ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಧಾವಂತದಲ್ಲಿ ಸಿಎಂ ಪ್ರವಾಸ ಮೊಟಕು

ಕಲಬುರ್ಗಿ, ಬೀದರ್‌ ಜಿಲ್ಲೆಗೆ ₹75 ಕೋಟಿ ತುರ್ತು ಪರಿಹಾರ
Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕಲಬುರ್ಗಿ/ಬೀದರ್‌: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಬೀದರ್‌ ಮತ್ತು ಕಲಬುರ್ಗಿ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ತುರ್ತು ಪರಿಹಾರಕ್ಕಾಗಿ ₹75 ಕೋಟಿ ಅನುದಾನ ಘೋಷಿಸಿದರು.

ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕು ಕೋರವಾರ ಗ್ರಾಮಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದರಾದರೂ ಪೂರ್ವ ನಿಗದಿಯಂತೆ ಹೆಬ್ಬಾಳ ಮತ್ತು ಕನಸೂರಗಳಿಗೆ ಅವರು ಭೇಟಿ ನೀಡಲಿಲ್ಲ.

ಕಾವೇರಿ ವಿಷಯ ಕುರಿತು ಸುಪ್ರೀಂ ಕೋರ್ಟ್‌ ನೀಡಿದ ಆದೇಶದಿಂದಾಗಿ ಅವರು ಕಳೆಗುಂದಿದವರಂತೆ ಕಂಡುಬಂದರು. ಕೋರವಾರದಲ್ಲಿ ಕೆಲ ನಿಮಿಷ ಧಾವಂತದಲ್ಲಿಯೇ ಅಧಿಕಾರಿಗೊಂದಿಗೆ ಚರ್ಚಿಸಿ ಬೀದರ್‌ ಮೂಲಕ ಬೆಂಗಳೂರಿಗೆ ವಾಪಸಾದರು.

ಮುಖ್ಯಮಂತ್ರಿಗೆ ಸಮಸ್ಯೆ ನಿವೇದಿಸಿಕೊಳ್ಳಲು ಮಧ್ಯಾಹ್ನದಿಂದಲೇ ಕಾದು ಕುಳಿತಿದ್ದ ಈ ಗ್ರಾಮಗಳ ಸಂತ್ರಸ್ತರು ‘ಮುಖ್ಯಮಂತ್ರಿ ಇಲ್ಲಿಯವರೆಗೆ ಬಂದರೂ ನಮ್ಮೂರಿಗೆ ಬರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತುರ್ತು ಪರಿಹಾರ: ‘ಅತಿವೃಷ್ಟಿ ಹಾಗೂ ಪ್ರವಾಹದಿಂದ ಸಂಭವಿಸಿರುವ ಹಾನಿಗೆ ತುರ್ತು ಪರಿಹಾರಕ್ಕೆ ಬೀದರ್‌ ಜಿಲ್ಲೆಗೆ ₹50 ಕೋಟಿ ಹಾಗೂ ಕಲಬುರ್ಗಿ ಜಿಲ್ಲೆಗೆ ₹25 ಕೋಟಿ ಅನುದಾನವನ್ನು ಬುಧವಾರ ಬಿಡುಗಡೆ ಮಾಡಲಾಗುವುದು’ ಎಂದು ಸಿದ್ದರಾಮಯ್ಯ ಹೇಳಿದರು.

‘ಮನೆ, ಬೆಳೆ, ಜೀವ ಹಾನಿಗೆ ತಕ್ಷಣವೇ ಪರಿಹಾರ ವಿತರಿಸುವಂತೆ ಸೂಚಿಸಲಾಗಿದೆ. ವಿವಿಧ ಇಲಾಖೆಗಳಿಂದ ಹಾನಿಯ ಜಂಟಿ ಸಮೀಕ್ಷೆ ನಡೆದಿದ್ದು, ಒಂದು ವಾರದಲ್ಲಿ ನಿಖರ ಮಾಹಿತಿ ಲಭ್ಯವಾಗಲಿದೆ. ಆ ನಂತರ ಹೆಚ್ಚಿನ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದರು.

ಕಲಬುರ್ಗಿ ಜಿಲ್ಲೆಯಲ್ಲಿ ₹350 ಕೋಟಿ ಹಾನಿ: ‘ಅತಿವೃಷ್ಟಿ ಹಾಗೂ ಪ್ರವಾಹದಿಂದ ಕಲಬುರ್ಗಿ ಜಿಲ್ಲೆಯಲ್ಲಿ ಪ್ರಾಥಮಿಕ ಸಮೀಕ್ಷೆಯಂತೆ ₹350 ಕೋಟಿಯಷ್ಟು ಹಾನಿ ಸಂಭವಿಸಿದೆ. ರಸ್ತೆ, ಸೇತುವೆ, ಶಾಲಾ ಕಟ್ಟಡ, ನಾಲೆ, ಕೆರೆ ಇನ್ನಿತರ ಮೂಲಸೌಕರ್ಯ ಬಾಬ್ತಿನಲ್ಲಿ ₹121 ಕೋಟಿ ಹಾನಿಯಾಗಿದೆ. 35 ಸಾವಿರ ಹೆಕ್ಟೇರ್‌ನಲ್ಲಿ ಬೆಳೆದಿದ್ದ ₹204 ಕೋಟಿ ಮೊತ್ತದ ಬೆಳೆ ನಷ್ಟವಾಗಿದೆ’ ಎಂದರು.

ಬೀದರ್‌ ವರದಿ: ಮಾಂಜರಾ ನದಿಗೆ ಬಂದಿರುವ ಪ್ರವಾಹದಿಂದಾಗಿ ಬೆಳಹಾನಿಗೊಳಗಾದ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಿದ ನಂತರ  ಭಾಲ್ಕಿ ತಾಲ್ಲೂಕಿನ ಸಾಯಗಾಂವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ರೈತರು ಬಿತ್ತನೆಗೆ ಮಾಡಿದ ಖರ್ಚನ್ನು ಪರಿಹಾರ ರೂಪದಲ್ಲಿ ಕೊಡಲಿದೆ. ಕಂದಾಯ ಇಲಾಖೆಯ ಮೂಲಕ ಹಣ ಬಿಡುಗಡೆ ಮಾಡಲಿದೆ.  ರೈತರು ಎದೆಗುಂದವ ಅಗತ್ಯವಿಲ್ಲ.  ಸರ್ಕಾರ, ರೈತರೊಂದಿಗೆ ಇದೆ’ ಎಂದು ಹೇಳಿದರು.

‘ಬೀದರ್‌ ಜಿಲ್ಲೆಯಲ್ಲಿ 1.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಹಾನಿಯಾಗಿದೆ. 2,500 ಮನೆ ಬಿದ್ದಿವೆ.  ಅತಿವೃಷ್ಟಿಗೆ ಕೆರೆಗಳು ಒಡೆದಿವೆ. ಮೂರು ಗ್ರಾಮಗಳ ಮುಳುಗಡೆಯಾಗಿವೆ. ರಸ್ತೆ, ವಿದ್ಯುತ್‌ ಕಂಬಗಳು ಹಾಳಾಗಿವೆ. ಐದು ಜನ ಪ್ರಾಣ ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಅಂದಾಜು ₹ 700 ಕೋಟಿ ನಷ್ಟವಾಗಿರುವ ಅಂದಾಜು ಮಾಡಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ನಿಯಮಾವಳಿ ಪ್ರಕಾರ ₹102 ಕೋಟಿ ಹಾನಿಯಾಗಿದೆ. ಮೊದಲು ಹಂತದಲ್ಲಿ ₹50 ಕೋಟಿ ಕೊಡಲಾಗುವುದು. ಬೆಳೆ ನಷ್ಟದ ಪೂರ್ಣ ವರದಿ ಬಂದ ನಂತರ ಎಷ್ಟು ಹಾನಿಯಾಗಿದೆಯೋ ಅಷ್ಟು  ಪರಿಹಾರ ಒದಗಿಸಲಾಗುವುದು’ ಎಂದು ಹೇಳಿದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಇದ್ದರು.

‘ಸರಳ ದಸರಾ; ಜಾರ್ಜ್‌ಗೆ ಕ್ಲೀನ್‌ಚಿಟ್‌’
‘ಕಾವೇರಿ ವಿವಾದ ಕಾರಣ ಮೈಸೂರು ದಸರಾವನ್ನು ಅದ್ಧೂರಿಯಾಗಿ ಆಚರಿಸುವುದಿಲ್ಲ. ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

‘ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ. ಜಾರ್ಜ್‌ ಅವರ ಪಾತ್ರ ಇಲ್ಲ ಎಂದು ಸಿಐಡಿ ನ್ಯಾಯಾಲಯಕ್ಕೆ ಬಿ ವರದಿ ಸಲ್ಲಿಸಿದೆ. ಹೀಗಾಗಿ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT