ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಾಲಕ್ಕೆ ಗೂಗಲ್‌ ಹೊಸ ಸೇವೆಗಳು

Last Updated 27 ಸೆಪ್ಟೆಂಬರ್ 2016, 19:55 IST
ಅಕ್ಷರ ಗಾತ್ರ

ನವದೆಹಲಿ: ಕಡಿಮೆ ಅಂತರ್ಜಾಲ ವೇಗಕ್ಕೆ ಹೊಂದಿಕೆಯಾಗುವಂತಹ ನೂತನ ಉತ್ಪನ್ನಗಳ ಗುಚ್ಛವನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸುವುದಾಗಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪೆನಿ ಗೂಗಲ್‌ ಮಂಗಳವಾರ ಪ್ರಕಟಿಸಿದೆ.

ಇದರಲ್ಲಿ, ಗೂಗಲ್‌ ಸ್ಟೇಷನ್‌ ಎಂಬ ಹೆಸರಿನ ವೈ–ಫೈ ಸೌಲಭ್ಯ ತಾಣ, ‘ಯೂಟ್ಯೂಬ್‌ ಗೋ’ ಎಂಬ ವಿಡಿಯೊ ಆ್ಯಪ್‌, ಕ್ರೋಮ್‌ ವೆಬ್‌ ಬ್ರೌಸರ್‌ನಲ್ಲಿ ಆಫ್‌ಲೈನ್‌ ವ್ಯವಸ್ಥೆ ಮತ್ತು 2ಜಿ ನೆಟ್‌ವರ್ಕ್‌ನಲ್ಲಿಯೂ ವೇಗವಾಗಿ ಕಾರ್ಯನಿರ್ವಹಿಸಬಲ್ಲ ಗೂಗಲ್‌ ಪ್ಲೇ ಸೌಲಭ್ಯಗಳು ಒಳಗೊಂಡಿವೆ.
ಭಾರತದ ಬಳಕೆದಾರರಿಗೆ ಉತ್ತಮ  ಅಂತರ್ಜಾಲ ಅನುಭವ ನೀಡುವ ನಿಟ್ಟಿನಲ್ಲಿ ಕಂಪೆನಿ ಕೆಲಸ ಮಾಡುತ್ತಿದೆ ಎಂದು ಗೂಗಲ್‌ನ ಉಪಾಧ್ಯಕ್ಷ ಸೀಸರ್‌  ಸೇನ್‌ಗುಪ್ತಾ ತಿಳಿಸಿದ್ದಾರೆ.

‘ನಮ್ಮ ಗುರಿ ಹೆಚ್ಚು ಹೆಚ್ಚು ಭಾರತೀಯರು ಅಂತರ್ಜಾಲ ಸೌಲಭ್ಯವನ್ನು ಪಡೆದುಕೊಳ್ಳಲು ನೆರವಾಗುವುದಷ್ಟೇ ಅಲ್ಲ. ಭಾರತೀಯರು ತಮಗೆ ಬೇಕಾದ ಅಂತರ್ಜಾಲ ಅನುಭವವನ್ನು ಸೃಷ್ಟಿಸಿಕೊಳ್ಳಲು ನೆರವಾಗುವುದೂ ನಮ್ಮ ಉದ್ದೇಶ. ಹೀಗಾಗಿ ಈ ಹೊಸ ಬಳಕೆದಾರರಿಗೆ ಯಾವುದೇ ಮಟ್ಟದ ಅಂತರ್ಜಾಲ ಸಂಪರ್ಕ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ, ಭಾರತದ ಸ್ಥಳೀಯ ಭಾಷೆಗಳಲ್ಲಿ ಇರುವ ಮತ್ತು ಹೆಚ್ಚು ಬಳಕೆಯಲ್ಲಿರುವ ಉಪಕರಣಗಳಿಗಾಗಿ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಲು ನಾವು ಚಿಂತನೆ ನಡೆಸಿದ್ದೇವೆ’ ಎಂದು ಸೇನ್‌ಗುಪ್ತಾ ತಿಳಿಸಿದ್ದಾರೆ.

ರೈಲ್‌ಟೆಲ್‌ ಮತ್ತು ಭಾರತೀಯ ರೈಲ್ವೆಯೊಂದಿಗಿನ ಸಹಭಾಗಿತ್ವದ ಭಾಗವಾಗಿ ಕಂಪೆನಿಯು ರೈಲು ನಿಲ್ದಾಣಗಳಲ್ಲಿ ವೈ–ಫೈ ಸೌಲಭ್ಯ ಒದಗಿಸುವ ಗೂಗಲ್‌ ಸ್ಟೇಷನ್‌ಗಳನ್ನ ಆರಂಭಿಸಿದೆ. ಗೂಗಲ್‌ ಸ್ಟೇಷನ್‌ಗಳು ಮಾಲ್‌ಗಳು, ನಿಲ್ದಾಣಗಳು ಮತ್ತು ಕೆಫೆಗಳಂತಹ ಸ್ಥಳಗಳಲ್ಲಿ ವೇಗದ, ವಿಶ್ವಸನೀಯ ಮತ್ತು ಸುರಕ್ಷಿತ ವೈ–ಫೈ ಒದಗಿಸಲಿದೆ. ಬರುವ ವರ್ಷಗಳಲ್ಲಿ ಇಂಗ್ಲಿಷ್‌ ಅಲ್ಲದೆಯೇ ಪ್ರಾದೇಶಿಕ ಭಾಷೆಗಳಲ್ಲಿಯೂ ಅಂತರ್ಜಾಲ ಬಳಸುವ ಲಕ್ಷಾಂತರ ಬಳಕೆದಾರರ ಮೇಲೂ ಗೂಗಲ್‌ ಗಮನ ಹರಿಸಲಿದೆ.

2ಜಿ ನೆಟ್‌ವರ್ಕ್‌ನಲ್ಲಿಯೂ ವೇಗವಾಗಿ ತೆರೆಯುವ ಮೂಲಕ 90ರಷ್ಟು ದತ್ತಾಂಶ ಬಳಕೆಯನ್ನು ಉಳಿಸುವಂತಹ ಸರಳೀಕೃತ ಪುಟಗಳನ್ನು ಕ್ರೋಮ್‌ನಲ್ಲಿ ನೀಡಲಾಗುತ್ತದೆ. ಈ ದತ್ತಾಂಶ ಸರ್ವರ್‌ ವಿಡಿಯೊಗಳನ್ನು ವೀಕ್ಷಿಸಲೂ ನೆರವಾಗುತ್ತದೆ.

18ನೇ ಹುಟ್ಟುಹಬ್ಬದ ಸಂಭ್ರಮ
ವಾಷಿಂಗ್ಟನ್: ಮಾಹಿತಿ ಶೋಧದ ಅಂತರ್ಜಾಲ ತಾಣ ಗೂಗಲ್ ಮಂಗಳವಾರ 18ನೇ ಜನ್ಮದಿನ ಆಚರಿಸಿತು. ಆನಿಮೇಟೆಡ್ ಬಲೂನುಗಳನ್ನು ಡೂಡಲ್ ಆಗಿ ಪ್ರಕಟಿಸುವ ಮೂಲಕ ಜನ್ಮದಿನ ಆಚರಿಸಲಾಯಿತು.

ಈ ಹಿಂದೆ ಸೆಪ್ಟೆಂಬರ್ ತಿಂಗಳ ಬೇರೆ ದಿನಾಂಕಗಳಲ್ಲಿ ಗೂಗಲ್ ಜನ್ಮದಿನ ಆಚರಿಸಿದ್ದರಿಂದ ಆ ಕುರಿತು ಗೊಂದಲವೂ ಸೃಷ್ಟಿಯಾಗಿತ್ತು. 1998ರಲ್ಲಿ ಲ್ಯಾರಿ ಪೇಜ್ ಮತ್ತು ಸರ್ಜೆ ಬ್ರಿನ್ ಕಂಪನಿ ಸ್ಥಾಪಿಸಿದ್ದರು. ಕಂಪೆನಿಯ ಇತಿಹಾಸ ಹೇಳುವ ಪ್ರಕಾರ, ಅದು ಜನ್ಮತಾಳಿದ್ದು 1998ರ ಸೆ. 4ಕ್ಕೆ. ಆದರೆ, 2004ರಲ್ಲಿ ಸೆ. 7ಕ್ಕೆ ಜನ್ಮದಿನ ಆಚರಿಸಲಾಗಿತ್ತು. ಅದಕ್ಕೂ ಮೊದಲಿನ ವರ್ಷ ಸೆ. 8ಕ್ಕೆ ಆಚರಿಸಲಾಗಿತ್ತು. 2005ರಲ್ಲಿ ಸೆ. 26ಕ್ಕೆ ಆಚರಿಸಲಾಗಿದ್ದರೆ, 2006 ಹಾಗೂ ನಂತರದ ವರ್ಷಗಳಲ್ಲಿ ಸೆ. 27ಕ್ಕೆ ಜನ್ಮದಿನ ಆಚರಿಸುತ್ತಾ ಬರಲಾಗಿದೆ.  2002ರಿಂದ ಡೂಡಲ್ ಪ್ರಕಟಿಸುವ ಮೂಲಕ ಗೂಗಲ್ ಜನ್ಮದಿನ ಆಚರಿಸಲು ಆರಂಭಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT