ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

70ರ ದಶಕ ದಲಿತರಿಗೆ ‘ಸುವರ್ಣ ಯುಗ’

ತುಮಕೂರು ವಿ.ವಿಯಲ್ಲಿ ಪ್ರೊ.ಬಿ.ಕೃಷ್ಣಪ್ಪ ನೆನಪು ಮತ್ತು ಅಳಿವು ಕಾರ್ಯಕ್ರಮದಲ್ಲಿ ಸಚಿವ ಆಂಜನೇಯ
Last Updated 28 ಸೆಪ್ಟೆಂಬರ್ 2016, 10:50 IST
ಅಕ್ಷರ ಗಾತ್ರ

ತುಮಕೂರು: ‘ಎಪ್ಪತ್ತರ ದಶಕ ದಲಿತರು, ಶೋಷಿತರು ಮತ್ತು ಬಡವರಿಗೆ ಸ್ವಾತಂತ್ರ್ಯ ತಂದುಕೊಟ್ಟ ಸುವರ್ಣ ಯುಗ. ಇದರಲ್ಲಿ ಪ್ರೊ. ಬಿ.ಕೃಷ್ಣಪ್ಪ ಅವರ  ಪರಿಶ್ರಮವೂ ಬಹಳ ಇದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಹೇಳಿದರು.

ಮಂಗಳವಾರ ತುಮಕೂರು ವಿ.ವಿ ಡಾ.ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಸಾಮಾಜಿಕ ಪರಿವರ್ತನೆಗಾಗಿ ಬಿ.ಕೃಷ್ಣಪ್ಪ ಪ್ರತಿಷ್ಠಾನ ಆಯೋಜಿಸಿದ್ದ ‘ಪ್ರೊ.ಬಿ.ಕೃಷ್ಣಪ್ಪ ನೆನಪು ಮತ್ತು ತಿಳಿವು’  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಎಪ್ಪತ್ತರ ದಶಕದಲ್ಲಿ ದಲಿತ ಚಳವಳಿ, ರೈತ ಚಳವಳಿ , ಪ್ರಗತಿಪರ ಚಳವಳಿ ಪ್ರಬಲವಾಗಿದ್ದವು. ಇದೇ ಅವಧಿಯಲ್ಲಿ ದೇವರಾಜ್ ಅರಸು ಮುಖ್ಯಮಂತ್ರಿ ಆಗಿದ್ದರು.  ದಲಿತರು, ಶೋಷಿತರು, ಹಿಂದುಳಿದ ವರ್ಗದವರ ಏಳಿಗೆಗೆ ಮಹತ್ವಪೂರ್ಣ ನಿರ್ಧಾರಗಳನ್ನು ಕೈಗೊಂಡರು’ ಎಂದರು.

‘ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಮಲ ಹೊರುವ ಪದ್ಧತಿ ನಿಷೇಧಿಸಿದರು. ದಲಿತರು, ಶೋಷಿತರ ಮೇಲೆ ನಡೆಯುವ ದೌರ್ಜನ್ಯ, ಹಿಂಸೆ ತಡೆಗಟ್ಟಲು ಮುಂದಾಗಿದ್ದರು. ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆ ಜಾರಿಗೆ ತಂದರು. ಬ್ಯಾಂಕ್ ರಾಷ್ಟ್ರೀಕರಣ ಮಾಡಿದರು’ ಎಂದು ವಿವರಿಸಿದರು.
‘ ಪ್ರೊ.ಬಿ.ಕೃಷ್ಣಪ್ಪ ಅವರು ದಲಿತರಿಗೆ ಬೆಳಕಾಗಿ ಬಂದರು. ಹೋರಾಟದ ಕಿಚ್ಚು ಹಚ್ಚಿದರು’ ಎಂದು ಸ್ಮರಿಸಿದರು.

‘ಕೃಷ್ಣಪ್ಪನವರು ಕಂಡಿದ್ದ ಸಮ ಸಮಾಜದ ಕನಸು ನನಸಾಗಬೇಕಾದರೆ ಅವರು ಸ್ಥಾಪಿಸಿದ ಸಂಘಟನೆ ಮತ್ತೆ ಪುನರ್ ಸಂಘಟನೆಯಾಗಬೇಕು’  ಎಂದು ಹೇಳಿದರು.
ಉಪನ್ಯಾಸ ನೀಡಿದ ಪ್ರೊ.ಎಚ್.ಎಂ.ರುದ್ರಸ್ವಾಮಿ,   ಪ್ರೊ.ಬಿ.ಕೃಷ್ಣಪ್ಪ  ನಡೆಸಿದ ದಲಿತ ಚಳವಳಿ ಸಾಮಾಜಿಕ ಚಳವಳಿಯಲ್ಲಿ ಪ್ರಮುಖವಾದುದು. ಯುವ ಸಮುದಾಯ ಸಾಂಸ್ಕೃತಿಕ ಇಬ್ಬಂದಿತನ ಅರಿಯಬೇಕು ಎಂದು ತಿಳಿಸಿದರು.

‘ಮೈಸೂರು ವಿವಿ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಸದಾಶಿವ ಮಾತನಾಡಿ, ದಲಿತರು, ಶೋಷಿತರು, ತಳ ಸಮುದಾಯಗಳನ್ನು ಒಗ್ಗೂಡಿಸಿ  ಚಳವಳಿ ಕಟ್ಟಿದ ಹೆಗ್ಗಳಿಕೆ ಪ್ರೊ.ಬಿ.ಕೃಷ್ಣಪ್ಪ ಅವರದು’ ಎಂದರು.

ಅಂಬೇಡ್ಕರ್– ಜಗಜೀವನರಾಂ ಪೀಠಕ್ಕೆ ₹ 4 ಕೋಟಿ
‘ಶಿವಮೊಗ್ಗ ವಿಶ್ವವಿದ್ಯಾಲಯದಲ್ಲಿ ಪ್ರೊ.ಬಿ.ಕೃಷ್ಣಪ್ಪ ಅಧ್ಯಯನ ಪೀಠ ಸ್ಥಾಪನೆಗೆ ₹ 2 ಕೋಟಿ ಅನುದಾನ ನೀಡಲಾಗಿದೆ. ತುಮಕೂರು ವಿ.ವಿಯ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠ ಹಾಗೂ ಡಾ.ಬಾಬು ಜಗಜೀವನರಾಂ ಅಧ್ಯಯನ ಪೀಠ ಸ್ಥಾಪನೆಗೆ ತಲಾ ₹ 2 ಕೋಟಿ ಅನುದಾನ ನೀಡಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಭರವಸೆ ನೀಡಿದರು.

‘ತುಮಕೂರು ವಿ.ವಿ ಹೊಸ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ವಸತಿ ನಿಲಯಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಈಗಾಗಲೇ ₹ 17.5 ಕೋಟಿ ಅನುದಾನ ನೀಡಲಾಗಿದೆ.  ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಪಿ) ಹಾಗೂ ಬುಡಕಟ್ಟು ಉಪಯೋಜನೆಯಲ್ಲಿ (ಟಿಎಸ್‌ಪಿ) ಅನುದಾನದಲ್ಲಿ ಡಾ.ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಸೂಚಿಸಲಾಗಿದೆ’ ಎಂದು ಹೇಳಿದರು.

ನಮ್ಮ ಮನೆ ಬಿರಿಯಾನಿ
‘ನಮ್ಮ ಮನೆಯಲ್ಲಿ ಬಿರಿಯಾನಿ ಮಾಡಿದರೆ ಯಾವ ಮಾಂಸದಿಂದ ಮಾಡಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಯುವಂಥ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಇದು ಅಪಾಯಕಾರಿಯಾದುದು’ ಎಂದು ಕವಿ ಕೆ.ಬಿ.ಸಿದ್ದಯ್ಯ ಹೇಳಿದರು.

‘ ನಮ್ಮ ಆಹಾರದ ಹಕ್ಕು ಕಾಪಾಡಿಕೊಳ್ಳಲು ಮತ್ತೊಮ್ಮೆ 70ರ ದಶಕದ ಹೋರಾಟ ನಡೆಸಬೇಕಾದ ಅನಿವಾರ್ಯತೆ ಬಂದಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT