ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಹಕ್ಕಿನ ಅನುಷ್ಠಾನ: ಎಡವಿದ್ದೆಲ್ಲಿ?

ಆರೋಗ್ಯದ ಹಕ್ಕನ್ನು ಸಂವಿಧಾನದಲ್ಲಿ ಮೂಲಭೂತ ಹಕ್ಕನ್ನಾಗಿ ಸೇರಿಸಬೇಕಾದ ಅನಿವಾರ್ಯ ಇದೆ
Last Updated 28 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಆರೋಗ್ಯ ಹಕ್ಕಿನ ಅನುಷ್ಠಾನದಲ್ಲಿ ಕೇಂದ್ರ- ರಾಜ್ಯ ಸರ್ಕಾರಗಳು ಎಡವಿವೆಯೇ?

ಆರೋಗ್ಯದ ಹಕ್ಕನ್ನು ಸಂವಿಧಾನವು ವ್ಯಕ್ತವಾಗಿ ಗುರುತಿಸದಿದ್ದರೂ, ವಿಧಿ 21ರಲ್ಲಿ ಹೇಳಿರುವ ಬದುಕುವ ಹಕ್ಕನ್ನು ಸುಪ್ರೀಂ ಕೋರ್ಟ್‌ ಹಲವಾರು ಪ್ರಮುಖ ಪ್ರಕರಣಗಳಲ್ಲಿ ಅರ್ಥೈಸುವ ಮೂಲಕ, ಆರೋಗ್ಯದ ಹಕ್ಕು ಸಹ ಒಂದು ಅವ್ಯಕ್ತ ಮೂಲಭೂತ ಹಕ್ಕು ಎಂದು ಹೇಳಿದೆ.

ಸಾರ್ವಜನಿಕ ಆರೋಗ್ಯವು ರಾಜ್ಯಪಟ್ಟಿಯ ವಿಷಯವಾಗಿದ್ದು, ಆಯಾ ರಾಜ್ಯ ಶಾಸಕಾಂಗಗಳು ಕಾನೂನು ಮಾಡುವ ಮೂಲಕ ಗುಣಮಟ್ಟದ ಆರೋಗ್ಯ ಸೇವೆಯನ್ನು ಉಚಿತವಾಗಿ ಪ್ರಜೆಗಳಿಗೆ ದೊರಕಿಸಿಕೊಡಬೇಕಾಗಿದೆ.

ಸಾರ್ವಜನಿಕ ಆರೋಗ್ಯದ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಅಂತರರಾಷ್ಟ್ರೀಯ ಒಪ್ಪಂದಗಳಿವೆ.  ಹಾಗೆಯೇ  ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳಂತೆ ಎಲ್ಲಾ ರಾಷ್ಟ್ರಗಳೂ ಆಯಾ ದೇಶದ ಪ್ರಜೆಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ಕಲ್ಪಿಸುವಂತಹ ಯೋಜನೆಗಳನ್ನು ರೂಪಿಸಬೇಕು ಹಾಗೂ ಯಥಾವತ್ತಾಗಿ ಅವುಗಳ ಅನುಷ್ಠಾನವಾಗಬೇಕು.

ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ- 1948, ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಮಸೂದೆಯಲ್ಲಿ ಒಂದಾದ ಅಂತರರಾಷ್ಟ್ರೀಯ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಒಡಂಬಡಿಕೆ- 1966, ಅಂತರರಾಷ್ಟ್ರೀಯ ಮಹಿಳೆಯರ ತಾರತಮ್ಯ ನಿರ್ಮೂಲನ ಒಡಂಬಡಿಕೆ- 1979, ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆ- 1989... ಹೀಗೆ ಹಲವಾರು ಅಂತರರಾಷ್ಟ್ರೀಯ ಒಡಂಬಡಿಕೆಗಳು ಸಾರ್ವಜನಿಕ ಆರೋಗ್ಯದ ಹಕ್ಕುಗಳನ್ನು ಗುರುತಿಸಿವೆ. ಸದಸ್ಯ ರಾಷ್ಟ್ರಗಳು ಈ ಒಡಂಬಡಿಕೆಗಳನ್ನು  ಕಾನೂನುಗಳಲ್ಲಿ ಅಳವಡಿಸಿಕೊಂಡು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಾಗಿದೆ.

ಸಂವಿಧಾನದ ವಿಧಿ 253ರ ಪ್ರಕಾರ, ಸಾರ್ವಜನಿಕ ಆರೋಗ್ಯದ ಸಂಬಂಧ ಸಂಸತ್ತು ಎಲ್ಲಾ ರಾಜ್ಯಗಳಿಗೂ ಅನ್ವಯಿಸುವಂತೆ ಸಾರ್ವತ್ರಿಕವಾಗಿ ಕಾನೂನು ಮಾಡಬಹುದಾಗಿದೆ. ಆದರೆ ಇದುವರೆವಿಗೂ ಯಾವುದೇ ನಿರ್ದಿಷ್ಟ ಕಾನೂನನ್ನು ಸಂಸತ್ತು ರಚಿಸದಿರುವುದು ವಿಷಾದಕರವೇ ಹೌದು.

ಅದೇ ರೀತಿ ನಮ್ಮ ಸಂವಿಧಾನ ರಚನಾಕಾರರು ಆರೋಗ್ಯದ ಹಕ್ಕನ್ನು ಮೂಲಭೂತ ಹಕ್ಕುಗಳ ಭಾಗದಲ್ಲಿ ಸೇರಿಸದಿರುವುದು ದುರ್ದೈವದ ಸಂಗತಿ. ಆದರೆ, ಸಂವಿಧಾನದ ಭಾಗ-4ರಲ್ಲಿ ಹೇಳಲಾದ ರಾಜ್ಯ ನೀತಿ ನಿರ್ದೇಶಕ ತತ್ವದಲ್ಲಿ  39 (ಇ), (ಎಫ್‌),  42 ಹಾಗೂ 47 ವಿಧಿಗಳಲ್ಲಿ ಆರೋಗ್ಯದ ವಿಚಾರವನ್ನು ತಿಳಿಸಲಾಗಿದೆ. ಆದರೆ, ಕೇಂದ್ರ- ರಾಜ್ಯ ಸರ್ಕಾರಗಳು ಈ ವಿಧಿಗಳಲ್ಲಿ ಹೇಳಿರುವ ವಿಷಯವನ್ನು ಕಾರ್ಯರೂಪಕ್ಕೆ ತರದಿದ್ದಲ್ಲಿ ಅದನ್ನು ಪ್ರಶ್ನಿಸುವ ಹಕ್ಕು ನಾಗರಿಕರಿಗೆ ಇರುವುದಿಲ್ಲ.

ವಸ್ತುಸ್ಥಿತಿ ಹೀಗಿರುವಾಗ, ಸುಪ್ರೀಂ ಕೋರ್ಟ್‌ ಹಲವು ಪ್ರಮುಖ ಪ್ರಕರಣಗಳಲ್ಲಿ ಆರೋಗ್ಯದ ಹಕ್ಕನ್ನು ಗುರುತಿಸಿರುವುದು ಶ್ಲಾಘನೀಯ. ಭಾರತ ಒಕ್ಕೂಟ ವಿರುದ್ಧ ಪರಮಾನಂದ ಕಠಾರ (1989) ಹಾಗೂ ಭಾರತ ಒಕ್ಕೂಟ ವಿರುದ್ಧ ಕನ್ಸ್ಯೂಮರ್ ಎಜುಕೇಶನ್ ಅಂಡ್ ರಿಸರ್ಚ್ ಸೆಂಟರ್‌ನಂತಹ ಪ್ರಮುಖ ಪ್ರಕರಣಗಳಲ್ಲಿ, ‘ಆರೋಗ್ಯದ ಹಕ್ಕು ಸಹ ಒಂದು ಅವ್ಯಕ್ತ ಮೂಲಭೂತ ಹಕ್ಕು’ ಎಂದು ಸುಪ್ರೀಂ ಕೋರ್ಟ್‌ ಘೋಷಿಸಿದೆ. ಆದರೆ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳು ಹಾಗೂ ತೀರ್ಪುಗಳ ಅನುಷ್ಠಾನ ಆಗದಿರುವುದು ದುರದೃಷ್ಟಕರ ಸಂಗತಿ.

ಸರ್ಕಾರಗಳು ಸಾರ್ವಜನಿಕರಿಗಾಗಿ ಹಲವಾರು ಆರೋಗ್ಯ ವಿಮೆ ಹಾಗೂ ಯೋಜನೆಗಳನ್ನು ತಂದಿದ್ದರೂ ಮಾಹಿತಿ ಕೊರತೆಯಿಂದಾಗಿ ಅವುಗಳ ಸದ್ಬಳಕೆ ಸರಿಯಾಗಿ ಆಗದಿರುವುದು ಮತ್ತು ಬಳಕೆ ಆಗುತ್ತಿರುವೆಡೆಯೂ ಗುಣಮಟ್ಟದ ಆರೋಗ್ಯ ಸೇವೆಗಳು ನಮ್ಮ ಸಾರ್ವಜನಿಕ ಆಸ್ಪತ್ರೆಗಳಲ್ಲಿ ದೊರಕದಿರುವುದು  ಶೋಚನೀಯ.

ರೈತರು, ಅಸಂಘಟಿತ ವಲಯದ ಕೂಲಿ ಕಾರ್ಮಿಕರು, ಅಶಕ್ತ ಮಹಿಳೆಯರು ಮತ್ತು ಮಕ್ಕಳು, ದುರ್ಬಲರು, ಹಿಂದುಳಿದ ವರ್ಗದವರು ಸಾರ್ವಜನಿಕ ಆಸ್ಪತ್ರೆಗಳಲ್ಲಿಯೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆದರೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಬರುವ ಪ್ರಮುಖ ಪ್ರಶ್ನೆಯೆಂದರೆ, ಸಾರ್ವಜನಿಕ ಆಸ್ಪತ್ರೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಸಂಖ್ಯೆಗನುಗುಣವಾಗಿ ಸ್ಥಾಪಿಸಿವೆಯೇ? ಎಲ್ಲಾ ಕಾಯಿಲೆಗಳಿಗೆ ಅಗತ್ಯವಾದ ಔಷಧಿಗಳು ಎಷ್ಟು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಭ್ಯ? ಹಾಗೆಯೇ ವೈದ್ಯರು ಹಾಗೂ ಸಿಬ್ಬಂದಿಯ ಕೊರತೆಯೂ ಇದೆ. ಸ್ಟೇಟ್ ಆಫ್ ವೆಸ್ಟ್ ಬೆಂಗಾಲ್‌ ವಿರುದ್ಧ ಪಶ್ಚಿಮಭಾಗ ಮಜದೂರ್ ಸಮಿತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ‘ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಔಷಧಿಗಳು ಸಂಪೂರ್ಣವಾಗಿ ದೊರಕಬೇಕು, ಇಲ್ಲದಿದ್ದಲ್ಲಿ ಅದು  ಸಂವಿಧಾನದ 21ರ ವಿಧಿ ಅನ್ವಯ ಜೀವಿಸುವ ಹಕ್ಕುಗಳ ಉಲ್ಲಂಘನೆ’ ಎಂದು ಹೇಳಿದೆ.

ಇದರ ಮಾಹಿತಿ ಹಾಗೂ ಅನುಷ್ಠಾನ ಎಲ್ಲಿದೆ?

ರಾಷ್ಟ್ರೀಯ ಆರೋಗ್ಯ ನೀತಿ- 2015ರ ಕರಡಿನಲ್ಲಿ ಆರೋಗ್ಯದ ಹಕ್ಕನ್ನು ವಿಧಿ  21ರಲ್ಲಿ ವ್ಯಕ್ತವಾಗಿ ಸೇರಿಸಬೇಕು ಎಂದು ಹೇಳಲಾಗಿದೆ. ಅಂದರೆ ಹೇಗೆ ಶಿಕ್ಷಣದ ಹಕ್ಕನ್ನು 21- ಎಯಲ್ಲಿ ಸೇರಿಸಲಾಗಿದೆಯೋ ಹಾಗೆಯೇ 21-ಬಿ ಎಂಬ ವಿಧಿಯನ್ನು  ಹೊಸದಾಗಿ ತಿದ್ದುಪಡಿ ಮೂಲಕ ತಂದು ಆರೋಗ್ಯದ ಹಕ್ಕನ್ನು ಸೇರಿಸಬೇಕು ಎಂದು ತಿಳಿಸಲಾಗಿದೆ. ಇದರ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸಿಲ್ಲ.

ಹಾಗೆಯೇ ಬಹುಮುಖ್ಯ ವಿಚಾರವೆಂದರೆ, ರಾಜ್ಯಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗಿಂತ ಖಾಸಗಿ ವೈದ್ಯಕೀಯ ಕಾಲೇಜುಗಳ ಸಂಖ್ಯೆಯೇ ಹೆಚ್ಚಾಗಿದೆ.  ದೇಶದಲ್ಲಿ ಸುಮಾರು 426 ವೈದ್ಯಕೀಯ ಕಾಲೇಜುಗಳಿದ್ದು, ಅವುಗಳಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳ ಸಂಖ್ಯೆಯೇ ಹೆಚ್ಚು.

ಕರ್ನಾಟಕದಲ್ಲಿರುವ ಒಟ್ಟು 53 ವೈದ್ಯಕೀಯ ಕಾಲೇಜುಗಳಲ್ಲಿ ಕೇವಲ 18 ಸರ್ಕಾರಿ ಕಾಲೇಜುಗಳಾಗಿದ್ದು ಉಳಿದವು  ಖಾಸಗಿ ಒಡೆತನದಲ್ಲಿವೆ. ವೈದ್ಯಕೀಯ ವಿದ್ಯಾರ್ಥಿಗಳು ಕೋಟಿಗಟ್ಟಲೆ ಹಣ ಸುರಿದು ಪ್ರವೇಶ ಪಡೆದು, ನಂತರ ಯಾವ ಗುಣಮಟ್ಟದ ಚಿಕಿತ್ಸೆಯನ್ನು ರೋಗಿಗಳಿಗೆ ನೀಡಬಹುದು ಎಂಬುದನ್ನು ಊಹಿಸಬಹುದಾಗಿದೆ. ‘ವೈದ್ಯೋ ನಾರಾಯಣೋ ಹರಿಃ’ ಎಂಬ ನಾಣ್ಣುಡಿಯನ್ನು ಇಂದಿನ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರು ಮರೆತಿದ್ದಾರೆ.

‘ಹಣವಿದ್ದರೆ ವೈದ್ಯಕೀಯ ಸೌಲಭ್ಯ, ಇಲ್ಲದಿದ್ದಲ್ಲಿ ಸಾಯುವ ಭಾಗ್ಯ’. ವೈದ್ಯಕೀಯ ವೃತ್ತಿಯು ಸೇವಾ ಮನೋಭಾವವನ್ನು ರೂಪಿಸಿಕೊಳ್ಳುವ ವೃತ್ತಿಯಾಗುವ ಬದಲು ವಾಣಿಜ್ಯೀಕರಣ ಆಗಿರುವುದು ತುಂಬ ನೋವುಂಟು ಮಾಡುವ ಸಂಗತಿಯಾಗಿದೆ.

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು  2010ರಲ್ಲಿ ರೋಗಿ ಸಂರಕ್ಷಣೆ ಮತ್ತು ಕೈಗೆಟಕುವ ದರದಲ್ಲಿ ಚಿಕಿತ್ಸಾ ಸೌಲಭ್ಯ ಕಾಯ್ದೆಯನ್ನು ಅಲ್ಲಿನ ಕಾಂಗ್ರೆಸ್‌ನಲ್ಲಿ ಪಾಸು ಮಾಡಿಸಿ, ಆ ಮೂಲಕ ಅಲ್ಲಿನ ಪ್ರತಿ ಪ್ರಜೆಯೂ ಕಡ್ಡಾಯ ಆರೋಗ್ಯ ವಿಮೆ ಮಾಡಿಸುವಂತೆ ನಿರ್ದೇಶಿಸಲಾಯಿತು. ಈ ಕಾಯ್ದೆಯ ಸಾಂವಿಧಾನಿಕ ಊರ್ಜಿತತೆಯನ್ನು ನ್ಯಾಷನಲ್ ಫೆಡರೇಷನ್ ಇಂಡಿಪೆಂಡೆಂಟ್ ಬಿಸಿನೆಸ್ ವಿರುದ್ಧ ಸೆಬಿಲಿಯಸ್ ಪ್ರಕರಣದಲ್ಲಿ ಅಮೆರಿಕದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದಾಗ, ಸಾರ್ವಜನಿಕ ಹಿತದೃಷ್ಟಿಯಿಂದ ರಚಿಸಿರುವ ಕಾನೂನು ಆಗಿರುವುದರಿಂದ ಅದು ಊರ್ಜಿತಗೊಳ್ಳುವಂತಹದ್ದು ಎಂದು ಘೋಷಿಸಲಾಯಿತು.

ಹೀಗೆಯೇ ನಮ್ಮ ದೇಶದಲ್ಲೂ ಕಾನೂನಿನ ಮೂಲಕ ಆರೋಗ್ಯ ವಿಮೆಯನ್ನು ಏಕೆ ಕಡ್ಡಾಯ ಮಾಡಬಾರದು? ಇಲ್ಲವಾದಲ್ಲಿ ಕೇಂದ್ರವು ‘ಆರೋಗ್ಯ’ ವಿಷಯವನ್ನು ರಾಷ್ಟ್ರೀಕರಣಗೊಳಿಸಲಿ. ಇದು ಅಸಾಧ್ಯವೆನಿಸಿದಲ್ಲಿ ಆರೋಗ್ಯ ವಿಮೆ ಕಡ್ಡಾಯವನ್ನು ಈ ಕೆಳಕಂಡಂತೆ ಮಾಡಬಹುದು. ಅದೆಂದರೆ, ವ್ಯಕ್ತಿಯ ವಾರ್ಷಿಕ ಆದಾಯ ₹ 10 ಲಕ್ಷಕ್ಕಿಂತ ಹೆಚ್ಚಾಗಿದ್ದರೆ ಆತನ ಕುಟುಂಬ ₹ 20 ಸಾವಿರದ ಆರೋಗ್ಯ ವಿಮೆಯನ್ನು ಕಡ್ಡಾಯವಾಗಿ ಖರೀದಿಸುವುದು.

5ರಿಂದ 10 ಲಕ್ಷದ ಆದಾಯದವರು 10 ಸಾವಿರ, 2 ಲಕ್ಷದಿಂದ 5 ಲಕ್ಷದ ಆದಾಯ ಮಿತಿಯವರು 5 ಸಾವಿರ, 2 ಲಕ್ಷಕ್ಕಿಂತ ಕಡಿಮೆ ಆದಾಯ ಇರುವವರಿಗೆ ಅಂದರೆ ಬಿಪಿಎಲ್ ವ್ಯಾಪ್ತಿಯಲ್ಲಿ ಇರುವವರಿಗೆ ಉಚಿತ ಗುಣಮಟ್ಟದ ಆರೋಗ್ಯ ಸೇವೆಯನ್ನೇಕೆ ಕಲ್ಪಿಸಿಕೊಡಬಾರದು? ಇದು ಕೇವಲ ಉದಾಹರಣೆಯಷ್ಟೆ. ಈ ಸಂಬಂಧ ತಜ್ಞರ ಜೊತೆ ಸಮಾಲೋಚನೆ ನಡೆಸಿ, ದೇಶದ ಪ್ರತಿ ನಾಗರಿಕನಿಗೂ ಉತ್ತಮ ಆರೋಗ್ಯ ಸೌಕರ್ಯಗಳನ್ನು ಕಲ್ಪಿಸಿಕೊಟ್ಟರೆ ಸಂವಿಧಾನದಲ್ಲಿ ಹೇಳಿರುವ ಎಲ್ಲಾ ಮೂಲಭೂತ ಹಕ್ಕುಗಳಿಗೆ ಅರ್ಥ ತಂದುಕೊಟ್ಟಂತಾಗುತ್ತದೆ. ಏಕೆಂದರೆ, ನಮ್ಮ ಮೂಲಭೂತ ಹಕ್ಕುಗಳನ್ನು ಅನುಭವಿಸುವುದು ಆರೋಗ್ಯದ ಹಕ್ಕನ್ನು ಅವಲಂಬಿಸಿರುತ್ತದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರೋಗ್ಯದ ಹಕ್ಕನ್ನು ಸಂವಿಧಾನದಲ್ಲಿ ಮೂಲಭೂತ ಹಕ್ಕನ್ನಾಗಿ ಸೇರಿಸುವ ಅನಿವಾರ್ಯ ಇದೆ. ಆಹಾರ ಸುರಕ್ಷತೆ ಮತ್ತು ಭದ್ರತೆಯ ಮೂಲಕ ನಾಗರಿಕರ ಆರೋಗ್ಯವನ್ನು ಕಾಪಾಡುವುದು  ರಾಜ್ಯ ಸರ್ಕಾರಗಳ ಆದ್ಯ ಕರ್ತವ್ಯವಾಗಿದೆ. ರಾಜ್ಯ ಸರ್ಕಾರಗಳು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚು ಹೆಚ್ಚು  ಆಸ್ಪತ್ರೆಗಳನ್ನು ತೆರೆದು, ಎಲ್ಲಾ ಬಗೆಯ ಔಷಧಿಗಳು ಎಲ್ಲಾ ಸಂದರ್ಭಗಳಲ್ಲೂ ಸಿಗುವಂತೆ ಆಡಳಿತ ವರ್ಗಕ್ಕೆ ಚುರುಕು ಮುಟ್ಟಿಸಬೇಕಾಗಿದೆ. ಹಾಗೆಯೇ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಗ್ನಾಸ್ಟಿಕ್‌  ಕೇಂದ್ರಗಳನ್ನು ಹೆಚ್ಚಾಗಿ ಸ್ಥಾಪಿಸುವ ಅಗತ್ಯವಿದೆ.

ಆ ಕೇಂದ್ರದಲ್ಲಿ ವೈದ್ಯರ ಸಲಹೆಯ ಮೇರೆಗೆ ಎಲ್ಲಾ ಬಗೆಯ ಪರೀಕ್ಷೆಗಳನ್ನು ನಡೆಸಲು ಬೇಕಾಗುವ ಸುಸಜ್ಜಿತ ನವೀನ ತಂತ್ರಜ್ಞಾನ ಸಿಗುವಂತೆ ಮಾಡಬೇಕಾಗಿದೆ. ಬಹುಮುಖ್ಯವಾಗಿ ಈ ಸರ್ಕಾರಿ ಆಸ್ಪತ್ರೆಗಳು ಹಾಗೂ ಸರ್ಕಾರಿ ಒಡೆತನದ ಡಯಗ್ನಾಸ್ಟಿಕ್‌ ಕೇಂದ್ರಗಳು ದಿನದ 24 ಗಂಟೆಗಳೂ ತೆರೆದಿರುವ ಸೌಲಭ್ಯವನ್ನು ಕಲ್ಪಿಸಿಕೊಡಬೇಕಾಗಿದೆ.

ಆಹಾರ ಸುರಕ್ಷಾ ಮಾನದಂಡ ಕಾಯ್ದೆ- 2006, ಆಹಾರ ಭದ್ರತಾ ಕಾಯ್ದೆ- 2014, ಔಷಧ ಮತ್ತು ಪ್ರಸಾಧನ ಸಾಮಗ್ರಿ ಕಾಯ್ದೆ- 1940 ಅನ್ನು ಪರಿಣಾಕಾರಿಯಾಗಿ ಅನುಷ್ಠಾನ ಮಾಡಬೇಕಾಗಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಆಹಾರ ಸುರಕ್ಷತೆ ಬಗ್ಗೆ ಅಥವಾ ದೃಢೀಕರಿಸದ ಔಷಧಿ ಮಾರಾಟವನ್ನು ತಡೆಗಟ್ಟುವಲ್ಲಿ ರಾಜ್ಯ ವಿಫಲವಾಗಿರುವುದು ದುರದೃಷ್ಟಕರ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಬಗೆಯ ರೋಗಗಳ ತಜ್ಞರು ಹಾಗೂ ಸಾಕಷ್ಟು ಸಿಬ್ಬಂದಿಯನ್ನು ಅಗತ್ಯ ಪ್ರಮಾಣದಲ್ಲಿ ನೇಮಕ ಮಾಡಿಕೊಳ್ಳಬೇಕಾಗಿದೆ.

ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಅಧಿಕ ಸಂಖ್ಯೆಯಲ್ಲಿ ಸ್ಥಾಪಿಸಬೇಕಾದ ಅನಿವಾರ್ಯ ಇದೆ. ಸಾರ್ವಜನಿಕ ಆರೋಗ್ಯದ ಹಕ್ಕಿನ ವಿಚಾರದಲ್ಲಿ ಕೇಂದ್ರ-ರಾಜ್ಯಗಳು ರಾಜಕೀಯ ಮಾಡದೆ, ಶ್ರೀಮಂತರಿಂದ ಬಡವರ್ಗದವರೆಗೂ ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ ತಲುಪುವಂತೆ ನೋಡಿಕೊಳ್ಳಬೇಕಾಗಿದೆ. ಆರೋಗ್ಯ ಹಕ್ಕುಗಳ ಸಂಬಂಧ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪುಗಳ ಅನುಷ್ಠಾನ ಕ್ರಮಬದ್ಧವಾಗಿ ಆಗಬೇಕಾದ ಅನಿವಾರ್ಯ ಇದೆ.
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT