ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್‌, ದೋನಿ ಕುರಿತ ಹೇಳಿಕೆ: ಸಂದೀಪ್‌ಗೆ ಕ್ರಮದ ಎಚ್ಚರಿಕೆ

Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ತಂಡದಿಂದ ಸಚಿನ್ ತೆಂಡೂಲ್ಕರ್‌ ಮತ್ತು ಏಕದಿನ ತಂಡದ ನಾಯಕತ್ವದಿಂದ ಮಹೇಂದ್ರ ಸಿಂಗ್ ದೋನಿ ಅವರನ್ನು ಕೈಬಿಡುವ ಬಗ್ಗೆ ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ನಡೆದಿದ್ದ ಚರ್ಚೆಯ ವಿಷಯವನ್ನು ಬಹಿರಂಗ ಮಾಡಿದ್ದ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಸಂದೀಪ್‌ ಪಾಟೀಲ್ ವಿರುದ್ಧ ಬಿಸಿಸಿಐ ಅಧ್ಯಕ್ಷ ಅನುರಾಗ್‌ ಠಾಕೂರ್ ಕಿಡಿ ಕಾರಿದ್ದಾರೆ. ಜೊತೆಗೆ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆಯೂ ಠಾಕೂರ್ ಎಚ್ಚರಿಕೆ ನೀಡಿದ್ದಾರೆ.

‘ಪಾಟೀಲ್‌ ಆಯ್ಕೆ ಸಮಿತಿಯ ಮುಖ್ಯಸ್ಥ ಜವಾಬ್ದಾರಿ ಹೊಂದಿದ್ದಾಗ  ಬೇಜವಾಬ್ದಾರಿಯಿಂದ ಮಾತನಾಡ ಬಾರದಿತ್ತು. ಇದು ನ್ಯಾಯಯುತವಲ್ಲ’ ಎಂದು ಠಾಕೂರ್  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿನ್‌ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸುವ ಕೆಲ ದಿನಗಳ ಮೊದಲು ಅವರನ್ನು ತಂಡದಿಂದ ಕೈಬಿಡುವ ಬಗ್ಗೆ ಆಯ್ಕೆ ಸಮಿತಿಯ ಸಭೆಯಲ್ಲಿ ಚರ್ಚೆ ನಡೆದಿತ್ತು. ಆದ್ದರಿಂದ ಸಚಿನ್‌ ನಿವೃತ್ತಿ ಯಾದರು ಎಂದು ಪಾಟೀಲ್‌ ಹೋದ ವಾರ ಮಾಧ್ಯಮಗಳ ಮುಂದೆ ಹೇಳಿದ್ದರು.

2015ರಲ್ಲಿ ದೋನಿ ಅವರನ್ನು ಏಕದಿನ ತಂಡದ ನಾಯಕತ್ವದಿಂದ ತೆಗೆದು ಹಾಕುವ ಕುರಿತು ಚರ್ಚಿಸಲಾಗಿತ್ತು. ಆದರೆ ಐಸಿಸಿ ವಿಶ್ವಕಪ್‌ ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ಕೈಬಿಡಲಾಗಿತ್ತು ಎಂದೂ ಪಾಟೀಲ್‌ ಹೇಳಿದ್ದರು. ಇದು ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ.

‘ಮುಖ್ಯಸ್ಥ ಎಂದ ಮೇಲೆ ಅವರ ಮೇಲೆ ಸಾಕಷ್ಟು ನಂಬಿಕೆ ಇಡಲಾಗಿರುತ್ತದೆ. ಬಿಸಿಸಿಐ ಮತ್ತು ಆಯ್ಕೆ ಸಮಿತಿ ನಡುವೆ ಬಹಿರಂಗಪಡಿಸಲಾಗದ ಕೆಲ ವಿಶ್ವಾಸಾರ್ಹ ಚರ್ಚೆಗಳೂ ನಡೆದಿರುತ್ತವೆ. ಅದೆನ್ನೆಲ್ಲಾ ಹೇಳುವ ಅಗತ್ಯ ವಾದರೂ ಏನಿತ್ತು. ಸಂದೀಪ್‌ ಪಾಟೀಲ್‌ ಕೂಡ ಸಾಕಷ್ಟು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಅವರ ಜೊತೆ ಇನ್ನೂ ನಾಲ್ಕು ಮಂದಿ ಆಯ್ಕೆ ಸಮಿತಿಯಲ್ಲಿದ್ದರು. ಅವರು ಯಾರೂ ಸಮಿತಿಯಲ್ಲಿ  ನಡೆದ ವಿಷಯ ವನ್ನು ಬಹಿರಂಗ ಮಾಡಿಲ್ಲ. ಪಾಟೀಲ್‌ ನೈತಿಕ ಜವಾಬ್ದಾರಿಯಿಂದ ನಡೆದುಕೊಳ್ಳ ಬೇಕಿತ್ತು’ ಎಂದೂ ಠಾಕೂರ್ ಹೇಳಿದ್ದಾರೆ.

ಠಾಕೂರ್ ಅವರು ಪಾಟೀಲ್‌ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಮಾಹಿತಿ ನೀಡಿದ್ದು ‘ಬಿಸಿಸಿಐನ ಸೂಕ್ತ ವ್ಯಕ್ತಿಗಳೇ ಶೀಘ್ರದಲ್ಲಿ ಪಾಟೀಲ್‌   ಜೊತೆ ಮಾತನಾಡುತ್ತಾರೆ’ ಎಂದು  ತಿಳಿಸಿದ್ದಾರೆ.

‘ಯಾವುದಾದರೂ ಸಂಸ್ಥೆಯಲ್ಲಿ ಕೆಲಸ ಮಾಡಿದವರು ಆ ಸಂಸ್ಥೆಯ ವಿಶ್ವಾಸಾರ್ಹ ವಿಷಯಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವ ಮೊದಲು ಹತ್ತು ಸಲ ಯೋಚನೆ ಮಾಡಬೇಕಿತ್ತು’ ಎಂದಿದ್ದಾರೆ.

ಸುಪ್ರೀಂ ಕೋರ್ಟ್‌ ನೇಮಿಸಿದ್ದ ಲೋಧಾ ಸಮಿತಿಯ ನಿರ್ದೇಶನದ ಪ್ರಕಾರ ಬಿಸಿಸಿಐ ಹೊಸದಾಗಿ ಆಯ್ಕೆ ಸಮಿತಿಗೆ ಸದಸ್ಯರನ್ನು ನೇಮಕ ಮಾಡಬೇಕಿತ್ತು. ಆದ್ದರಿಂದ ಕೇಂದ್ರ ವಲಯವನ್ನು ಪ್ರತಿನಿಧಿಸುವ ಆಂಧ್ರದ ಎಂ.ಎಸ್‌.ಕೆ. ಪ್ರಸಾದ್‌ ಅವರನ್ನು  ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು.
ಮುಖ್ಯ ಕೋಚ್‌ ನೇಮಿಸಿದಂತೆ ಆಯ್ಕೆ ಸಮಿತಿಗೂ ಅರ್ಜಿ ಆಹ್ವಾನಿಸಿ ಸಂದರ್ಶನ ನಡೆಸಿ ಬಿಸಿಸಿಐ ಆಯ್ಕೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT