ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಯೋಜಿತ ವಿಧಾನದಲ್ಲಿ ಕಲಿಸಿ

ಮಕ್ಕಳ ಪರಿಣಾಮಕಾರಿ ಕಲಿಕೆಗೆ ಸಂಯೋಜಿತ ವಿಧಾನ ಅಳವಡಿಕೆಯೇ ಪರಿಹಾರ
Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಆಧುನಿಕ ಜಗತ್ತಿನಲ್ಲಿ ಮಕ್ಕಳಿಗೆ ಕಲಿಸಬೇಕಾದ ವಿಷಯಗಳ ಮಹಾಪೂರವೇ ಹರಿಯುತ್ತಿದೆ. ಪರಿಸರ ಪ್ರಜ್ಞೆಯಿಂದ ಹಿಡಿದು ಸಂಚಾರ ಸುರಕ್ಷತೆ, ಏಡ್ಸ್ ಜಾಗೃತಿ, ಶಾಲಾ ವಾಹನಗಳಲ್ಲಿ ಸುರಕ್ಷತೆ ಇತ್ಯಾದಿಗಳವರೆಗೆ ಎಲ್ಲವೂ ಸಾಮಾಜಿಕ ಅಗತ್ಯಗಳೇ ಆಗಿರುತ್ತವೆ.

ನೀರಿನ ಲಭ್ಯತೆ ದುಸ್ತರವಾದ ಪ್ರಸಕ್ತ ಸನ್ನಿವೇಶದಲ್ಲಿ ನೀರಿನ ಮಿತಬಳಕೆ, ಜಲಪೂರಣ ತಂತ್ರಗಳು, ಪ್ರಕೃತಿ ವಿಕೋಪಗಳನ್ನು ಎದುರಿಸುವ ಕೌಶಲದ ಜೊತೆಗೆ ಮಕ್ಕಳು ತಮ್ಮ ಸುರಕ್ಷತೆಯನ್ನು ಹೊಂದುವ ಕೌಶಲಗಳೂ ಅವರ ಕಲಿಕೆ ಅಗತ್ಯಗಳಲ್ಲಿ ಸೇರ್ಪಡೆಗೊಳ್ಳುತ್ತವೆ. ಭವಿಷ್ಯದ ನಾಗರಿಕರನ್ನು ರೂಪಿಸಲು ಅಗತ್ಯವಾದ ಜ್ಞಾನ, ಕೌಶಲಗಳನ್ನು ಧಾರೆಯೆರೆಯಲು ಜ್ಞಾನದ ಕಣಜವನ್ನೇ ಪಠ್ಯಪುಸ್ತಕಗಳ ರೂಪದಲ್ಲಿ ತಯಾರಿಸಿ, ಕಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರ ಫಲವಾಗಿ ಮಕ್ಕಳು ಕಲಿಯಬೇಕಾದ ವಿಷಯದ ಹೊರೆ ಹೆಚ್ಚಾಗಿ, ಪಠ್ಯಪುಸ್ತಕಗಳು ಗಾತ್ರದಲ್ಲಿ ದಪ್ಪವಾಗುವ ಜೊತೆಗೆ ಶಿಕ್ಷಕರು ಎಲ್ಲಾ ವಿಷಯಗಳನ್ನು ಕಲಿಸಲು ವೇಳಾಪಟ್ಟಿ ಹೊಂದಿಸಲು ಕ್ಲಿಷ್ಟಕರ ಸನ್ನಿವೇಶ ಎದುರಿಸುತ್ತಾರೆ.

ಮಕ್ಕಳು ಪಠ್ಯವಿಷಯವನ್ನು ಬಾಯಿಪಾಠ ಮಾಡಿ ಅಥವಾ ನೆನಪಿನಲ್ಲಿರಿಸಿಕೊಂಡು ಪರೀಕ್ಷೆ ಬರೆದು, ಹೆಚ್ಚು ಅಂಕ ಗಳಿಸಲು ಪ್ರಯತ್ನಿಸುತ್ತಾರೆ. ಇವೆಲ್ಲದರ ನಡುವೆ ನೈಜ ಕಲಿಕೆಯ ಆಶಯವಾದ ರಚನಾತ್ಮಕ ಕಲಿಕೆ ಕಠಿಣವಾಗುತ್ತದೆ. ಹಾಗಿದ್ದಲ್ಲಿ ಪರಿಹಾರವೇನು ಎಂಬ ಪ್ರಶ್ನೆ ತಲೆದೋರುತ್ತದೆ.

ಪಠ್ಯಕ್ರಮದ ಹೊರೆ ಇಳಿಸಿ, ಪರಿಣಾಮಕಾರಿ ಕಲಿಕೆ ಸಾಧ್ಯವಾಗಲು ಸೂಕ್ತ ಪರಿಹಾರವೆಂದರೆ ಸಂಯೋಜಿತ ವಿಧಾನವನ್ನು ಅಳವಡಿಸುವುದು. ಸಂಯೋಜಿತ ವಿಧಾನದ ಮೂಲಕ ಕಲಿಸಲು 20ನೇ ಶತಮಾನದ ಆರಂಭದಿಂದಲೇ ಶಿಕ್ಷಣ ತಜ್ಞರು ಪ್ರತಿಪಾದಿಸಿದ್ದಾರೆ. 70ರ ದಶಕದಲ್ಲಿಯೇ ಬ್ರಿಟನ್, ಸ್ವೀಡನ್, ಇಟಲಿ, ಚಿಲಿ, ಬೆಲ್ಜಿಯಂನಂತಹ ಕೆಲವು ದೇಶಗಳು ಈ ಪದ್ಧತಿಯನ್ನು ಅಳವಡಿಸಿಕೊಂಡಿದ್ದವು.

17 ದೇಶಗಳಲ್ಲಿ ಈ ಪದ್ಧತಿಯ ಅನುಷ್ಠಾನದ ಆಧಾರದ ಮೇಲೆ ಯುನೆಸ್ಕೊ ನೇತೃತ್ವದಲ್ಲಿ ಅದರ ಸಾಧಕ-ಬಾಧಕಗಳ ಕುರಿತಂತೆ ವಿಸ್ತೃತವಾದ ಚರ್ಚೆ ನಡೆದಿದೆ. ಪ್ರಸ್ತುತ ಅಮೆರಿಕದಲ್ಲಿ ಸಂಯೋಜಿತ ಪದ್ಧತಿಯನ್ನು ಕೆಲವು ಶಾಲೆಗಳಲ್ಲಿ ಯಶಸ್ವಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ.

ಒಂದು ವಿಷಯದೊಳಗಿನ ವಿವಿಧ ವಿಷಯಗಳನ್ನು ಪ್ರತ್ಯೇಕಿಸಿ, ವಿಭಾಗಿಸಿ ಕಲಿಸುವ ಬದಲು ಆ ವಿಷಯದಲ್ಲಿ ಸಹಸಂಬಂಧ ಹೊಂದಿರುವ ವಿವಿಧ ಪರಿಕಲ್ಪನೆಗಳನ್ನು ಸಂಯೋಜಿಸಿ, ಸಮನ್ವೀಕರಿಸಿ ಕಲಿಸಿದಲ್ಲಿ ಹೆಚ್ಚು ಪರಿಣಾಮಕಾರಿ ಎಂಬುದು ತಜ್ಞರ ಅಭಿಪ್ರಾಯ. ಉದಾಹರಣೆಗೆ ಭಾಷಾ ಕಲಿಕೆಯಲ್ಲಿ ಪದ್ಯ, ಗದ್ಯ, ನಾಟಕ, ಪ್ರಬಂಧ ಪ್ರಕಾರ, ಬರೆಯುವುದು, ಓದುವುದು ಇತ್ಯಾದಿ ವಿಭಾಗಿಸದೆ, ಭಾಷಾ ಕಲಿಕೆಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಸಮ್ಮಿಲನಗೊಳಿಸಿ  ಕಲಿಸುವುದು. ಅದೇ ರೀತಿ ವಿಜ್ಞಾನದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹೀಗೆ ವಿಭಾಗಿಸದೆ ಸಾಮಾನ್ಯ ವಿಜ್ಞಾನವೆಂದು ಸಮನ್ವಯಗೊಳಿಸಿ ಕಲಿಸಬಹುದು.

ಇದರ ಜೊತೆಗೆ ವಿವಿಧ ವಿಷಯಗಳಲ್ಲಿ ಸಹಸಂಬಂಧ ಇರುವ ಪರಿಕಲ್ಪನೆಗಳನ್ನು ಸಮನ್ವಯಗೊಳಿಸಿ ಕಲಿಸುವುದೂ ಸಂಯೋಜಿತ ಕಲಿಕೆಯ ಮಾದರಿಯೆನ್ನಬಹುದು. ಭಾಷಾ ವಿಷಯಗಳ ಜೊತೆ ಪರಿಸರ ಅಧ್ಯಯನ ಅಥವಾ ಸಾಮಾಜಿಕ ಅಧ್ಯಯನ ವಿಷಯಗಳನ್ನು ಸಮನ್ವಯಗೊಳಿಸಿ ಕಲಿಸಬಹುದು. ಜೀವನ ಕೌಶಲಗಳನ್ನು ಎಲ್ಲಾ ವಿಷಯಗಳ ಜೊತೆ ಸಂಯೋಜಿಸಬಹುದು.

ವಿಜ್ಞಾನ ಹಾಗೂ ಗಣಿತವನ್ನು ಜೊತೆಯಾಗಿ ಸಮನ್ವಯಗೊಳಿಸಬಹುದು. ದೈಹಿಕ ಶಿಕ್ಷಣ, ಕಲೆ, ಆರೋಗ್ಯ ಹಾಗೂ ಜೀವನ ಕೌಶಲಗಳನ್ನು ಸಂಯೋಜಿಸಬಹುದು. ವಿಜ್ಞಾನ, ಸಾಮಾಜಿಕ ಅಧ್ಯಯನ, ಆರೋಗ್ಯ ಮತ್ತು ಕಲೆಗಳನ್ನು ಸಂಯೋಜಿಸಬಹುದು. ಹೀಗೆ ವಿವಿಧ ಸಾಧ್ಯತೆಗಳನ್ನು ಪರಿಶೀಲಿಸಿ, ಸಂಯೋಜನ ಮಾಡಿ ಕಲಿಸಬಹುದು. ಉದಾಹರಣೆಗೆ, ಪರಿಸರ ರಕ್ಷಣೆಯ ಪರಿಕಲ್ಪನೆಯನ್ನು ಮಕ್ಕಳಿಗೆ ಕಲಿಸಬೇಕೆಂದರೆ ಶಾಲೆಯ ಹತ್ತಿರದಲ್ಲಿರುವ ಕೆರೆ ಅಥವಾ ಕೊಳಕ್ಕೆ ಅವರನ್ನು ಕರೆದೊಯ್ದು ಆ ಕೆರೆಯ ನೀರು ಮಲಿನಗೊಂಡಿದ್ದರೆ, ಆ ಬಗ್ಗೆ ಮಕ್ಕಳಿಗೆ ತಿಳಿಸಿ ಹೇಳುವುದರ ಜೊತೆಗೆ ಮಾಲಿನ್ಯಕ್ಕೆ ಕಾರಣವಾಗುವ ರಾಸಾಯನಿಕಗಳ ಕುರಿತು ಚರ್ಚಿಸಬಹುದು.

ಜಲಮಾಲಿನ್ಯಕ್ಕೆ ಕಾರಣವಾಗಬಹುದಾದ ಕೈಗಾರಿಕಾ ಬೆಳವಣಿಗೆ ಹಾಗೂ ಮಾಲಿನ್ಯದಿಂದ ಉಂಟಾಗುವ ಸಾಮಾಜಿಕ ಸ್ಥಿತ್ಯಂತರಗಳನ್ನು ತಿಳಿಸಿಕೊಡಬಹುದು. ಸಂಯೋಜಿತ ಪಠ್ಯವಸ್ತುವನ್ನೇ ರೂಪಿಸಿ, ಅಗತ್ಯವಾದ ಚಟುವಟಿಕೆಗಳನ್ನು ಸಮ್ಮಿಲನಗೊಂಡ ಪಠ್ಯಪುಸ್ತಕಗಳಲ್ಲಿ ನೀಡಬಹುದು. ಅಥವಾ ಪ್ರಸ್ತುತ ಇರುವ ಪಠ್ಯಕ್ರಮವನ್ನೇ ಬಳಸಿಕೊಂಡು ಕಲಿಸುವಾಗ ಸಂಯೋಜಿತ ಕಲಿಕಾ ವಿಧಾನವನ್ನು ಅಳವಡಿಸಿಕೊಳ್ಳಬಹುದು. ಸಮಾಜದ ಬೇಡಿಕೆಗಳಿಗೆ ತಕ್ಕಂತೆ ಹೊಸ ಪಠ್ಯ ಅಥವಾ ವಿಷಯಗಳನ್ನು ಸೇರ್ಪಡೆ ಮಾಡದೆ, ಇರುವ ವಿಷಯಗಳಲ್ಲೇ ಹೆಚ್ಚಿನ ಪರಿಕಲ್ಪನೆಗಳನ್ನು ಅಂತರ್ಗತಗೊಳಿಸಲು ಚಿಂತಿಸುವುದು ಒಳಿತು.

ಪರಿಕಲ್ಪನೆಗಳನ್ನು ಯಾವ ರೀತಿ ಸಂಯೋಜಿಸಬೇಕೆಂಬ ಅಂಶಗಳನ್ನು ಶಿಕ್ಷಕರ ಸೇವಾ ಪೂರ್ವ ತರಬೇತಿಯಲ್ಲಿಯೇ ಅಳವಡಿಸಿ ತರಬೇತಿ ನೀಡಿದಲ್ಲಿ ಪರಿಣಾಮಕಾರಿ. ಈಗಾಗಲೇ ಶಿಕ್ಷಕರಾಗಿರುವವರಿಗೆ ಅಗತ್ಯ ತರಬೇತಿ ನೀಡಿದಲ್ಲಿ ಸಂಯೋಜಿತ ವಿಧಾನ ಅಳವಡಿಸಿಕೊಂಡೇ ಕಲಿಕಾ ಕ್ರಮವನ್ನು ಯಶಸ್ವಿಯಾಗಿ ಕಲಿಸುತ್ತಾರೆಂಬುದರಲ್ಲಿ ಸಂಶಯವಿಲ್ಲ.

ವಿವಿಧ ವಿಷಯಗಳ ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಒಂದೆಡೆ ಕುಳಿತು, ಯಾವ ಪರಿಕಲ್ಪನೆಯು ಇತರ ವಿಷಯಗಳಲ್ಲಿ ಸಂಯೋಜಿಸಲು ಸಾಧ್ಯವಿದೆಯೆಂದು ಗುರುತು ಹಾಕಿಕೊಂಡು, ಚರ್ಚಿಸಿ ನಿರ್ಧಾರ ತೆಗೆದುಕೊಂಡಲ್ಲಿ ಪಠ್ಯಪುಸ್ತಕದ ಹೊರೆ ಇಳಿಕೆ ಸಾಧ್ಯವಾಗುತ್ತದೆ. ಕೆಲವು ವಿಷಯಗಳನ್ನು ಪೂರಕ ಓದಾಗಿ, ಇನ್ನು ಕೆಲವು ಪರಿಕಲ್ಪನೆಗಳನ್ನು ಪ್ರಾಜೆಕ್ಟ್‌ಗಳ ಮೂಲಕ ನಿರ್ವಹಿಸಬಹುದು.

ಎಲ್ಲಾ ವಿಷಯಗಳನ್ನು ಪಠ್ಯಕ್ಕೆ ಸೇರಿಸಿ ಪರೀಕ್ಷೆಗೆ ಇರಿಸಿದರೆ ಮಾತ್ರ ಮಕ್ಕಳು ಕಲಿಯುತ್ತಾರೆಂಬ ಮನಸ್ಥಿತಿಯಿಂದ ಹೊರಬಂದು, ಹಗುರವಾದ ಪಠ್ಯಪುಸ್ತಕಗಳನ್ನು ರೂಪಿಸಿದಲ್ಲಿ ಮಕ್ಕಳ ಹೊರೆ ಕಡಿಮೆಯಾಗಿ ಸಂತಸಮಯ ಕಲಿಕೆಯತ್ತ ಮುಖ ಮಾಡಲು ಸಾಧ್ಯವಾಗುತ್ತದೆ.

ಮಾತೃಭಾಷೆಯ ಭದ್ರ ಬುನಾದಿ ಮೇಲೆ ಇತರ ವಿಷಯಗಳ ಕಲಿಕೆಗಾಗಿ ಸಂಯೋಜನಾ ವಿಧಾನ ಅಳವಡಿಸಿದಲ್ಲಿ ಪರಿಣಾಮಕಾರಿಯಾಗುತ್ತದೆ. ಕಿರಿಯ ಪ್ರಾಥಮಿಕ ಶಾಲಾ ಹಂತದಲ್ಲಿ ಮಾತೃಭಾಷೆಯಲ್ಲಿ ಪರಿಸರ ಅಧ್ಯಯನದ ಪರಿಕಲ್ಪನೆಗಳನ್ನು ಸಂಯೋಜಿಸಿದಲ್ಲಿ ಮಾತೃಭಾಷೆ, ಗಣಿತ, ಇಂಗ್ಲಿಷ್‌ ವಿಷಯಗಳನ್ನು ಮಾತ್ರ ಇಟ್ಟುಕೊಳ್ಳಬಹುದು. ಸಂಯೋಜನಾ ವಿಧಾನವನ್ನು ಏಳನೇ ತರಗತಿಯವರೆಗೆ ಅಳವಡಿಸಿದಲ್ಲಿ ವಿಷಯಗಳ ಸಂಖ್ಯೆ ಕಡಿಮೆ ಮಾಡಿಕೊಂಡು, ಶಿಕ್ಷಕರು ಆಳವಾಗಿ ಚಟುವಟಿಕೆಗಳ ಮೂಲಕ ಆನಂದದಾಯಕವಾಗಿ ಕಲಿಸಲು ಚಿಂತಿಸಬಹುದು. ಮಕ್ಕಳ ಸಂಖ್ಯೆ ಕಡಿಮೆಯಿರುವ ಸರ್ಕಾರಿ ಶಾಲೆಗಳಲ್ಲಿ ಸಂಯೋಜಿತ ಕಲಿಕಾ ವಿಧಾನವು ಶಿಕ್ಷಕರಿಗೆ ಉಪಯುಕ್ತವಾಗುವ ಜೊತೆ ಮಕ್ಕಳ ಕಲಿಕೆ ದೃಷ್ಟಿಯಿಂದಲೂ ಪರಿಣಾಮಕಾರಿ.

ಹಲವು ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಸಂಯೋಜನಾ ವಿಧಾನದ ಅಳವಡಿಕೆಯಿಂದ ಮಕ್ಕಳು ಸಂತಸದಾಯಕವಾಗಿ ಕಲಿಯುವುದರ ಜೊತೆಗೆ ಪರಿಕಲ್ಪನೆಗಳನ್ನು ಪರಿಣಾಮಕಾರಿಯಾಗಿ ಅನ್ವಯಿಸುವ ಕೌಶಲವನ್ನೂ ಕಲಿಯುತ್ತಾರೆ. ಈ ವಿಧಾನದಲ್ಲಿ ಕಲಿತ ಮಕ್ಕಳಲ್ಲಿ ಸಕಾರಾತ್ಮಕ  ಮನೋಭಾವ ಮೂಡಿ, ಆಳವಾದ ಕಲಿಕೆ ಸಾಧ್ಯವಾಗುತ್ತದೆ ಎಂದು ಸಂಶೋಧನೆಗಳು ದೃಢಪಡಿಸಿವೆ.

ಶಿಕ್ಷಕರು ಯಾಂತ್ರಿಕವಾಗಿ ಕಲಿಸುವುದನ್ನು ತಪ್ಪಿಸಿ, ವಿದ್ಯಾರ್ಥಿಗಳು ಸ್ವ-ಆಸಕ್ತಿ ಹಾಗೂ ಉತ್ಸಾಹದಿಂದ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಸಂಯೋಜಿತ ವಿಧಾನದಲ್ಲಿ ಪಠ್ಯಕ್ರಮ ರೂಪಿಸುವುದರ ಜೊತೆಗೆ ಕಲಿಕಾ ಕ್ರಮವನ್ನು ಅಳವಡಿಸಿಕೊಂಡಲ್ಲಿ, ಶಿಕ್ಷಣ ಪ್ರಕ್ರಿಯೆಯಲ್ಲಿ ಹೊಸತನ ಮೂಡುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಮುಂದುವರೆಯುವುದರ ಕಡೆ ಚಿಂತಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT