ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯ ಕ್ರಮ

ಅರಕಲಗೂಡು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಭರವಸೆ
Last Updated 28 ಸೆಪ್ಟೆಂಬರ್ 2016, 9:08 IST
ಅಕ್ಷರ ಗಾತ್ರ

ಅರಕಲಗೂಡು: ರಾಜ್ಯದಲ್ಲಿ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತಂದು ಪೂರ್ವ ಪ್ರಾಥಮಿಕ ಶಾಲೆ ತೆರೆಯಲು ಸರ್ಕಾರ ಚಿಂತನೆ ನಡೆಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‌ ಸೇಠ್‌ ತಿಳಿಸಿದರು.

ಶಿಕ್ಷಕರ ದಿನಾಚರಣಾ ಸಮಿತಿ ಹಾಗೂ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ  ಸಹಯೋಗದಲ್ಲಿ ಮಂಗಳವಾರ ಪಟ್ಟಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾವು ಅಧಿಕಾರದಲ್ಲಿ ಇರುವವರೆಗೆ ಯಾವುದೇ ಸರ್ಕಾರಿ ಶಾಲೆ ಮುಚ್ಚಲು ಅವಕಾಶ ನೀಡಿಲ್ಲ. ರಾಜ್ಯದಲ್ಲಿ 272 ಏಕ ವಿದ್ಯಾರ್ಥಿ ಶಾಲೆಗಳಿವೆ, 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ 4,164 ಶಾಲೆ ಗಳಿದ್ದು, ಅಲ್ಲಿಗೂ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

ಖಾಸಗಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಇದು ಸರಿಯಲ್ಲ. ಸರ್ಕಾರ ಗುಣಮಟ್ಟದ ಶಿಕ್ಷಣ ನೀಡಲು ಎಲ್ಲ ಅಗತ್ಯ ಕ್ರಮ ಕೈಗೊಂಡಿದೆ ಮುಂದಿನ ದಿನಗಳಲ್ಲಿ ವಿಷಯವಾರು ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಬೋಧಕೇತರ ಕೆಲಸಗಳ ಹೊರೆಯನ್ನು ಶಿಕ್ಷಕರ ಮೇಲಿಂದ ಇಳಿಸುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಲಾಗುತ್ತಿದ್ದು, ಇದಕ್ಕಾಗಿ ಕ್ಲಸ್ಟರ್‌ ಮಟ್ಟದಲ್ಲಿ 3,600 ಅಡುಗೆ ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದರು. 

ರಾಜ್ಯದಲ್ಲಿ ಮುಚ್ಚುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಅನೇಕ ಸುಧಾರಣಾ ಕ್ರಮಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದೆ. ಶಿಕ್ಷಕರ ಕೊರತೆ ನೀಗಿಸಲು 9,500 ಶಿಕ್ಷಕರ ನೇಮಕಾತಿಗೆ ಚಾಲನೆ ನೀಡಲಾಗಿದೆ. 4060 ಹೆಚ್ಚುವರಿ ಶಿಕ್ಷಕರು, 12,149 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ನಿವೃತ್ತ ಶಿಕ್ಷಕರನ್ನು ಶೈಕ್ಷಣಿಕ ವರ್ಷದ ಪೂರ್ಣಾವಧಿ ಕಾರ್ಯನಿರ್ವಹಿಸುವ ವ್ಯವಸ್ಥೆ ಜಾರಿ ಮಾಡಲಾಗಿದೆ. ಮಕ್ಕಳಲ್ಲಿ ಪಠ್ಯ ಪುಸ್ತಕ ಕುರಿತು ಆಕರ್ಷಣೆ ಮೂಡುವಂತೆ ಪ್ರೇರೇಪಿಸಲು 1ರಿಂದ 10ನೇ ತರಗತಿವರೆಗಿನ ಪಠ್ಯ ಪುಸ್ತಕಗಳ ಗುಣಮಟ್ಟದ ಮುದ್ರಣಕ್ಕೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳು ಬಡ ಮಕ್ಕಳಿಗೆ ಹಾಗೂ ಖಾಸಗಿ ಶಾಲೆಗಳು ಆರ್ಥಿಕವಾಗಿ ಮುಂದುವರಿದವರಿಗೆ ಎಂಬ ಭಾವನೆ ಬೆಳೆಯುತ್ತಿದೆ. ಇದನ್ನು ಮನಗಂಡು ಸರ್ಕಾರ ಸಮಾನ ಶಿಕ್ಷಣಕ್ಕೆ ಒತ್ತು ನೀಡಿದೆ. ಶಿಕ್ಷಣ ಹಕ್ಕು ಕಾಯ್ದೆಯಡಿ 5 ವರ್ಷಗಳಲ್ಲಿ 1 ಲಕ್ಷ ಬಡ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸಲಾಗಿದೆ. ಮುಂದಿನ 5 ವರ್ಷದ ಅವಧಿಗೆ ಹೊಸದಾಗಿ ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ನೀಡದಿರಲು ನಿರ್ಧರಿಸಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಮಾತನಾಡಿ, ಸಮಾಜದಲ್ಲಿ ಸುಧಾರಣೆ ಕಾಣಬೇಕಿದ್ದರೆ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ. ಮಕ್ಕಳು ಪೋಷಕರಿಗಿಂತ ಶಿಕ್ಷಕರ ನಡುವೆ ಹೆಚ್ಚಿನ ಸಮಯ ಕಳೆಯುವುದರಿಂದ ಅವರ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರನ್ನು ಭವಿಷ್ಯದ ನಾಗರಿಕರನ್ನಾಗಿ ರೂಪಿಸುವ ಹೊಣೆ ಶಿಕ್ಷಕರದ್ದಾಗಿದೆ ಎಂದರು.

ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಮಾದರಿ ಶಾಲೆ ತೆರೆದು ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಣ ಇಲಾಖೆ ಮುಂದಾಗಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್‌ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಜಿ.ಪಂ. ಸದಸ್ಯರಾದ ಎಸ್.ಪಿ.ರೇವಣ್ಣ, ರತ್ನಮ್ಮ ಲೋಕೇಶ್, ತಾ.ಪಂ. ಅಧ್ಯಕ್ಷೆ ವೀಣಾ ಮಂಜುನಾಥ್, ಉಪಾಧ್ಯಕ್ಷ ಎಸ್‌.ಆರ್‌.ನಾಗರಾಜು, ಸದಸ್ಯರಾದ ವೀರಾಜು, ಪುಟ್ಟರಾಜು, ಶಿಕ್ಷಣ ಇಲಾಖೆ ಉಪ ನಿರ್ದೇಶಕ ವಿ.ಎಂ.ಕಾಂತರಾಜು, ಡಯಟ್‌ ಸಂಸ್ಥೆಯ ಡಾ.ಡಿ.ವಿ.ಕಾಂತ, ತಹಶೀಲ್ದಾರ್ ಪ್ರಸನ್ನಮೂರ್ತಿ, ತಾ.ಪಂ. ಇಒ ಲೀಲಾವತಿ, ಬಿಇಒ ಜಿ.ಎನ್.ನಾಗೇಶ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಕೆ.ಮೋಹನ್ ಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತ ಶಿಕ್ಷಕರು, ನಿವೃತ್ತ ಶಿಕ್ಷಕರು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳು ಹಾಗೂ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಪ್ರವಾಸಿ ಮಂದಿರದ ಆವರಣದಿಂದ ಕಾರ್ಯಕ್ರಮದ ವೇದಿಕೆವರೆಗೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT