ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಕಾವೇರಿದ ಪ್ರತಿಭಟನೆ

ಸುಪ್ರೀಂ ಕೋರ್ಟ್‌ ಆದೇಶಕ್ಕೆ ಆಕ್ರೋಶ, ರಸ್ತೆ ತಡೆ
Last Updated 28 ಸೆಪ್ಟೆಂಬರ್ 2016, 9:00 IST
ಅಕ್ಷರ ಗಾತ್ರ

ಮಂಡ್ಯ: ಸುಪ್ರೀಂ ಕೋರ್ಟ್‌ ಮತ್ತೆ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ನೀಡಿರುವುದು ಅವೈಜ್ಞಾನಿಕ ಎಂದು ಆರೋಪಿಸಿ, ನಗರದಲ್ಲಿ ವಿವಿಧ ಸಂಘಟನೆಗಳು ಮಂಗಳವಾರ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಕೆಲ ಕಾಲ ಪ್ರತಿಭಟನೆ ನಡೆಸಿದರು.

ರಸ್ತೆಯಲ್ಲಿ ಜಮಾಯಿಸಿದ ಜೆಡಿಎಸ್‌, ಬಿಜೆಪಿ, ಕಾಂಗ್ರೆಸ್‌, ಜಿಲ್ಲಾ ರೈತ ಸಂಘ, ಕನ್ನಡ ಸೇನೆ, ಕ್ರಾಂತಿ ಯುವ ಶಕ್ತಿ ಕಾರ್ಯಕರ್ತರು ಸುಪ್ರೀಂ ಕೋರ್ಟ್‌ ವಿರುದ್ಧ ಘೋಷಣೆ ಕೂಗಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧವೂ ಆಕ್ರೊಶ ವ್ಯಕ್ತಪಡಿಸಿದರು.

ರೈತರಿಗೆ ಎಕರೆಗೆ ₹ 50 ಸಾವಿರ ಪರಿಹಾರ ನೀಡಬೇಕು. ಕೃಷಿ ಕೂಲಿ ಕಾರ್ಮಿಕರಿಗೆ ಪ್ರತಿ ತಿಂಗಳಿಗೆ ₹ 1 ಸಾವಿರ ಕೊಡಬೇಕು. ಸರ್ಕಾರ ರಾಜ್ಯದ ರೈತರ ಹಿತ ಕಾಯಬೇಕು. ಕಾವೇರಿ ವಿಚಾರದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಕುಡಿಯುವ ನೀರನ್ನೂ ಬಿಡಬೇಕು ಎಂದು ಕೇಳುತ್ತಿರುವ ತಮಿಳುನಾಡಿನ ಹಠಮಾರಿತನ ಧೋರಣೆ ಬಿಡಬೇಕು ಎಂದು ಆಗ್ರಹಿಸಿದರು.

ಕಾವೇರಿ ಕೊಳ್ಳದ ರೈತರು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾಟಿ ಮಾಡಿದ ಬೆಳೆಗಳು ಒಣಗುತ್ತಿವೆ. ಜನ– ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೇ ಪರಿತಪಿಸುವಂತಾಗಿದೆ. ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿರುವಾಗ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ನೀಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಸುಪ್ರೀಂ ಕೋರ್ಟ್‌ ತಮಿಳುನಾಡಿಗೆ ನೀರು ಬಿಡಬೇಕು ಎಂದು ಆದೇಶ ನೀಡುವ ಮೂಲಕ ರಾಜ್ಯದ ಜನರಿಗೆ ಗಾಯದ ಮೇಲೆ ಬರೆ ಹಾಕುತ್ತಿರುವುದು ಸರಿಯಿಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನೀರು ಬಿಡಬಾರದು. ವಿಧಾನ ಮಂಡಲದ ನೀತಿಗೆ ಬದ್ಧವಾಗಿರಬೇಕು. ಸುಪ್ರೀಂ ಕೋರ್ಟ್‌ ಮಧ್ಯ ಪ್ರವೇಶಿಸುವುದು ಏಕೆ ಎಂದು ಪ್ರಶ್ನಿಸಿದರು.

ರೈತ ಮುಖಂಡ ಶಂಭೂನಹಳ್ಳಿ ಸುರೇಶ್‌ ಮಾತನಾಡಿ, ರೈತರ ಉಳಿವಿಗೆ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಆದೇಶ ಪಾಲಿಸಿಲ್ಲ ಎಂದು ಜನಪ್ರತಿನಿಧಿಗಳನ್ನು ಸುಪ್ರೀಂ ಕೋರ್ಟ್‌ ಜೈಲಿಗೆ ಕಳುಹಿಸಿದರೆ, ನಾವೂ ಅವರ ಜತೆ ಹೋಗಲು ಸಿದ್ಧರಿದ್ದೇವೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ಪ್ರಧಾನಮಂತ್ರಿ ಮೌನ ಮುರಿದು ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಹನಿಯಂಬಾಡಿ ನಾಗರಾಜು, ಪಣಕನಹಳ್ಳಿ ನಾಗಣ್ಣ, ಹಲ್ಲೇಗೆರೆ ಶಿವರಾಂ, ದೊಡ್ಡಪಾಳ್ಯ ಚಂದ್ರು, ಇಂಡುವಾಳು ಚಂದ್ರಶೇಖರ್‌, ಬಸವರಾಜು, ಅರವಿಂದ್,   ಕನ್ನಡ ಸೇನೆ ಮಂಜುನಾಥ್‌, ಹೊಳಲು ನಾಗರಾಜ್‌, ಮಂಜೇಶ್‌, ಸಿ.ಟಿ. ಮಂಜು ನಾಥ್‌, ಹನಿಯಂಬಾಡಿ ಸತೀಶ್‌, ಕಚ್ಚಿಗೆರೆ ಯೋಗೇಶ್‌ ಇದ್ದರು.

ವಿಧಾನ ಮಂಡಲದ ನಿರ್ದೇಶನಕ್ಕೆ ಬದ್ಧವಾಗಿರಲಿ
ಮಂಡ್ಯ: ಸುಪ್ರೀಂ ಕೋರ್ಟ್‌ ಆದೇಶ ದುರದೃಷ್ಟಕರ. ರಾಜ್ಯ ಸರ್ಕಾರ ವಿಧಾನ ಮಂಡಲದ ನಿರ್ದೇಶನದ ಆದೇಶಕ್ಕೆ ಬದ್ಧವಾಗಿರಬೇಕು ಎಂದು ಶಾಸಕ ಎನ್‌. ಚಲುವರಾಯಸ್ವಾಮಿ ಸಲಹೆ ನೀಡಿದರು.

ಸುಪ್ರೀಂ ಕೋರ್ಟ್‌ ವಿಧಾನ ಮಂಡಲದ ನಿರ್ಣಯ ಮಾನ್ಯ ಮಾಡದೇ ಇರುವುದು ದುರಂತ. ತಮಿಳುನಾಡಿಗೆ ನೀರು ಹರಿಸಬಾರದು. ಸರ್ಕಾರ ಕಾವೇರಿ ಕೊಳ್ಳದ ಜನರ ಹಿತ ಕಾಯಬೇಕು. ಎಂತಹ ಪರಿಸ್ಥಿತಿ ಎದುರಿಸಲು ಸಿದ್ಧವಿರಬೇಕು.

ಕಾವೇರಿ ಹೋರಾಟದಲ್ಲಿ ಭಾಗವಹಿಸುತ್ತೇನೆ ಎಂದು ‘ಪ್ರಜಾವಾಣಿ’ಗೆ ಮಂಗಳವಾರ ತಿಳಿಸಿದರು

ನಿಷೇಧಾಜ್ಞೆ ಜಾರಿ
ಮಂಡ್ಯ: ಮದ್ದೂರು, ಮಂಡ್ಯ, ಮಳವಳ್ಳಿ, ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ತಾಲ್ಲೂಕಿಗೆ ಸೆ. 28 ಮಧ್ಯರಾತ್ರಿಯಿಂದ ಸೆ. 30 ಮಧ್ಯರಾತ್ರಿಯವರೆಗೆ ಜಿಲ್ಲಾಧಿಕಾರಿ ಜಿಯಾವುಲ್ಲಾ ಅವರು ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT