ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಕಲೆ ಸ್ವಯಂ ಕೃಷಿಯ ಸಾಹಿತ್ಯ

Last Updated 28 ಸೆಪ್ಟೆಂಬರ್ 2016, 10:26 IST
ಅಕ್ಷರ ಗಾತ್ರ

ಕೋಲಾರ: ‘ಜಾನಪದ ಕಲೆ ಬರವಣಿಗೆಯ ಸಾಹಿತ್ಯವಲ್ಲ. ಬದಲಿಗೆ ಅದು ಸ್ವಯಂ ಕೃಷಿಯ ಸಾಹಿತ್ಯ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅಭಿಪ್ರಾಯಪಟ್ಟರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಜಾನಪದ ಕಲಾವಿದರಿಗೆ 2015ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಜಾನಪದ ಕಲಾವಿದರನ್ನು ಸೃಷ್ಟಿಸಲು ಆಗುವುದಿಲ್ಲ. ಆದರೆ, ಜಾನಪದ ಕಲೆಗಳಲ್ಲಿ ಆಸಕ್ತಿ ಇರುವವರಿಗೆ ತರಬೇತಿ ನೀಡಬಹುದು ಎಂದರು.

ಜಾನಪದ ಕಲಾವಿದರು ಶ್ರೀಮಂತರಲ್ಲ. ಆದರೆ, ಅವರ ಪ್ರತಿಭೆ ಶ್ರೀಮಂತಿಕೆ ಮತ್ತು ಪಕ್ವತೆಯಿಂದ ಕೂಡಿದೆ. ಆಡಳಿತ, ವೃತ್ತಿ ಮತ್ತು ಅಧಿಕಾರ ಒಂದಕ್ಕೊಂದು ಜತೆಯಾಗಿ ಹೋದರೆ ಕಲೆಗಳು ಮೌಲ್ಯ ಕಳೆದುಕೊಳ್ಳುವುದಿಲ್ಲ. ಆಡಳಿತ ವ್ಯವಸ್ಥೆ ಲೋಪ ಎಸಗಿದರೆ ಕಲೆಗಳ ಮೌಲ್ಯ ಕುಸಿಯುತ್ತದೆ. ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.

ಜಾನಪದ ಕಲಾವಿದರು ಸ್ವಾಭಿಮಾನಿಗಳು. ತಿನ್ನಲು ಕೂಳು ಇಲ್ಲದಿದ್ದರೂ ಭಿಕ್ಷೆ ಬೇಡುವ ನಿರ್ಗತಿಕರಲ್ಲ. ಕಾಲಘಟ್ಟಕ್ಕೆ ತಕ್ಕಂತೆ ಹಸಿದ ಹೊಟ್ಟೆಗೆ ಪ್ರೋತ್ಸಾಹ ನೀಡಬೇಕು. ಹಣ ಮುಖ್ಯವಲ್ಲದಿದ್ದರೂ ಸಾಧಕರಿಗೆ ಪ್ರಶಸ್ತಿ ನೀಡಿದರೆ ಘನತೆ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಕಲಾವಿದರ ಪ್ರಶಸ್ತಿ ಮೊತ್ತವನ್ನು ₹ 5 ಸಾವಿರದಿಂದ ₹ 25 ಸಾವಿರಕ್ಕೆ ಮತ್ತು ಜಾನಪದ ತಜ್ಞರ ಪ್ರಶಸ್ತಿ ಮೊತ್ತವನ್ನು ₹ 10 ಸಾವಿರದಿಂದ ₹ 50 ಸಾವಿರಕ್ಕೆ ಹೆಚ್ಚಿಸಲಾಗಿದೆ. ಮುಂಬರುವ ವರ್ಷಗಳಲ್ಲೂ ಪ್ರಶಸ್ತಿ ಮೊತ್ತ ಹೆಚ್ಚಿಸಲಾಗುತ್ತದೆ ಎಂದು ಭರವಸೆ ನೀಡಿದರು.

ದಲ್ಲಾಳಿಗಳ ಹಾವಳಿ: ಕಾಂಗ್ರೆಸ್‌ ಸರ್ಕಾರ ದಲ್ಲಾಳಿಗಳು ಅಥವಾ ಮಧ್ಯವರ್ತಿಗಳನ್ನು ಪೋಷಿಸುವ ಸರ್ಕಾರವಲ್ಲ. ಜಾನಪದ ಕಲಾವಿದರನ್ನು ದಲ್ಲಾಳಿಗಳ ಹಾವಳಿಯಿಂದ ಮುಕ್ತಗೊಳಿಸುವ ಉದ್ದೇಶಕ್ಕಾಗಿ ಕಲಾವಿದರ ಬ್ಯಾಂಕ್‌ ಖಾತೆಗಳಿಗೆ ಪ್ರತಿ ತಿಂಗಳು ಗೌರವಧನ ಜಮಾ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಎಷ್ಟೇ ಅಡೆತಡೆ ಎದುರಾದರೂ ದಲ್ಲಾಳಿಗಳು ಮತ್ತು ಮಧ್ಯವರ್ತಿಗಳನ್ನು ದೂರ ಇಟ್ಟಿದ್ದೇವೆ ಎಂದರು.

ಕಲಾವಿದರು ದಲ್ಲಾಳಿಗಳ ಬಗ್ಗೆ ಜಾಗೃತರಾಗಬೇಕು. ಯಾವುದೇ ಕಾರಣಕ್ಕೂ ದಲ್ಲಾಳಿಗಳೊಂದಿಗೆ ಕೈಜೋಡಿಸಬಾರದು. ಕಲಾವಿದರಿಗೆ ಬದುಕಿನ ಬಗ್ಗೆ ಭಯ ಬೇಡ. ಭಯ ಇಟ್ಟುಕೊಂಡರೆ ಶೋಷಕ ವ್ಯವಸ್ಥೆಯನ್ನು ಕಲಾವಿದರೇ ಪೋಷಿಸಿದಂತಾಗುತ್ತದೆ ಎಂದು ತಿಳಿ ಹೇಳಿದರು.

ಅನುದಾನ ಹೆಚ್ಚಳ: ದೇಶೀಯ ಕಲೆಗಳನ್ನು ಮುಂದಿನ ತಲೆಮಾರಿಗೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ 1,250 ಹೆಣ್ಣು ಮಕ್ಕಳಿಗೆ ತರಬೇತಿ ನೀಡಲಾಗಿದೆ. ಅಕಾಡೆಮಿಗಳಿಗೆ ನೀಡುತ್ತಿದ್ದ ಅನುದಾನವನ್ನು ₹ 40 ಲಕ್ಷದಿಂದ ₹ 1 ಕೋಟಿಗೆ ಹೆಚ್ಚಿಸಲಾಗಿದೆ. ಕಳೆದು ಹೋಗುತ್ತಿರುವ ಜಾನಪದ ಕಲೆಗಳನ್ನು ಉಳಿಸುವ ಸಲುವಾಗಿ ಜಾನಪದ ಅಕಾಡೆಮಿಗೆ ವಿಶೇಷ ಅನುದಾನ ನೀಡಲಾಗಿದೆ ಎಂದು ವಿವರಿಸಿದರು.

ದೇಶದಲ್ಲೇ ಪ್ರಥಮ ಬಾರಿಗೆ ಕಾಗದರಹಿತ ಆಡಳಿತ ನೀಡಿದ ಹಿರಿಮೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲ್ಲುತ್ತದೆ. ಇಲಾಖೆಯ 25 ಸಾವಿರ ಕಡತಗಳನ್ನು ಗಣಕೀಕರಣಗೊಳಿಸಲಾಗಿದೆ. ಆಡಳಿತಾತ್ಮಕ ಸುಧಾರಣೆ ತರುವ ಪ್ರಯತ್ನವನ್ನು ಈ ಪುಟ್ಟ ಇಲಾಖೆ ಮಾಡಿದೆ. ನಂತರ ಇತರೆ ಇಲಾಖೆಗಳು ಇ-–ಆಡಳಿತ ವ್ಯವಸ್ಥೆ ಅನುಷ್ಠಾನಗೊಳಿಸಿದವು ಎಂದರು.

ಆತ್ಮೀಯ ಅಪ್ಪುಗೆ: ‘ರಾಜ್ಯದ 69 ಸಾವಿರ ಹಳ್ಳಿಗಳಲ್ಲಿ ಜಾನಪದ ಕಲಾವಿದರಿದ್ದು, ಇವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಕಾಡೆಮಿಗೆ ಸುಮಾರು ₹ 5 ಕೋಟಿ ಅನುದಾನ ನೀಡಿ. ಆದರೆ, ಬೇರೆ ಅಕಾಡೆಮಿಗಳಿಗೆ ಇಷ್ಟು ಅನುದಾನವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ತಳ ಸಮುದಾಯಗಳಿಗೆ ಆತ್ಮೀಯ ಅಪ್ಪುಗೆ ನೀಡಿದ್ದಾರೆ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT