ್‌ ಸಂಖ್ಯೆ ಕಡ್ಡಾಯವಾಗಿ ಇರಬೇಕು. ಕನಿಷ್ಠ ಮಾಸಿಕ ಸಂಬಳ ₹ 20 ಸಾವಿರದಷ್ಟು ಇರಬೇಕು. ಇದು ಕೇವಲ ಸಂಬಳದಾರರಿಗೆ ಅದರಲ್ಲೂ ಯುವ ಜನಾಂಗದವರಿಗೆ ಮಾತ್ರ ಸಿಗುವ ಸಾಲ ಸೌಲಭ್ಯ. ವೇತನ ಪಡೆಯುತ್ತಿರುವುದೇ ಕನಿಷ್ಠ ಅರ್ಹತೆಯಾಗಿರುತ್ತದೆ.

ಕನಿಷ್ಠ ₹ 8 ಸಾವಿರದಿಂದ ಗರಿಷ್ಠ ₹ 1 ಲಕ್ಷದವರೆಗೆ ಸಾಲ ನೀಡಲಾಗುವುದು. ಸಾಲವನ್ನು ಒಂದೇ ತಿಂಗಳಲ್ಲಿ ಮರುಪಾವತಿಸಬೇಕಾಗುತ್ತದೆ. ಸಾಲ ಮರು ಪಾವತಿಗೆ ಇಸಿಎಸ್‌ ಕಡ್ಡಾಯವಾಗಿರುತ್ತದೆ. ಕನಿಷ್ಠ 7  ದಿನಗಳಿಂದ ಗರಿಷ್ಠ  40 ದಿನಗಳವರೆಗೂ ಸಾಲ  ಸೌಲಭ್ಯ ಇಲ್ಲಿ ಇರಲಿದೆ.

‘ಈ ಸಾಲವು ಕ್ರೆಡಿಟ್‌ ಕಾರ್ಡ್‌ಗಿಂತ ಅಗ್ಗವಾಗಿರುತ್ತದೆ.  ಕ್ರೆಡಿಟ್‌ ಕಾರ್ಡ್‌ಗಳಲ್ಲಿ ₹ 20 ಸಾವಿರ ಸಾಲಕ್ಕೆ  ₹ 1,300 ಬಡ್ಡಿ  ಪಾವತಿಸಿದರೆ, ಅರ್ಲಿ ಸ್ಯಾಲರಿಯಲ್ಲಿ ಇಷ್ಟೇ ಮೊತ್ತದ ಸಾಲಕ್ಕೆ 15 ದಿನಗಳಿಗೆ ₹ 500ಗಳಷ್ಟು ಮಾತ್ರ ಬಡ್ಡಿ ವಿಧಿಸಲಾಗುವುದು. ಇದೊಂದು ಸಾಲ ಅಲ್ಲ. ಅದೊಂದು ಜೀವನಶೈಲಿಯ ನೆರವು’ ಎಂದು ಅಕ್ಷಯ್‌ ಹೇಳುತ್ತಾರೆ.

ಬಿಗ್‌ ಬಜಾರ್‌, ಫ್ಲಿಪ್‌ಕಾರ್ಟ್‌, ಅಮೆಜಾನ್‌ ಮತ್ತಿತರ ಸಂಸ್ಥೆಗಳು ವಿಶೇಷ ಸಂದರ್ಭಗಳಲ್ಲಿ ಕೊಡಮಾಡುವ ಆಕರ್ಷಕ ಕೊಡುಗೆಗಳನ್ನು ಬಳಸಿಕೊಳ್ಳಲೂ ಈ ಸಾಲ ನೆರವಿಗೆ ಬರುತ್ತದೆ. ತಕ್ಷಣಕ್ಕೆ ಸಾಲ ಪಡೆದು ಜೀವನಶೈಲಿಯ ಸರಕುಗಳನ್ನು ಖರೀದಿಸುವುದರಿಂದ ಸಾಕಷ್ಟು ಹಣ ಉಳಿಸಬಹುದಾಗಿದೆ. ಸಕಾಲದಲ್ಲಿ  ಸಾಲ ಸಿಗದಿದ್ದರೆ ಕೊಡುಗೆಗಳ ಪ್ರಯೋಜನ ಬಳಸಿಕೊಳ್ಳಲು ಸಾಧ್ಯವಾಗಲಾರದು’ ಎಂದು ಅವರು ಹೇಳುತ್ತಾರೆ.

ದಿನದ ಲೆಕ್ಕದಲ್ಲಿ  ಶೇ 2ರಷ್ಟು ಬಡ್ಡಿ ವಿಧಿಸಲಾಗುತ್ತಿದೆ. ₹ 10 ಸಾವಿರಕ್ಕೆ  ಪ್ರತಿ ದಿನ ₹ 7 ಬಡ್ಡಿ ವಸೂಲಿ ಮಾಡಲಾಗುತ್ತಿದೆ. ಸಾಲ ಸೌಲಭ್ಯ ಒದಗಿಸಲು 5 ಸಾವಿರದಿಂದ  10 ಸಾವಿರ ಸಿಬ್ಬಂದಿ ಹೊಂದಿರುವ ಐ.ಟಿ ಸಂಸ್ಥೆಗಳ ಒಪ್ಪಂದ ಮಾಡಿಕೊಳ್ಳಲಾಗಿದೆ. ಪುಣೆಯಲ್ಲಿ ಮೊದಲ ಬಾರಿಗೆ  ವಹಿವಾಟು ಆರಂಭಿಸಿದ ಸಂಸ್ಥೆ ಈಗ ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ ಯಲ್ಲಿ ಸೇವೆ ವಿಸ್ತರಿಸಿದೆ. 

‘ಪುಣೆಯಲ್ಲಿ ಬ್ಯಾಂಕ್‌ ತಂತ್ರಜ್ಞಾನದ 11 ಜಾಗತಿಕ ಅಭಿವೃದ್ಧಿ ಕೇಂದ್ರಗಳು ಇರುವುದರಿಂದ ಅಲ್ಲಿ ಈ ಸ್ಟಾರ್ಟ್‌ಅಪ್‌ಗೆ ಚಾಲನೆ ನೀಡಿ, ಪ್ರಾಯೋಗಿಕವಾಗಿ ಬಳಕೆಗೆ ತರಲಾಗಿತ್ತು. ನಂತರ ಬೆಂಗಳೂರಿಗೆ ವಿಸ್ತರಿಸಲಾಯಿತು’ ಎಂದು  ಅಕ್ಷಯ್‌  ಹೇಳುತ್ತಾರೆ.

ಸಂಸ್ಥೆಯ ವಹಿವಾಟಿನಲ್ಲಿ ಬೆಂಗಳೂರಿನ ಪಾಲು ಶೇ 45ರಷ್ಟು ಇದೆ. ಹೊಸ ತಂತ್ರಜ್ಞಾನ ಸ್ವೀಕಾರ ಪ್ರವೃತ್ತಿ ಇಲ್ಲಿ ಹೆಚ್ಚಿಗೆ ಇರುವುದೇ ಇದಕ್ಕೆ ಕಾರಣ. ಆರಂಭದಲ್ಲಿ  ₹ 10 ಕೋಟಿ ಹೂಡಿಕೆ ಮಾಡಲಾಗಿದೆ. ಇನ್ನೂ ಹೆಚ್ಚಿನ ಹೂಡಿಕೆ  ಮಾಡುವ ಉದ್ದೇಶ ಇದೆ. ಮುಂದಿನ ವರ್ಷದ ಹೊತ್ತಿಗೆ ಪ್ರತಿ ತಿಂಗಳೂ ₹ 40 ರಿಂದ ₹ 50 ಕೋಟಿ ಮೊತ್ತದ 20 ಸಾವಿರದಷ್ಟು ಸಾಲ ವಿತರಿಸುವ ಗುರಿ ಹಾಕಿಕೊಳ್ಳಲಾಗಿದೆ. ಸಂಸ್ಥೆಯ ವಹಿವಾಟು ಪ್ರತಿ ತಿಂಗಳೂ  ಶೇ 40ರಷ್ಟುವೇಗದಲ್ಲಿ ವೃದ್ಧಿಯಾಗುತ್ತಿದೆ.

ಸಾಲಗಾರರ ಸರಾಸರಿ ವಯಸ್ಸು 26 ಇದೆ. 23 ರಿಂದ 26 ವರ್ಷದ ಒಳಗಿನವರೇ ಈ ಸಾಲ ಸೌಲಭ್ಯದ ಹೆಚ್ಚಿನ ಗ್ರಾಹಕರಾಗಿದ್ದಾರೆ. ಸಾಲಗಾರರ ಪೈಕಿ  ಪುರುಷ – ಸ್ತ್ರೀಯರ ದೇಶಿ  ಅನುಪಾತ  70: 30  ರಷ್ಟಿದ್ದರೆ, ಬೆಂಗಳೂರಿನಲ್ಲಿ ಇದು 94; 6 ಇದೆ. ಸಂಸ್ಥೆಯ ವಹಿವಾಟಿನಲ್ಲಿ ಬೆಂಗಳೂರು ಅತಿದೊಡ್ಡ ಮಾರುಕಟ್ಟೆಯಾಗಿದೆ.

ಯುವ ಜನಾಂಗಕ್ಕೆ ಮಾತ್ರ ಲಭ್ಯ ಇರುವ ಈ ಸಾಲ ಸೌಲಭ್ಯ ಪುಣೆ, ಬೆಂಗಳೂರು, ಹೈದರಾಬಾದ್‌  ನಗರದ ಐ.ಟಿ ಕಾರಿಡಾರ್‌ನಲ್ಲಿ ಸಾಕಷ್ಟು ಜನಪ್ರಿಯವಾಗಿದೆ.ಶೀಘ್ರದಲ್ಲಿಯೇ  ಕಂತಿನ ರೂಪದ ಸಾಲ ಸೌಲಭ್ಯ ಆರಂಭಿಸುವ ಆಲೋಚನೆ ಇದೆ.  ಸುಸ್ತಿದಾರ ಶೇ 3ಕ್ಕಿಂತ ಕಡಿಮೆ ಇರುವುದು ಈ ಸ್ಟಾರ್ಟ್‌ಅಪ್‌ನ ವಹಿವಾಟಿನ ಜನಪ್ರಿಯತೆಗೆ ಸಾಕ್ಷಿಯಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT