ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡ್ರೋಣ್’ ಬಂತು, ‘ದೊರೆ’ ಬರಲಿಲ್ಲ!

ಪ್ರವಾಹ ಪೀಡಿತ ಪ್ರದೇಶಕ್ಕೆ ಮುಖ್ಯಮಂತ್ರಿ ತೆರಳಲಿಲ್ಲ; ಸಂತ್ರಸ್ತರ ಅಹವಾಲು ಆಲಿಸಲಿಲ್ಲ
Last Updated 28 ಸೆಪ್ಟೆಂಬರ್ 2016, 5:54 IST
ಅಕ್ಷರ ಗಾತ್ರ

ಕಲಬುರ್ಗಿ: ‘ನಮ್ಮ ಮನ್ಯಾಗ ನಡಮಟಾ ನೀರ್‌ ಹೊಕ್ಕಿತ್ತು. ದೊಡ್ಡ ಮಳೀ ಆದಾಗೊಮ್ಮೆ ಇದ ಗೋಳ್ರಿ. ನೋಡೂಣು, ಮುಖ್ಯಮಂತ್ರಿ ಬಂದಮ್ಯಾಲಾದ್ರೂ ನಮ್ಮ ಕಷ್ಟ ದೂರಾಕ್ಕೈತೇನಂತ...’ ಎಂದು ವೃದ್ಧೆ ಮಲ್ಲಮ್ಮ ಆಸೆಗಣ್ಣಿನಿಂದ ಮುಖ್ಯಮಂತ್ರಿ ಬರುವಿಕೆಯನ್ನು ಎದುರು ನೋಡುತ್ತಿದ್ದರು.

ಚಿತ್ತಾಪುರ ತಾಲ್ಲೂಕು ಹಳೆ ಹೆಬ್ಬಾಳ (ಹೆಬ್ಬಾಳ ಬಿ.)ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಎದುರು ಮಹಿಳೆಯರ ದೊಡ್ಡ ಗುಂಪು ನೆರದಿತ್ತು.
ಬೆಣ್ಣೆತೊರಾ ನದಿಯ ಪ್ರವಾಹದಿಂದ ಬಾಧಿತ ಈ ಗ್ರಾಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಭೇಟಿ ನೀಡಬೇಕಿತ್ತು. ಆದರೆ, ಅವರು ಕೊನೆ ಗಳಿಗೆಯಲ್ಲಿ ಪ್ರವಾಸ ಮೊಟಕುಗೊಳಿಸಿದ್ದರಿಂದ ಈ ಅಜ್ಜಿಯ ಗೋಳು ಅವರಿಗೆ ತಲುಪಲೇ ಇಲ್ಲ.

ಈ ಗ್ರಾಮದ ಮನೆಗಳಿಗೆ ನುಗ್ಗಿದ್ದ ಬೆಣ್ಣೆತೊರಾ ನದಿಯ ಪ್ರವಾಹ, ಬೆಳೆಯನ್ನೂ ಆಹುತಿ ಪಡೆದಿದೆ. ಹೆಬ್ಬಾಳ ಬಿ ಮತ್ತು ಚಿಂಚೋಳಿ ಎಚ್‌. ಗ್ರಾಮಗಳ ಮಧ್ಯದ ಸೇತುವೆಯ ಮೇಲೆ ಇನ್ನೂ ನೀರು ಹರಿಯುತ್ತಿದೆ.

ಮುಖ್ಯಮಂತ್ರಿ ಬರುತ್ತಾರೆ ಎಂದು ಗ್ರಾಮಸ್ಥರು ಹಾಗೂ ಸುತ್ತಲಿನ ಗ್ರಾಮಗಳವರು ಮಧ್ಯಾಹ್ನದಿಂದಲೇ ಹಳೆ ಹೆಬ್ಬಾಳದಲ್ಲಿ ನೆರೆದಿದ್ದರು. ಗ್ರಾಮದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಸಹ ಏರ್ಪಡಿಸಲಾಗಿತ್ತು.

‘ಕೋರವಾರ ಗ್ರಾಮದ ನವೋದಯ ವಿದ್ಯಾಲಯ ಬಳಿಯ ಹೆಲಿಪ್ಯಾಡ್‌ಗೆ ಹೆಲಿಕಾಪ್ಟರ್‌ ಮೂಲಕ ಬರುವ ಮುಖ್ಯಮಂತ್ರಿ, ನೇರವಾಗಿ ಹಳೆ ಹೆಬ್ಬಾಳ ಗ್ರಾಮಕ್ಕೆ ತೆರಳುತ್ತಾರೆ. ಸಮಯಾವಕಾಶದ ಕೊರತೆಯಿಂದಾಗಿ ಕನಸೂರ ಭೇಟಿ ರದ್ದು ಪಡಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾಧ್ಯಮದವರಿಗೆ ತಿಳಿಸಿದರು.

ಮಾಧ್ಯಮದವರೂ ಹಳೆ ಹೆಬ್ಬಾಳ ಗ್ರಾಮಕ್ಕೆ ತೆರಳಿದ್ದರು. ಕೋರವಾರ–ಹಳೆ ಹೆಬ್ಬಾಳ ಮಾರ್ಗದಲ್ಲಿ ವಾಹನ ಸಂಚಾರವನ್ನು ಪೊಲೀಸರು ಸಂಪೂರ್ಣ ವಾಗಿ ತಡೆದರು. ಹಳೆ ಹೆಬ್ಬಾಳ ಗ್ರಾಮದಲ್ಲಿ ಮುಖ್ಯಮಂತ್ರಿ ಭೇಟಿ ನೀಡಬೇಕಿದ್ದ ಸ್ಥಳದಲ್ಲಿದ್ದ ದನ, ನಾಯಿ, ಕೋಳಿಗಳನ್ನೂ ಪೊಲೀಸರು ಆಚೆ ಓಡಿಸಿದರು! ಸುರಕ್ಷತೆಯ ಮೇಲೆ ಕಣ್ಣಿಡಲು ಎರಡು ‘ಡ್ರೋಣ್‌’ ಯಂತ್ರಗ ಳನ್ನೂ ತಂದಿದ್ದರು. ‘ಡ್ರೋಣ್‌’ ಹಾರಿಸಿ ಭದ್ರತೆಯ ಮೇಲೆ ನಿಗಾ ವಹಿಸಿದರು. ಅಷ್ಟೊತ್ತಿಗಾಗಲೆ ಪೊಲೀಸರ ವಾಕಿಟಾಕಿ ಯಲ್ಲಿ  ‘ಮುಖ್ಯಮಂತ್ರಿ ಹೆಲಿಪ್ಯಾಡ್‌ನಿಂದ ನವೋದಯ ವಿದ್ಯಾಲಯದತ್ತ ಹೋಗುತ್ತಿದ್ದಾರೆ’ ಎಂಬ ಸಂದೇಶ ಬಂತು. ಮರು ಕ್ಷಣವೇ ಈ ಗ್ರಾಮಕ್ಕೆ ಭೇಟಿ ರದ್ದು ಪಡಿಸಲಾಗಿದೆ ಎಂಬ ಮಾಹಿತಿ ರವಾನೆಯಾಯಿತು. ಆದರೆ, ಗ್ರಾಮಸ್ಥರು ರೊಚ್ಚಿಗೇಳುತ್ತಾರೆ ಎಂದು ಬಹಳ ಹೊತ್ತಿನ ವರೆಗೆ ಅವರಿಗೆ ವಿಷಯವನ್ನೇ ತಿಳಿಸಲಿಲ್ಲ.

ಕೊನೆಗೆ, ‘ಡ್ರೋಣ್‌’ ಮಾತ್ರ ಬಂದು, ‘ದೊರೆ’ ಬರಲೇ ಇಲ್ಲ ಬಿಡ್ರಿ’ ಎನ್ನುತ್ತ ಯುವಕರು ಮನೆಯತ್ತ ಹೆಜ್ಜೆ ಹಾಕಿದರು.
ಮೇಲಿಂದ ಮೇಲೆ ಬದಲಾದ ಕಾರ್ಯಕ್ರಮ: ಮುಖ್ಯಮಂತ್ರಿ ಅವರು ಮಧ್ಯಾಹ್ನ 3.30ಕ್ಕೆ ಹೆಲಿಕಾಪ್ಟರ್‌ ಮೂಲಕ ಕೋರವಾರಕ್ಕೆ ಬಂದು, ಅಲ್ಲಿಂದ ಹಳೆಯ ಹೆಬ್ಬಾಳ ಮತ್ತು ಕೊನಸೂರ ಗ್ರಾಮಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ.  ಆ ನಂತರ ಕೋರವಾರ ನವೋದಯ ವಿದ್ಯಾಲಯದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬೀದರ್‌ಗೆ ಹೆಲಿಕಾಪ್ಟರ್‌ನಲ್ಲಿ ವಾಪಸಾಗುತ್ತಾರೆ ಎಂದು ತಿಳಿಸಲಾಗಿತ್ತು.

ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಬೀದರ್‌ಗೇ ಅವರು ಒಂದು ಗಂಟೆ ತಡವಾಗಿ ಬಂದರು. ಕೋರವಾರಕ್ಕೆ ಬಂದಿದ್ದು ಸಂಜೆ 4.30ಕ್ಕೆ.
‘ಸಂಜೆ ಹೆಲಿಕಾಪ್ಟರ್‌ ಹಾರುವುದಿಲ್ಲ. ಹೀಗಾಗಿ ಕೋರವಾರದಿಂದ ಬೀದರ್‌ ವರೆಗೆ ರಸ್ತೆ ಮೂಲಕ ತೆರಳುತ್ತಾರೆ. ಹಳೆ ಹೆಬ್ಬಾಳ ಗ್ರಾಮಕ್ಕೆ ಭೇಟಿ ನೀಡಿ, ಅಧಿಕಾ ರಿಗಳ ಸಭೆ, ಪತ್ರಿಕಾಗೋಷ್ಠಿ ನಡೆಸು ತ್ತಾರೆ’ ಎಂದು ಅಧಿಕಾರಿಗಳು ಹೇಳಿದ್ದರು.

ಕಾವೇರಿ ವಿವಾದದಿಂದ ಧಾವಂತ ದಲ್ಲಿದ್ದ ಮುಖ್ಯಮಂತ್ರಿ ಅವರು, ಹೆಲಿಕಾ ಪ್ಟರ್‌ನಲ್ಲಿ ಕೋರವಾರಕ್ಕೆ ಬಂದರು. ಅರ್ಧಗಂಟೆಯಲ್ಲಿ ಅದೇ ಹೆಲಿಕಾಪ್ಟರ್‌ ನಲ್ಲಿ ಬೀದರ್‌ಗೆ ಹಿಂದಿರುಗಿದರು.

ಮಳೆ, ಪ್ರವಾಹದಿಂದ ಜಿಲ್ಲೆಯಲ್ಲಿ ₹350 ಕೋಟಿ ಹಾನಿ: ಸಚಿವ
ಕಲಬುರ್ಗಿ:‘ಅತಿವೃಷ್ಟಿ, ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ₹350 ಕೋಟಿಯಷ್ಟು ಹಾನಿ ಸಂಭವಿಸಿದೆ ಎಂಬುದು ಪ್ರಾಥಮಿಕ ಸಮೀಕ್ಷೆಯಿಂದ ಗೊತ್ತಾಗಿದೆ. 261 ತಂಡಗಳ ಮೂಲಕ ಜಂಟಿ ಸಮೀಕ್ಷೆ ನಡೆದಿದ್ದು, 10 ದಿನಗಳಲ್ಲಿ ನಿಖರ ವರದಿ ಬರಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ ತಿಳಿಸಿದರು.

35 ಸಾವಿರ ಎಕರೆ ಬೆಳೆ ನಷ್ಟವಾಗಿದೆ. 22 ಗ್ರಾಮಗಳು ಸಂಪೂರ್ಣ ಹಾಗೂ 65 ಗ್ರಾಮಗಳು ಭಾಗಶಃ ಬಾಧಿತಗೊಂಡಿವೆ. 22 ಗಂಜಿ ಕೇಂದ್ರಗಳಲ್ಲಿ 681 ಕುಟುಂಬಗಳ 2,718 ಜನರಿಗೆ ಆಶ್ರಯ ಕಲ್ಪಿಸಲಾಗಿದೆ. 681 ಬಾಧಿತ ಕುಟುಂಬದವರಿಗೆ ತಲಾ ₹3,800 ತುರ್ತು ಪರಿಹಾರ ನೀಡ ಲಾಗಿದೆ ಎಂದು ಮಂಗಳವಾರ ಕೋರವಾರದಲ್ಲಿ ಮಾಹಿತಿ ನೀಡಿದರು.

1,410 ಮನೆಗಳಿಗೆ ಹಾನಿ ಯಾಗಿದ್ದು, ಪ್ರವಾಹದಲ್ಲಿ ಸಿಲುಕಿ ಕೊಂಡಿದ್ದ 31 ಜನರನ್ನು ರಕ್ಷಿಸಲಾ ಗಿದೆ. ಆಳಂದ ತಾಲ್ಲೂಕಿನಲ್ಲಿ ಒಬ್ಬ ಬಾಲಕ ಮೃತಪಟ್ಟಿದ್ದು, 20 ಜಾನು ವಾರು ಸಾವನ್ನಪ್ಪಿವೆ. ಪ್ರತಿ ಇಲಾಖೆ ಯಿಂದ ನಷ್ಟದ ಪ್ರಾಥಮಿಕ ಮಾಹಿತಿ ತರಿಸಿಕೊಳ್ಳಲಾಗಿದೆ ಎಂದರು. ಪ್ರವಾಸೋದ್ಯಮ, ಐಟಿ–ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT