ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಿಯರ್ಸ್ ನಿರಾಳ; ಬುಲ್ಸ್‌ಗೆ ತಳಮಳ

ಕೆಪಿಎಲ್‌ ಎರಡನೇ ಹಂತ ಇಂದಿನಿಂದ; ನಾಕೌಟ್ ಸ್ಪರ್ಧೆಯಲ್ಲಿ ಐದು ತಂಡಗಳು
Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಒಂದೆಡೆ ಅಜೇಯ ಓಟದೊಂದಿಗೆ ನಾಕೌಟ್ ಹಂತಕ್ಕೇರಿ ನಿರಾಳವಾಗಿರುವ ಮಾಜಿ ಚಾಂಪಿಯನ್‌ ಮೈಸೂರು ವಾರಿಯರ್ಸ್‌. ಇನ್ನೊಂದೆಡೆ ಗೆಲುವಿನ ಅನಿವಾರ್ಯತೆಗೆ ಸಿಲುಕಿರುವ ಹಾಲಿ ಚಾಂಪಿಯನ್‌ ಬಿಜಾಪುರ ಬುಲ್ಸ್‌.

ಕರ್ನಾಟಕ ಪ್ರೀಮಿಯರ್ ಲೀಗ್‌ನ ಐದನೇ ಆವೃತ್ತಿಯ ಮೊದಲ ಹಂತ ಮುಗಿದಾಗ ಸ್ಪಷ್ಟವಾಗಿರುವ ಚಿತ್ರಣ ಇದು. ಒಂದು ದಿನ ವಿರಾಮದ ನಂತರ ಎರಡನೇ ಹಂತದ ಪಂದ್ಯಗಳು ಬುಧವಾರ ಆರಂಭವಾಗಲಿದ್ದು ಬುಲ್ಸ್ ಪಾಲಿಗೆ ಇದು ಅಗ್ನಿಪರೀಕ್ಷೆಯ ಸಮಯ.

ಲೀಗ್ ಹಂತದ ಅಂತಿಮ ಆರು ಪಂದ್ಯಗಳು ಮಾತ್ರ ಉಳಿದಿದ್ದು  ಐದು ತಂಡಗಳ ಭವಿಷ್ಯ ಗೊತ್ತಾಗಲಿದೆ. ಇವುಗಳ ಪೈಕಿ ಮೂರು ತಂಡಗಳಿಗೆ ಮಾತ್ರ ಸೆಮಿಫೈನಲ್‌ನಲ್ಲಿ ಕಾದಾಡುವ ಅವಕಾಶ ಇರುವುದರಿಂದ ಎರಡನೇ ಹಂತದ ಮೊದಲ ಮೂರು ದಿನಗಳ ಪಂದ್ಯಗಳು ಕುತೂಹಲ ಕೆರಳಿಸಿವೆ.

ಬಿಜಾಪುರ ಬುಲ್ಸ್‌, ಹುಬ್ಬಳ್ಳಿ ಟೈಗರ್ಸ್‌, ಬಳ್ಳಾರಿ ಟಸ್ಕರ್ಸ್‌, ಬೆಳಗಾವಿ ಪ್ಯಾಂಥರ್ಸ್ ಮತ್ತು  ನಮ್ಮ ಶಿವಮೊಗ್ಗ ತಂಡಗಳಿಗೆ ನಾಕೌಟ್ ಹಂತ ಪ್ರವೇಶಿಸುವ ಬಾಗಿಲು ತೆರೆದಿದೆ. 

ಹುಬ್ಬಳ್ಳಿ ಟೈಗರ್ಸ್‌ಗೆ ಇನ್ನು ಎರಡು ಪಂದ್ಯಗಳು ಇವೆ. ಮೈಸೂರು ವಾರಿಯರ್ಸ್ ವಿರುದ್ಧ ಬುಧವಾರ ನಡೆಯುವ ಪಂದ್ಯದಲ್ಲಿ ಸೋಲುಂಡರೂ ಶುಕ್ರವಾರ ನಡೆಯಲಿರುವ ಕೊನೆಯ ಪಂದ್ಯದಲ್ಲಿ ರಾಕ್‌ ಸ್ಟಾರ್ಸ್ ವಿರುದ್ಧ ಗೆದ್ದು  ನಾಲ್ಕರ ಘಟ್ಟಕ್ಕೆ ಪ್ರವೇಶಿಸುವ ಭರವಸೆ ಉಳಿಸಿಕೊಳ್ಳಬಹುದು.

ನಿರ್ಣಾಯಕ ಪಂದ್ಯ ನಾಳೆ
ಬಿಜಾಪುರ ಬುಲ್ಸ್ ಮತ್ತು ಬಳ್ಳಾರಿ ಟಸ್ಕರ್ಸ್‌ ಗುರುವಾರ ಮಧ್ಯಾಹ್ನ ಸೆಣಸಲಿದ್ದು ಉಭಯ ತಂಡಗಳಿಗೆ ಈ ಪಂದ್ಯ ನಿರ್ಣಾಯಕ. ಈ ಎರಡೂ ತಂಡಗಳಿಗೆ ಇದು ಲೀಗ್ ಹಂತದ ಕೊನೆಯ ಪಂದ್ಯ. ಇಲ್ಲಿ ಗೆದ್ದವರು ಸೆಮಿಫೈನಲ್‌ ಪ್ರವೇಶಿಸುವುದು ಖಚಿತ.

ಪಂದ್ಯಕ್ಕೆ ಮಳೆ ಅಡ್ಡಿಯಾದರೂ ಸೆಮಿಗೆ ಲಗ್ಗೆ ಇಡಲು ಬುಲ್ಸ್‌ಗೆ ಅವಕಾಶ ವಿದೆ. ಏಕೆಂದರೆ ಈ ತಂಡದ ಖಾತೆಯಲ್ಲಿ ಈಗ ಏಳು ಪಾಯಿಂಟ್‌ಗಳಿವೆ.
ನಮ್ಮ ಶಿವಮೊಗ್ಗ ತಂಡಕ್ಕೆ ಒಂದು ಪಂದ್ಯ ಬಾಕಿ ಇದ್ದು ಜಯ ಅನಿವಾರ್ಯ. ಎರಡು ಪಂದ್ಯಗಳು ಬಾಕಿ ಇರುವ ಬೆಳಗಾವಿ ಪ್ಯಾಂಥರ್ಸ್‌ ಎರಡರಲ್ಲೂ ಗೆಲ್ಲಬೇಕು.  ನಮ್ಮ ಶಿವಮೊಗ್ಗ ತಂಡಕ್ಕೆ ಲೀಗ್ ಹಂತದ ಕೊನೆಯ ದಿನ ಮೈಸೂರು ವಾರಿಯರ್ಸ್ ವಿರುದ್ಧ ನಡೆಯಲಿರುವ ಪಂದ್ಯ ನಿರ್ಣಾಯಕ.

ಬೆಳಗಾವಿ ಪ್ಯಾಂಥರ್ಸ್‌ ಬುಧವಾರ ರಾಕ್ ಸ್ಟಾರ್ಸ್ ವಿರುದ್ಧ ಸೆಣಸಲಿದ್ದು ಇಲ್ಲಿ ಜಯ ಸಾಧಿಸಿದರೆ ಗುರುವಾರ ಮಂಗ ಳೂರು ಯುನೈಟೆಡ್ ವಿರುದ್ಧದ ಪಂದ್ಯ ನಿರ್ಣಾಯಕವಾಗಲಿದೆ. ಉಭಯ ತಂಡಗಳು  ಈ ಸವಾಲುಗಳನ್ನು ಮೆಟ್ಟಿ ನಿಂತರೆ ಮತ್ತೆ ರನ್ ಸರಾಸರಿ, ಇತರ ತಂಡಗಳ ಸೋಲು–ಜಯ ಮುಂತಾದ ಲೆಕ್ಕಾಚಾರದ ಮೊರೆ ಹೋಗಬೇಕಾಗಬಹುದು. ಹವಾಮಾನ ಇಲಾಖೆ ಮುಂದಿನ ಮೂರು ದಿನ ಮಳೆಯ ಮುನ್ಸೂಚನೆ ನೀಡಿರುವುದರಿಂದ ಲೆಕ್ಕಾಚಾರಗಳ ಮಹತ್ವ ಹೆಚ್ಚಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT