ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಟ್ಟಿಲ ತೂಗುವ ಕೈ ಘಟ ನುಡಿಸಬಲ್ಲುದು

Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ದೇಶದ ಕೆಲವೇ ಕೆಲವು ಮಹಿಳಾ ಘಟ ವಾದಕರಲ್ಲಿ ಸುಕನ್ಯಾ ರಾಮ್‌ಗೋಪಾಲ್‌ ಅಗ್ರರು.ಚೆನ್ನೈನಲ್ಲಿ ಹುಟ್ಟಿ ಬೆಳೆದ ಇವರು ಟಿ.ಎಚ್‌.ಗುರುಮೂರ್ತಿ ಅವರ ಬಳಿ ಪಿಟೀಲು ಕಲಿತರು. ನಂತರ ಹರಿಹರಶರ್ಮ ಅವರ ಬಳಿ ಮೃದಂಗ ಅಭ್ಯಾಸ ಮಾಡಿದರು.

ಖ್ಯಾತ ಘಟ ವಾದಕ ವಿಕ್ಕು ವಿನಾಯಕರಾಮ್‌ ಅವರ ಪ್ರಭಾವಕ್ಕೆ ಒಳಗಾಗಿ ಘಟ ವಾದ್ಯದತ್ತ ಆಕರ್ಷಿತರಾದ ಸುಕನ್ಯಾ ಅವರಿಗೆ ವಿನಾಯಕರಾಮ್‌ ಅವರ ಬಳಿಯೇ ಕಲಿಯುವ ಅವಕಾಶವೂ ಸಿಕ್ಕಿತು. ಇಪ್ಪತ್ತು ವರ್ಷ ವಿಕ್ಕು ವಿನಾಯಕರಾಮ್‌ ಅವರ ಬಳಿ ಘಟ ಅಭ್ಯಾಸ ಮಾಡಿದ್ದಾರೆ.

ಸುಕನ್ಯಾ ಅವರು ಆವಿಷ್ಕರಿಸಿದ ‘ಘಟಂ ತರಂಗಂ’ ಜನಪ್ರಿಯತೆ ಗಳಿಸಿದೆ. ಪಕ್ಕವಾದ್ಯಗಳನ್ನು ನುಡಿಸಲು ಹೆಣ್ಣು ಸಮರ್ಥಳಲ್ಲ ಎಂಬ ಸಾಂಪ್ರದಾಯಿಕ ಮನಸ್ಥಿತಿಗೆ ಸ್ವತಃ ಉತ್ತರರೂಪದಲ್ಲಿರುವ ಅವರು, ಸಂಗೀತ ಪಕ್ಕವಾದ್ಯ ಕ್ಷೇತ್ರದಲ್ಲಿ ಮಹಿಳೆಗೆ ಗಟ್ಟಿಯಾದ ಸ್ಥಾನ ಒದಗಿಸಲು ಶ್ರಮಿಸುತ್ತಿದ್ದಾರೆ.

ಸುಕನ್ಯಾ ರಾಮ್‌ಗೋಪಾಲ್‌ ಬರೆದ ಘಟ ವಾದನದ ಕುರಿತಾದ ‘ಸುನಾದಂ’ ಎಂಬ ಪುಸ್ತಕ ಈಚೆಗೆ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ತಮ್ಮ ನಾಲ್ಕು ದಶಕದ ಸಂಗೀತ ಯಾತ್ರೆಯಲ್ಲಿ ಗಳಿಸಿಕೊಂಡ ಅನುಭವದ ಕೆಲ ತುಣುಕುಗಳನ್ನು ಅವರು ಹಂಚಿಕೊಂಡರು.

* ಸಂಗೀತ ಒಡನಾಟದ ಆರಂಭಿಕ ದಿನಗಳ ಬಗ್ಗೆ ಹೇಳಿ?
ಸಂಗೀತ ನನಗೆ ತುಂಬಾ ಇಷ್ಟ. ಅದರಲ್ಲಿಯೂ ಪರ್ಕಷನ್‌ ಎಂದರೆ ಇನ್ನೂ ಇಷ್ಟ. ನನ್ನ ಮುತ್ತಾತ ಘಟ ಕೃಷ್ಣಯ್ಯರ್‌. ಅವರು ಘಟ ಪ್ರಕಾರದಲ್ಲಿ ಶ್ರೇಷ್ಠ ಗಾಯಕರಾಗಿದ್ದರು. ನನ್ನ ತಂದೆ– ಅಕ್ಕ ಎಲ್ಲರೂ ಹಾಡುತ್ತಿದ್ದರು. ಆದರೆ ಯಾರೂ ಅದನ್ನೇ ವೃತ್ತಿಯಾಗಿಸಿಕೊಂಡವರಲ್ಲ.

ಚಿಕ್ಕಂದಿನಲ್ಲಿ ನನ್ನ ಸೋದರಿಯ ಜೊತೆಗೆ ನಾನು ಕರ್ನಾಟಕ ಸಂಗೀತ ಕಲಿಯುತ್ತಿದ್ದೆ. ನಂತರ ಪಿಟೀಲು ಕಲಿಯಬೇಕು ಎಂಬ ಆಸೆಯಾಯಿತು. ಅದನ್ನೂ ಕಲಿಯತೊಡಗಿದೆ.

* ಮೃದಂಗ ಕಲಿಕೆ ಆರಂಭವಾಗಿದ್ದು ಹೇಗೆ?
ನಾನು ಗಾಯನ, ಪಿಟೀಲು ಎರಡನ್ನೂ ಅಭ್ಯಾಸ ಮಾಡುತ್ತಿದ್ದರೂ ಪರ್ಕಷನ್‌ ಕಡೆಗೆ ಹೆಚ್ಚು ಒಲವಿತ್ತು. ನನ್ನ ಸಹೋದರಿಯನ್ನು ಹಾಡಲು ಹೇಳಿ ಅದಕ್ಕ ತಕ್ಕ ಹಾಗೆ ಟೇಬಲ್‌ ಕುಟ್ಟುವುದು, ತಟ್ಟೆ ಬಡಿಯುವುದು ಮಾಡುತ್ತಿದ್ದೆ.

ನಮಗೆ ಪಿಟೀಲಿನ ಪಾಠ ಹೇಳುತ್ತಿದ್ದ ಮೇಷ್ಟ್ರು ಕೆಲ ಸಮಯದ ನಂತರ ಮನೆಗೆ ಬರುವುದು ನಿಲ್ಲಿಸಿದರು. ಆಗ ನಾನು ಹಿರಿಯ ಘಟ ವಾದಕ ವಿಕ್ಕು ವಿನಾಯಕ ರಾಮ್‌ ಅವರ ಸಹೋದರ ಟಿ.ಎಚ್‌. ಗುರುಮೂರ್ತಿ ಅವರ ಬಳಿ ಪಿಟೀಲು ಕಲಿಯಲು ಹೋದೆ. ಅಲ್ಲಿಯೇ ಅವರ ತಂದೆ ಹರಿಹರಶರ್ಮ ಅವರು ಮೃದಂಗ ತರಗತಿ ನಡೆಸುತ್ತಿದ್ದರು. ಪಿಟೀಲು ಕಲಿಯಲೆಂದೇ ಹೋಗಿದ್ದರೂ ನನ್ನ ಮನಸ್ಸು ಮೃದಂಗ ಕ್ಲಾಸ್‌ನಲ್ಲಿಯೇ ಇರುತ್ತಿತ್ತು.

ಒಂದು ದಿನ ಅವರ ಬಳಿ ಹೋಗಿ ‘ನನಗೆ ಮೃದಂಗ ಕಲಿಬೇಕು ಎಂದು ತುಂಬಾ ಆಸೆಯಾಗಿದೆ’ ಅಂತ ಹೇಳಿದೆ. ‘ಈವತ್ತೇ ಒಳ್ಳೆಯ ದಿನ. ಕೂತ್ಕೋ ತರಗತಿ ಶುರು ಮಾಡೋಣ’ ಎಂದುಬಿಟ್ಟರು. ಎಲೆ ಅಡಿಕೆ ಇಲ್ಲ, ತೆಂಗಿನಕಾಯಿ ಇಲ್ಲ ಏನೂ ಇಲ್ಲ. ಹಾಗೆಯೇ ಮೃದಂಗ ತರಗತಿ ಶುರುವಾಗಿಬಿಡ್ತು.

* ಘಟ ಕಲಿಕೆಯ ಹಂಬಲ ಮೂಡಿದ್ದು ಹೇಗೆ?
ಮುಂದಿನ ಮೂರು ವರ್ಷಗಳಲ್ಲಿ ನಾನು ಕಛೇರಿಗಳಲ್ಲಿ ಪಾಲ್ಗೊಳ್ಳುವಷ್ಟು ಪರಿಣತಳಾದೆ. ಗುರುಗಳ ಜತೆಗೆ ಬಿಕ್ಕು ವಿನಾಯಕ ರಾಮ್‌ ಸರ್‌ ಕಛೇರಿಗಳಿಗೆ ಹೋಗುತ್ತಿದ್ದೆ. ಅದನ್ನು ಕೇಳಿ ನನಗೂ ಘಟ ಕಲಿಬೇಕು ಎಂಬ ತೀವ್ರ ಆಸೆ ಹುಟ್ಟಿತು.

ಅವರ ಬಳಿ ‘ನನಗೂ ಕಲಿಸಿಕೊಡಿ’ ಎಂದು ಕೇಳಿದೆ. ಅವರು ‘ನೀನು ಚೆನ್ನಾಗಿ ಮೃದಂಗ ನುಡಿಸ್ತಾ ಇದ್ದೀಯಾ. ಘಟ ಮಣ್ಣಿನ ವಾದ್ಯ. ಶಬ್ದ ಹೊರಡಿಸುವುದು ಕಷ್ಟದ ಕೆಲಸ. ಮೃದಂಗವನ್ನೇ ಮುಂದುವರಿಸು’ ಎಂದುಬಿಟ್ಟರು. ಅವರ ಮಾತು ಕೇಳಿದ ತಕ್ಷಣ ನನಗೆ ‘ಹೆಂಗಸರಿಗೆ ಘಟದಿಂದ ಶಬ್ದ ಹೊರಡಿಸಲು ಸಾಧ್ಯವಿಲ್ಲ ಎಂದು ಯಾಕೆ ಹೇಳುತ್ತಾರೆ? ಹುಡುಗಿ ಅನ್ನುವ ಕಾರಣಕ್ಕೇ ಹೇಳುತ್ತಾರೆಯೇ? ಅದನ್ನು ಕಲಿಯಲೇಬೇಕು’ ಎಂಬ ಛಲ ಹುಟ್ಟಿತು. ಆ ಸಂದರ್ಭದಲ್ಲಿ ವಿಕ್ಕು ವಿನಾಯಕರಾಮ್‌ ಅವರ ತಂದೆ ಹರಿಹರಶರ್ಮ ನನ್ನ ಬೆಂಬಲಕ್ಕೆ ನಿಂತರು.

‘ಕಲೆಗೆ ಲಿಂಗ, ಜಾತಿ, ಧರ್ಮ ಯಾವುದೂ ಇಲ್ಲ. ಅವಳು ಮೂರು ವರ್ಷದೊಳಗೆ ಮೃದಂಗದಲ್ಲಿ ಪರಿಣತಿ ಪಡೆದಿದ್ದಾಳೆ. ಘಟ ಕಲಿಸಿಕೊಡು’ ಎಂದರು. ಅಷ್ಟರಲ್ಲಿ ವಿಕ್ಕು ವಿನಾಯಕ ಅವರು ಅಮೆರಿಕದ ವಿಶ್ವವಿದ್ಯಾಲಯವೊಂದಕ್ಕೆ ಒಂದು ವರ್ಷದ ಮಟ್ಟಿಗೆ ಬೋಧಕರಾಗಿ ಹೋದರು. ಆ ಸಮಯದಲ್ಲಿ ಹರಿಹರಶರ್ಮ ನನಗೆ ಘಟ ಕಲಿಸಿದರು. ಒಂದು ವರ್ಷದ ನಂತರ ವಿನಾಯಕರಾಮ್‌ ಬಂದು ನನ್ನ ನುಡಿಸಾಣಿಕೆ ಕೇಳಿ ಸಂತೋಷಪಟ್ಟು ಶಿಷ್ಯೆಯಾಗಿ ಸ್ವೀಕರಿಸಿದರು.

* ನಿಮ್ಮ ಗುರುಗಳಾದ ವಿಕ್ಕು ವಿನಾಯಕರಾಮ್‌ ಅವರ ಜತೆಗಿನ ಒಡನಾಟದ ನೆನಪು ಹಂಚಿಕೊಳ್ಳಿ.
ವಿಕ್ಕು ವಿನಾಯಕರಾಮ್‌ ಅವರ ಬಳಿ ಘಟ ಕಲಿಯುತ್ತಿದ್ದ ಸಮಯ ನನ್ನ ಬದುಕಿನ ಸುವರ್ಣ ಕಾಲ. ಅವರ ಬಳಿ ನೇರವಾಗಿ– ಕಛೇರಿಗಳನ್ನು ನೋಡಿ ನಾನು ತುಂಬಾನೇ ಕಲಿತುಕೊಂಡೆ. ಆಗ ಅವರು ಈಗಿನಷ್ಟು ಬ್ಯುಸಿ ಆಗಿರಲಿಲ್ಲ. ನಾನು ಕಳೆದ ನಲವತ್ತು ವರ್ಷಗಳಿಂದ ಘಟ ನುಡಿಸುತ್ತಿದ್ದೇನೆ. ವಿಕ್ಕು ವಿನಾಯಕ ಅವರ ನುಡಿಸಾಣಿಕೆಯ ಶೈಲಿಯನ್ನೇ ನಾನು ಅನುಸರಿಸುತ್ತಿದ್ದೇನೆ.

* ಶಾಸ್ತ್ರೀಯ ಸಂಗೀತ ಕಛೇರಿಗಳಲ್ಲಿ ಪಕ್ಕವಾದ್ಯಗಳಲ್ಲಿ ಮಹಿಳೆಯರಿಗೆ ಸ್ಥಾನವೇ ಇಲ್ಲ ಎನ್ನುವಷ್ಟು ವಿರಳ. ಇದಕ್ಕೇನು ಕಾರಣ?
ಪಕ್ಕವಾದ್ಯಗಳಲ್ಲಿ ಮಹಿಳೆಯರು ಯಾಕೆ ಇಲ್ಲ ಎಂದರೆ ಬಹಳ ಸಂಗೀತಗಾರರು ಮಹಿಳಾ ಪಕ್ಕವಾದ್ಯಗಾರರಿಗೆ ಅವಕಾಶವನ್ನೇ ನೀಡುವುದಿಲ್ಲ. ಗಂಡಸು ನುಡಿಸುವ ವಾದ್ಯಗಳನ್ನು ಹೆಂಗಸರಿಗೆ ಕೊಟ್ಟರೆ ಅವರು ಕಛೇರಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲರಾ? ಎಂಬ ಅನುಮಾನ ಇದೆ. ಗಂಡಸರಿಗೆ ಇರುವ ಶಕ್ತಿ ಹೆಂಗಸರಿಗೆ ಇಲ್ಲ ಎಂಬುದು ಅವರ ಭಾವನೆ.

ಅವಕಾಶ ಸಿಕ್ಕರೆ ಮಾತ್ರವೇ ನಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಸಾಧ್ಯ ಅಲ್ಲವೇ? ಅವಕಾಶಗಳೇ ಇಲ್ಲದಿದ್ದರೆ ಯಾವ ಹೆಣ್ಣು ತಾನೆ ಪಕ್ಕವಾದ್ಯಗಳನ್ನು ಕಲಿಯಲು ಮುಂದೆ ಬರುತ್ತಾರೆ?

ಕಳೆದ ಐದು ವರ್ಷಗಳಿಂದ ಸುಮನಾ ಚಂದ್ರಶೇಖರ್‌ ಎನ್ನುವವರು ನನ್ನ ಬಳಿ ಘಟ ಕಲಿಯುತ್ತಿದ್ದಾರೆ. ನನ್ನ ‘ಸುನಾದಂ’ ಪುಸ್ತಕಕ್ಕೂ ಅವರು ಸಾಕಷ್ಟು ಸಹಾಯ ಮಾಡಿದ್ದಾರೆ. ಘಟ ನುಡಿಸಲು ಹೆಣ್ಣುಮಕ್ಕಳು ಮುಂದೆ ಬರುತ್ತಿಲ್ಲ. ಬೇರೆ ಪಕ್ಕವಾದ್ಯಗಳಲ್ಲಿಯೂ ತುಂಬ ಕಡಿಮೆ ಇದ್ದಾರೆ. ಖಂಜಿರ ನುಡಿಸುವ ಹೆಂಗಸರ ಸಂಖ್ಯೆ ಎರಡು ಅಥವಾ ಮೂರು.  ಮೋರ್ಚಿಂಗ್‌ ನುಡಿಸುವವರು ನನಗೆ ತಿಳಿದ ಮಟ್ಟಿಗೆ ಒಬ್ಬರೇ ಇದ್ದಾರೆ.

* ನಿಮ್ಮ ವೈಶಿಷ್ಟ್ಯ ಎನಿಸಿರುವ ಘಟತರಂಗ್‌ ಬಗ್ಗೆ ಹೇಳಿ
ಘಟತರಂಗ್‌ ಎಂದರೆ ನಮ್ಮ ಸುತ್ತಲೂ ಆರು ಘಟ ಇಟ್ಟುಕೊಂಡು, ಮೋಹನರಾಗದಲ್ಲಿ ತಾನ್‌ ನುಡಿಸುವುದು. ಹತ್ತು ವರ್ಷಗಳಿಂದ ನಾನು ಘಟತರಂಗ್‌ ಕಛೇರಿ ನೀಡುತ್ತಿದ್ದೇನೆ. ಈ ಪ್ರಯತ್ನನ್ನು ಈವರೆಗೆ ಯಾರೂ ಮಾಡಿರಲಿಲ್ಲ. ಇದೀಗ ನನ್ನ ಪ್ರಯತ್ನ ಗಮನಿಸಿ, ಕೆಲ ಪುರುಷ ಘಟ ವಾದಕರು ಪ್ರಯತ್ನ ಶುರು ಮಾಡಿದ್ದಾರೆ. 

ಶೈಲಿ ಪ್ರಚಾರದ ಉದ್ದೇಶ
ವಿಕ್ಕು ವಿನಾಯಕರಾಮ್‌ ಅವರ ಶೈಲಿಯನ್ನು ಪ್ರಚುರಪಡಿಸುವುದೇ ‘ಸುನಾದಂ’ ಪುಸ್ತಕದ ಉದ್ದೇಶ. ಅವರ ಶೈಲಿ ಕಠಿಣವಾಗಿದ್ದರೂ ಅದು ಕಲಾವಿದರಿಗೆ ಕುತೂಹಲ ಹುಟ್ಟಿಸುವಂತಿರುತ್ತದೆ. ಉಳಿದ ಪಕ್ಕವಾದ್ಯಗಳ ಜತೆಗೂ ತುಂಬ ಚೆನ್ನಾಗಿ ಹೊಂದಿಕೊಳ್ಳುತ್ತದೆ.

‘ಸುನಾದ’ ಕೃತಿಯಲ್ಲಿ ಘಟವನ್ನು ಹೇಗೆ ಇಟ್ಟುಕೊಳ್ಳಬೇಕು, ಯಾವ್ಯಾವ ಬೆರಳುಗಳನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂಬ ಪ್ರಾಥಮಿಕ ವಿವರಗಳನ್ನೂ ನೀಡಿದ್ದಾರೆ. ಸೂಕ್ತ ಚಿತ್ರಗಳನ್ನೂ ಬಳಸಿದ್ದಾರೆ. ಆದಿ ತಾಳ, ರೂಪಕ ತಾಳ, ಮಿಶ್ರಛಾಪುತಾಳ ಕಂಠಛಾಪು ತಾಳಗಳಲ್ಲಿ ಘಟ ನಿರ್ವಹಣೆಯ ಬಗೆಯನ್ನು ವಿವರಿಸಿದ್ದಾರೆ.

‘ವಿದ್ಯಾರ್ಥಿಗಳು ಇದನ್ನು ಓದಿದರೆ ಒಂದು ಮಟ್ಟಕ್ಕೆ ಘಟ ನುಡಿಸುವುದನ್ನು ಕಲಿಯಬಹುದು. ಈ ಪುಸ್ತಕಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕರೆ ಇನ್ನಷ್ಟು ಪುಸ್ತಕಗಳನ್ನು ಬರೆಯುವ ಆಲೋಚನೆಯೂ ಇದೆ’ ಎನ್ನುತ್ತಾರೆ ಸುಕನ್ಯಾ ರಾಮ್‌ ಗೋಪಾಲ್.

***
ನಾನು ಘಟ ನುಡಿಸಲು ಮೊದಲು ವೇದಿಕೆ ಏರಿದಾಗ ಪ್ರೇಕ್ಷಕರು ಸಂತಸಪಟ್ಟಿದ್ದರು. ಆದರೆ ಇದೇ ಉದಾರತೆ ಕೆಲ ಸಂಗೀತಗಾರರಲ್ಲಿ ಕಂಡು ಬರಲಿಲ್ಲ. ನನ್ನನ್ನು ಘಟ ವಾದಕಿಯಾಗಿ ಒಪ್ಪಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು.

ಈಗಲೂ ಕೆಲವು ಪುರುಷ ಸಂಗೀತಗಾರರು ಮಹಿಳೆ ಪಕ್ಕವಾದ್ಯ ನುಡಿಸಬಾರದು ಎಂಬ ನಂಬಿಕೆಯಲ್ಲಿಯೇ ಇದ್ದಾರೆ.  ಚಿಕ್ಕ ಹುಡುಗಿ ಬಂದು ತಂಬೂರಿಯನ್ನೂ ನುಡಿಸಬಾರದು ಎನ್ನುವವರೂ ಇದ್ದಾರೆ. ಅದು ಯಾಕೆ ಎಂದು ನನಗಂತೂ ಗೊತ್ತಿಲ್ಲ.

ಹೆಣ್ಣಿನ ಬಗ್ಗೆ ಯಾಕಿಷ್ಟು ಅಸಡ್ಡೆ? ಹಾಗೆ ಹೇಳುವವರೆಲ್ಲ ಆಕಾಶದಿಂದ ಹಾಗೆಯೇ ಬಿದ್ದವರಾ? ತಾಯಿಯ ಮೂಲಕವೇ ಬಂದವರಲ್ಲವೇ? ಅವರು ಮದುವೆ ಮಾಡಿಕೊಂಡಿರುವುದು ಒಂದು ಹೆಣ್ಣನ್ನೇ ಅಲ್ಲವೇ? ಅವರಿಗೆ ಹೆಣ್ಣುಮಕ್ಕಳೂ ಇದ್ದಾರೆ. ಅವರ ಸುತ್ತಲೂ ಹೆಣ್ಣುಮಕ್ಕಳಿದ್ದಾರೆ. ಶಕ್ತಿ ಇಲ್ಲದೇ ಶಿವ ಇರಲು ಸಾಧ್ಯವೇ? ಈ ತತ್ವ ಅರಿತು ನಡೆದುಕೊಂಡರೆ ಯಾವ ಸಮಸ್ಯೆಯೂ ಇರುವುದಿಲ್ಲ.
–ಸುಕನ್ಯಾ ರಾಮ್‌ಗೋಪಾಲ್‌, ಘಟ  ವಾದಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT