ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರವಾಗದ ನ್ಯಾಯಾಂಗ ನಿಂದನೆ ತೂಗುಗತ್ತಿ

Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ತನ್ನ ಆದೇಶವನ್ನು ಕರ್ನಾಟಕ ಸರ್ಕಾರ ಪಾಲಿಸಿಲ್ಲವೆಂಬ ನ್ಯಾಯಾಂಗ ನಿಂದನೆಯ ಆತಂಕವನ್ನು ಸುಪ್ರೀಂ ಕೋರ್ಟ್ ಇನ್ನೂ ಜೀವಂತ ಇರಿಸಿದೆ. ನೇರವಾಗಿ ಈ ಮಾತನ್ನು ಹೇಳದೆ ಇದ್ದರೂ ತನ್ನ ಆದೇಶದಲ್ಲಿ ನಿಚ್ಚಳ ಪರೋಕ್ಷ ಸೂಚನೆಗಳನ್ನು ಹಲವು ಬಾರಿ ನೀಡಿದೆ.

ನೀರು ಬಿಡದೆ ಹೋದರೆ ಅಂತಹ ವರ್ತನೆಯ ಸಾಧಕ ಬಾಧಕಗಳನ್ನು ಎದುರಿಸಬೇಕಾದೀತು ಎಂಬ ಎಚ್ಚರಿಕೆಯನ್ನು ನ್ಯಾಯಪೀಠ ತನ್ನ ಆದೇಶದ ವಾಕ್ಯಗಳು ಮತ್ತು ಪದಗಳ ನಡುವೆ ಹುದುಗಿಸಿದೆ. ವಿಧಾನಮಂಡಲ ನಿರ್ಣಯ ಅಂಗೀಕರಿಸಿರುವುದು ನಮಗೆ ಗೊತ್ತು. ಆದರೂ ನೀರು ಬಿಡುವ ಈ ಆದೇಶವನ್ನು ನೀಡುತ್ತಿದ್ದೇವೆ. ಪಾಲಿಸಲೇಬೇಕು ಎಂಬ ನಿರ್ದೇಶನವನ್ನು ಪುನರುಚ್ಚರಿಸಿದರೂ ಪರವಾಗಿಲ್ಲ, ಪದೇ ಪದೇ ಹೇಳುತ್ತಿದ್ದೇವೆ ಕೂಡ ಎಂಬ ಮಾತನ್ನು ನ್ಯಾಯಪೀಠ ಒತ್ತು ಕೊಟ್ಟು ಹೇಳಿರುವುದು ಗಮನಾರ್ಹ. ತಮ್ಮ ಈ ಮೊದಲಿನ ಆದೇಶಗಳನ್ನು ಪಾಲಿಸಲಾಗಿಲ್ಲ ಎಂಬ ನ್ಯಾಯಾಂಗ ನಿಂದನೆಯ ಆರೋಪದ ತಮಿಳುನಾಡಿನ ದೂರನ್ನು ತಾನು ಸದ್ಯಕ್ಕೆ ಮುಟ್ಟುತ್ತಿಲ್ಲ ಎಂದಿದೆಯೇ ವಿನಾ ಮುಂದಿನ ವಿಚಾರಣೆಗಳಲ್ಲೂ ಪಕ್ಕಕ್ಕೆ ಸರಿಸುವ ಭರವಸೆಯನ್ನೇನೂ ನೀಡಿಲ್ಲ.

ನ್ಯಾಯಾಲಯದ ಎಚ್ಚರಿಕೆ ಇಂದಿನ ಆದೇಶದ ಈ ಕೆಳಕಂಡ ವಾಕ್ಯಗಳಲ್ಲಿ ಹುದುಗಿದೆ: ‘ಈ ನ್ಯಾಯಾಲಯ ಈ ಮೊದಲು ಹೊರಡಿಸಿರುವ ಆದೇಶಗಳ ಪಾಲನೆ ಆಗಿಲ್ಲ ಎಂಬ ದೂರು ಇದೆ. ಆದರೂ ಆ ದೂರನ್ನು ನಾವು ಇಂದು ಕೈಗೆತ್ತಿಕೊಳ್ಳುತ್ತಿಲ್ಲ’.

‘ನೀರು ಬಿಡಬೇಕೆಂಬ ನಮ್ಮ ಆದೇಶವನ್ನು ಕರ್ನಾಟಕವು ಯಾವುದೇ ಅಡ್ಡಿ ಅಡಚಣೆ ಇಲ್ಲದೆ ಅಥವಾ ಬೇರೊಂದು ತೆರನಾದ ಧೋರಣೆ ತಳೆಯದೆ ವಿಧೇಯತೆಯಿಂದ ಪಾಲಿಸತಕ್ಕದ್ದು. ಈ ನಿರ್ಣಯ ಅಂಗೀಕರಿಸಿದ್ದರೂ ನೀರು ಬಿಡಲೇಬೇಕು. ಕಲಾಪವನ್ನು ಗಮನದಲ್ಲಿ ಇರಿಸಿಕೊಂಡೇ ನೀರು ಬಿಡಬೇಕೆಂಬ ಈ ನಿರ್ದೇಶನ ನೀಡುತ್ತಿದ್ದೇವೆ. ಆದ ಕಾರಣ ನಾವು ಹೊರಡಿಸಿರುವ ಈ ಆದೇಶವನ್ನು ಕರ್ನಾಟಕ ಪಾಲಿಸುವುದು ಸೂಕ್ತ ಮತ್ತು ಸಮರ್ಪಕ ಎಂಬುದು ನಮ್ಮ ಅನಿಸಿಕೆ’.

‘ಕುಡಿಯುವ ನೀರು ಪೂರೈಕೆಗಲ್ಲದೆ ಬೇರೆ ಯಾವ ಉದ್ದೇಶಕ್ಕೂ ನೀರು ಬಿಡುವುದಿಲ್ಲ ಎಂಬ ನಿರ್ಣಯವನ್ನು ಕರ್ನಾಟಕ ವಿಧಾನಮಂಡಲ ಅಂಗೀಕರಿಸಿದ್ದರೂ, ಮುಂಬರುವ ಮೂರು ದಿನಗಳ ಕಾಲ ನೀರು ಬಿಡಬೇಕೆಂಬ ಆದೇಶವನ್ನು ನಾವು ಹೊರಡಿಸುತ್ತಿದ್ದೇವೆ. ನೀರು ಬಿಡಬೇಕೆಂಬ ನಮ್ಮ ಮಾತು ಪುನರುಚ್ಚಾರ- ಪುನರಾವರ್ತನೆ ಅನಿಸಿದರೂ ಪರವಾಗಿಲ್ಲ’.

ಆಸ್ಪತ್ರೆಯಲ್ಲೇ ಸಭೆ ನಡೆಸಿದ ಜಯಲಲಿತಾ
ಚೆನ್ನೈ:
ಕಾವೇರಿ ನದಿಯಿಂದ ಆರು ಸಾವಿರ ಕ್ಯುಸೆಕ್ ನೀರನ್ನು ಮೂರು ದಿನಗಳವರೆಗೆ ತಮಿಳುನಾಡಿಗೆ ಬಿಡಬೇಕು ಎಂದು ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದ ನಂತರ ಮುಖ್ಯಮಂತ್ರಿ ಜಯಲಲಿತಾ ಅವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಲ್ಲೇ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.

ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ ನಂತರ ಅಲ್ಲಿಂದಲೇ ಆಡಳಿತ ನಡೆಸುತ್ತಿರುವ ಜಯಲಲಿತಾ ಅವರು ಮಂಗಳವಾರ ಹಿರಿಯ ಅಧಿಕಾರಿಗಳ ಜತೆ ಒಂದು ಗಂಟೆ ಸಭೆ ನಡೆಸಿದ್ದರಿಂದ ಅವರ ಅರೋಗ್ಯದ ಬಗ್ಗೆ ತೀವ್ರ ಆತಂಕ ಹೊಂದಿದ್ದವರು ನಿರಾಳರಾಗಿದ್ದಾರೆ.

ಮೊದಲು ಆದೇಶಿಸಿದಂತೆ ನೀರು ಬಿಡುವವರೆಗೆ ಕರ್ನಾಟಕದ ವಾದವನ್ನು ಆಲಿಸಬಾರದು ಎಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ವಿಚಾರ ಹಾಗೂ ನಂತರದ ಬೆಳವಣಿಗೆಗಳ ಬಗ್ಗೆ ಮುಖ್ಯ ಕಾರ್ಯದರ್ಶಿ   ಡಾ. ಪಿ. ರಾಮಮೋಹನ್ ರಾವ್ ಅವರು ವಿವರಿಸಿದರು.

ಕೇಂದ್ರ ಕರೆಯುವ ಸಭೆಯಲ್ಲಿ ತಾವು ಮಾಡಬೇಕಾದ ಭಾಷಣದ ಉಕ್ತಲೇಖನ ಜಯಲಲಿತಾ ಬರೆಸಿದರು. ಅದನ್ನು ತಮ್ಮ ಪರವಾಗಿ ಕಾರ್ಯಾಂಗ ಮುಖ್ಯಸ್ಥರ ಸಭೆಯಲ್ಲಿ ಓದುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT