ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ, ರಾಜ್ಯಪಾಲರಿಗೆ ಆಮಂತ್ರಣ ಇಂದು

Last Updated 28 ಸೆಪ್ಟೆಂಬರ್ 2016, 9:41 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲಾಡಳಿತದ ವತಿಯಿಂದ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೆ. 28ರಂದು ದಸರಾ ಮಹೋತ್ಸವಕ್ಕೆ ಆಮಂತ್ರಣ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು.

‘ನಾಡಹಬ್ಬ ದಸರಾ ಉದ್ಘಾಟನೆಗೆ ಮೂರು ದಿನ ಉಳಿದಿದ್ದು, ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಗಣ್ಯರು, ಅತಿಥಿಗಳಿಗೆ ಆಹ್ವಾನ ಪತ್ರಿಕೆ ತಲುಪಿಸಲಾಗುತ್ತಿದೆ. ದಸರಾ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಿ.ರಂದೀಪ್‌ ಜೊತೆಗೂಡಿ ರಾಜ್ಯಪಾಲ, ಮುಖ್ಯಮಂತ್ರಿಗೆ ಆಹ್ವಾನ ನೀಡುತ್ತೇವೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಅ. 1ರಂದು ಚಾಮುಂಡಿಬೆಟ್ಟದಲ್ಲಿ ಬೆಳಿಗ್ಗೆ 11.40ಕ್ಕೆ ಧನುರ್‌ ಲಗ್ನದಲ್ಲಿ ನಾಡಹಬ್ಬದ ಉದ್ಘಾಟನೆ ನೆರವೇರಲಿದೆ. ಅ. 11ರಂದು ಮಧ್ಯಾಹ್ನ 2.16ಕ್ಕೆ ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ, ಅರಮನೆ ಆವರಣದಲ್ಲಿ 2.45ಕ್ಕೆ ಮಕರ ಲಗ್ನದಲ್ಲಿ ಜಂಬೂಸವಾರಿ ಉದ್ಘಾಟನೆ ನಡೆಯಲಿದೆ ಎಂದರು.

ದಸರಾ ಗೋಲ್ಡ್‌ ಕಾರ್ಡ್‌ ಬಿಡುಗಡೆ: ಪ್ರತಿವರ್ಷದಂತೆ ಈ ಬಾರಿಯು ದಸರಾ ಗೋಲ್ಡ್‌ ಕಾರ್ಡ್‌ ವ್ಯವಸ್ಥೆ ಮಾಡಲಾಗಿದೆ. ಒಂದು ಕಾರ್ಡ್‌ಗೆ ₹ 7,500 ನಿಗದಿಪಡಿಸಲಾಗಿದೆ ಎಂದು ಮಹದೇವಪ್ಪ ಹೇಳಿದರು.

ಒಟ್ಟು ಒಂದು ಸಾವಿರ ಕಾರ್ಡ್‌ ಮುದ್ರಿಸಲಾಗಿದೆ. ನಗರದಲ್ಲಿ ಅ. 1ರಿಂದ 11ರ ವರೆಗೆ ಜರುಗುವ ದಸರಾ ಕಾರ್ಯಕ್ರಮಗಳನ್ನು ವೀಕ್ಷಿಸಲು ಒಂದು ಕಾರ್ಡ್‌ನಲ್ಲಿ ಇಬ್ಬರು ವಯಸ್ಕರು ಮತ್ತು ಆರು ವರ್ಷದೊಳಗಿನ ಮಗುವಿಗೆ ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಡ್‌ ಹೊಂದಿರುವವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಇರಲಿದೆ. ಕಾರ್ಡ್‌ನ ಜತೆ ಮಾಹಿತಿ ಕೈಪಿಡಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಆನ್‌ಲೈನ್‌ ಮೂಲಕ www.mysoredasara.gov.in ವೆಬ್‌ಸೈಟ್‌ನಲ್ಲಿ ಕಾರ್ಡ್‌ ಬುಕ್ಕಿಂಗ್‌ ಮಾಡಬಹುದು. ಜಿಲ್ಲಾಧಿಕಾರಿ ಕಚೇರಿ ಕೌಂಟರ್‌ನಲ್ಲೂ ಖರೀದಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ದಸರಾ ಮಹೋತ್ಸವ ಉದ್ಘಾಟನೆ ನೆರವೇರಿಸಲಿರುವ ಸಾಹಿತಿ ಚೆನ್ನವೀರ ಕಣವಿ ಅವರು 29ರಂದು ಮೈಸೂರಿಗೆ ಬರಲಿದ್ದಾರೆ. ಉದ್ಘಾಟನೆ ದಿನದಂದು ಒಟ್ಟಾರೆ 203 ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ನೀಡಿದರು.

1ರಂದು ಜೆ.ಕೆ.ಮೈದಾನದಲ್ಲಿ ಹಿರಿಯ ನಾಗರಿಕರ ದಿನಾಚರಣೆ, ಅ. 7ರಂದು ಏಕಲವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ. ‘ದಸರಾ ದರ್ಶನ’ ಪರಿಚಯಿಸಿ ಜಿಲ್ಲೆ ಮತ್ತು ಪಕ್ಕದ ಜಿಲ್ಲೆಗಳ ಗ್ರಾಮೀಣ ಪ್ರದೇಶದ ಜನರಿಗೆ ಉಚಿತವಾಗಿ ದಸರಾ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.

ಈ ಬಾರಿ ಜಂಬೂಸವಾರಿ ಜೊತೆ ಸಾಗುವ ಸ್ತಬ್ಧಚಿತ್ರ ಮತ್ತು ಕಲಾತಂಡಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. 36 ಸ್ತಬ್ಧಚಿತ್ರಗಳು ಮತ್ತು 30 ಕಲಾ ತಂಡಗಳು ಮಾತ್ರ ಸಾಗಲಿವೆ ಎಂದು ವಿವರಿಸಿದರು.

11ರಂದು ರಾತ್ರಿ 8 ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತಿನಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸುವರು. ಮಾನಸಗಂಗೋತ್ರಿಯ ಬಯಲುರಂಗಮಂದಿರ, ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಎಲ್‌ಇಡಿ ಪರದೆ ಅಳವಡಿಸಿ, ಪಂಜಿನ ಕವಾಯಿತಿನ ನೇರಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ನಗರದಲ್ಲಿ 11 ರಸ್ತೆಗಳಲ್ಲಿ ಒಟ್ಟು 14 ಕಿಲೋ ಮೀಟರ್‌ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. 40 ವೃತ್ತಗಳಲ್ಲಿ  ದೀಪಾಲಂಕಾರ ಮಾಡಲಾಗಿದೆ. ದೀಪಾಲಂಕಾರದ ಸ್ವಾಗತ ಫಲಕಗಳನ್ನು ಹಾಕಲಾಗಿದೆ. ಇವೆಲ್ಲದಕ್ಕೆ 750 ಕಿಲೋ ವ್ಯಾಟ್‌ ವಿದ್ಯುತ್‌ ಪೂರೈಕೆಯಾಗಲಿದೆ. ಕಳೆದ ಬಾರಿ ಇದಕ್ಕೆ 5,205 ಕಿಲೋ ವ್ಯಾಟ್‌ ಪೂರೈಕೆಯಾಗಿತ್ತು. ಈ ಬಾರಿ ಎಲ್‌ಇಡಿ ಬಲ್ಬ್‌ಗಳನ್ನು ಬಳಸಿ ವಿದ್ಯುತ್‌ ಉಳಿತಾಯಕ್ಕೆ ಒತ್ತು ನೀಡಲಾಗಿದೆ ಎಂದರು.

ದಸರಾ ಗೋಲ್ಡ್‌ ಕಾರ್ಡ್‌, ಕುಸ್ತಿ ಪಂದ್ಯಾವಳಿ ಸಿ.ಡಿ ಮತ್ತು ಪೋಸ್ಟರ್‌ ಬಿಡುಗಡೆಗೊಳಿಸಲಾಯಿತು. ದಸರಾ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಿ.ರಂದೀಪ್‌, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌, ಪೊಲೀಸ್‌ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT