ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗ್ಗ ಹೊಸೆದು ಬದುಕು ಹುರಿಗೊಳಿಸಿದರು

ಹುಲಿಯೂರುದುರ್ಗ: ರಾಯಚೂರು ಕುಟುಂಬಗಳ ಬದುಕು
Last Updated 28 ಸೆಪ್ಟೆಂಬರ್ 2016, 10:51 IST
ಅಕ್ಷರ ಗಾತ್ರ

ಹುಲಿಯೂರುದುರ್ಗ: ವಿಲೇವಾರಿ ಮಾಡಲು ಮನಸು ಒಪ್ಪದ, ಉಳಿಸಿಕೊಳ್ಳಲು ಆಗದ ಮನೆಯ ತ್ಯಾಜ್ಯಗಳು ಪುನರ್ಬಳಕೆ ಪರಿಕರಗಳಾಗಿ ಮಾರ್ಪಾಡುಗೊಳ್ಳುತ್ತವೆ.
ಹಳೆಯ ಸೀರೆ, ಸೊಳ್ಳೆ ಪರದೆ, ಸಿಮೆಂಟ್‌ನ ಖಾಲಿ ಚೀಲಗಳು ಇವರ ಕೈಯಲ್ಲಿ ಹಗ್ಗಗಳಾಗಿ ಹುರಿಗೊಳ್ಳುತ್ತವೆ. ನಾಲ್ಕು  ಚದರಡಿಯ ಹಲಗೆಯ ಮುಂಭಾಗದಲ್ಲಿ ನಾಲ್ಕು ಕೊಕ್ಕೆಗಳನ್ನೂ ಹಿಂಬದಿಗೆ ಅವುಗಳನ್ನು ತಿರುಗಿಸುವ ಬೇರಿಂಗ್ ಸಹಿತವಾದ ಹಿಡಿಕೆಯನ್ನೂ ಜೋಡಿಸಿರುವ ಯಂತ್ರವೇ ಇವರ ಕೈ ಚಾಲಿತ ಹಗ್ಗದ ಮಿಷನ್. ಇದುವೇ ಇವರ ಯಾಂತ್ರಿಕ ಬದುಕಿನ ಹರಿಕಾರ ಯಂತ್ರ!

ಇಷ್ಟೆಲ್ಲಾ ಚಿತ್ರಣ ಮತ್ತು ಬದುಕಿನ ಕಥೆ ಹೇಳಿದ್ದು ರಾಯಚೂರು ಜಿಲ್ಲೆ ಲಿಂಗಸಗೂರು ತಾಲ್ಲೂಕಿನ ಮುದಗಲ್‌ನ ಶೇಖರ್, ಪ್ರಭು, ಡೈಸಿ ಮೇರಿ ಹಾಗೂ ಸಗಸ್ಟಿನ್ (9 ತಿಂಗಳ ಕೂಸು) ಕುಟುಂಬದ ಬಗ್ಗೆ. ಈ ಕುಟುಂಬ ಹೈದರಾಬಾದ್ ಕರ್ನಾಟಕದಿಂದ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಗೆ ವಲಸೆ ಬಂದಿದೆ. ಇಲ್ಲಿನ ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಹಗ್ಗ ಹೊಸೆದು ಕೊಡುವ ಕಾಯಕದಲ್ಲಿ ನಿರತವಾಗಿದೆ. ಕಚ್ಚಾ ವಸ್ತುಗಳನ್ನು ಒದಗಿಸಿದರೆ ರೈತರ ಅವಶ್ಯಕತೆಗೆ ಅನುಸಾರ ಇವರು ಹಗ್ಗ ಹೊಸೆದು ಕೊಡುವರು. 

ಜುಲೈ-ಸೆಪ್ಟೆಂಬರ್ ಅವಧಿಯ ಮೂರು ತಿಂಗಳು ಇವರ ಕಾರ್ಯ ಬಾಹುಳ್ಯದ ದಿನಗಳು. ಬೆನ್ನಿನ ಹಗ್ಗ (ರಾಸುಗಳ ಹಗ್ಗ) ನೇಯಲು ಪ್ರತಿ ಮಾರಿಗೆ ₹10 ರಂತೆ ಹಾಗೂ ಎತ್ತಿನ ಗಾಡಿ, ಟ್ರ್ಯಾಕ್ಟರ್‌ಗಳಲ್ಲಿ ಹೊರೆ ಹೇರುವ ದೊಡ್ಡ ಹಗ್ಗಗಳಿಗೆ ₹20 ರಂತೆ ಮಜೂರಿ ಪಡೆಯುವರು. ಅಷ್ಟಾಗಿ ಚೌಕಾಸಿಗೆ ಇಳಿಯದ ರೈತರು ಕೂಡ ಕೊಸರು ಮಾರೆಂದು ಒಂದೆರಡು ಮಾರುದ್ಧ ಹೆಚ್ಚುವರಿಯಾಗಿ ಪಡೆದುಕೊಂಡು ತೃಪ್ತಿಯಿಂದ ಹಣ ಕೊಟ್ಟು ಕಳಿಸುತ್ತಾರೆ. ಇವರ ಒಂದು ದಿನದ ಗರಿಷ್ಠ ದುಡಿಮೆ ಎಂದರೆ ₹1500.

ಇವರ ಕಾರ್ಯ ಕ್ಷೇತ್ರ ಕೂಡ ವಿಸ್ತಾರವಾದುದು. ತುಮಕೂರು, ಮಂಡ್ಯ, ಮೈಸೂರು, ಬೆಂಗಳೂರು, ರಾಯಚೂರು ಜಿಲ್ಲೆಗಳು ಮಾತ್ರವಲ್ಲದೆ ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳನ್ನು ಕೂಡ ತಮ್ಮ ಬದುಕಿನ ಆಸರೆಯ ತಾಣಗಳಾಗಿ ದಣಿವರಿಯದೆ ಸುತ್ತುವರು. 
–ಸೋಮಶೇಖಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT